Site icon Vistara News

World Heart Day: ಈ ಸಂಗತಿಗಳನ್ನು ಪಾಲಿಸಿದರೆ ಹೃದಯಾಘಾತದ ರಿಸ್ಕೇ ಇಲ್ಲ!

World Heart Day

ಎದೆ ಗುಂಡಿಗೆಯ ಬಗ್ಗೆ ನಾನಾ ಕಲ್ಪನೆಗಳಿವೆ. ಗಟ್ಟಿ ಗುಂಡಿಗೆ, ಕುದಿಯುವ ಗುಂಡಿಗೆ, ಕಲ್ಲಿನಂಥ ಗುಂಡಿಗೆ… ಹೀಗೆಲ್ಲ. ಆದರೆ ಆರೋಗ್ಯಪೂರ್ಣ ಗುಂಡಿಗೆ ಎಂಬ ಬಗ್ಗೆ ನಾವೆಷ್ಟು ಗಮನ ನೀಡುತ್ತೇವೆ? ಸಣ್ಣ ಮಕ್ಕಳೂ ಹೃದಯಾಘಾತಕ್ಕೆ ತುತ್ತಾಗುತ್ತಿರುವ ಇಂದಿನ ದಿನಗಳಲ್ಲಿ, ನೀರ ಮೇಲಣ ಗುಳ್ಳೆ ಎಂಬಂತಾಗಿದೆಯಲ್ಲ ಬದುಕು. ಯಾಕೆ ಹೀಗೆ ಎಂದು ಕೇಳಿದರೆ, ಅನುವಂಶೀಯತೆಯಿಂದ ಹಿಡಿದು ಜೀವನಶೈಲಿಯವರೆಗೆ ಹಲವಾರು ಕಾರಣಗಳು ದೊರೆಯಬಹುದು. ಈ ಎಲ್ಲಾ ಅಡಚಣೆಗಳ ನಡುವೆ ಹೃದಯವನ್ನು ಸುಭದ್ರವಾಗಿ ಇರಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಜಾಗೃತಿ ಮೂಡಿಸಲೆಂದೇ ಇಂದು, ಸೆಪ್ಟೆಂಬರ್‌ 29ನೇ ದಿನವನ್ನು, ವಿಶ್ವ ಹೃದಯ ದಿನವನ್ನಾಗಿ (world heart day) ಗುರುತಿಸಲಾಗಿದೆ.

ಹೃದಯದ ಆರೋಗ್ಯ ಕಾಪಾಡಿಕೊಳ್ಳುವಂಥ ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಕಷ್ಟವೇನಲ್ಲ. ಹೃದಯದ ತೊಂದರೆಗಳು ಬೆನ್ನುಬಿದ್ದ ಮೇಲೆ, ಬದುಕಿಡೀ ಔಷಧಿ ನುಂಗುವುದಕ್ಕಿಂತ ಆರೋಗ್ಯಪೂರ್ಣ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮೇಲಲ್ಲವೇ? ಬದುಕಿಗೆ ಮತ್ತು ಹೃದಯಕ್ಕೆ (world heart day) ಪೂರಕವಾದಂಥ ಒಂದಿಷ್ಟು ಸರಳ ಬದಲಾವಣೆಗಳು ಇಲ್ಲಿವೆ-

