Site icon Vistara News

World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು!

World Bicycle Day

ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಸೈಕಲ್‌ನ ದೃಶ್ಯವೊಂದು ಬರುತ್ತದೆ. ಮಲೆನಾಡಿನ ಆ ಪ್ರಾಂತ್ಯಕ್ಕೇ ಹೊಸದಾಗಿ ಸೈಕಲ್‌ ಅಥವಾ ʻಬೀಸೆಕಲ್ಲುʼ ಪ್ರವೇಶ ಮಾಡಿದಾಗ, ಅದನ್ನು ಏರಿ ಚಲಾಯಿಸುವುದನ್ನು ಹೇಳಿಕೊಡುವ ಸನ್ನಿವೇಶವೊಂದು ಇನ್ನಿಲ್ಲದಂತೆ ನಗೆಯುಕ್ಕಿಸುತ್ತದೆ. ಶತಮಾನಗಳ ಹಿಂದೆ ಯಾಂತ್ರೀಕೃತ ಸಾರಿಗೆಯ ಆರಂಭದ ದಿನಗಳಲ್ಲೇ ಆವಿಷ್ಕಾರಗೊಂಡು ಸರಳ ವಾಹನವಿದು. ಇಂದಿಗೂ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಕಡಿಮೆ ಖರ್ಚಿನಲ್ಲಿ ಒಳ್ಳೆಯ ವ್ಯಾಯಾಮವನ್ನು ನೀಡಿ, ಪರಸರಕ್ಕೆ ಹಾನಿ ಮಾಡದಿರುವ ಹೆಗ್ಗಳಿಕೆಯನ್ನೂ ಇದು ಪಡೆದಿದೆ. ಅಂದಹಾಗೆ, ಇಂದು ವಿಶ್ವ ಬೈಸಿಕಲ್‌ (World Bicycle Day) ದಿನ. ಮೊದಲ ಬಾರಿಗೆ, 2018ರ ಜೂನ್‌ 3ರಂದು ಈ ದಿನ ಆಚರಣೆಗೊಂಡಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ವೀಕಾರಗೊಂಡ ಈ ದಿನದ ಆಚರಣೆಯ ನಿರ್ಣಯವನ್ನು ಎಲ್ಲ ಸದಸ್ಯರಾಷ್ಟ್ರಗಳೂ ಬೆಂಬಲಿಸಿದ್ದವು. ಜಗತ್ತಿನ ಎಲ್ಲ ರಾಷ್ಟ್ರಗಳು ಬೈಸಿಕಲ್‌ ದಿನದ ಆಚರಣೆಗೆ ಮತ್ತು ವರ್ಷದ ಉಳಿದ ದಿನಗಳಲ್ಲೂ ಸೈಕಲ್‌ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ಈ ದಿನದ ನಿರ್ಣಯಗಳಲ್ಲಿ ಒಂದಾಗಿತ್ತು.

ಏನಿದರ ಮಹತ್ವ?

ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವುದರ ಜೊತೆಗೆ, ಇದನ್ನು ನಿಯಮಿತವಾಗಿ ಬಳಸುವುದರಿಂದ ವಾತಾವರಣದ ಮಾಲಿನ್ಯವನ್ನು ಸಹ ತಗ್ಗಿಸಬಹುದು. ಎಲ್ಲರಿಗೂ ಕೈಗೆಟುಕುವಂಥ ಸರಳ, ಸುಂದರ, ಆಹ್ಲಾದಕರ ಸಾರಿಗೆಯಿದು. ಸೈಕಲ್‌ ಹೊಡೆಯುವುದು ಮಧ್ಯಮ ಪ್ರಮಾಣದ ವ್ಯಾಯಾಮ. ಹೃದಯದ ಆರೋಗ್ಯವನ್ನು ಗಟ್ಟಿಗೊಳಿಸುವಂಥ ಲಘು ಕಾರ್ಡಿಯೊ ಸಹ ಹೌದು. ದೇಹದ ಕೆಳಭಾಗಕ್ಕೆ ಹೆಚ್ಚಿನ ವ್ಯಾಯಾಮ ನೀಡುವ ಈ ಕ್ರಿಯೆಯನ್ನು ಸುಮ್ಮನೆ ಖುಷಿಗಾಗಿಯೂ ಮಾಡಬಹುದು. ಮನೆಯಲ್ಲಿ ಮಕ್ಕಳಿದ್ದರೆ ಅವರೊಂದಿಗೆ ಸೈಕಲ್‌ ಹೊಡೆಯುವುದು, ಸ್ನೇಹಿತರು ಸುಮ್ಮನೇ ಗೊತ್ತುಗುರಿಯಿಲ್ಲದೆ ಸೈಕಲ್‌ನಲ್ಲಿ ಅಡ್ಡಾಡುವುದು, ಕಿವಿಗೊಂದು ಇಯರ್‌ಪ್ಲಗ್‌ ಸಿಕ್ಕಿಸಿ ಬೇಕಾದ್ದನ್ನು ಕೇಳುತ್ತಲೇ ಸೈಕಲ್‌ನಲ್ಲಿ ಸುತ್ತಾಡುವುದು- ಹೀಗೆ ಸೈಕಲ್‌ ಹೊಡೆಯುವುದಕ್ಕೆ ಎಷ್ಟೊಂದು ಆಯಾಮಗಳು ಉಂಟಲ್ಲವೇ?

ಆರೋಗ್ಯಕ್ಕೆ ಇನ್ನೇನು ಲಾಭಗಳಿವೆ?

