Site icon Vistara News

World Cancer Day 2023: ಸ್ತನ ಕ್ಯಾನ್ಸರ್‌ ಮಹಿಳೆಯರಲ್ಲಷ್ಟೇ ಅಲ್ಲ, ಪುರುಷರಿಗೂ ಬರಬಹುದು ಎಚ್ಚರ!

breast cancer in men

ಸ್ತನ ಕ್ಯಾನ್ಸರ್‌ ಎಂದ ಕೂಡಲೇ ಇದು ಮಹಿಳೆಯರಿಗೆ ಸಂಬಂಧಪಟ್ಟಿದ್ದು ಅಂದುಕೊಳ್ಳುವವರೇ ಹೆಚ್ಚು. ಆದರೆ, ಸ್ತನ ಕ್ಯಾನ್ಸರ್‌ನ ಭೀತಿ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಇದೆ!

ಹೌದು. ನಂಬಲೇಬೇಕು. ಮಹಿಳೆಯರಂತೆಯೇ ಪುರುಷರಿಗೂ ಸ್ತನ ಕ್ಯಾನ್ಸರ್‌ ಬರುತ್ತದೆ. ಆದರೆ, ಬಹಳಷ್ಟು ಪುರುಷರಿಗೆ ಇಂದು, ತಮಗೂ ಸ್ತನ ಕ್ಯಾನ್ಸರ್‌ ಬರಬಹುದು ಎಂಬ ಬಗ್ಗೆ ಅರಿವಿಲ್ಲ. ಮಹಿಳೆಯರಿಗೆ ಹೋಲಿಸಿದರೆ, ಪುರುಷರಿಗೆ ಈ ಕಾಯಿಲೆ ಬರುವುದು ತೀರಾ ಅಪರೂಪವಾದರೂ, ಪುರುಷರಲ್ಲೂ ಕೂಡಾ ಸ್ತನ ಕ್ಯಾನ್ಸರ್‌ ಪ್ರಕರಣಗಳು ಕಂಡು ಬಂದಿವೆ. ಇದರ ಪ್ರಮಾಣ ಶೇ.೧.೦೩ರಷ್ಟಿದ್ದು ವಯಸ್ಸಾದ ಪುರುಷರಲ್ಲಿ ಇದು ಕಾಣಿಸಿಕೊಳ್ಳುವ ಸಂಭವ ಹೆಚ್ಚು. ಹಾಗಂದ ಮಾತ್ರಕ್ಕೆ ಸಣ್ಣ ವಯಸ್ಸಿನ ಪುರುಷರಲ್ಲಿ ಈ ಕ್ಯಾನ್ಸರ್‌ ಕಾಣಿಸಿಕೊಳ್ಳುವುದಿಲ್ಲ ಎಂದಲ್ಲ. ಪುರುಷರಲ್ಲಿ ಇದು ಹೇಗೆ ಕಾಣಿಸಿಕೊಳ್ಳುತ್ತದೆ, ಇದರ ಲಕ್ಷಣಗಳೇನು ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡಿದರೆ ಅದಕ್ಕೆ ಉತ್ತರ ಇಲ್ಲಿದೆ.

