Site icon Vistara News

World Health Day: ಆರೋಗ್ಯವೇ ಸಂಪತ್ತು; ಈ ಸೂತ್ರ ಪಾಲಿಸಿ, ಆರೋಗ್ಯವಾಗಿರಿ!

World Health Day

ಇಂದಿನ ದಿನಗಳಲ್ಲಿ ಎಲ್ಲರೂ ಹಣಗಳಿಕೆಯತ್ತ ಮುಖಮಾಡುತ್ತಿದ್ದಾರೆ. ಆದರೆ ಈ ದಾರಿಯಲ್ಲಿ ಆರೋಗ್ಯಗಳಿಕೆಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದೇವೆ ? ಹಣಗಳಿಸುವುದು ಸುಲಭ ಆದರೆ ಆರೋಗ್ಯ ಕುಂಠಿತಗೊಳ್ಳಲು ಆರಂಭಿಸಿದರೆ ಗಳಿಸಿದೆಲ್ಲವೂ ಆರೋಗ್ಯದ ಕಾಳಜಿಗಾಗಿ ವ್ಯಯಿಸುವ ಅನಿರ್ವಾಯತೆ ಸೃಷ್ಠಿಯಾಗಲಿದೆ. ಇದೆಲ್ಲದಕ್ಕೂ ಕಾರಣ ಪ್ರಕೃತಿ ವೈಪರೀತ್ಯ, ಜೀವನ ಶೈಲಿ ಬದಲಾವಣೆ, ಬಿಡುವಿಲ್ಲದ ತಾಂತ್ರಿಕ ಜೀವನ. ಆರೋಗ್ಯ ಕಾಳಜಿಯ ನಿಟ್ಟಿನಲ್ಲಿ 2024ನೇ ಸಾಲಿನ ವಿಶ್ವ ಆರೋಗ್ಯ ದಿನವನ್ನು (World Health Day) ‘ನನ್ನ ಆರೋಗ್ಯ, ನನ್ನ ಹಕ್ಕು’ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ, ಆದರೆ ಕುಟುಂಬದ ಜವಾಬ್ದಾರಿ ಹೊತ್ತು ಸಾಗುತ್ತಿರುವ ಮಹಿಳೆಯರು ಈ ವರ್ಷದ ಆರೋಗ್ಯ ದಿನದ ಆಶಯದಂತೆ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯ ಕಾಳಜಿಯನ್ನೂ ಮಾಡುತ್ತೇವೆ ಎಂದು ಪಣ ತೊಡಬೇಕು. ಏ.7 ಭಾನುವಾರ ವಿಶ್ವ ಆರೋಗ್ಯ ದಿನ. ಈ ಸಂದರ್ಭದಲ್ಲಿ ಆರೋಗ್ಯದ ಕಾಳಜಿಗಾಗಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಪೌಷ್ಟಿಕತಜ್ಞರಾದ ಡಾ. ಸಂಜನಾ ಪ್ರೇಮ್‌ಲಾಲ್‌ ವಿವರಿಸಿದ್ದಾರೆ.

ಆಹಾರದ ಆಯ್ಕೆಗಳತ್ತ ಗಮನಿಸಿ

ಮಹಿಳೆಯರು ಆರೋಗ್ಯ ಕಾಳಜಿಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಆಹಾರದ ಆಯ್ಕೆಗಳು ಕೂಡ ಪ್ರಮುಖ ಪಾತ್ರವಹಿಸುತ್ತವೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ, ಪ್ರತಿನಿತ್ಯವೂ ತಾಜಾ ಆಹಾರವನ್ನು ಸೇವಿಸಬೇಕು. ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು. ಅದರ ಬದಲಾಗಿ ಧಾನ್ಯಗಳು, ಪ್ರೋಟೀನ್‌ಗಳು ಮತ್ತು ಅವಕಾಡೋಗಳಲ್ಲಿ ಕಂಡುಬರುವ ಉತ್ತಮ ಕೊಬ್ಬಿನಂಶದಿಂದ ಕೂಡಿದ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಅದಲ್ಲದೆ ತೂಕ ನಿರ್ವಹಣೆ ಮಾತ್ರವಲ್ಲದೆ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಲು ಫೈಬರ್‌ ಭರಿತ ಆಹಾರಗಳ ಸೇವನೆಯೂ ಅತ್ಯಗತ್ಯ ಎಂದು ತಜ್ಞರಾದ ಡಾ.ಸಂಜನಾ ಅವರು ಹೇಳುತ್ತಾರೆ.

