ದೇಹದ ಪ್ರಮುಖ ಅಂಗವಾದ ಯಕೃತ್ತನ್ನು ಜೋಪಾನ ಮಾಡುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಇಂದು, ಅಂದರೆ ಜುಲೈ ತಿಂಗಳ 28ನೇ ದಿನದಂದು, ವಿಶ್ವ ಹೆಪಟೈಟಿಸ್ ದಿನವನ್ನು (World Hepatitis Day) ಆಚರಿಸಲಾಗುತ್ತದೆ. ಇಂದೇ ಈ ದಿನವನ್ನು ಗುರುತಿಸುವುದಕ್ಕೂ ಕಾರಣವಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಬರೂಕ್ ಬ್ಯೂಮ್ಬರ್ಗ್ ಅವರ ಜನ್ಮದಿನ. ಹೆಪಟೈಟಿಸ್ ಬಿ ವೈರಸ್ ಪತ್ತೆ ಮಾಡಿ, ಈ ವೈರಸ್ಗೆ ಲಸಿಕೆಯನ್ನು ತಯಾರಿಸಿದವರಾತ.
ಏನಿದು ಹೆಪಟೈಟಿಸ್?
ಸರಳವಾಗಿ ಹೇಳುವುದಾದರೆ ಯಕೃತ್ತಿನ ಉರಿಯೂತ. ಇದರಿಂದಾಗಿ ತನ್ನ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಯಕೃತ್ತಿಗೆ (World Hepatitis Day) ಸಾಧ್ಯವಾಗುವುದಿಲ್ಲ. ಕ್ಲುಪ್ತ ಸಮಯದಲ್ಲಿ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದರಾಯಿತು; ಇಲ್ಲದಿದ್ದರೆ ಜೀವಕ್ಕೂ ಆಪತ್ತು ಬರುವಷ್ಟು ಗಂಭೀರವಾಗಿ ಪರಿಣಮಿಸುತ್ತದೆ ಈ ಕಾಯಿಲೆ. ಅಂದರೆ ಯಕೃತ್ತಿನ ವೈಫಲ್ಯ ಅಥವಾ ಯಕೃತ್ ಕ್ಯಾನ್ಸರ್ಗೂ ಕಾರಣವಾಗಬಹುದು.
ಕಾರಣಗಳೇನು?
ಯಕೃತ್ತಿನ ಅವಸ್ಥೆ ಹೀಗಾಗುವುದಕ್ಕೆ ಹಲವಾರು ಕಾರಣಗಳಿರಬಹುದು. ವೈರಸ್ ಸೋಂಕು, ಮದ್ಯಪಾನ, ಕೆಲವು ಔಷಧಗಳು, ವಿಷಕಾರಿ ರಾಸಾಯನಿಕಗಳು, ಆಟೋಇಮ್ಯೂನ್ ರೋಗವಾಗಿ, ಕಲುಷಿತ ಆಹಾರದಂಥ ಯಾವುದೇ ಕಾರಣಗಳಿಂದ ಹೆಪಟೈಟಿಸ್ ಉಂಟಾಗಬಹುದು. ಆದರೆ ವೈರಸ್ಗಳಿಂದ ಬರುವ ಹೆಪಟೈಟಿಸ್ಗಳು ವ್ಯಾಪಕವಾಗಿವೆ.
ಲಕ್ಷಣಗಳೇನು?
