Site icon Vistara News

World Autism Awareness Day: ಆಟಿಸಂ ಸಮಸ್ಯೆಯ ಮಕ್ಕಳಿಗೆ ಬೇಕು ಪೋಷಕರ ವಿಶೇಷ ಕಾಳಜಿ

World Autism Awareness Day

ಮಗು ನೋಡಲು ಎಲ್ಲಾ ಮಕ್ಕಳಂತೆ (World Autism Awareness Day) ಕಂಡುಬಂದರೂ, ಕೆಲವು ವಿಶೇಷ ವರ್ತನೆಗಳನ್ನು ಹೊಂದಿರುತ್ತದೆ. ಒಂದು ವೇಳೆ ಮಗುವಿಗೆ ಆಟಿಸಂ ಸಮಸ್ಯೆಯಿದ್ದರೆ ಮಗು ಆರು ತಿಂಗಳಿದ್ದಾಗಲೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದಾದ ಬಳಿಕ ಮೂರು ಅಥವಾ ನಾಲ್ಕನೇ ವರ್ಷದಲ್ಲಿ ಕಾಯಿಲೆಯ ಸ್ಪಷ್ಟ ಲಕ್ಷಣಗಳು ಪೋಷಕರ ಗಮನಕ್ಕೆ ಬರುತ್ತದೆ. ಆಟಿಸಂ ಎಂಬುದು ಮಗುವೊಂದು ಬಾಲ್ಯಾವಸ್ಥೆಯಲ್ಲಿ ಅನುಭವಿಸುವ ವಿಕಲತೆಯಾಗಿದೆ. ನರಕ್ಕೆ ಸಂಬಂಧಿಸಿದ ಸಮಸ್ಯೆ ಇದಾಗಿದ್ದು, ಇದರಿಂದ ಮಕ್ಕಳು ಬಾಲ್ಯದಲ್ಲೇ ಆಟಿಸಂಗೆ (ಸ್ವಲೀನತೆ) ಒಳಗಾಗುತ್ತಾರೆ. ಪ್ರಪಂಚದ ಅರಿವಿಲ್ಲದೆ ಮಗುವೊಂದು ತನ್ನಷ್ಟೆ ತಾನೇ ವರ್ತಿಸುವುದನ್ನು ಆಟಿಸಂ ಎಂದು ಕರೆಯಲಾಗುತ್ತದೆ. ಆದರೆ ಇದು ಬುದ್ಧಿಮಾಂದ್ಯ ಸಮಸ್ಯೆಯಲ್ಲ, ಇದೊಂದು ನರಸಂಬಂಧಿ ಕಾಯಿಲೆ. ಈ ಸಮಸ್ಯೆಯು ಇಂದಿನ ದಿನಗಳಲ್ಲಿ ಅನೇಕ ಮಕ್ಕಳಲ್ಲಿ ಕಂಡುಬರುತ್ತಿದ್ದು, ಇದರ ಕುರಿತಾಗಿ ಪೋಷಕರು ಎಚ್ಚರ ವಹಿಸುವುದು ಅತ್ಯಗತ್ಯ ಎನ್ನುತ್ತಾರೆ ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಮನ:ಶಾಸ್ತ್ರಜ್ಞರಾದ ಡಾ. ಅಭಿಷೇಕ್‌ ಪಸಾರಿ.

