Site icon Vistara News

World Cancer Day 2023: ಭಾರತದಲ್ಲಿ ಕಾಣಿಸಿಕೊಳ್ಳುವ 5 ಸಾಮಾನ್ಯ ಕ್ಯಾನ್ಸರ್‌ಗಳಿವು!

cancer

ಪ್ರತಿವರ್ಷವೂ ಫೆಬ್ರವರಿ ೪ರಂದು ವಿಶ್ವ ಕ್ಯಾನ್ಸರ್‌ ದಿನವನ್ನಾಗಿ ಆಚರಿಸುತ್ತೇವೆ. ರೋಗಲಕ್ಷಣಗಳನ್ನು ಗ್ರಹಿಸಿ  ಕ್ಯಾನ್ಸರ್‌ ಎಂಬ ಮಾರಕ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚುವ ಮೂಲಕ ಸಾವಿನ ದವಡೆಯಿಂದ ತಪ್ಪಿಸಿಕೊಳ್ಳುವುದೂ ಸೇರಿದಂತೆ ಜನರಲ್ಲಿ ಈ ಬಗ್ಗೆ ಅರಿವು ಮಾಡಿಸುವುದು ಇದರ ಪ್ರಮುಖ ಉದ್ದೇಶ. ಭಾರತ ಕೋವಿಡ್‌ ೧೯ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಅಪಾಯಕಾರೀ ಮಟ್ಟದಲ್ಲಿರುವುದು ಕ್ಯಾನ್ಸರ್‌ನ ವಿಚಾರದಲ್ಲಿ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ ವರದಿಯಲ್ಲಿ ಭಾರತದಲ್ಲಿ ಪ್ರತಿ ಹತ್ತು ಮಂದಿಯಲ್ಲಿ ಒಬ್ಬರಿಗೆ ಇಂದು ಕ್ಯಾನ್ಸರ್‌ ಇದೆ. ಪ್ರತಿ ೧೫ ಮಂದಿಯಲ್ಲಿ ಒಬ್ಬರು ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಇಷ್ಟೇ ಅಲ್ಲ. ಇನ್ನೂ ಆಘಾತಕಾರೀ ವಿಚಾರವೆಂದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿದ ವರದಿಯ ಪ್ರಕಾರ, ೨೦೨೫ರ ವೇಳೆಗೆ ಭಾರತದಲ್ಲಿ ಕ್ಯಾನ್ಸರ್‌ಕಾಯಿಲೆಯ ಪ್ರಮಾಣ ಏಳು ಪಟ್ಟು ಹೆಚ್ಚಲಿದೆಯಂತೆ! ಹೆಚ್ಚುತ್ತಿರುವ ವಾಯುಮಾಲಿನ್ಯ, ಧೂಮಪಾನಿಗಳ ಸಂಖ್ಯೆಯಲ್ಲಿ ಹೆಚ್ಚಳ, ಇಂದು ಬದಲಾಗುತ್ತಿರುವ ಜೀವನಕ್ರಮ ಹಾಗೂ ಆಹಾರ ಪದ್ಧತಿಗಳ ಫಲವೇ ಇದಾಗಿದೆ ಎಂದೂ ಆದು ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಹಾಗಾದರೆ, ಯಾವ ಕ್ಯಾನ್ಸರ್‌ನ ಪ್ರಮಾಣ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿದೆ, ಇಂದು ಇಲ್ಲಿ ತೀರಾ ಸಾಮಾನ್ಯವಾಗಿರುವ ಕ್ಯಾನ್ಸರ್‌ಗಳು ಯಾವುವು ಎಂಬುದನ್ನು ನೋಡೋಣ.