ವೈರಲ್ ಹೆಪಟೈಟಿಸ್ನಲ್ಲೂ ಹಲವಾರು ರೀತಿಯಿದೆ. ಹೆಪಟೈಟಿಸ್ ಎ, ಬಿ, ಸಿ, ಡಿ, ಇ ಎಂದು ಅವುಗಳನ್ನು ಗುರುತಿಸಲಾಗಿದ್ದು, ಒಂದೊಂದೂ ಭಿನ್ನ ರೀತಿಯಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಆದರೆ ಲಕ್ಷಣಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ಆಯಾಸ, ಸುಸ್ತು, ಚರ್ಮ ಮತ್ತು ಕಣ್ಣು ಹಳದಿಯಾಗುವುದು (ಕಾಮಾಲೆ), ಕಿಬ್ಬೊಟ್ಟೆಯಲ್ಲಿ ನೋವು, ಹೊಟ್ಟೆ ತೊಳೆಸುವುದು ಮತ್ತು ವಾಂತಿ, ಹಸಿವಿಲ್ಲದಿರುವುದು, ಗಾಢ ಬಣ್ಣದ ಮೂತ್ರ, ಕೀಲುಗಳಲ್ಲಿ ನೋವು ಮತ್ತು ಜ್ವರ ಸಾಮಾನ್ಯವಾಗಿ ಕಂಡುಬರುತ್ತವೆ.ಕ್ಲಿನಿಕಲ್ ತಪಾಸಣೆಗಳು ಮತ್ತು ರಕ್ತಮಾದರಿಯ ಪರೀಕ್ಷೆಯಿಂದ ಈ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಆದರೆ ಸಮಸ್ಯೆ ತೀವ್ರವಾಗಿದ್ದಲ್ಲಿ, ಯಕೃತ್ತಿನ ಬಯಾಪ್ಸಿಯನ್ನು ಮಾಡಬೇಕಾಗಬಹುದು.
ಹೇಗೆ ಹರಡುತ್ತದೆ?
ಹೆಪಟೈಟಿಸ್ ಎ- ಇದು ಸಾಮಾನ್ಯವಾಗಿ ಬರುವುದು ಕಲುಷಿತ ನೀರು ಮತ್ತು ಆಹಾರದಿಂದ. ಜಾಂಡೀಸ್ ಹೆಸರಿನಲ್ಲಿ ಈ ಕಾಯಿಲೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ, ಆಹಾರ ಮತ್ತು ವಿಶ್ರಾಂತಿಯಿಂದ ಇದನ್ನು ಸಂಪೂರ್ಣ ಗುಣಪಡಿಸಿಕೊಳ್ಳಬಹುದು. ಇದಕ್ಕೆ ಲಸಿಕೆಯಿದೆ.
ಹೆಪಟೈಟಿಸ್ ಬಿ
ಇದು ಸಾಮಾನ್ಯವಾಗಿ ರಕ್ತ, ಎಂಜಲು, ವೀರ್ಯಗಳಂಥ ದೇಹದ ದ್ರವಗಳಿಂದ ಹರಡುವಂಥದ್ದು. ತೀವ್ರ ಉರಿಯೂತ ಉಂಟುಮಾಡುವ ಈ ರೋಗದ ವಿರುದ್ಧ ನವಜಾತ ಶಿಶುಗಳಿಗೆ ಲಸಿಕೆ ನೀಡಲಾಗುತ್ತದೆ.
ಹೆಪಟೈಟಿಸ್ ಸಿ
ವೈದ್ಯಕೀಯ ಬಳಕೆಯ ವಸ್ತುಗಳನ್ನು (ಸೂಜಿ, ಸಿರಿಂಜ್ ಇತ್ಯಾದಿ) ಸರಿಯಾಗಿ ಶುಚಿ ಮಾಡದಿದ್ದಾಗ, ಅಸುರಕ್ಷಿತ ಲೈಂಗಿಕ ಸಂಪರ್ಕ, ರಕ್ತಪೂರಣದ ಸಂದರ್ಭದಲ್ಲಿ, ತಾಯಿಯಿಂದ ನವಜಾತ ಶಿಶುವಿಗೆ ಈ ವೈರಸ್ ವರ್ಗಾವಣೆಯಾಗುತ್ತದೆ.
