ಕ್ಯಾನ್ಸರ್ ವಿರುದ್ಧ ಹೋರಾಡುವುದು ಎಂದರೆ ಬದುಕಿನ ಅತ್ಯಂತ ಕಠಿಣವಾದ ಹೋರಾಟ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಡಿ ಹಿಪ್ಪೆ ಮಾಡುವ ಕ್ಯಾನ್ಸರ್ ಬದುಕನ್ನು ಅಲ್ಲೋಲಕಲ್ಲೋಲವಾಗಿಸುವುದು ನಿಜ. ಈ ಮಾರಕ ರೋಗದ ಚಿಕಿತ್ಸೆಗೆ ಒಳಪಡುವ ರೋಗಿಗೂ ಹಾಗೂ ಅವರ ಜೊತೆಗೆ ಸದಾ ನಿಲ್ಲುವ ಮಂದಿಯ ಪಾಲಿಗಿದು ಅತ್ಯಂತ ಯಾತಾನಾಮಯ ದಿನಗಳು. ತನಗಿರುವ ರೋಗದ ಹೆಸರು ಕೇಳಿಯೇ ಅರ್ಧ ಜೀವ ಉಡುಗಿ ಹೋಗುವ, ಧೈರ್ಯಗುಂದುವ ಮಂದಿಗೆ ಆಶಾಕಿರಣವಾಗಿ ಕಾಣುವುದು ಈ ಕ್ಯಾನ್ಸರ್ ಎಂಬ ಯುದ್ಧದ ವಿರುದ್ಧ ಹೋರಾಡಿ ಜಯಿಸಿ ಬಂದ ಜೀವಗಳು. ಮುಖ್ಯವಾಗಿ ಸೆಲೆಬ್ರಿಟಿಗಳು, ಸದಾ ಸುದ್ದಿಯಲ್ಲಿರುವ ಮಂದಿ ತಾವು ಅನುಭವಿಸಿದ ಹಾಗೂ ಗೆದ್ದ ಕತೆಗಳನ್ನು ಜಗತ್ತಿನ ಮುಂದಿಡುವ ಮೂಲಕ ಕ್ಯಾನ್ಸರ್ ವಿರುದ್ಧ ಹೋರಾಡುವ ಮಂದಿಯ ಪಾಲಿಗೆ ಬದುಕುವ ಆಸಯನ್ನು ಚಿಗುರಿಸುತ್ತಾರೆ. ಹಾಗೆ, ಈ ಮಾರಣಾಂತಿಕ ಕಾಯಿಲೆಯ ವಿರುದ್ಧ ಗೆದ್ದು ಬಂದ ಸೆಲೆಬ್ರಿಟಿಗಳು ಇವರು!
೧. ಮನೀಷಾ ಕೊಯಿರಾಲ: ಬಾಲಿವುಡ್ ನಟಿ ಮನೀಷಾ ಕೊಯಿರಾಲ ೨೦೧೨ರಲ್ಲಿ ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಬದುಕುವ ಆಸೆ ಕಳೆದುಕೊಳ್ಳದೆ, ಎಲ್ಲ ಬಗೆಯ ಹೋರಾಟವನ್ನೂ ಮಾಡಿ, ಯುಎಸ್‌ನಲ್ಲಿ ಹೆಚ್ಚಿನ ಚಿಕಿತ್ಸೆಯನ್ನೂ ಪಡೆದು ಮರಳಿ ಬಂದು, ತನ್ನ ಕ್ಯಾನ್ಸರ್ ಅನುಭವಗಳ ಪುಸ್ತಕ ʻಹೀಲ್ಡ್ʼ ಅನ್ನೂ ಬರೆದಿದ್ದಾರೆ. ಕಳೆದ ೧೦ ವರ್ಷಗಳಿಂದ ಕೊಯಿರಾಲ ಮತ್ತೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.
೨. ಯುವರಾಜ್ ಸಿಂಗ್: ೨೦೧೧ರ ವಿಶ್ವಕಪ್ ಪಂದ್ಯಗಳ ನಂತರ ಕ್ರಿಕೆಟಿಗ ಯುವರಾಜ್ ಸಿಂಗ್ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದರು. ನಂತರ ಇದಕ್ಕೆ ಚಿಕಿತ್ಸೆ ಪಡೆದು, ೨೦೧೨ರಲ್ಲಿ ಗುಣಮುಖರಾದರು. ಅಷ್ಟೇ ಅಲ್ಲ, ಈ ಚಿಕಿತ್ಸೆಯ ನಂತರ ೨೦೧೨ರಲ್ಲಿ ಟಿ೨೦ ವಿಶ್ವಕಪ್‌ನಲ್ಲೂ ಭಾಗವಹಿಸಿದ್ದರು.
೩. ಲಿಸಾ ರೇ: ನಟಿ ಲಿಸಾ ರೇ ತನ್ನ ಕ್ಯಾನ್ಸರ್ ಬಗ್ಗೆ ಸಾರ್ವಜನಿಕವಾಗಿ ಮುಕ್ತವಾಘಿ ಹೇಳಿಕೊಂಡ ಸೆಲೆಬ್ರಿಟಿಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಈಕೆಯ ನಂತರ ಹಲವಾರು ಮಂದಿ ಸೆಲೆಬ್ರಿಟಿಗಳು ತನ್ನ ಕ್ಯಾನ್ಸರ್ ಅನುಭವವವನ್ನು ಹೇಳಲು ಆರಂಭಿಸಿದರು. ಆ ಮೂಲಕ ಇದು ಜನರಲ್ಲಿ ಭಯ ಹೋಗಲಾಡಿಸುವ ಪ್ರಯತ್ನವಾಯಿತು. ೨೦೦೯ರಲ್ಲಿ ಕ್ಯಾನ್ಸರ್‌ಗೆ ತುತ್ತಾದ ಈ ನಟಿ ೨೦೧೦ರಲ್ಲಿ ಗುಣಮುಖರಾಗಿ ಬಂದು ಮತ್ತೆ ತನ್ನ ವೃತ್ತಿಜೀವನ ನಡೆಸುತ್ತಿದ್ದಾರೆ.