ಆಹಾರವೇ ಪ್ರಧಾನ

ʻಗಟ್ಟ್‌ ಈಸ್‌ ದ ಬಟ್ಟ್‌ ಎವೆರಿ ಪ್ರಾಬ್ಲಂʼ (ಹೊಟ್ಟೆಯೇ ಸರ್ವ ರೋಗಕ್ಕೂ ಮೂಲ) ಎಂಬ ಮಾತಿದೆ. ನಾವೇನು ತಿನ್ನುತ್ತೇವೆ, ಎಷ್ಟು ಮತ್ತು ಹೇಗೆ ತಿನ್ನುತ್ತೇವೆ ಎಂಬುದು ನಮ್ಮ ದೇಹ-ಮನಸ್ಸುಗಳ ಆರೋಗ್ಯವನ್ನು ನಿರ್ಧರಿಸುತ್ತದೆ ಎಂಬುದು ಈ ಮಾತಿನ ತಾತ್ಪರ್ಯ. ಸುಲಭಕ್ಕೆ ಕೈಗೆಟುಕುವ, ನಾಲಿಗೆ ಬಯಸುವ, ತಯಾರಿಸುವ ಗೋಜಿಲ್ಲದ ಎಲ್ಲಾ ಆಹಾರಗಳೂ ಆರೋಗ್ಯಕ್ಕೆ ಒಳ್ಳೆಯದು ಎನ್ನಲು ಸಾಧ್ಯವಿಲ್ಲ. ಹಾಗಾಗಿ ಫಾಸ್ಟ್‌ಫುಡ್‌, ಸಂಸ್ಕರಿತ ಆಹಾರಗಳು, ಉಪ್ಪು-ಸಕ್ಕರೆ-ಕೊಬ್ಬಿನಿಂದ ತುಂಬಿರುವ ತಿನಿಸುಗಳನ್ನು ದೂರ ಮಾಡಿ. ತಾಜಾ ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು, ಒಮೇಗಾ 3 ಕೊಬ್ಬಿನಾಮ್ಲವಿರುವ ಆಹಾರಗಳು, ವಿಟಮಿನ್‌ ಡಿ- ಇವೆಲ್ಲಾ ಹೃದಯದ ಆರೋಗ್ಯಕ್ಕೆ ಅಗತ್ಯ.

ವ್ಯಾಯಾಮ

ದೇವರ ಮುಡಿಗೆ ಹೂವು ತಪ್ಪಿದರೂ ನಿತ್ಯದ ವ್ಯಾಯಾಮ ತಪ್ಪಬಾರದು! ಹೆಚ್ಚೇನಲ್ಲ, ಪ್ರತಿದಿನ 30 ನಿಮಿಷಗಳ ವ್ಯಾಯಾಮವೂ ಹೃದಯವನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ; ತೂಕ ಕಡಿಮೆ ಮಾಡಿ, ಬಿ.ಪಿ, ಕೊಲೆಸ್ಟ್ರಾಲ್‌ನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ನಡಿಗೆ, ಓಡುವುದು, ಯೋಗ, ಪಿಲಾಟೆ, ಝುಂಬಾ, ಸೈಕಲ್‌ ಹೊಡೆಯುವುದು, ಈಜು, ನೃತ್ಯ, ಬ್ಯಾಡ್ಮಿಂಟನ್‌, ಸ್ಕ್ವಾಷ್‌ ನಂಥ ಯಾವುದಾದರೂ ಒಳಾಂಗಣ ಆಟಗಳು- ಇಂಥ ಯಾವುದೂ ಆದೀತು. ದುಬಾರಿ ಸದಸ್ಯತ್ವ ಕೊಟ್ಟು ಅತ್ಯಾಧುನಿಕ ಜಿಮ್‌ನಲ್ಲೇ ಬೆವರು ಹರಿಸಬೇಕೆಂದಿಲ್ಲ. ಯಾವ ದೈಹಿಕ ಚಟುವಟಿಕೆ ನಿಮಗೆ ಪ್ರಿಯವೋ ಅದನ್ನೇ ಮಾಡಿ, ಆದರೆ ನಿಯಮಿತವಾಗಿ ಮಾಡಿ.

ಚಟಗಳಿದ್ದರೆ ಕಷ್ಟ!

ಉಳಿದಂತೆ ಎಲ್ಲಾ ಒಳ್ಳೆಯ ಅಭ್ಯಾಸಗಳಿದ್ದು, ಮದ್ಯ, ಸಿಗರೇಟ್‌ನಂಥ ಚಟಗಳಿವೆಯೇ? ಸರ್ವ ಬಣ್ಣ ಮಸಿ ನುಂಗಿದಂತೆ! ಅಲ್ಪ ಪ್ರಮಾಣದ ಅಲ್ಕೋಹಾಲನ್ನೂ ನಿಯಮಿತವಾಗಿ ಹೀರುತ್ತಿದ್ದರೆ ಹೃದಯ ಪತರಗುಟ್ಟುತ್ತದೆ ಎನ್ನುತ್ತವೆ ಅ‍ಧ್ಯಯನಗಳು. ಇನ್ನು ಸಿಗರೇಟ್‌ ಅಂತೂ ಸಜೀವವಾಗಿಯೇ ವ್ಯಕ್ತಿಯನ್ನು ಸುಡುತ್ತಾ ಹೋಗುತ್ತದೆ. ಹಾಗಾಗಿ ಇವುಗಳನ್ನು ಬಿಡದಿದ್ದರೆ ಖಂಡಿತಕ್ಕೂ ಉಳಿಗಾಲವಿಲ್ಲ.