೧. ಶ್ವಾಸಕೋಶದ ಕ್ಯಾನ್ಸರ್:‌ ಶ್ವಾಸಕೋಶದ ಕ್ಯಾನ್ಸರ್‌ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿರುವ ಕ್ಯಾನ್ಸರ್‌ಗಳಲ್ಲಿ ಪ್ರಮುಖವಾದುದು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿದ ವರದಿಯ ಪ್ರಕಾರ, ಕೇವಲ ಶ್ವಾಸಕೋಶದ ಕ್ಯಾನ್ಸರ್‌ ಒಂದರಿಂದಲೇ ಮರಣ ಹೊಂದಿದವರ ಪ್ರಮಾಣ ಶೇ.೯.೩ರಷ್ಟು. ೭೦,೨೭೫ ಶ್ವಾಸಕೋಶದ ಕ್ಯಾನ್ಸರ್‌ ಪ್ರಕರಣಗಳು ೨೦೨೨ರ ಒಂದು ವರ್ಷದಲ್ಲೇ ದಾಖಲಾಗಿದೆ. ೨೦೨೫ರ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಅದು ಹೇಳಿದೆ. ವಿಪರೀತ ಕೆಮ್ಮು, ಎದೆನೋವು, ಕೆಮ್ಮುವಾಗ ರಕ್ತ ಸೋರುವುದು, ಉಸಿರುಗಟ್ಟಿದಂತಾಗುವುದು ಇತ್ಯಾದಿಗಳು ಶ್ವಾಸಕೋಶದ ಆರಂಭಿಕ ಲಕ್ಷಣಗಳು.

ಇದನ್ನೂ ಓದಿ: World Cancer Day 2023 : ಜೀವನ ಶೈಲಿ ಮೇಲೆ ನಿಗಾ ಇಟ್ಟರೆ ಕ್ಯಾನ್ಸರ್​ ಆತಂಕವೇ ಇರುವುದಿಲ್ಲ!

೨. ಬಾಯಿಯ ಕ್ಯಾನ್ಸರ್:‌ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ, ಮಹಿಳೆಯರನ್ನು ಕಾಡುವ ಐದನೇ ಅತೀ ಸಾಮಾನ್ಯ ಕ್ಯಾನ್ಸರ್‌ ಇದಾಗಿದ್ದು ಭಾರತದಲ್ಲಿ ಸಾಮಾನ್ಯ. ಪುರುಷರಲ್ಲಿ ಇದು ಶೇ.೧೧.೨ರಷ್ಟು ಹಾಗೂ ಮಹಿಳೆಯರಲ್ಲಿ ಶೇ.೪.೩ರಷ್ಟು ಭಾರತದಲ್ಲಿ ಈ ಕ್ಯಾನ್ಸರ್‌ ಕಾಣಿಸಕೊಂಡಿದೆ. ತಂಬಾಕಿನ ಚಟ ಇದಕ್ಕೆ ಮುಖ್ಯ ಕಾರಣ. ಬಾಯಿಯಲ್ಲಿ ಗುಳ್ಳೆ, ಬಾಯಿಯಲ್ಲಿ ಅಲ್ಲಲ್ಲಿ ಕೆಂಪು ಪ್ಯಾಚ್‌ಗಳು, ಎಷ್ಟು ಸಮಯವಾದರೂ ಕಡಿಮೆಯಾಗದ ಹಾಘೂ ದಿನೇ ದಿನೇ ಉಲ್ಬಣಗೊಳ್ಳುವ ಬಾಯಿಹುಣ್ಣು  ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು.

೩. ಸ್ತನ ಕ್ಯಾನ್ಸರ್:‌ ಭಾರತದಲ್ಲಿ ಮಹಿಳೆಯರನ್ನು ಬಹುವಾಗಿ ಕಾಡುವ ಹಾಗೂ ಮಹಿಳೆಯ ಅಕಾಲಿಕ ಸಾವಿಗೆ ಇರುವ ಕಾರಣಗಳಲ್ಲಿ ಸ್ತನ ಕ್ಯಾನ್ಸರ್‌ ಪ್ರಮುಖವಾದುದು. ರಾಷ್ಟ್ರೀಯ ರೋಗ ಮಾಹಿತಿ ಹಾಗೂ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ ೨೦೨೦ರಲ್ಲಿ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಸ್ತದಲ್ಲಿ ಕಂಡುಬರುವ ಅಸಹಜ ಗಡ್ಡೆ, ಸ್ತನದ ಆಕಾರದಲ್ಲಿ ಬದಲಾವಣೆ, ಸ್ತನದ ಚರ್ಮ ಕಿತ್ತು ಬರುವುದು, ತೊಟ್ಟಿನಲ್ಲಿ ದ್ರವರೂಪದ ಸ್ರಾವ ಇತ್ಯಾದಿಗಳು ಇದರ ಆರಂಭಿಕ ಲಕ್ಷಣಗಳು.

