Site icon Vistara News

World alzheimers month | ಮರೆವಿನ ರೋಗ ಅಲ್ಜೈಮರ್ಸ್‌ ಬಗೆಗೆ ಇರಲಿ ಅರಿವು

world alzheimers month

ಅರವತ್ತಕ್ಕೆ ಅರಳುಮರುಳು ಎನ್ನುವ ಮಾತನ್ನು ನಾವು ಲಾಗಾಯ್ತಿನಿಂದಲೂ ಕೇಳುತ್ತಿದ್ದೇವಲ್ಲ. ಮತ್ತೆ ವಯಸ್ಸಾದವರಲ್ಲಿ ʻಮರೆವಿನ ರೋಗʼ ಎಂದೇ ಕುಖ್ಯಾತಿ ಪಡೆದಿರುವ ಅಲ್ಜೈಮರ್ಸ್‌ ಇತ್ತೀಚಿನ ದಿನಗಳಲ್ಲಿ ಯಾಕಾಗಿ ಇಷ್ಟೊಂದು ಸುದ್ದಿ ಮಾಡುತ್ತಿದೆ? ಪಶ್ಚಿಮ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಬಹಳಷ್ಟು ಕಡಿಮೆ ಪ್ರಮಾಣದಲ್ಲಿದ್ದ ಅಲ್ಜೈಮರ್ಸ್‌ ರೋಗ ಇತ್ತೀಚೆಗೆ ಭಾರತದಲ್ಲೂ ಹೆಚ್ಚುತ್ತಿರುವುದೇಕೆ? ವಿಶ್ವ ಅಲ್ಜೈಮರ್ಸ್‌ ದಿನ ಮಾತ್ರವಲ್ಲ, ವಿಶ್ವ ಅಲ್ಜೈಮರ್ಸ್‌ ಮಾಸವನ್ನೂ ಆಚರಿಸುವ ಮಟ್ಟಕ್ಕೆ ಬಂದಿರುವುದು ಜಾಗತಿಕ ಮಟ್ಟದಲ್ಲಿ ಏನನ್ನು ಸೂಚಿಸುತ್ತಿದೆ? ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ವಿಶ್ವ ಅಲ್ಜೈಮರ್ಸ್‌ ಮಾಸ ಸೆಪ್ಟೆಂಬರ್‌ನ ಘೋಷವಾಕ್ಯ ʻಡಿಮೆನ್ಶಿಯ ಅರಿಯಿರಿ, ಅಲ್ಜೈಮರ್ಸ್‌ ಅರಿಯಿರಿʼ (Know Dementia, know Alzheimer’s). ಕೋವಿಡ್‌-೧೯ಗೆ ತುತ್ತಾದವರಲ್ಲಿ ನರ ಸಂಬಂಧಿ ರೋಗಗಳು, ಅದರಲ್ಲೂ ಅಲ್ಜೈಮರ್ಸ್‌ ಲಕ್ಷಣಗಳು, ಹೆಚ್ಚಳವಾಗಿರುವ ಬಗ್ಗೆ ಈಗಾಗಲೇ ಅಧ್ಯಯನಗಳು ವಿಶ್ವದೆಲ್ಲೆಡೆ ಎಚ್ಚರಿಸುತ್ತಿವೆ. ೨೦೨೦ಕ್ಕಿಂತ ಮೊದಲು ವಿಶ್ವದೆಲ್ಲೆಡೆ ಅಂದಾಜು ೫.೫ ಕೋಟಿ ಜನ ಅಲ್ಜೈಮರ್ಸ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ೨೦೩೦ರ ಹೊತ್ತಿಗೆ ಇದು ೧೪ ಕೋಟಿಗೆ ತಲುಪುವ ಅಂದಾಜಿದೆ. ಮೊದಲಿಗೆ ಅಲ್ಪ ಪ್ರಮಾಣದ ಮರೆವಿನಿಂದ ಆರಂಭವಾಗುವ ಈ ರೋಗ, ಮುಂದಿನ ಕೆಲವು ವರ್ಷಗಳಲ್ಲಿ ಮೆದುಳಿನ ಆರೋಗ್ಯವನ್ನು ಕಸಿದು, ನಿತ್ಯದ ಕೆಲಸಕ್ಕೂ ನೆರವು ಬೇಕೆನ್ನುವ ಪರಾವಲಂಬಿತನವನ್ನು ಉಂಟುಮಾಡುತ್ತದೆ. ವಯಸ್ಸಾಗುತ್ತಿದ್ದಂತೆ ಅಲ್ಪ ಮರೆವು ಸಹಜ ಎನ್ನುವುದು ಹೌದಾದರೂ ʻಮರೆವಿನ ರೋಗʼ ಸಹಜವಲ್ಲ, ಇದಕ್ಕೆ ಚಿಕಿತ್ಸೆ ಅತ್ಯಗತ್ಯ ಎಂಬ ಅರಿವು ಹೆಚ್ಚಬೇಕಿದೆ.