ನಿದ್ದೆ ಮುಖ್ಯ

ಪ್ರತಿದಿನ 7-8 ತಾಸು ಗಾಢವಾದ ನಿದ್ದೆ ಇರಲೇಬೇಕು. ಅನಿಯಮಿತವಾದ ನಿದ್ದೆ, ಅಪೂರ್ಣವಾದ ನಿದ್ದೆಯಿಂದ ಹೃದಯದ ಮೇಲೆ ಅಳಿಸಲಾಗದಂಥ ಬರೆ ಬೀಳುತ್ತದೆ. ಒತ್ತಡ ನಿಯಂತ್ರಣ ಮಾಡುವಲ್ಲಿ, ದಿನಕ್ಕೆಂಟು ತಾಸು ನಿದ್ದೆ ಮಾಡುವುದು ಗಮನಾರ್ಹ ಪರಿಣಾಮ ಬೀರುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಅನುಕೂಲ. ರಕ್ತದ ಏರೊತ್ತಡ ಇಲ್ಲದಿದ್ದರೆ ಹೃದಯಾಘಾತ, ಮೆದುಳಿನ ಪಾರ್ಶ್ವವಾಯುವಿನಂಥ ಜೀವಘಾತಕ ಸಮಸ್ಯೆಗಳನ್ನು ದೂರ ಮಾಡಬಹುದು

ಒತ್ತಡ ನಿವಾರಣೆ

ದೇಹ ಮತ್ತು ಮನಸ್ಸಿನ ಮೇಲಿನ ಒತ್ತಡ ಜೀವನದಲ್ಲಿ ನರಕ ಸೃಷ್ಟಿ ಮಾಡಬಲ್ಲದು ಎಂದು ಅತಿಶಯವಲ್ಲ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ನಶಿಸುತ್ತದೆ. ದೇಹದಲ್ಲಿ ಉರಿಯೂತ ಹೆಚ್ಚಿ ಬೇಡದ ರೋಗಗಳ ಆತಿಥ್ಯ ವಹಿಸಿಕೊಳ್ಳಬೇಕಾಗುತ್ತದೆ. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ, ಯೋಗ, ಧ್ಯಾನ, ಪ್ರಾಣಾಯಾಮದಂಥ ತಂತ್ರಗಳು ಒತ್ತಡ ನಿವಾರಣೆಯಲ್ಲಿ ಅದ್ಭುತ ಪರಿಣಾಮ ನೀಡಬಲ್ಲವು. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಅವಶ್ಯಕ

ಆರೋಗ್ಯ ತಪಾಸಣೆ

ನಲವತ್ತು ವರ್ಷಗಳ ನಂತರ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು ಒಳ್ಳೆಯದು. ಕುಟುಂಬದಲ್ಲಿ ಹೃದ್ರೋಗಗಳ ಚರಿತ್ರೆಯಿದ್ದರೆ ಇದು ಅಗತ್ಯ. ಮಳೆಯಲ್ಲಿ ನೆನೆದ ಮೇಲೆ ಛತ್ರಿ ಹಿಡಿಯುವುದಕ್ಕಿಂತ, ಮೊದಲೇ ಕೊಡೆ ಬಿಚ್ಚುವುದು ಜಾಣತನವಲ್ಲವೇ? ನಿಯಮಿತವಾಗಿ ಔಷಧಗಳನ್ನು ಸೇವಿಸುವುದಕ್ಕೆ ವೈದ್ಯರು ಸೂಚಿಸಿದರೆ, ಅದನ್ನು ಪಾಲಿಸಿ. ಎದೆ ಗುಂಡಿಗೆ ಕ್ಷೇಮವಾಗಿರಲಿ.

ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

Exit mobile version