ಸೈಕಲ್‌ ಹೊಡೆಯುವುದನ್ನು ಲಘು ಕಾರ್ಡಿಯೊ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಅಂದರೆ ಸೈಕಲ್‌ ಹೊಡೆಯುವಷ್ಟೂ ಹೊತ್ತು ನಮ್ಮ ಹೃದಯ ಹೆಚ್ಚಿನ ಪ್ರಮಾಣದ ರಕ್ತವನ್ನು ಪಂಪ್‌ ಮಾಡುತ್ತಿರುತ್ತದೆ. ಇದರಿಂದ ದೇಹದ ಒಟ್ಟಾರೆ ಶಕ್ತಿ ಮತ್ತು ತ್ರಾಣ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹಾಗೆಂದು ಕಠಿಣವಾದ ಕಾರ್ಡಿಯೊ ಇದಲ್ಲ, ಹೃದಯವನ್ನು ಕ್ರಮೇಣ ಬಲಗೊಳಿಸುವ ಲಘು ವ್ಯಾಯಾಮ.

ಬಲವರ್ಧನೆ

ಕಾಲಿನ ಮಾಂಸಪೇಶಿಗಳು, ಅಂದರೆ ಕ್ವಾಡ್‌, ಕಾಫ್‌, ಶಿನ್‌ ಮತ್ತು ಹ್ಯಾಮ್‌ಸ್ಟ್ರಿಂಗ್‌ ಭಾಗಗಳಲ್ಲಿರುವ ಮಾಂಸಖಂಡಗಳು ಸುದೃಢಗೊಳ್ಳುತ್ತವೆ. ಕಟಿಯಿಂದ ಕೆಳಗಿನ ದೇಹಭಾಗ ಸದಾ ಕಾಲ ಸಕ್ರಿಯವಾಗಿ ಇರುವುದರಿಂದ ದೇಹದ ಕೆಳಭಾಗದ ಮಾಂಸಖಂಡಗಳ ಬಲವರ್ಧನೆಗೆ ಒಳ್ಳೆಯ ವ್ಯಾಯಾಮವಿದು. ಇದಕ್ಕಾಗಿಯೇ ಸೈಕ್ಲಥಾನ್‌ಗಳು ನಿಮ್ಮ ಸಮೀಪದಲ್ಲಿ ನಡೆಯುತ್ತಿದ್ದರೆ ತಪ್ಪದೆ ಭಾಗವಹಿಸಿ. ಆಗ ಒಂದಿಷ್ಟು ಸಮಾನ ಮನಸ್ಕರ ಸ್ನೇಹ ದೊರೆತು, ನಿಯಮಿತವಾಗಿ ಸೈಕಲ್‌ ಹೊಡೆಯುವ ಅವಕಾಶವಾಗುತ್ತದೆ.

ಲವಲವಿಕೆ

ಎಂಥ ಟ್ರಾಫಿಕ್‌ ಜಾಮ್‌ನಲ್ಲೂ ಸಿಳ್ಳೆ ಹೊಡೆಯುತ್ತಾ ಮುಂದೆ ಸಾಗುವ ಸೈಕಲ್‌ ಸವಾರರನ್ನು ಕಾಣುವ ಉಳಿದವರಿಗೆ ಒಂದೆಳೆ ಹೊಟ್ಟೆಕಿಚ್ಚಾದರೆ ಅಚ್ಚರಿಯೇನಿಲ್ಲ. ಲೋಕದ ಚಿಂತೆಯನ್ನೇ ಬಿಟ್ಟು ನಮ್ಮಷ್ಟಕ್ಕೆ ನಾವು ಸೈಕಲ್‌ ಹೊಡೆಯುವ ಈ ಕ್ರಿಯೆ ಮನಸ್ಸಿನ ಲವಲವಿಕೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಟ್ರಾಫಿಕ್‌ ಕಿರಿಕಿರಿಯಿಲ್ಲದ ಸುಂದರ ದಾರಿಗಳಲ್ಲಿ ಸೈಕಲ್‌ ಹೊಡೆಯುವ ಅಭ್ಯಾಸವಿದ್ದರೆ ಖಿನ್ನತೆ, ಆತಂಕ, ಒತ್ತಡಗಳನ್ನು ದೂರ ಮಾಡಲು ಸಾಧ್ಯವಿದೆ.

ತೂಕ ಇಳಿಕೆ

ಒಂದು ತಾಸು ಮಧ್ಯಮ ವೇಗದಲ್ಲಿ ಸೈಕಲ್‌ ಹೊಡೆಯುವುದರಿಂದ ಅಂದಾಜು 300 ಕ್ಯಾಲರಿ ಕರಗಿಸಬಹುದಂತೆ. ಹಾಗಾಗಿ ತೂಕ ಇಳಿಸುವವರಿಗೆ ಇದೊಂದು ಖುಷಿ ಕೊಡುವ ವ್ಯಾಯಾಮ. ಮಾತ್ರವಲ್ಲ, ಇದರಿಂದ ದೇಹದ ಹಲವಾರು ಕೀಲುಗಳು ಗಟ್ಟಿಯಾಗಿ ಆರ್ಥರೈಟಿಸ್‌ನಂಥ ಸಮಸ್ಯೆಗಳನ್ನು ದೂರ ಇರಿಸಬಹುದು. ಮಧುಮೇಹಿಗಳಿಗೂ ಇದು ಒಳ್ಳೆಯ ವ್ಯಾಯಾಮ. ಇನ್ನೇಕೆ ತಡ, ಹೊರಡಿ ಸೈಕಲ್‌ ಹಿಡಿದು!

Exit mobile version