ಪುರುಷರ ಸ್ತನ ಕ್ಯಾನ್ಸರ್‌ ಲಕ್ಷಣಗಳು ಮಹಿಳೆಯರ ಸ್ತನ ಕ್ಯಾನ್ಸರ್‌ ಲಕ್ಷಣಗಳಿಗಿಂತ ಭಿನ್ನವೇನೂ ಇಲ್ಲ. ಮಹಿಳೆಯರಂತೆಯೇ ಪುರುಷರಲ್ಲೂ, ಸ್ತನದಲ್ಲಿ ನೋವಿಲ್ಲದ ಗಡ್ಡೆಗಳುಂಟಾಗಬಹುದು. ತೊಟ್ಟಿನಲ್ಲಿ ಬದಲಾವಣೆ ಕಾಣಬಹುದು. ತೊಟ್ಟು ಕೆಂಪಾಗಿ, ಒಳಮುಖವಾಗಿ ತಿರುಗಬಹುದು. ಸ್ತನದ ಭಾಗ ಕೆಂಪಗಾಗಿ, ಸಿಪ್ಪೆ ಏಳಬಹುದು. ತೊಟ್ಟಿನಲ್ಲಿ ಯಾವುದೇ ಬಗೆಯ ಸ್ರಾವವೂ ಉಂಟಾಗಬಹುದು. ರೋಗ ಲಕ್ಷಣಗಳು ಮಹಿಳೆಯರ ಸ್ತನ ಕ್ಯಾನ್ಸರ್‌ಗೂ ಪುರುರುಷರ ಕ್ಯಾನ್ಸರ್‌ಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಬಹುತೇಕ ಇಬ್ಬರಲ್ಲೂ ಒಂದೇ ಬಗೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಬಗೆಯ ಲಕ್ಷಣಗಳು ಕಂಡಾಗ, ಸ್ತನದಲ್ಲಿ ಬದಲಾವಣೆ ಕಂಡಾಗ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಸಾಮಾನ್ಯವಾಗಿ ಇದು ಪುರುಷರಲ್ಲಿ ಕಾಣಿಸಿಕೊಳ್ಳುವಾಗ ಪುರುಷರಲ್ಲಿ ಸ್ತನದ ತೊಟ್ಟಿನಿಂದಲೇ ಆರಂಭವಾಗುವುದು ಹೆಚ್ಚು. ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಭಾಗವಾಗಿ ಸ್ತನವು ಹದಿಹರೆಯದಲ್ಲಿ ಬೆಳೆಯತೊಡಗಿದಾಗ ಸ್ತನದ ಅಂಗಾಂಶ ಹೆಚ್ಚು ಬೆಳೆಯುತ್ತದೆ. ಪುರುಷರಲ್ಲಿ ಈ ಅಂಗಾಂಶ ಬೆಳೆದರೂ ಕಡಿಮೆ ಪ್ರಮಾಣದಲ್ಲಿ ಬೆಳೆಯುವುದರಿಂದ ಸ್ತನ ಕ್ಯಾನ್ಸರ್‌ ಪುರುಷರಲ್ಲಿ ಕಾಣಿಸಿಕೊಳ್ಳುವ ಸಂಭವ ಕಡಿಮೆ. ಆದರೆ, ಪುರುಷರಿಗೆ ಇದರ ಅಪಾಯವೇ ಇಲ್ಲ ಎಂದು ಅಂದುಕೊಳ್ಳುವುದು ತಪ್ಪು. ಹಾಗಾದರೆ ಪುರುಷರಲ್ಲಿ ಯಾರಿಗೆ ಈ ಸ್ತನ ಕ್ಯಾನ್ಸರ್‌ ಬರುವ ಸಂಭವ ಹೆಚ್ಚಿರುತ್ತದೆ ಎಂಬುದನ್ನು ನೋಡೋಣ.

೧. ಪುರುಷರಲ್ಲಿ ಸ್ತನ ಕ್ಯಾನ್ಸರ್‌ ಬರಲು ಅನುವಂಶೀಯತೆಯೂ ಕೂಡಾ ಮುಖ್ಯ ಕಾರಣ.. ಹೆತ್ತವರಿಗೆ ಕ್ಯಾನ್ಸರ್‌ ಬಂದಿದ್ದರೆ, ಕುಟುಂಬದಲ್ಲಿ ಕ್ಯಾನ್ಸರ್‌ಗೆ ತುತ್ತಾದ ಇತಿಹಾಸವಿದ್ದರೆ, ಕ್ಯಾನ್ಸರ್‌ ಉಂಟಾಗುವ ಸಂಭವ ಹೆಚ್ಚು ಎನ್ನುತ್ತವೆ ವೈಜ್ಞಾನಿಕ ವರದಿಗಳು.

೨. ಪುರುಷರಲ್ಲಿ ೬೦ನೇ ವಯಸ್ಸಿನ ನಂತರ ಈ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು. ಸಣ್ಣ ವಯಸ್ಸಿನ ಪುರುಷರಿಗೆ ಬರುವುದೇ ಇಲ್ಲ ಎಂದಲ್ಲ. ಆದರೆ ವಯಸ್ಸೂ ಕೂಡಾ ಇದಕ್ಕೆ ಕಾರಣವಾಗಬಲ್ಲದು.

