Site icon Vistara News

World Autism Awareness Day: ಆಟಿಸಂ ಇರುವವರನ್ನು ಸಶಕ್ತಗೊಳಿಸೋಣ

World Autism Awareness Day

ಆಟಿಸಂ (World Autism Awareness Day) ಲಕ್ಷಣಗಳು ಹೆಚ್ಚಾಗಿ ಎಳೆಯ ಮಗುವಿನಲ್ಲೇ ಕಾಣಿಸಿಕೊಳ್ಳುತ್ತವೆ. ಹೊರ ಪ್ರಪಂಚದೊಂದಿಗೆ ಹೆಚ್ಚು ಸಂವಹನ ನಡೆಸದೆ, ತಮ್ಮಷ್ಟಕ್ಕೇ ತಾವು ಅದದೇ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಈ ಮಕ್ಕಳಲ್ಲಿ ಸ್ವಲೀನತೆಯ ಲಕ್ಷಣಗಳು ಒಂದೆರಡು ವರ್ಷಗಳಲ್ಲಂತೂ ಸ್ಪಷ್ಟವಾಗಿ ಗೋಚರಿಸುತ್ತವೆ. ಹಾಗಾಗಿ ಆಟಿಸಂ ಇರುವ ಮಕ್ಕಳನ್ನು ಎಲ್ಲರಂತೆ ಸಮಾಜ ನೋಡುವುದಿಲ್ಲ. ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎಪ್ರಿಲ್‌ ತಿಂಗಳ ಎರಡನೇ ದಿನವನ್ನು ವಿಶ್ವ ಆಟಿಸಂ ಜಾಗೃತಿ ದಿನ ಎಂದು ಗುರುತಿಸಲಾಗಿದೆ.
ಎಲ್ಲ ಮಕ್ಕಳಂತೆ ಇಲ್ಲದ ಈ ಮಕ್ಕಳ ಕಲಿಕೆ, ಸಂವಹನ, ವರ್ತನೆ, ನಡವಳಿಕೆಗಳೆಲ್ಲ ಭಿನ್ನವಾಗಿಯೇ ಇರುತ್ತವೆ. ಸ್ವಲೀನತೆ ಹಾಗೂ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವುದು ಈ ರೋಗದ ಗೋಚರಿಸುವಂಥ ಲಕ್ಷಣಗಳು. ಇದನ್ನು ಸಂಪೂರ್ಣ ಗುಣಪಡಿಸಲಾಗದಿದ್ದರೂ ಬೇಗನೇ ಇದಕ್ಕೆ ಚಿಕಿತ್ಸೆ, ತರಬೇತಿ ಆರಂಭಿಸಿದಲ್ಲಿ, ಮಕ್ಕಳಲ್ಲಿ ಹೆಚ್ಚಿನ ಮಾನಸಿಕ ಬೆಳವಣಿಗೆಯನ್ನು ಸಾಧಿಸಬಹುದು. ಬೇರೆಲ್ಲ ದೇಶಗಳಂತೆ ಭಾರತದಲ್ಲೂ ಆಟಿಸಂ ರೋಗದ ಪ್ರಮಾಣ ಹೆಚ್ಚುತ್ತಿದೆ. 2021ರಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಜನಿಸುವ 68 ಮಕ್ಕಳಲ್ಲಿ ಒಬ್ಬರಲ್ಲಿ ಆಟಿಸಂ ಪತ್ತೆಯಾಗುತ್ತಿದೆ. ಇದರಲ್ಲೂ ಹೆಮ್ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು, 3:1ರ ಅನುಪಾತವನ್ನು ತಜ್ಞರು ಹೇಳುತ್ತಿದ್ದಾರೆ.
ಇಂಥವೆಲ್ಲ ಕಾರಣಗಳಿಂದಾಗಿ, 2007ರ ನವೆಂಬರ್‌ 1ರಂದು ಈ ಕುರಿತು ಘೋಷಣೆಯನ್ನು ವಿಶ್ವಸಂಸ್ಥೆ ಹೊರಡಿಸಿದ್ದು, ರೋಗದ ಕುರಿತಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿಶ್ವ ಆಟಿಸಂ ಜಾಗೃತಿ ದಿನ ಆಚರಣೆಯಲ್ಲಿದೆ. ಈ ಬಾರಿಯ ಘೋಷವಾಕ್ಯ- ʻಆಟಿಸಂ ಇರುವವರನ್ನು ಸಶಕ್ತಗೊಳಿಸೋಣʼ. ಈ ಸಮಸ್ಯೆಯಿಂದ ನರಳುತ್ತಿರುವವರನ್ನು ಮುಖ್ಯವಾಹಿನಿಗೆ ತರುವಂಥ ಕೆಲಸಗಳು ನಡೆಯಬೇಕಿದೆ. ಬಾಲ್ಯದಲ್ಲೇ ಇದನ್ನು ಗುರುತಿಸಿ, ಸರಿಯಾದ ಚಿಕಿತ್ಸೆ, ತರಬೇತಿಗಳನ್ನು ನೀಡುವುದು ಅಗತ್ಯ. ಅವರಲ್ಲಿರುವ ಸಾಧ್ಯತೆಗಳನ್ನು ಗುರುತಿಸಿ, ಅದಕ್ಕೆ ಪೂರಕವಾದ ತರಬೇತಿಯನ್ನು ನೀಡುವುದು ಮಹತ್ವದ್ದು. ಇದಲ್ಲದೆ, ಈ ದಿನ ಹಲವು ಕಾರಣಗಳಿಗೆ ಮಹತ್ವ ಪಡೆದಿದೆ:

