ಎಲ್ಲ ಕಾಯಿಲೆಗಳನ್ನು (illness) ದೂರ ಮಾಡುವ ಶಕ್ತಿ ನಗುವಿಗೆ ಇದೆ. ನಗು ನಮ್ಮ ದೇಹಾರೋಗ್ಯವನ್ನು ಮಾತ್ರವಲ್ಲ ಮನಸ್ಸಿನ ಆರೋಗ್ಯವನ್ನು (mental health) ಉತ್ತಮ ಗೊಳಿಸುತ್ತದೆ. ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ (may) ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನು (World Laughter Day) ಆಚರಿಸಲಾಗುತ್ತದೆ.
ಮೇ 5ರಂದು ಈ ಬಾರಿ ವಿಶ್ವ ನಗುವಿನ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಯಾಕೆಂದರೆ ಇದು ನಗುವಿನ ಅನೇಕ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.
ವಿಶ್ವ ನಗು ದಿನವನ್ನು ಮೊದಲ ಬಾರಿಗೆ 1998ರಲ್ಲಿ ಡಾ. ಮದನ್ ಕಟಾರಿಯಾ ಅವರು ಆಚರಿಸಬೇಕು ಎನ್ನುವುದನ್ನು ಪ್ರಸ್ತಾಪಿಸಿದರು. ಇದರ ಮುಖ್ಯ ಉದ್ದೇಶ ಜಾಗತಿಕ ಏಕತೆ ಮತ್ತು ಸ್ನೇಹದ ಭಾವವನ್ನು ಬೆಳೆಸುವುದಾಗಿತ್ತು. ಆದರೆ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ ಎಂಬುದು ಸಂಶೋಧನೆಗಳಿಂದ ಸಾಬೀತಾದ ಬಳಿಕ ವಿಶ್ವ ನಗುವಿನ ದಿನಾಚರಣೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ.
ನಗುವಿನ ಪ್ರಯೋಜನಗಳೇನು?
ದಕ್ಷತೆ ಸುಧಾರಣೆ
ಸಂತೋಷದ ಸ್ವಭಾವ ಮತ್ತು ನಗು ಸರಳತೆಯ ಭಾವನೆಯನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಕೆಲಸದ ವಾತಾವರಣವನ್ನು ನಿರ್ಮಿಸಿ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ
ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಗುವು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸುತ್ತದೆ. ರೋಗಗಳನ್ನು ದೂರವಿರಿಸುತ್ತದೆ. ಸಂತೋಷವನ್ನು ಸ್ವೀಕರಿಸುವ ಮನಸ್ಥಿತಿ ಇದ್ದರೆ ಜೀವನದ ಕಷ್ಟಗಳನ್ನು ಸುಲಭವಾಗಿ ನಿಭಾಯಿಸಲು ಮಾನಸಿಕವಾಗಿ ನಾವು ಸದೃಢರಾಗುತ್ತೇವೆ.
ಉತ್ತಮ ಹಾರ್ಮೋನು ಬಿಡುಗಡೆ
ನಗು ಎಂಡಾರ್ಫಿನ್‌ಗಳ ಆಗಮನವನ್ನು ಪ್ರಚೋದಿಸುತ್ತದೆ ಮತ್ತು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳನ್ನು ಕಡಿಮೆ ಮಾಡುತ್ತದೆ. ಇದು ನೋವನ್ನು ನಿವಾರಿಸುತ್ತದೆ, ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ದೇಹದಲ್ಲಿನ ಅಂಗಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಧನಾತ್ಮಕ ಚಿಂತನೆಗೆ ಪ್ರೇರಣೆ
ನಗು ಮನಸ್ಸು ಮತ್ತು ದೇಹವನ್ನು ಧನಾತ್ಮಕವಾಗಿ ಚಿಂತಿಸಲು ಪ್ರೇರಣೆ ನೀಡುತ್ತದೆ. ತೃಪ್ತಿ ಮತ್ತು ಆಸಕ್ತಿಯ ಭಾವನೆಯು ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಇದು ಧನಾತ್ಮಕ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಮೇಲೆ ಮನಸ್ಸಿನ ಹಿಡಿತ ಸಾಧಿಸುವಂತೆ ಮಾಡುತ್ತದೆ.
ಆತ್ಮವಿಶ್ವಾಸ ವೃದ್ಧಿ
ನಗುವುದು ಮತ್ತು ಸಂತೋಷವನ್ನು ಅಳವಡಿಸಿಕೊಳ್ಳುವುದು ಸರಳ ಜೀವನಕ್ಕೆ ದಾರಿಯಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಸಹಾಯ ಮಾಡುತ್ತದೆ. ಪ್ರ ಆತ್ಮವಿಶ್ವಾಸವನ್ನು ವೃದ್ಧಿಸಿ ಶಾಂತ ಮನೋಭಾವವನ್ನು ಬೆಳೆಸುತ್ತದೆ.
ಅಸ್ವಸ್ಥತೆ ದೂರ
ನಗುವಿನಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ವೃದ್ಧಿಯಾಗಿ ಮಾನಸಿಕ ಅಸ್ವಸ್ಥತೆಯಿಂದ ನಮ್ಮನ್ನು ದೂರವಿರಿಸುತ್ತದೆ. ಒತ್ತಡದಂತಹ ಋಣಾತ್ಮಕ ಪರಿಣಾಮಗಳಿಂದ ನಮ್ಮನ್ನು ರಕ್ಷಿಸುತ್ತದೆ. ಒಳ್ಳೆಯ ನಗು ನಿಮ್ಮ ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ಉಂಟು ಮಾಡುತ್ತದೆ.
ಇದನ್ನೂ ಓದಿ: Covaxin: ಕೊವ್ಯಾಕ್ಸಿನ್ ಸುರಕ್ಷಿತ ಲಸಿಕೆ ಎಂದ ಭಾರತ್ ಬಯೋಟೆಕ್; ಸೈಡ್ ಎಫೆಕ್ಟ್ ಆರೋಪದ ಬೆನ್ನಲ್ಲೇ ಸ್ಪಷ್ಟನೆ!
ಭಾವನೆಗಳ ಸಮತೋಲನ
ನಗು ನಮ್ಮಲ್ಲಿ ಭರವಸೆಯನ್ನು ಹುಟ್ಟುಹಾಕುತ್ತದೆ. ನಗು ನಮ್ಮನ್ನು ಇತರರೊಂದಿಗೆ ಸುಲಭವಾಗಿ ಹೊಂದಿಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಿಂದ ಆಕ್ರೋಶ ಕಡಿಮೆಯಾಗುತ್ತದೆ. ಕ್ಷಮೆಯ ಗುಣವನ್ನು ಉತ್ತೇಜಿಸುತ್ತದೆ.
ಸಂಬಂಧಗಳನ್ನು ಬಲಪಡಿಸುತ್ತದೆ
ನಗು ಸಂಬಂಧಗಳಲ್ಲಿ ಇರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು, ಸಂಬಂಧಗಳನ್ನು ಬಲಪಡಿಸಲು ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.