ಇದರ ಅರಿವು ಬೇಕಿದೆ

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಎಂದ ಕೂಡಲೇ ವಿಚಿತ್ರವಾಗಿ ನೋಡುವ ಜನಸಾಮಾನ್ಯರು ಇಂದಿನ ದಿನಗಳಲ್ಲಿ ಈ ಬಗ್ಗೆ ಅರಿಯುವುದು ಅಗತ್ಯ. ಅಲ್ಲದೆ ಪೋಷಕರು ಈ ಸಮಸ್ಯೆಯ ಕುರಿತಾಗಿ ತಿಳಿದಿರುವುದು ಅಷ್ಟೇ ಮುಖ್ಯವಾಗಿರುತ್ತದೆ. ಏಕೆಂದರೆ ಬೇರೆ ಮಕ್ಕಳಂತೆ ಈ ಮಕ್ಕಳು ಕಂಡುಬರುತ್ತಾರೆ. ಆದರೆ ಕೆಲವು ನಡವಳಿಕೆಗಳು ಭಿನ್ನವಾಗಿರುತ್ತವೆ. ಮಕ್ಕಳಲ್ಲಿ ನರ ಬೆಳವಣಿಗೆಯ ಅಸ್ವಸ್ಥತೆಯು ಕಂಡುಬಂದಲ್ಲಿ ಅದು ಸಾಮಾಜಿಕ ಸಂವಹನ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಸ್ವಲೀನತೆ ಹೊಂದಿರುವ ಪ್ರತಿ ಮಗು ವಿಭಿನ್ನವಾಗಿ ವರ್ತಿಸುತ್ತದೆ. ಅಂತಹ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಜೊತೆಯಿರಲೇಬೇಕು ಎಂದು ವೈದ್ಯ ಅಭಿಷೇಕ್‌ ಪಸಾರಿ ಸಲಹೆ ನೀಡಿದ್ದಾರೆ.

ಲಕ್ಷಣಗಳೇನು?

ಈ ರೀತಿಯ ಆಟಿಸಂಗೆ ಒಳಗಾದ ಮಕ್ಕಳು ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ನಗುವುದು, ಅಳುವುದು ಹೀಗೆ ಹಲವಾರು ರೀತಿಯ ವರ್ತನೆಗಳನ್ನು ಮಾಡುತ್ತವೆ. ಹೀಗಾಗಿ ಇಂತಹ ಮಕ್ಕಳಲ್ಲಿ ಉತ್ತಮ ದಿನಚರಿ ಅಳವಡಿಸುವುದರಿಂದ ಹಾಗೂ ಪೋಷಕರ ಕಾಳಜಿಯುತ ಲಾಲನೆ ಪಾಲನೆಗಳಿಂದ ಅವರ ಭವಿಷ್ಯವನ್ನು ಉತ್ತಮವಾಗಿಸಲು ಪ್ರಯತ್ನಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆಟಿಸಂಗೆ ಒಳಗಾದ ಮಕ್ಕಳೊಂದಿಗೆ ಪೋಷಕರು ಉತ್ತಮ ಸಂವಹನ ನಡೆಸುವುದು, ಅವರಲ್ಲಿ ಇರುವ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಸ್ವಾಭಿಮಾನವನ್ನು ಬಲಗೊಳಿಸುವುದು, ನಡವಳಿಕೆ ನಿರ್ವಹಣೆ, ಸಕ್ರಿಯವಾದ ಚಟುವಟಿಕೆಗಳ ಅಳವಡಿಕೆಯ ಮೂಲಕ ಮೌಖಿಕ ಸಂವಹನವನ್ನು ಇನ್ನಷ್ಟು ಸುಧಾರಿಸಬಹುದು. ಈ ಮೂಲಕ ಅಂತಹ ಮಕ್ಕಳು ಸಮಾಜದೊಂದಿಗೆ ಬೆರೆಯುವ ಪ್ರಯತ್ನವಾಗುತ್ತದೆ. ಆಟಿಸಂಗೆ ಒಳಗಾದ ಮಕ್ಕಳಿಗೆ ಉತ್ತಮ ಆರೈಕೆ ನೀಡಿದಲ್ಲಿ ನಿಜಕ್ಕೂ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುವ ಸಾಧ್ಯತೆಗಳಿರುತ್ತದೆ. ಇದಕ್ಕೆ ನೆರೆಹೊರೆಯವರ ಸಹಕಾರವನ್ನು ಪೋಷಕರು ತೆಗೆದುಕೊಳ್ಳಬೇಕು. ಹೀಗಾದಾಗ ಮಾತ್ರ ಇಂತಹ ಮಕ್ಕಳನ್ನು ವಿಭಿನ್ನವಾಗಿ ನೋಡುವ ಸಮಾಜದ ದೃಷ್ಟಿಕೋನವು ಬದಲಾಗುತ್ತದೆ ಎಂದು ಡಾ. ಅಭಿಷೇಕ್‌ ಪಸಾರಿ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 6364409651

Exit mobile version