ರಕ್ತದಾನ ಮಹಾದಾನವೆಂಬ ಮಾತಿದೆ. ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವ, ಅಪಘಾತಕ್ಕೆ ಈಡಾಗಿ ಬದುಕಿಗಾಗಿ ಹೋರಾಡುತ್ತಿರುವ ಬಹಳಷ್ಟು ಮಂದಿಗೆ ಸರಿಯಾದ ಸಮಯಕ್ಕೆ ರಕ್ತ ದೊರೆತರೆ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ಜೀವ ಉಳಿಸುವ ಉದ್ದೇಶದಿಂದ ರಕ್ತದಾನ ಮಾಡುವಂಥವರು ಜಗತ್ತಿನಲ್ಲಿ ಕೋಟಿಗಟ್ಟಲೆ ಜನರಿದ್ದಾರೆ. ಇಂಥವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ, ಜೂನ್ ತಿಂಗಳ 14ನೇ ದಿನವನ್ನು ವಿಶ್ವ ರಕ್ತದಾನಿಗಳ ದಿನ (World Blood Donor Day) ಎಂದು ಗುರುತಿಸಲಾಗಿದೆ.
ಮೊದಲ ಬಾರಿಗೆ 1940ರಲ್ಲಿ, ರಿಚರ್ಡ್ ಲೋವರ್ ಎಂಬಾತ ಎರಡು ಶ್ವಾನಗಳ ನಡುವೆ ಯಶಸ್ವಿಯಾಗಿ ರಕ್ತಪೂರಣ ನಡೆಸಿದ. ಇದಕ್ಕೂ ಮೊದಲೇ ಈ ಪ್ರಯತ್ನವನ್ನು ನಡೆಸಲಾಗಿತ್ತು. ಆದರೆ 1940ರ ನಂತರ ರಕ್ತಪೂರಣವೆಂಬುದು ಅತಿ ಕಷ್ಟದ ಸಂಗತಿಯಾಗಿ ಉಳಿಯಲಿಲ್ಲ. ಜೂನ್ 14ರಂದು ವಿಶ್ವ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಮತ್ತು ರಕ್ತದಾನದ ಬಗ್ಗೆ ಅರಿವು ಮೂಡಿಸುವ ದಿನವನ್ನು ಆಚರಿಸಬೇಕೆಂದು, 2005ರಲ್ಲಿ ವಿಶ್ವ ಆರೋಗ್ಯ ಸಭೆ ತೀರ್ಮಾನಿಸಿತು.
ಯಾರು ಮಾಡಬಹುದು?
ವಿಶ್ವದೆಲ್ಲೆಡೆ ಲಕ್ಷಾಂತರ ಜನರ ಜೀವ ಉಳಿಸುತ್ತಿದೆ ಈ ರಕ್ತದಾನವೆಂಬ ಪ್ರಕ್ರಿಯೆ. ಹಾಗಾದರೆ ಯಾರೆಲ್ಲ ರಕ್ತವನ್ನು ದಾನ ಮಾಡಬಹುದು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 18 ವರ್ಷದಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇದಕ್ಕಾಗಿ ಮಹಿಳೆಯರಲ್ಲಿ 12 ಜಿ/ಡಿಎಲ್ ಮತ್ತು ಪುರುಷರಲ್ಲಿ 13 ಜಿ/ಡಿಎಲ್ ನಷ್ಟು ಪ್ರಮಾಣದಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್ ಇರಬೇಕಾಗುತ್ತದೆ. ಸರಳವಾಗಿ ಹೇಳಬೇಕಾದರೆ, ರಕ್ತದಾನಿಗೆ ಹಿಮೋಗ್ಲೋಬಿನ್ ಕೊರತೆ ಇರಬಾರದು ಮತ್ತು 45 ಕೆ.ಜಿ. ತೂಕವಾದರೂ ಇರಬೇಕು.