ನಿದ್ರೆಯೂ ಜೊತೆಗಿರಲಿ

ಆರೋಗ್ಯದ ಕಾಳಜಿಯಲ್ಲಿ ನಿದ್ರೆಗೆ ನೀಡುವ ಆದ್ಯತೆ ಹೆಚ್ಚು. ನಿದ್ದೆ ಸರಿಯಾಗಿದ್ದರೆ ಆರೋಗ್ಯವೂ ಸಮತೋಲನದಲ್ಲಿರಲಿದೆ. ಹೀಗಾಗಿ ಪ್ರತಿನಿತ್ಯ ನಿಗದಿತ ಸಮಯದ ಅಂತದಲ್ಲಿ ನಿದ್ರೆಯನ್ನು ಮಾಡಬೇಕು ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು. ನಿದ್ದೆಗೆ ಜಾರುವ ಮುನ್ನ ಕೆಫಿನ್‌ಗಳ ಸೇವನೆ, ಮೊಬೈಲ್‌ ಮತ್ತು ಕಂಪ್ಯೂಟರ್‌ಗಳ ಬಳಕೆಯನ್ನು ಮಿತಿಗೊಳಿಸಬೇಕು. ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಉತ್ತಮ ಅಭ್ಯಾಸಗಳನ್ನು ಕೈಗೊಳ್ಳಬೇಕು ಅವುಗಳೆಂದರೆ ಮಲಗುವ ಮುನ್ನ ಸಂಗೀತವನ್ನು ಆಲಿಸಬೇಕು. ಸಾಕಷ್ಟು ನಿದ್ರೆಯನ್ನು ಮಾಡುವುದರಿಂದ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಸುಧಾರಿಸಲಿದೆ. ಅಲ್ಲದೆ ಸ್ಥೂಲಕಾಯ ಮತ್ತು ಹೃದ್ರೋಗದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗಲಿದೆ ಎಂಬುದು ವೈದ್ಯರ ಸಲಹೆ.

ದೈಹಿಕವಾಗಿ ಸಕ್ರಿಯತೆ ಮುಖ್ಯ

ಆರೋಗ್ಯ ಕಾಳಜಿಯಲ್ಲಿ ಮತ್ತೊಂದು ಉತ್ತಮ ಕ್ರಮವೆಂದರೆ ನಿಯಮಿತ ವ್ಯಾಯಾಮವನ್ನು ರೂಡಿಸಿಕೊಳ್ಳುವುದು. ಪ್ರತಿನಿತ್ಯ ಕನಿಷ್ಟ 30 ನಿಮಿಷಗಳ ಕಾಲ ನಡೆಯುವುದು, ಈಜು ಅಥವಾ ಯೋಗದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಅಭ್ಯಾಸಗಳಿಂದ ಹೃದಯರಕ್ತನಾಳದ ಆರೋಗ್ಯ, ತೂಕ ನಿರ್ವಹಣೆ ಮತ್ತು ಋತುಸಂಬಂಧ ಸಮಸ್ಯೆಗಳ ನಿವಾರಣೆಯಾಗಲಿದೆ. ಈ ಮೂಲಕ ಮಹಿಳೆಯರು ಉತ್ತಮ ದಿನಚರಿಯನ್ನು ಹೊಂದಬಹುದು ಎಂದು ಅವರು ತಿಳಿಸುತ್ತಾರೆ.

ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ

ಆರೋಗ್ಯ ತಪಾಸಣೆ ಮಾಡಿಸುವುದು ಕೂಡ ಆರೋಗ್ಯ ಕಾಳಜಿಯ ಒಂದು ಉತ್ತಮ ಕ್ರಮ. ಕೊಬ್ಬು, ರಕ್ತದೊತ್ತಡ, ಥೈರಾಯ್ಡ್‌ ಕಾರ್ಯ, ಮೆಮೊಗ್ರಾಮ್‌ ಮತ್ತುಇತರ ಪರೀಕ್ಷೆಗಳನ್ನು ಒಳಗೊಂಡಿರುವ ನಿಯಮಿತವಾದ ಆರೋಗ್ಯ ತಪಾಸಣೆಯನ್ನು ವರ್ಷಕ್ಕೊಮ್ಮೆ ಮಹಿಳೆಯರು ತೆಗೆದುಕೊಳ್ಳಬೇಕು. ಈ ಮೂಲಕ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಮತ್ತು ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

ಒತ್ತಡ ನಿರ್ವಹಣೆ

ದೀರ್ಘಕಾಲದ ಒತ್ತಡವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಯಮಿತ ವಿಶ್ರಾಂತಿ ಜೊತೆಗೆ ಸ್ವಯಂ-ಆರೈಕೆ ಚಟುವಟಿಕೆಗಳೆಡೆಗೆ ಪ್ರತಿ ನಿತ್ಯ ಸಮಯ ಮೀಸಲಿಡಬೇಕು. ಅಗತ್ಯ ವ್ಯಾಯಾಮ, ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡವನ್ನು ನಿಯಂತ್ರಿಸಬಹುದು ಜೊತೆಗೆ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯವಾಗುತ್ತದೆ. ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿ ಸ್ವಯಂ-ಆರೈಕೆಗೆ ಆದ್ಯತೆ ನೀಡುವುದರಿಂದ ಮನಸ್ಸು, ದೇಹ ಮತ್ತು ಆತ್ಮವನ್ನು ಪೋಷಿಸಲು ನೆರವಾಗಲಿದೆ. ಪ್ರಸಕ್ತ ವರ್ಷ ಈ ಕ್ರಮಗಳನ್ನು ಅನುಸರಿಸುತ್ತೇವೆ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಮಹಿಳೆಯರು ಸುಧಾರಿತ ಮತ್ತು ಉತ್ತಮ ಗುಣಮಟ್ಟದ ಆರೋಗ್ಯವನ್ನು ಕಾಣಬಹುದು. ಇಂದು ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿದರೆ ನಾಳೆ ಉಜ್ವಲ ಭವಿಷ್ಯ ಕಾಣುವುದು ಖಚಿತ ಎಂಬುದು ತಜ್ಞರ ಆಶಯ.

Exit mobile version