ವಿಶ್ವ ಸ್ತನ್ಯಪಾನ ಜಾಗೃತಿ ಸಪ್ತಾಹ (World Breastfeeding Week 2024) ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ (ಆಗಸ್ಟ್ 1ರಿಂದ 8ರವರೆಗೆ), ಕೋಟ್ಯಾನುಕೋಟಿ ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಶಿಶುಪೋಷಣಾ ಕ್ರಮದ ಬಗೆಗಿನ ಕೆಲವು ಗೊಂದಲಗಳಿಗೆ ಉತ್ತರ ಕಂಡುಕೊಳ್ಳುವುದು ಅಗತ್ಯವೆನಿಸಿದೆ. ಅಂಥವುಗಳಲ್ಲಿ ಒಂದು- ಕೂಸಿಗೆ ಹಾಲುಣಿಸುವುದನ್ನು ನಿಲ್ಲಿಸಿದ ತಕ್ಷಣವೇ ಅಮ್ಮಂದಿರ ತೂಕ ಹೆಚ್ಚುತ್ತದೆ, ಯಾಕೆ- ಎಂಬುದು. ನಿಜ, ಮಕ್ಕಳಿಗೆ ಒಂದು ವರ್ಷವಾದ ನಂತರ ಯಾವಾಗಲಾದರೂ ಹಾಲೂಡುವುದನ್ನು ನಿಲ್ಲಿಸಬಹುದು ಅಥವಾ ಮುಂದುವರಿಸಬಹುದು. ಅದು ಅವರವರ ಅನುಕೂಲಕ್ಕೆ ಬಿಟ್ಟಿದ್ದು. ಆದರೆ ಯಾವಾಗ ನಿಲ್ಲಿಸಿದರೂ ಹಲವರಲ್ಲಿ ತೂಕ ಹೆಚ್ಚಳವಾಗುವುದನ್ನು ಕಾಣಬಹುದು. ತಾಯಿಯ ದೇಹದಲ್ಲಿ ಖರ್ಚಾಗುವ ಕ್ಯಾಲರಿ ಇದ್ದಕ್ಕಿದ್ದಂತೆ ಕಡಿಮೆಯಾವುದು ಇದಕ್ಕೆ ಮುಖ್ಯ ಕಾರಣ. ಜೊತೆಗೆ, ಹಾರ್ಮೋನ್ ವ್ಯತ್ಯಾಸ, ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು, ವ್ಯಾಯಾಮದತ್ತ ಗಮನ ನೀಡದಿರುವುದು- ಇವೆಲ್ಲವೂ ತಾಯಿಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಯಾಕೆ ಹೀಗೆ?
ತಾಯಿಯ ದೇಹದಲ್ಲಿನ ಶಕ್ತಿ ಮತ್ತು ಸತ್ವಗಳನ್ನು ಬಳಸಿಕೊಂಡು, ಪ್ರೊಲಾಕ್ಟಿನ್ ಎಂಬ ಚೋದಕ ಹಾಲು ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಮುಂದಿನ ಕೆಲಸಗಳನ್ನು ಆಕ್ಸಿಟೋಸಿನ್ ಎಂಬ ಚೋದಕ ನೋಡಿಕೊಳ್ಳುತ್ತದೆ. ಇದರಿಂದ ಮಗುವಿನ ಹೊಟ್ಟೆ ತುಂಬುವುದಷ್ಟೇ ಅಲ್ಲದೆ, ತಾಯಿ-ಕೂಸು ಇಬ್ಬರದೂ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ, ತಾಯಿಯ ದೇಹದ ಚಯಾಪಚಯವೂ ತೀವ್ರವಾಗಿರುತ್ತದೆ. ಮಗುವಿನ ಬೇಡಿಕೆ ಹೆಚ್ಚಿದಷ್ಟೂ ತಾಯಿಯ ದೇಹದಲ್ಲಿ ಹಾಲು ವೃದ್ಧಿಸಿ, ತೂಕ ಕರಗುತ್ತದೆ. ಇದಕ್ಕೆ ಸೂಕ್ತವಾದ ರೀತಿಯಲ್ಲಿ ಹೊಟ್ಟೆಯೂ ತನ್ನ ಹಸಿವಿನ ಬೇಡಿಕೆಯನ್ನು ಮಂಡಿಸುತ್ತದೆ. ಹಾಲುಣಿಸುವುದನ್ನು ನಿಲ್ಲಿಸುತ್ತಿದ್ದಂತೆ ತಾಯಿಯ ದೇಹದ ಚಯಾಪಚಯ ಕಡಿಮೆಯಾಗುತ್ತದೆ. ಮೊದಲಿನಷ್ಟು ಶಕ್ತಿ ಖರ್ಚಾಗುವುದಿಲ್ಲ. ಜೊತೆಗೆ ಪ್ರೊಲಾಕ್ಟಿನ್ ಮತ್ತು ಆಕ್ಸಿಟೋಸಿನ್ ಮಟ್ಟವೂ ಇಳಿಯುತ್ತದೆ. ಕಾರಣ, ಮಗುವಿಗೆ ಹಾಲೀಗ ಬೇಕಾಗಿಲ್ಲ. ಇದರಿಂದ ಮೂಡ್ ಏರಿಳಿತ, ಚಯಾಪಚಯ ಇಳಿತ ಮತ್ತು ಹಸಿವೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಕೆಲವರಲ್ಲಿ ಕಾಣಬಹುದು. ಈ ಎಲ್ಲದರ ಪರಿಣಾಮವಾಗಿ ದೇಹದಲ್ಲಿ ಕೊಬ್ಬು ಶೇಖರವಾಗುವ ಸಾಧ್ಯತೆ ಹೆಚ್ಚುತ್ತದೆ. ಖರ್ಚಾಗುವ ಶಕ್ತಿ ಕಡಿಮೆಯಾಗಿ, ತಿನ್ನುವ ಆಹಾರ ಕಡಿಮೆಯಾಗದಿದ್ದರೆ ತೂಕ ಹೆಚ್ಚವುದು ಸಾಮಾನ್ಯ ತಾನೆ?
