Site icon Vistara News

World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ: ಹಾಲುಣಿಸುವ ಲಾಭಗಳೇನು?

World Breastfeeding Week

ಕೆಲವು ದಿನಾಚರಣೆಗಳು ಸೋಜಿಗ ಮೂಡಿಸುವುದು ಹೌದು. ಆಯಾ ದಿನದ ಆಚರಣೆಯಲ್ಲಿ ಮಾತ್ರವೇ ಅವುಗಳನ್ನು ಜಾರಿ ಇಡಬೇಕೇ ಎಂಬ ಪ್ರಶ್ನೆಯನ್ನೂ ಮೂಡಿಸುತ್ತವೆ. ಉದಾ, ಮೂರ್ಖರ ದಿನದಂದು ಸಿಕ್ಕವರನ್ನೆಲ್ಲಾ ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತೇವೆ. ಆದರೆ ಎಲ್ಲಾ ದಿನಗಳೂ ಹಾಗಿರುವುದಿಲ್ಲ. ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ, ಆಗಸ್ಟ್‌ 1 ರಿಂದ 2ರವರೆಗೆ ವಿಶ್ವ ಸ್ತನ್ಯಪಾನ (Breastfeeding) ಸಪ್ತಾಹ. ಇದರರ್ಥ ಇದು ಸ್ತನ್ಯಪಾನ ಜಾಗೃತಿ ಸಪ್ತಾಹ. ಈ ಕ್ರಿಯೆಯ ಮಹತ್ವವೇನು ಎಂಬ ಬಗ್ಗೆ ಜಾಗೃತಿ ಮೂಡಿಸುವ ದಿನಗಳಿವು. ಅಜ್ಜಿ-ಮುತ್ತಜ್ಜಿಯರ ಕಾಲದಿಂದ ಇದು ನಾವೆಲ್ಲಾ ಕೇಳುತ್ತ ಬಂದಿರುವ ಸಂಗತಿಯೇ ಆದರೂ, ಕೆಲವೊಮ್ಮೆ ಇದನ್ನು ಪಾಲಿಸುವಲ್ಲಿ ಬಹಳಷ್ಟು ಕರ್ಣಾಕರ್ಣಿಕೆಗಳು ತೊಡಕಾಗುತ್ತವೆ. ಈ ಹಿನ್ನೆಲೆಯಲ್ಲಿ ಕೆಲವು ವೈಜ್ಞಾನಿಕ ಸತ್ಯಗಳು ನೆರವಾಗಬಹುದು

ಪ್ರಾಕೃತಿಕ ಆಹಾರವಿದು

ಮೊದಲ ಆರು ತಿಂಗಳು ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನೂ ಒದಗಿಸುವ ಪ್ರಾಕೃತಿಕ ಆಹಾರವೆಂದರೆ (Breastfeeding) ತಾಯಿಯ ಹಾಲು. ಹಾಲಿನ ಉಷ್ಣತೆ ಮತ್ತು ರುಚಿಯಿಂದ ಹಿಡಿದು ಪೋಷಕಾಂಶದವರೆಗೆ ಯಾವುದಕ್ಕೂ ಯೋಚಿಸುವ ಅಗತ್ಯವಿಲ್ಲದಂಥ ಸಿದ್ಧ ಆಹಾರವಿದು. ಮೊದಲ ಹಾಲು ಅಥವಾ ಕೊಲಾಸ್ಟ್ರಮ್‌ನಿಂದ ತೊಡಗಿ ಕಾಲಕಾಲಕ್ಕೆ ಬೆಳೆಯುತ್ತಾ ಬರುವ ಶಿಶುವಿನ ಜಠರದ ಸಾಮರ್ಥ್ಯಕ್ಕೆ ಹೊಂದುವಂತೆ ತಾಯಿಯ ಹಾಲೂ ಒದಗಿ ಬರುತ್ತದೆ.