ಹೆಚ್ಚುತ್ತಿರುವುದೇಕೆ?: ಕೋವಿಡ್‌ಗಿಂತ ಮೊದಲು ಅಲ್ಜೈಮರ್ಸ್‌ ಇರಲಿಲ್ಲವೆಂದೇನಲ್ಲ. ಆದರೆ ಸಾಂಕ್ರಾಮಿಕದ ಸಂದರ್ಭದಲ್ಲಿ ಉಂಟಾದ ಸಾಮಾಜಿಕ, ದೈಹಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಈ ರೋಗದ ಉದ್ಭವ ಮತ್ತು ಹೆಚ್ಚಳವನ್ನು ತ್ವರಿತಗೊಳಿಸಿದೆ. ಸೋಂಕಿನಿಂದ ಮೆದುಳಿನಲ್ಲಿ ಉಂಟಾಗುವ ಮಹತ್ವದ ಬದಲಾವಣೆಗಳಿಂದ ಈ ರೋಗದ ಲಕ್ಷಣಗಳು ವೃದ್ಧರಲ್ಲಿ ಹೆಚ್ಚುತ್ತಿರುವುದನ್ನು ಸಂಶೋಧನೆಗಳು ಈಗಾಗಲೇ ಖಚಿತಪಡಿಸಿವೆ. ಆ ಸಂದರ್ಭದಲ್ಲಿ ಸೋಂಕಿತರಲ್ಲಿ ಉಂಟಾಗಿದ್ದ ಆಮ್ಲಜನಕದ ಕೊರತೆಯಿಂದಾಗಿಯೋ ಆಥವಾ ಇನ್ನಾವುದರಿಂದಾಗಿ ಮೆದುಳಿನ ಕೋಶಗಳು ಈ ರೋಗಕ್ಕೆ ತುತ್ತಾಗುತ್ತಿವೆ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ.

ಇದಲ್ಲದೆ, ಕೋವಿಡ್‌ ಸಂದರ್ಭದಲ್ಲಿ ದೀರ್ಘಕಾಲ ವೃದ್ಧರನ್ನು ಕಾಡಿದ್ದ ಏಕಾಂಗಿತನವನ್ನೂ ಕಾರಣವೆಂದು ಗುರುತಿಸಲಾಗಿದೆ. ಎಲ್ಲೆಲ್ಲೋ ಇದ್ದ ಕುಟುಂಬದವರು ಅಲ್ಲಲ್ಲೇ ಇರಬೇಕಾಗಿ ಬಂದಿತ್ತು. ರೋಗದಿಂದಾಗಿ ವ್ಯಷ್ಟಿಯೂ ಅನಿವಾರ್ಯವಾಗಿತ್ತು. ಸಾಮಾಜಿಕವಾಗಿ ಒಂಟಿಯಾಗಬೇಕಾಯಿತು. ರೋಗದ ಕಾರಣದಿಂದಾಗಿ ಸಾಂಸ್ಕೃತಿ ಬದುಕು ಸೊರಗಿತ್ತು. ಆವರೆಗೆ ತಮ್ಮದೇ ವೃದ್ಧರ/ನಿವೃತ್ತರ ಗುಂಪಿನೊಂದಿಗೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಕ್ರಿಯವಾಗಿದ್ದರು ಎಲ್ಲದರಿಂದ ದೂರವಾಗಿ ಮನೆಯಲ್ಲೇ ಉಳಿಯುವಂತಾಗಿತ್ತು. ನೃತ್ಯ, ಸಂಗೀತ, ನಾಟಕ, ಸಿನೆಮಾ, ಹಬ್ಬ-ಹರಿದಿನ, ದೇವಸ್ಥಾನ, ಭಜನೆ ಎಂಬಂಥ ಎಲ್ಲಾ ಚಟುವಟಿಕೆಗಳು ನಿಂತು ಹೋಗಿದ್ದವು. ಇದರಿಂದ ಸಹಜವಾಗಿ ದೇಹದ ಮತ್ತು ಮನಸ್ಸಿನ ಚಟುವಟಿಕೆ ಕುಂದಿ ಜಡತ್ವ, ಮಬ್ಬು ಆವರಿಸುವಂತಾಗಿತ್ತು. ಡಿಮೆನ್ಶಿಯ ಆವರಿಸದೆ ತಡೆಯುವಂಥ ಬಹುದೊಡ್ಡ ಮಾರ್ಗವೆಂದರೆ ನಮ್ಮ ದೇಹ ಮತ್ತು ಮನಸ್ಸನ್ನು ಸದಾ ಜಾಗೃತವಾಗಿ ಚಟುವಟಿಕೆಯಿಂದ ಇರಿಸುವುದು. ಅಲ್ಜೈಮರ್ಸ್‌ ರೋಗಿಗಳಿಗೂ ದೈಹಿಕ ಮತ್ತು ಮಾನಸಿಕ ವ್ಯಾಯಾಮದ ಅಗತ್ಯವನ್ನು ವೈದ್ಯ ವಿಜ್ಞಾನ ಒತ್ತಿ ಹೇಳುತ್ತದೆ.