೪. ಸಂಜಯ್ ದತ್: ೨೦೨೦ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾದ ಬಾಲಿವುಡ್ ನಟ ಸಂಜಯ್ ದತ್, ದುಬೈಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತನ್ನ ಕ್ಯಾನ್ಸರ್ ಬಗೆಗಿನ ಮಾಹಿತಿಯನ್ನು ಹೊರಹಾಕಿದ್ದ ಅವರೀಗ ಕ್ಯಾಣ್ಸರ್‌ಮುಕ್ತ ಜೀವನ ನಡೆಸುತ್ತಿದ್ದಾರೆ.
೫. ಸೊನಾಲಿ ಬೇಂದ್ರೆ: ಮೋಹಕ ನಟಿ ಸೊನಾಲಿ ಬೇಂದ್ರೆ ಕೂಡಾ ಕ್ಯಾನ್ಸರ್ ನೋವುಂಡಾಕೆ. ತನ್ನ ಕ್ಯಾನ್ಸರ್ ಪಯಣದುದ್ದಕ್ಕೂ ಧೈರ್ಯತನ ತೋರಿಸಿದ ಈಕೆ ಸಾಮಾಜಿಕವಾಗಿಯೂ ಮುಕ್ತವಾಗಿ ಹೇಳಿಕೊಂಡಿದ್ದರು. ಯುಎಸ್‌ನಲ್ಲಿ ಹೆಚ್ಚಿನ ಚಿಕಿತ್ಸೆತನ್ನು ಪಡೆದ ಈಕೆ ಸದ್ಯ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ.
೬. ಮುಮ್ತಾಜ್: ಹಿರಿಯ ನಟಿ ಮುಮ್ತಾಜ್ ಕೂಡಾ ೨೦೦೨ರಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಈಗ ಸಂಪೂರ್ಣ ಗುಣಮುಖರಾಗಿರುವ ಅವರು ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ: World Cancer Day 2023 : ಜೀವನ ಶೈಲಿ ಮೇಲೆ ನಿಗಾ ಇಟ್ಟರೆ ಕ್ಯಾನ್ಸರ್ ಆತಂಕವೇ ಇರುವುದಿಲ್ಲ!
೭. ಕಿರಣ್ ಖೇರ್: ಮಲ್ಟಿಪಲ್ ಮೈಲೋಮಾ ಎಂಬ ರಕ್ತದ ಕ್ಯಾನ್ಸರ್‌ಗೆ ಕಳೆದ ವರ್ಷ ತುತ್ತಾಗಿದ್ದ ನಟಿ ಕಿರಣ್ ಖೇರ್ ಇದರ ಹೊರತಾಗಿಯೂ ತನ್ನ ಕೆಲಸವನ್ನು ಎಂದಿನಂತೆ ಮಡುವುದನ್ನು ಬಿಡಲಿಲ್ಲ. ಧೈರ್ಯವಾಗಿ ಕ್ಯಾನ್ಸರ್ ವಿರುದ್ಧ ಹೋರಾಡಿ ಚಿಕಿತ್ಸೆಯ ನಂತರ ಕೂಡಲೇ ರಿಯಾಲಿಟಿ ಶೋಗೆ ಜಡ್ಜ್ ಆಗಿಯೂ ಭಾಗವಹಿಸಿದ್ದರು.
೮. ಅನುರಾಗ್ ಬಸು: ನಿರ್ದೇಶಕ ಅನುರಾಗ್ ಬಸು ೨೦೦೪ರಲ್ಲಿ ಲುಕೇಮಿಯಾ ಎಂಬ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದರು. ತೀವ್ರ ಸ್ವರೂಪ ಪಡೆದಿದ್ದ ಇದರ ಹೊರತಾಗಿಯೂ ಅವರು ಚಿಕಿತ್ಸೆಯನ್ನು ಪಡೆದುಕೊಂಡು, ತನ್ನ ವೃತ್ತಿ ಜೀವನದಲ್ಲಿ ಬರ್ಫಿಯಂತಹ ಅತ್ಯುತ್ತಮ ಚಿತ್ರಗಳನ್ನು ನಂತರವೂ ನೀಡಿದರು.
೯. ರಾಕೇಶ್ ರೋಶನ್: ನಿರ್ಮಾಪಕ, ನಿರ್ದೇಶಕ ಹಾಗೂ ಹೃತಿಕ್ ರೋಶನ್ ಅವರ ತಂದೆ ರಾಕೇಶ್ ರೋಶನ್ ಕೂಡಾ ೨೦೧೮ರಲ್ಲಿ ಗಂಟಲಿನ ಕ್ಯಾನ್ಸರ್‌ಗೆ ಒಳಗಾಗಿದ್ದರು. ಚಿಕಿತ್ಸೆ ಪಡೆದು ಧೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿ, ಆರೋಗ್ಯಕರ ಜೀವನ ನಡೆಸುತ್ತಿದ್ದು, ೭೩ನೇ ಹುಟ್ಟುಹಬ್ಬವನ್ನೂ ಸಂಭ್ರಮದಿಂದ ಆಚರಿಸಿದ್ದಾರೆ.