ರೋಗನಿರೋಧಕತೆ

ಶಿಶುವಿನ ಆರಂಭಿಕ ದಿನಗಳಲ್ಲಿ ಅಗತ್ಯವಾಗಿ ಬೇಕಾದ ರೋಗನಿರೋಧಕ ಶಕ್ತಿಯನ್ನು ನೀಡುವುದು ತಾಯಿಯ ಹಾಲೇ (Breastfeeding) ಹೊರತು ಬೇರೆ ಯಾವುದೂ ಅಲ್ಲ. ಅದರಲ್ಲೂ ಮೊದಲೆರೆಡು ದಿನಗಳು ಮಗುವಿಗೆ ಸಿಗುವ ಕೊಲಾಸ್ಟ್ರಮ್‌ನಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಮಗುವಿನ ಮೂಗು, ಗಂಟಲು ಮತ್ತು ಜೀರ್ಣಾಂಗಗಳಲ್ಲಿ ರಕ್ಷಾಕವಚವನ್ನು ಕೊಲಾಸ್ಟ್ರಮ್‌ನಲ್ಲಿರುವ ಇಮ್ಯುನೊಗ್ಲೋಬುಲಿನ್‌ಗಳು ನಿರ್ಮಿಸುತ್ತವೆ. ಜೊತೆಗೆ, ತಾಯಿಯ ದೇಹದಲ್ಲಿ ಉತ್ಪಾದನೆಯಾಗುವ ಪ್ರತಿಕಾಯಗಳು ಸುಲಭವಾಗಿ ಮಗುವಿನ ದೇಹಕ್ಕೆ ಹಾಲಿನ ಮೂಲಕ ವರ್ಗಾವಣೆಯಾಗುತ್ತವೆ.

ಅಪಾಯ ಕಡಿಮೆ

ಮೇಲಿಂದ ಹಾಕುವ ಆಹಾರಗಳಿಂದ ಮಗುವಿನ ಒಂದಕ್ಕೊಂದು ಸಮಸ್ಯೆಗಳು ಎದುರಾಗಬಹುದು. ಆದರೆ ತಾಯಿಯ ಹಾಲಿನಿಂದ ಕಿವಿ ಸೋಂಕು, ಶ್ವಾಸನಾಳದ ಸೋಂಕು, ಜೀರ್ಣಾಂಗದ ಸಮಸ್ಯೆಗಳು, ಅಲರ್ಜಿಗಳು, ಬಾಲ್ಯದ ಮಧುಮೇಹ ಮುಂತಾದ ಹತ್ತು-ಹಲವು ಸಮಸ್ಯೆಗಳನ್ನು ದೂರ ಮಾಡಬಹುದು.

ಆರೋಗ್ಯಕರ ತೂಕ

ಪುಟ್ಟ ಮಕ್ಕಳ ತೂಕ ಹೆಚ್ಚಿದ್ದರೂ ಸಮಸ್ಯೆ, ಕಡಿಮೆ ಇದ್ದರೂ ತೊಂದರೆ. ಆದರೆ ಕೂಸು ಮೊದಲೊಂದು ವರ್ಷ ತಾಯಿಯ ಹಾಲುಣ್ಣುವುದರಿಂದ ತೂಕ ಹೆಚ್ಚಳ ಸಮರ್ಪಕವಾಗಿರುತ್ತದೆ. ಮೊದಲಾರು ತಿಂಗಳ ನಂತರ ಕ್ರಮೇಣ ಘನ ಆಹಾರಗಳನ್ನು ಶಿಶುವಿಗೆ ನೀಡಬಹುದು. ಆದರೆ ತಾಯಿಯ ಹಾಲನ್ನು ಕೂಸಿಗೆ ನಿಲ್ಲಿಸುವಂತಿಲ್ಲ. ಸ್ತನ್ಯಪಾನ ಮಾಡುವ ಶಿಶುಗಳು ತಮಗೆ ಹೊಟ್ಟೆ ತುಂಬಿದ ತಕ್ಷಣ ಕುಡಿಯುವುದನ್ನು ತಾವೇ ನಿಲ್ಲಿಸಿಬಿಡುತ್ತದೆ. ಬಾಟಲಿಯಲ್ಲಿ ಮಿಕ್ಕಿದೆಯೋ ಇಲ್ಲವೋ ಎಂಬಂತೆ ನೋಡುವ ಪ್ರಮೇಯವೇ ಇಲ್ಲ.

ಜಾಣ ಮಕ್ಕಳು

ಇತರ ಮಕ್ಕಳಿಗಿಂತ ತಾಯಿಯ ಹಾಲು ಕುಡಿದ ಮಕ್ಕಳ ಮೆದುಳಿನ ಬೆಳವಣಿಗೆ ಚೆನ್ನಾಗಿರುತ್ತದೆ ಎನ್ನುತ್ತವೆ ಅಧ್ಯಯನಗಳು. ಹಾಲುಣ್ಣುವ ಸಂದರ್ಭದಲ್ಲಿ ಶಿಶುಗಳಿಗೆ ಒದಗುವ ತಾಯಿಯ ಸಾಮೀಪ್ಯ ಮತ್ತು ಸ್ಪರ್ಶವೂ ಇದಕ್ಕೆ ಬಹು ಮುಖ್ಯ ಕಾರಣ. ಇದೊಂದು ವರ್ಷದಲ್ಲಿ ಮಕ್ಕಳಿಗೆ ದೊರೆಯುವ ಈ ಅಮೂಲ್ಯ ಪೋಷಕಾಂಶದಿಂದ ದೀರ್ಘಕಾಲೀನ ಬೆಳಗಣಿಗೆಗೆ ಸಹಾಯ ಒದಗುತ್ತದೆ.