ಹೆಪಟೈಟಿಸ್ ಡಿ
ಈಗಾಗಲೇ ಹೆಪಟೈಟಿಸ್ ಬಿ ಸೋಂಕಿನಿಂದ ಬಳಲುತ್ತಿರುವವರಿಗೆ ಹೆಪಟೈಟಿಸ್ ಡಿ ಬಾಧೆ ಬರಬಹುದು. ಇದೂ ಸಹ ದೇಹದ ದ್ರವಗಳಿಂದಲೇ ಹರಡುವಂಥದ್ದು. ಇದಕ್ಕೆಂದೇ ಪ್ರತ್ಯೇಕ ಲಸಿಕೆ ಅಥವಾ ಚಿಕಿತ್ಸಾ ವಿಧಾನವಿಲ್ಲ. ಆದರೆ ದೀರ್ಘ ಕಾಲದವರೆಗೆ ಲಕ್ಷಣಾಧಾರಿತ ಚಿಕಿತ್ಸೆಯನ್ನು ವೈದ್ಯರು ನೀಡಬಹುದು
ಹೆಪಟೈಟಿಸ್
ಇದಕ್ಕೂ ಪ್ರತ್ಯೇಕ ಲಸಿಕೆಯಿಲ್ಲ. ಕಲುಷಿತ ಆಹಾರ ಮತ್ತು ನೀರಿನಿಂದಲೇ ಈ ವೈರಸ್ ಹರಡುತ್ತದೆ. ಇದಕ್ಕೆ ಆಂಟಿವೈರಲ್ ಔಷಧಗಳಿಂದ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಮುಂಜಾಗ್ರತೆ ಏನು?
ನೀರು ಮತ್ತು ಆಹಾರದ ಶುದ್ಧತೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಯಕೃತ್ತಿನ ಸ್ವಾಸ್ಥ್ಯ ರಕ್ಷಣೆಗೆ ಸೂಕ್ತವಾದ ಆಹಾರ ಮತ್ತು ವ್ಯಾಯಾಮದ ಬಗ್ಗೆ ಗಮನವಿರಲಿ. ಅಸುರಕ್ಷಿತ ಲೈಂಗಿಕ ಸಂಪರ್ಕ ಎಂದರೆ ಅಪಾಯಕ್ಕೆ ಆಹ್ವಾನವಿತ್ತಂತೆ. ಕ್ಷೌರದಂಗಡಿಗಳಲ್ಲಿ ಖಾಸಗಿ ವಸ್ತುಗಳನ್ನು ಬಳಸಿಕೊಳ್ಳಿ, ಅಂಗಡಿಯ ಸಾರ್ವಜನಿಕ ವಸ್ತುಗಳು ಬೇಡ. ಸೂಜಿ, ಸಿರಿಂಜ್ ಮುಂತಾದ ವೈದ್ಯಕೀಯ ವಸ್ತುಗಳನ್ನು ಸಂಪೂರ್ಣ ಸ್ಟೆರಿಲೈಜ್ ಮಾಡಿ ಅಥವಾ ಹೊಸದನ್ನೇ ಬಳಸಿ. ರಕ್ತದಾನ ಪಡೆಯಬೇಕಾದರೆ ನೋಂದಾಯಿತ ರಕ್ತನಿಧಿಗಳನ್ನೇ ಸಂಪರ್ಕಿಸಿ. ಯಾವುದೇ ವೈದ್ಯಕೀಯ ಪ್ರಕ್ರಿಯೆಗಳಿಗೆ ಒಳಗಾಗಬೇಕಾದರೆ ನೋಂದಾಯಿತ ವೈದ್ಯರು ಮತ್ತು ಆಸ್ಪತ್ರೆಗಳಿಗೇ ಭೇಟಿ ನೀಡಿ.
ಇದನ್ನೂ ಓದಿ: Thyroid Health Tips: ಥೈರಾಯ್ಡ್ ಸಮಸ್ಯೆ ಎಂಬ ಸಾಮಾನ್ಯ ತೊಂದರೆ: ಆಹಾರಕ್ರಮದಲ್ಲೇ ಪರಿಹಾರವಿದೆ!