ಇದನ್ನೂ ಓದಿ: World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!
ಏನು ಮಾಡಬೇಕು?
ಮಗುವಿಗೆ ಹಾಲುಣಿಸುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ. ದಿನಕ್ಕೆ ನಾಲ್ಕು ಬಾರಿ ನರ್ಸಿಂಗ್ ಮಾಡುತ್ತಿದ್ದರೆ, ಅದನ್ನು ಮೂರು, ಎರಡು, ಒಂದಕ್ಕಿಳಿಸಿ. ಕೊನೆಗೆ ರಾತ್ರಿ ಮಾತ್ರವೇ ಹಾಲುಣಿಸಿ, ಕ್ರಮೇಣ ಅದನ್ನೂ ನಿಲ್ಲಿಸಿ. ಹೀಗೆ ಮಾಡುವುದರಿಂದ ದೇಹ ಬದಲಾವಣೆಗೆ ಕ್ರಮೇಣ ಹೊಂದಿಕೊಳ್ಳಲು ಅನುಕೂಲವಾಗುತ್ತದೆ. ತಿನ್ನುವ ಆಹಾರದ ಬಗ್ಗೆ ಗಮನ ನೀಡಿ. ಹಾಲುಣಿಸುವಾಗ ಕೊಂಚ ಹೆಚ್ಚು ಕೊಬ್ಬಿನ ಆಹಾರಗಳನ್ನು ತಿಂದರೆ ಅಷ್ಟೇನು ಸಮಸ್ಯೆಯಾಗುವುದಿಲ್ಲ. ಆದರೆ ಅದನ್ನು ನಿಲ್ಲಿಸಿದ ಮೇಲೆ, ಆಹಾರದ ಸಮತೋಲನೆಯತ್ತ ಗಮನ ನೀಡಿ. ಹಣ್ಣು-ತರಕಾರಿ-ಇಡೀ ಧಾನ್ಯಗಳ ಆಹಾರ ನಿಮಗೆ ಬೇಕು. ಸಾಕಷ್ಟು ಪ್ರೊಟೀನ್ ತಿನ್ನಿ. ಚೆನ್ನಾಗಿ ನೀರು ಕುಡಿಯಿರಿ.
ನಿತ್ಯವೂ ದೈಹಿಕ ಚಟುವಟಿಕೆಯನ್ನು ನಿಯಮಿತವಾಗಿ ಮಾಡಿ. ನಿಧಾನವಾಗಿ ವಾಕಿಂಗ್, ಯೋಗ ಮುಂತಾದ ಯಾವುದೇ ವ್ಯಾಯಾಮಕ್ಕೆ ತೆರೆದುಕೊಳ್ಳಿ. ಇದರಿಂದ ಶರೀರ ಸಬಲವಾಗುತ್ತದೆ. ಮಗುವಿನ ಹಿಂದೆ ಓಡುವಷ್ಟರಲ್ಲೇ ಸುಸ್ತಾಗುತ್ತದೆ ಎನ್ನುವ ಕಾರಣ ನೀಡಬೇಡಿ. ಇನ್ನೂ ಕೆಲವು ವರ್ಷಗಳು ಈ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವುದಿಲ್ಲ. ಹಾಗೆಂದು ಅಷ್ಟೂ ವರ್ಷಗಳು ವ್ಯಾಯಾಮ ಇಲ್ಲದೆ ಬದುಕುವುದು ಒಳ್ಳೆಯದಲ್ಲ. ಇರುವ ಅವಕಾಶದಲ್ಲಿ ಹೆಚ್ಚು ನಿದ್ದೆ ಮಾಡಲು ಯತ್ನಿಸಿ. ಮಗು ಮಲಗಿದಾಗ ನೀವೂ ಮಲಗುವ ಅಭ್ಯಾಸವಿದ್ದರೆ ಅದನ್ನು ಮುಂದುವರಿಸಿ. ಮಾನಸಿಕ ಆರೋಗ್ಯದ ಬಗ್ಗೆ ಗಮನ ನೀಡಿ. ಅತಿಯಾದ ಮಾನಸಿಕ ಒತ್ತಡವೂ ತೂಕ ಏರಿಕೆಗೆ ಕಾರಣವಾಗುತ್ತದೆ. ಸ್ವಾಸ್ಥ್ಯದ ಕಾಳಜಿಯಲ್ಲಿ ದೇಹ ಮಾತ್ರವಲ್ಲ, ಮನಸ್ಸೂ ಸೇರುತ್ತದೆ ಎಂಬುದನ್ನು ಗಮನಿಸಿ.