ಇದನ್ನೂ ಓದಿ | ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

ಕಳೆದೆರಡು ವರ್ಷಗಳಲ್ಲಿ ಮರೆವಿನ ರೋಗ ಆರಂಭಿಕ ಹಂತದಲ್ಲಿದ್ದ ಬಹುತೇಕರಿಗೆ ಚಿಕಿತ್ಸೆ ದೊರೆಯುವುದು ಕಷ್ಟವಾಗಿತ್ತು. ಸಾಂಕ್ರಾಮಿಕ ಉಲ್ಭಣಿಸಿದ್ದ ಹೊತ್ತಿನಲ್ಲಿ ಇಂಥ ʻಚಿಕ್ಕ-ಪುಟ್ಟʼ ಸಮಸ್ಯೆಗಳಿಗಾಗಿ ವೈದ್ಯರಲ್ಲಿ ಹೋಗುವುದೂ ಕೋವಿಡ್‌ ಅಂಟಿಕೊಳ್ಳುವುದಕ್ಕೆ ದಾರಿಯಾಗಬಹುದೆಂಬ ಭೀತಿ ಇದಕ್ಕೆ ಕಾರಣವಾಗಿತ್ತು. ಇದರಿಂದ ಪ್ರಾರಂಭಿಕ ಹಂತದ ಚಿಕಿತ್ಸೆ ಸರಿಯಾಗಿ ದೊರೆಯದೆ ಹಲವರಲ್ಲಿ ರೋಗ ಮುಂದುವರಿಯುವಂತಾಗಿದ್ದು ನಿಜ.

ಸಾಮಾನ್ಯವಾಗಿ ೬೫ರ ನಂತರವೇ ಆರಂಭವಾಗುವ ಈ ರೋಗ, ಉಲ್ಭಣಿಸಿ ಯಾವುದೂ ತಿಳಿಯದೆ ಪರಾವಲಂಬಿ ಎನ್ನುವ ಸ್ಥಿತಿಗೆ ಬರುವಷ್ಟರಲ್ಲಿ ವ್ಯಕ್ತಿ ಸಹಜವಾಗಿ ಸಾವನ್ನಪ್ಪುವ ಸಾಧ್ಯತೆಯೇ ಅಧಿಕವಾಗಿತ್ತು. ಆದರೆ ಹಿಂದೆಂದಿಗಿಂತಲೂ ಇಂದು ಎಲ್ಲರ ಆಯಸ್ಸು ಹೆಚ್ಚಿರುವುದು ಹೌದು. ದೀರ್ಘಾಯಸ್ಸಿನಿಂದ ರೋಗ ಬಾಧೆಗಳಿಗೂ ದೀರ್ಘವಾಗಿಯೇ ತುತ್ತಾಗಬೇಕಿರುವುದು ಸಹಜ. ಅದರಲ್ಲೂ ಮಧುಮೇಹ, ರಕ್ತದೊತ್ತಡದಂಥ ಹಲವಾರು ರೀತಿಯ ಜೀವನಶೈಲಿ ಖಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಏರುತ್ತಿರುವುದರಿಂದ ಡಿಮೆನ್ಶಿಯಕ್ಕೆ ತುತ್ತಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಡಿಮೆನ್ಶಿಯಕ್ಕೆ ತುತ್ತಾಗುವ ಶೇ. ೬೦ರಷ್ಟು ಜನರಲ್ಲಿ ಅಲ್ಜೈಮರ್ಸ್‌ ಕಾಣಿಸಿಕೊಳ್ಳುತ್ತಿದೆ.

ಇದನ್ನೂ ಓದಿ | Breastfeeding Week 2022 | ಅಮ್ಮನ ಹಾಲೇ ಅಮೃತ!

Exit mobile version