ಮೆಣಸಿನಕಾಯಿಯ (chilli benefits) ಹೆಸರೆತ್ತಿದರೆ ಕೆಲವರಿಗೆ ಮೂಗಲ್ಲಿ, ಇನ್ನೂ ಕೆಲವರಿಗೆ ಬಾಯಲ್ಲಿ ನೀರು! ಖಾರವಾದ ಘಮಕ್ಕೆ ಕೆಲವರ ಕಣ್ಣಲ್ಲಿ ನೀರು ಸುರಿದರೆ, ಇನ್ನೂ ಕೆಲವರಿಗೆ ಮೆಣಸಿನಕಾಯಿ ಎಂದರೆ ಪ್ರಾಣ. ಅದರಲ್ಲೂ ಚಳಿಗಾಲದಲ್ಲಿ ಮೆಣಸಿನಕಾಯಿ ಪ್ರಿಯರಿಗೆ ಇನ್ನೂ ಸುಗ್ಗಿ. ಬಿಸಿಬಿಸಿಯಾದ ಮೆಣಸಿನಕಾಯಿ ಬಜ್ಜಿ ಬೋಂಡಾಗಳನ್ನು ತಿನ್ನುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು!
ಉಪ್ಪಿಗಿಂತ ರುಚಿಯಾಗಿರುವ ಇನ್ನೊಂದು ಪದಾರ್ಥ ಜಗತ್ತಿನಲ್ಲಿಲ್ಲ ಎಂಬುದನ್ನು ಒಪ್ಪಿಕೊಂಡವರಲ್ಲಿ ಕೆಲವರು ಮೆಣಸಿನಕಾಯಿಗಿಂತ ರುಚಿ ಇನ್ನೊಂದಿಲ್ಲ ಎಂದೂ ಸೇರಿಸಿಯಾರು! ಮಾಡುವ ಅಡುಗೆಗೆ ಉಪ್ಪು ಹೇಗೆ ಖಂಡಿತ ಬೇಕಾಗುತ್ತದೆಯೋ, ಹಾಗೆಯೇ ಖಾರವೂ ಬೇಕೇ ಬೇಕು. ವ್ಯತ್ಯಾಸವೇನೆಂದರೆ, ಕೆಲವರಿಗೆ ಹೆಚ್ಚು ಖಾರ ಬೇಕಾದರೆ, ಕೆಲವರಿಗೆ ಕಡಿಮೆ ಖಾರ. ಚಟ್ನಿ, ಸಾಂಬಾರು, ರಸಂ, ಗೊಜ್ಜು, ಹೀಗೆ ಏನೇ ಅಡುಗೆಯನ್ನೊಮ್ಮೆ ಜ್ಞಾಪಿಸಿಕೊಂಡು ಇವಕ್ಕೆಲ್ಲ ಮೆಣಸೇ ಇಲ್ಲದಿದ್ದರೆ ಹೇಗೆ ಎಂದು ಯೋಚಿಸಿ ನೋಡಿ. ಖಾರವನ್ನು ಇಷ್ಟಪಡದವರೂ ಕೂಡಾ ಒಂದು ಮೆಣಸಾದರೂ ರುಚಿಗಾಗಿ ಅಡುಗೆಗೆ ಸೇರಿಸದಿದ್ದರೆ, ಅಡುಗೆ ಸಪ್ಪೆಯೇ ಸರಿ. ಯಾಕೆಂದರೆ, ಮೆಣಸಿನಕಾಯಿಯನ್ನು ಹಾಗೆಯೇ ತಿನ್ನಲು ಖಾರವೆನಿಸಿದರೂ, ಮೆಣಸು ಹಾಕಿ ಮಾಡಿದ ಅಡುಗೆ ರುಚಿಕರ. ಘಮವೂ ಅದ್ಭುತ. ಇಂತಹ ಮೆಣಸಿನಕಾಯಿಯ ರುಚಿ, ಘಮವಷ್ಟೇ ಯೋಚಿಸಿದರೆ ಹೇಗೆ, ಆರೋಗ್ಯಕ್ಕೂ ಈ ಮೆಣಸಿನಕಾಯಿ ಸಾಕಷ್ಟು ಉಪಕಾರ ಮಾಡುತ್ತದೆ. ಯಾಕೆಂದರೆ, ಮೆಣಸಿನಕಾಯಿಯಲ್ಲಿ ಹೇರಳವಾಗಿ ವಿಟಮಿನ್ ಎ ಹಾಗೂ ಸಿ ಇದೆ. ಹಾಗಾಗಿ, ದೇಹದ ರೋಗನಿರೋಧಕ ವ್ಯವಸ್ಥೆ ಶಕ್ತಿಶಾಲಿಯಾಗಲು ನಾವು ನಿತ್ಯ ಸೇವಿಸುವ ಮೆಣಸಿನಕಾಯಿಯ ಪಾಲೂ ಇದ್ದೇ ಇದೆ. ಚೀನಾದ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಪ್ರಕಾರ, ಮೆಣಸಿನಕಾಯಿಯಂಥ ಖಾರವಾದ ಆಹಾರ, ಶ್ವಾಸಕೋಶಕ್ಕೆ ಬಹಳ ಒಳ್ಳೆಯದಂತೆ. ಇದು ಹೆಚ್ಚುವರಿ ಶೀತ ಹಾಗೂ ವಾಯುವನ್ನು ದೇಹದಿಂದ ಹೊರಗೆ ಕಳಿಸುವ ಮೂಲಕ ಚಳಿಗಾಲದಲ್ಲಿ ಒಳ್ಳೆಯದನ್ನೇ ಮಾಡುತ್ತದೆ ಎಂಬ ನಂಬಿಕೆ ಅವರದ್ದು. ಅಷ್ಟೇ ಅಲ್ಲ, ಇದರಿಂದ ಇನ್ನೂ ಅನೇಕ ಆರೋಗ್ಯಕರ ಲಾಭಗಳೂ ಇವೆ. ಬನ್ನಿ, ಮೆಣಸಿನಕಾಯಿಯಿಂದ ನಮಗಾಗುವ ಆರೋಗ್ಯಕರ ಪ್ರಯೋಜನಗಳನ್ನು (chilli benefits) ತಿಳಿಯೋಣ.