ಇದನ್ನೂ ಓದಿ: World Cancer Day 2023 : ಕಣ್ಣಿನ ಕ್ಯಾನ್ಸರ್ ಜಾಗೃತಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಫೀಲ್ಡಿಗಿಳಿದ ವೈದ್ಯರು; ಅಂಧರೊಂದಿಗೆ ಫುಟ್ಬಾಲ್​ ಜಾಗೃತಿ

೩. ಇಸ್ಟ್ರೋಜನ್‌ ಹಾರ್ಮೋನಿನ ಔಷಧಿಗಳ ಸೇವನೆ, ವೃಷಣದ ಕ್ಯಾನ್ಸರ್‌ಗೆ ನೀಡುವ ಹಾರ್ಮೋನ್‌ ಥೆರಪಿಗಳ ಕಾರಣದಿಂದ ಅಂಥ ಪುರುಷರಲ್ಲಿ ಈ ಸ್ತನ ಕ್ಯಾನ್ಸರ್‌ ಭೀತಿ ಹೆಚ್ಚು.

೪. ಕ್ಲಿನ್‌ಫೆಲ್ಟರ್ಸ್‌ ಸಿಂಡ್ರೋಮ್‌ ತೊಂದರೆ ಇರುವ ಪುರುಷರಿಗೂ ಸ್ತನ ಕ್ಯಾನ್ಸರ್‌ ಅಪಾಯ ಹೆಚ್ಚು. ಈ ಸಿಂಡ್ರೋಮ್‌ ಇರುವ ಪುರುಷರಲ್ಲಿ ಪುರುಷರ ಹಾರ್ಮೋನ್ ಆದ ಆಂಡ್ರೋಜನ್‌ ಕಡಿಮೆ ಉತ್ಪಾದನೆಯಾಗಿ, ಸ್ತ್ರೀಯರ ಹಾರ್ಮೋನು ಇಸ್ಟ್ರೋಜನ್‌ ಹೆಚ್ಚು ಉತ್ಪತ್ತಿಯಾಗುತ್ತದೆ.

೫. ಪಿತ್ತಕೋಶದ ಕಾಯಿಲೆ ಇರುವ ಪುರುಷರಿಗೂ ಸ್ತನ ಕ್ಯಾನ್ಸರ್‌ ರಿಸ್ಕ್‌ ಹೆಚ್ಚು. ಪಿತ್ತಕೋಶದ ಸಿರ್ಕೋಸಿಸ್‌ ಇರುವ ಮಂದಿಯಲ್ಲಿ ಆಂಡ್ರೋಜನ್‌ ಉತ್ಪತ್ತಿ ಕಡಿಮೆಯಾಗಿ ಸ್ತ್ರೀಯರ ಹಾರ್ಮೋನ್‌ ಇಸ್ಟ್ರೋಜನ್‌ ಉತ್ಪತ್ತಿ ಹೆಚ್ಚಾಗುತ್ತದೆ.

೬. ಅತಿಯಾಗಿ ಬೊಜ್ಜು ಇರುವ ಮಂದಿಯಲ್ಲೂ ಸ್ತ್ರೀಯರ ಹಾರ್ಮೋನ್‌ ಉತ್ಪತ್ತಿ ಹೆಚ್ಚಾಗುತ್ತದೆ. ಇಂಥವರಿಗೂ ಸ್ತನ ಕ್ಯಾನ್ಸರ್‌ ಸಂಭವ ಹೆಚ್ಚು.

೭. ವೃಷಣಗಳ ಕಾಯಿಲೆ ಇದ್ದ ಮಂದಿಗೆ, ವೃಷಣಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರೆ ಅಂಥವರಿಗೂ ಈ ಸ್ತನ ಕ್ಯಾನ್ಸರ್‌ ಅಪಾಯ ಹೆಚ್ಚಿರುತ್ತದೆ.

ಆದರೆ, ವಿಚಿತ್ರವೆಂದರೆ, ಕಳೆದ ಮೂರು ದಶಕಗಳಲ್ಲಿ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬದುಕುಳಿಯುವ ಪ್ರಮಾಣದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದರೂ ಪುರುಷರ ಸ್ತನ ಕ್ಯಾನ್ಸರ್‌ ಪ್ರಕರಣಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲವೆಂದು ವರದಿಗಳು ಹೇಳುತ್ತವೆ.

ಇದನ್ನೂ ಓದಿ: World Cancer Day 2023: ಕ್ಯಾನ್ಸರ್‌ಗೆ ಸೆಲೆಬ್ರಿಟಿಗಳೆಂಬ ಭೇದವಿಲ್ಲ: ಕ್ಯಾನ್ಸರ್‌ ಗೆದ್ದ ವೀರರಿವರು!

Exit mobile version