ತಾಯಿಗೂ ಲಾಭ

ಇದರಿಂದ ಕೂಸಿಗೆ ಮಾತ್ರವಲ್ಲ, ತಾಯಿಗೂ ಅನುಕೂಲವಿದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿಸಿಕೊಂಡ ತೂಕವನ್ನು ಇಳಿಸುವ ಶ್ರಮವಿಲ್ಲದ ವಿಧಾನವಿದು. ಮಾತ್ರವಲ್ಲ, ಹಿಗ್ಗಿ ಚೀಲದಂತಾಗಿದ್ದ ಗರ್ಭಾಶಯ ಸಂಕುಚಿತಗೊಂಡು ಹೊಟ್ಟೆ ಕಡಿಮೆಯಾಗುವಂಥ ಸರಳ ವಿಧಾನವೂ ಹೌದಿದು. ಹಾಗಾಗಿ ಸ್ತನ್ಯಪಾನದಿಂದ ತಾಯಿಯ ಶರೀರ ಮೊದಲಿನಂತೆ ಬಳುಕುವ ಬಳ್ಳಿಯಾಗಲು ಸಾಧ್ಯವಿದೆ. ಹೆರಿಗೆಯ ನಂತರ ಕಾಡುವ ಖಿನ್ನತೆಯನ್ನು ದೂರ ಮಾಡುವ ಸಮರ್ಥ ಉಪಾಯವಿದು. ಜೊತೆಗೆ, ರಕ್ತದ ಏರೊತ್ತಡ, ಆರ್ಥರೈಟಿಸ್‌, ಮಧುಮೇಹ ಮತ್ತು ಕೊಬ್ಬನ್ನು ದೂರ ಇರಿಸಲು ಶಿಶುವಿಗೆ ಹಾಲುಣಿಸುವುದು ನೆರವಾಗುತ್ತದೆ. ಶಿಶುವು ಹಾಲುಣ್ಣುವಷ್ಟು ದಿನಗಳು ತಾಯಿಯ ಮುಟ್ಟು ಮುಂದೂಡುವುದನ್ನೂ ಸಾಮಾನ್ಯವಾಗಿ ಗಮನಿಸಬಹುದು. ಹಾಗಾಗಿ ನಿಸರ್ಗವೇ ಕೊಟ್ಟ ಫಾರ್ಮುಲಾಗೆ ಶರಣಾಗಿ, ಶಿಶುಗಳಿಗೆ ಹಾಲೂಡಿಸಿ.

FAQ

ಮಗುವಿಗೆ ಎಷ್ಟು ವರ್ಷಗಳವರೆಗೆ ಹಾಲುಣಿಸಬಹುದು?

ಮೊದಲಾರು ತಿಂಗಳು ತಾಯಿಯ ಹಾಲು ಮಾತ್ರವೇ. ಆನಂತರ ಮಗುವಿಗೆ 2 ವರ್ಷ ಆಗುವವರೆಗೆ ಅಥವಾ ಇನ್ನೂ ಹೆಚ್ಚು ದಿನಗಳವರೆಗೆ ಹಾಲುಣಿಸಬಹುದು

ಹಾಲುಣಿಸುವ ತಾಯಂದಿರು ಪಥ್ಯ ಮಾಡಬೇಕೆ?

ಹೌದು. ಕಾಫಿ, ಚಹಾ, ಸೋಡಾದಂಥ ಕೆಫೇನ್‌ ಪದಾರ್ಥಗಳು, ಹೊಟ್ಟೆಯುಬ್ಬರಿಸುವ ಆಹಾರಗಳು, ಅತಿಯಾದ ಮಸಾಲೆ ಮತ್ತು ಕರಿದ ಆಹಾರಗಳು, ಕೆಲವು ಜಾತಿಯ ಮೀನುಗಳು, ಪೆಪ್ಪರ್‌ಮಿಂಟ್‌ ಮತ್ತು ಪಾರ್ಸ್ಲೆಯಂಥ ಗಿಡಮೂಲಿಕೆಗಳು ಕೆಲವೊಮ್ಮೆ ಹಾಲು ಕಡಿಮೆ ಮಾಡಬಹುದು- ಇಂಥ ಕೆಲವನ್ನು ತಾತ್ಕಾಲಿಕವಾಗಿ ವರ್ಜಿಸಿದರೆ ಒಳ್ಳೆಯದು.

Exit mobile version