- ಮೆಣಸು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಮೆಣಸು ಹೃದಯವನ್ನೂ ಚುರುಕಾಗಿ ಆರೋಗ್ಯವಾಗಿರಿಸುತ್ತದೆ.
- ಮೆಣಸಿನಕಾಯಿ ಜೀರ್ಣಕ್ರಿಯೆಯನ್ನು ಪ್ರಚೋದಿಸಿ, ಹೆಚ್ಚುವರಿ ಕ್ಯಾಲರಿಯನ್ನು ಬೇಗ ಬರ್ನ್ ಮಾಡಲು ನೆರವಾಗುತ್ತದೆ.
- ರಕ್ತದಲ್ಲಿರುವ ಸಕ್ಕರೆಯ ಅಂಶವನ್ನ ಇಳಿಸುವಲ್ಲಿಯೂ ಮೆಣಸಿನ ಪಾತ್ರವಿದೆ. ಊಟದ ನಂತರ ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುವಲ್ಲಿಯೂ ಇದು ನೆರವಾಗುತ್ತದೆ.
- ಹಸಿಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ರಸಾಯನಿಕವಿದ್ದು ಇದು ದೇಹದ ನೋವುಗಳನ್ನು ಕಡಿಮೆ ಮಾಡುವ ತಾಕತ್ತು ಹೊಂದಿದೆ. ಚಳಿಗಾಲದಲ್ಲಿ ಕಾಡುವ ಮೈಕೈ ನೋವು ಮಾಂಸಖಂಡಗಳ ನೋವಿಗೆ ಹಾಗೂ ದೇಹದ ರಿಲ್ಯಾಕ್ಸೇಶನ್ಗೆ ಇದು ಸಹಾಯ ಮಾಡುತ್ತದೆ.
- ಲುಕೇಮಿಯಾ ಹಾಗೂ ವೃಷಣದ ಕ್ಯಾನ್ಸರ್ನಂತಹ ರೋಗಗಳಿಗೂ ಮೆಣಸು ಒಳ್ಳೆಯದು. ಈಗಾಗಲೇ ನಡೆದಿರುವ ಅಧ್ಯಯನಗಳು ಇದನ್ನು ಪುಷ್ಠೀಕರಿಸಿದ್ದು, ಇವುಗಳು ಹೆಚ್ಚು ಹರಡದಂತೆ ಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ನೋಡಿಕೊಳ್ಳುತ್ತದೆ.
- ಮೆಣಸಿನಲ್ಲಿ, ಕಬ್ಬಿಣಾಂಶ, ಫೋಲಿಕ್ ಆಸಿಡ್ ಹಾಗೂ ತಾಮ್ರ ಹೇರಳವಾಗಿದ್ದು, ಇವು ಕೆಂಪು ರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತವೆ,
- ಮೆಣಸಿನಕಾಯಿಯಲ್ಲಿ ವಿಟಮಿನ್ ಎ ಹಾಗೂ ಸಿ ಕೂಡಾ ಹೇರಳವಾಗಿವೆ. ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಿಟಮಿನ್ ಸಿ ಕೊಲಾಜೆನ್ ಉತ್ಪಾದನೆಗೂ ಪ್ರಚೋದನೆ ನೀಡುತ್ತದೆ. ಕೊಲಾಜೆನ್ ಚರ್ಮ ಹಾಗೂ ಕೂದಲನ್ನು ಆರೋಗ್ಯವಾಗಿರಿಸುತ್ತದೆ.
- ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ತಲೆನೋವು ಹಾಗೂ ಮೈಗ್ರೇನ್ಗೂ ಒಳ್ಳೆಯದು.
- ಕೆಲವು ಸಂಶೋಧನೆಗಳ ಪ್ರಕಾರ ಖಾರವಾದ ಅಡುಗೆ ಉಣ್ಣುವ ಮಂದಿ ಹೆಚ್ಚು ಕಾಲ ಬದುಕಬಲ್ಲರಂತೆ!
- ಮೆಣಸಿನಕಾಯಿಯಲ್ಲಿ ಹೇರಳವಾಗಿರುವ ವಿಟಮಿನ್ ಎ ದೇಹಕ್ಕೆ ಅತ್ಯಂತ ಅಗತ್ಯವಾಗಿರುವ ಪೋಷಕಾಂಶ. ಇದು ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
ಆದರೆ, ಒಳ್ಳೆಯದು ಎಂದು ಮೆಣಸನ್ನೇ ತಿನ್ನಬೇಡಿ. ಎಲ್ಲವೂ ಹಿತಮಿತವಾಗಿದ್ದರಷ್ಟೇ ಒಳ್ಳೆಯದು. ಯಾಕೆಂದರೆ ಅತಿಯಾದರೆ ಅಮೃತವೂ ವಿಷವೇ!
ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