ಜೊತೆಗೆ ನೆಗಡಿ, ಜ್ವರ, ಗಂಟಲುನೋವು, ಹೊಟ್ಟೆನೋವು ಮುಂತಾದ ಯಾವುದೇ ರೀತಿಯ ಸೋಂಕು ರೋಗಗಳು ಅಥವಾ ಆರೋಗ್ಯ ತೊಂದರೆಗಳು ಇರಬಾರದು. ಇತ್ತೀಚೆಗೆ ಟ್ಯಾಟೂ ಹಾಕಿಸಿಕೊಂಡಿದ್ದೀರಿ ಎಂದಾದರೆ, ಮುಂದಿನ ಆರು ತಿಂಗಳು ರಕ್ತದಾನ ಮಾಡುವಂತಿಲ್ಲ. ಉಳಿದಂತೆ, ರಕ್ತಹೀನತೆ ಇಲ್ಲದ ಮಹಿಳೆಯರು ರಕ್ತದಾನ ಮಾಡಬಹುದು. ಆದರೆ ಗರ್ಭಿಣಿಯರು ಮತ್ತು ಹಾಲುಣಿಸುವ ಅಮ್ಮಂದಿರು ರಕ್ತದಾನ ಮಾಡುವಂತಿಲ್ಲ. ಸಸ್ಯಾಹಾರಿಗಳು, ಮಾಂಸಾಹಾರಿಗಳು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ರಕ್ತದಾನ ಮಾಡಬಹುದು. ಒಂದು ಬಾರಿ ರಕ್ತ ನೀಡಿದ ಮೇಲೆ, ಮುಂದಿನ 90 ದಿನಗಳು ಅಥವಾ ಮೂರು ತಿಂಗಳು ರಕ್ತ ನೀಡುವಂತಿಲ್ಲ. ಕಳೆದುಕೊಂಡಿದ್ದನ್ನು ಪುನರುತ್ಪತ್ತಿ ಮಾಡಲು ಶರೀರಕ್ಕೆ ಸಮಯ ನೀಡಬೇಡವೇ? ವರ್ಷಕ್ಕೊಮ್ಮೆ ಅಥವಾ ತಮ್ಮ ಜನ್ಮ ದಿನದಂದು ರಕ್ತದಾನ ಮಾಡುವವರು ಹಲವಾರು ಮಂದಿಯಿದ್ದಾರೆ. ರಕ್ತದ ಮಾದರಿ ಯಾವುದೇ ಇದ್ದರೂ, ಅವೆಲ್ಲವೂ ಆಪತ್ತಿನಲ್ಲಿ ಪ್ರಾಣ ಉಳಿಸುವಂಥವೇ. ಜೊತೆಗೆ ನಿಯಮಿತವಾಗಿ ರಕ್ತ ನೀಡುವುದರಿಂದ ದಾನಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಇದರಿಂದ ಅವರಿಗೇನೂ ತೊಂದರೆಯಾಗದು.
ಎಷ್ಟು ತೆಗೆಯುತ್ತಾರೆ?
ರಕ್ತದಾನವೆಂದರೆ ದೇಹದಲ್ಲಿ ಇರುವ ರಕ್ತವೆಲ್ಲಾ ಅಥವಾ ಬಾಟಲಿಗಟ್ಟಲೆ ತೆಗೆಯುತ್ತಾರೆ ಎಂದು ತಿಳಿಯಬಾರದು. ಒಮ್ಮೆಗೆ 350 ಎಂ.ಎಲ್. ರಕ್ತ ತೆಗೆಯಲಾಗುತ್ತದೆ. ಕೆಲವರಿಗೆ ಸ್ವಲ್ಪ ಆಯಾಸ ಎನಿಸಬಹುದು. ಆದರೆ ಒಂದೆರಡು ಗಂಟೆಗಳಲ್ಲಿ ಸಾಮಾನ್ಯವಾಗಿ ದಾನಿಗಳೆಲ್ಲರೂ ಚೇತರಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಪೌಷ್ಟಿಕವಾದ ಸತ್ವಯುತ ಆಹಾರವನ್ನು ದಾನಿಗಳು ಸೇವಿಸಬೇಕು. ಚೆನ್ನಾಗಿ ನೀರು ಕುಡಿದು, ವಿಶ್ರಾಂತಿ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನದ್ದು ಬೇಕಾಗುವುದಿಲ್ಲ.
ಇದನ್ನೂ ಓದಿ: Junk Food Side Effects: ಗೇಮಿಂಗ್ ದಾಸರಾದ ಮಕ್ಕಳು ಜಂಕ್ ಫುಡ್ ವ್ಯಸನಿಗಳಾಗುವ ಸಂಭವ ಹೆಚ್ಚು!
ಔಷಧಿ ತೆಗೆದುಕೊಳ್ಳುವವರು?
ತಾವೇ ಔಷಧಿ ತೆಗೆದುಕೊಳ್ಳುವಂಥವರು ಇನ್ನೊಬ್ಬರಿಗೆ ರಕ್ತ ನೀಡಬಹುದೇ? ಯಾವ ಸಮಸ್ಯೆಗೆ ಔಷಧಿ ಎಂಬುದು ಮುಖ್ಯವಾಗುತ್ತದೆ. ಸೋಂಕು ರೋಗಗಳಿದ್ದರೆ, ಕ್ಯಾನ್ಸರ್ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ಅವರ ರಕ್ತವನ್ನು ತೆಗೆದುಕೊಳ್ಳಲಾಗುವುದಿಲ್ಲ. ಉಳಿದಂತೆ ಬಿಪಿ, ಥೈರಾಯ್ಡ್‌ನಂಥ ತೊಂದರೆಗೆ ಮಾತ್ರೆ ನುಂಗುತ್ತಿದ್ದರೆ ಅದೇನು ಸಮಸ್ಯೆ ಆಗಲಾರದು. ಆದರೆ ದಾನಿಗಳ ಆರೋಗ್ಯ ಸಂಪೂರ್ಣ ಸುಸ್ಥಿತಿಯಲ್ಲಿ ಇರಬೇಕಾದ್ದು ಕಡ್ಡಾಯ.