ಅರಿವು ಹೆಚ್ಚಳ

ಜಾಗತಿಕವಾಗಿ ಆಟಿಸಂ ಕಾಯಿಲೆಯ ಪ್ರಮಾಣ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಮಾಲಿನ್ಯ, ಅಪರಿಮಿತ ಒತ್ತಡದಂಥ ಕಾರಣಗಳೂ ಇದರ ಹಿಂದಿವೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಈ ಸಮಸ್ಯೆಯ ಬಗೆಗಿನ ಅರಿವನ್ನು ಹೆಚ್ಚಿಸುವುದು ಮುಖ್ಯ ಉದ್ದೇಶ. ಇಂಥ ಲಕ್ಷಣಗಳು ಮಕ್ಕಳಲ್ಲಿ ಕಂಡರೆ ಹೆತ್ತವರೇನು ಮಾಡಬೇಕು, ಸಮಾಜ ಹೇಗೆ ಸ್ವೀಕರಿಸಬೇಕು ಮುಂತಾದ ಎಲ್ಲವೂ ಈ ಅರಿವಿನ ಹೆಚ್ಚಳದಲ್ಲಿ ಸೇರಿದೆ.

ಸ್ವೀಕೃತಿಯ ಮನೋಭಾವ

ಈ ಮಕ್ಕಳನ್ನು ಕೆಲವೊಮ್ಮೆ ಕುಟುಂಬದವರೂ ಕಡೆಗಣಿಸುತ್ತಾರೆ. ಆದರೆ ಅಂಥ ಮಕ್ಕಳಲ್ಲೂ ಸಾಮರ್ಥ್ಯವಿದೆ. ಅದನ್ನು ಗುರುತಿಸಿ ತರಬೇತಿ ನೀಡಿದರೆ, ಅವರಿಗೂ ಬದುಕಿದೆ ಎಂಬುದನ್ನು ಅರಿತಾಗ, ಆಟಿಸಂ ಇರುವವರನ್ನು ಸ್ವೀಕರಿಸುವ ಮನೋಭಾವ ಹೆಚ್ಚುತ್ತದೆ.

ಹಕ್ಕುಗಳು

ಉಳಿದೆಲ್ಲರಂತೆ ಅವರೂ ಈ ಸಮಾಜದ ಭಾಗ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಆವಶ್ಯಕತೆ ಮತ್ತು ಹಕ್ಕು- ಈ ಎರಡೂ ಆಟಿಸಂ ಉಳ್ಳವರಿಗಿದೆ. ಕುಟುಂಬದ ಪರಿಧಿಯಿಂದಾಚೆ ಸ್ವತಂತ್ರವಾಗಿ ಉಳಿದೆಲ್ಲರಂತೆ ಬದುಕುವುದು ಅವರಿಗೆ ಸಾಧ್ಯವಾಗದಿದ್ದರೂ, ಸ್ವಲೀನತೆಯೊಂದಿಗೆ ಸ್ವಾವಲಂಬನೆಯನ್ನು ಸಾಧ್ಯವಾದಷ್ಟೂ ಸಾಧಿಸುವುದಕ್ಕೆ ಅವರ ಹಕ್ಕುಗಳು ಅವರಿಗೆ ದೊರೆಯಬೇಕು.

ಸಾಧ್ಯತೆಗಳು

ಆಟಿಸಂ ಕೇವಲ ಸವಾಲು ಮತ್ತು ಸಮಸ್ಯೆಯಷ್ಟೇ ಅಲ್ಲ, ವಿಶ್ವವನ್ನು ಭಿನ್ನವಾಗಿಯೇ ಗುರುತಿಸುತ್ತಾರೆ ಅಂಥವರು. ಹಾಗಾಗಿಯೇ ಅವರಲ್ಲೂ ಉಳಿದವರಿಗಿಂತ ಬೇರೆಯಾದ ಸಾಧ್ಯತೆಗಳು ಇರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ: World Autism Awareness Day: ಆಟಿಸಂ ಸಮಸ್ಯೆಯ ಮಕ್ಕಳಿಗೆ ಬೇಕು ಪೋಷಕರ ವಿಶೇಷ ಕಾಳಜಿ

Exit mobile version