೪. ಗರ್ಭಕಂಠದ (ಸರ್ವೈಕಲ್)‌ ಕ್ಯಾನ್ಸರ್:‌ ಬೇಸರದ ಸಂಗತಿಯೆಂದರೆ, ಈ ಕ್ಯಾನ್ಸರ್‌ ಕೂಡಾ ಭಾರದಲ್ಲಿ ಅತ್ಯಂತ ಸಮಾನ್ಯ ಕ್ಯಾನ್ಸರ್.‌ ಜಾಗತಿಕವಾಗಿಯೂ ಅತ್ಯಂತ ಸಾಮಾನ್ಯ ಕಾನ್ಸರ್‌ ಇದಾಗಿದ್ದು, ವಿಶ್ವದಲ್ಲಿ ಕ್ಯಾನ್ಸರ್‌ ಮರಣದ ಪೈಕಿ ಶೇ. ೪೦ರಷ್ಟು ಸಾವು ಇದೇ ಕ್ಯಾನ್ಸರ್‌ನಿಂದಾಗಿದೆ. ಭಾರತದಲ್ಲಿ ಈ ಪ್ರಮಾಣ ಶೇ. ೨೩ರಷ್ಟಿದೆ. ಕ್ಯಾನ್ಸರ್‌ಗೆ ತುತ್ತಾದ ಪ್ರತಿ ನಾಲ್ವರಲ್ಲಿ ಒಬ್ಬರು ಈ ಕ್ಯಾನ್ಸರ್‌ನಿಂದ ಮರಣ ಹೊಂದುತ್ತಾರಂತೆ. ಮಹಿಳೆಯರ ಸಾವಿಗೆ ಪ್ರಮುಖ ಕಾರಣಗಳಲ್ಲಿ ಇದೂ ಕೂಡಾ ಒಂದು. ೬,೦೪,೦೦೦ ಮಹಿಳೆಯರು ಪ್ರತಿ ವರ್ಷ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರಂತೆ. ೩,೪೨,೦೦೦ ಮಂದಿ ಮಹಿಳೆಯರು, ಕಾರಣವೇ ಗೊತ್ತಾಗದ ರಕ್ತಸ್ರಾವ, ನೋವಿನ ಲೈಂಗಿಕ ಸಂಪರ್ಕ ಇತ್ಯಾದಿಗಳಿಂದ ಮರಣ ಹೊಂದುತ್ತಾರಂತೆ!

೫. ಅನ್ನನಾಳದ ಕ್ಯಾನ್ಸರ್:‌ ಅನ್ನನಾಳದ ಕ್ಯಾನ್ಸರ್‌ ಭಾರತದಲ್ಲಿ ಅತ್ಯಂತ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳ ಪೈಕಿ ಆರನೇ ಸ್ಥಾನದಲ್ಲಿದೆ. ಜೊತೆಗೆ ಸಾವಿಗೆ ಕಾರಣವಾಗುವುದರಲ್ಲೂ ಆರನೇ ಸ್ಥಾನದಲ್ಲಿದೆ. ಪುರುಷರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಇದು, ನುಂಗುವಾಗ ನೋವು, ಜೀರ್ಣಕ್ರಿಯೆ ಸಮಸ್ಯೆ, ದಿಢೀರ್‌ ತೂಕ ಇಳಿಕೆ ಇತ್ಯಾದಿಗಳು ಇದರ ಆರಂಭಿಕ ಲಕ್ಷಣಗಳು.

ಇದನ್ನೂ ಓದಿ: World Cancer Day 2023: ಸ್ತನ ಕ್ಯಾನ್ಸರ್‌ ಮಹಿಳೆಯರಲ್ಲಷ್ಟೇ ಅಲ್ಲ, ಪುರುಷರಿಗೂ ಬರಬಹುದು ಎಚ್ಚರ!

Exit mobile version