Site icon Vistara News

World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

World Lung Cancer Day

ವಿಶ್ವದೆಲ್ಲೆಡೆ ಆಗಸ್ಟ್‌ ಮೊದಲ ದಿನವನ್ನು (World Lung Cancer Day) ಶ್ವಾಸಕೋಶದ ಕ್ಯಾನ್ಸರ್‌ ವಿರುದ್ಧದ ಜಾಗೃತಿ ದಿನವನ್ನಾಗಿ ಗುರುತಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪುಪ್ಪುಸದ ಕ್ಯಾನ್ಸರ್‌ ಪ್ರಮಾಣ ಮಿತಿಮೀರಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾಗದ ಪ್ರಕರಣಗಳೇ ಹೆಚ್ಚುತ್ತಿವೆ. ನಟಿ, ನಿರೂಪಕಿ ಅಪರ್ಣಾ ಅವರ ಅಕಾಲಿಕ ಸಾವು ಎಲ್ಲರ ಮನದಲ್ಲಿ ಹಸಿರಾಗಿರುವ ಹೊತ್ತಿನಲ್ಲಿ, ಈ ರೋಗದ ಕುರಿತಾದ ಜಾಗೃತಿಯನ್ನು ಹರಡುವುದು ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದಿದೆ. ಕ್ಯಾನ್ಸರ್‌ ಸಂಬಂಧಿ ಸಾವುಗಳ ಪೈಕಿ ಈ ರೋಗವೂ ಮುಂಚೂಣಿಯಲ್ಲಿದ್ದು, ಪ್ರತಿವರ್ಷ ವಿಶ್ವದೆಲ್ಲೆಡೆ ಸುಮಾರು 16 ಲಕ್ಷ ಮಂದಿ ಇದಕ್ಕೆ ಕೊನೆಯುಸಿರೆಳೆಯುತ್ತಿದ್ದಾರೆ. ತಂಬಾಕಿನ ಚಟ ಮತ್ತು ಆನುವಂಶೀಯತೆ ಇದಕ್ಕೆ ಪ್ರಮುಖ ಕಾರಣಗಳು ಎಂಬುದು ಹೌದಾದರೂ, ಇದರ ರೋಗಿಗಳಲ್ಲಿ ಶೇ. 15ಕ್ಕಿಂತ ಹೆಚ್ಚು ಮಂದಿ ಜೀವನದಲ್ಲಿ ತಂಬಾಕನ್ನೇ ಮುಟ್ಟದವರು. ಮಹಿಳಾ ರೋಗಿಗಳಲ್ಲಿ ಶೇ. 20ಕ್ಕಿಂತ ಹೆಚ್ಚು ಮಂದಿ ಸಿಗರೇಟ್‌ ಹಿಡಿದವರೇ ಅಲ್ಲ. ಕ್ಯಾನ್ಸರ್‌ ಸಾವುಗಳ ಪೈಕಿ ಆರನೇ ಸ್ಥಾನದಲ್ಲಿದ್ದಾರೆ ಹೀಗೆ ತಂಬಾಕಿನ ಚಟ ಇಲ್ಲದವರು ಎನ್ನುವುದು ಇನ್ನೂ ಆತಂಕದ ಸಂಗತಿ. ಭಾರತದಲ್ಲಿಯೂ ತಂಬಾಕಿನ ಹತ್ತಿರವೂ ಸುಳಿಯದ ಬಹಳಷ್ಟು ಮಂದಿ ಪುಪ್ಪುಸ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.

ಲಕ್ಷಣಗಳೇನು?

ಈ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ಕಡಿಮೆಯೇ. ಮೂರು ವಾರಗಳಿಂದ ವಾಸಿಯಾಗದ ಕೆಮ್ಮು, ಉಸಿರಾಟದ ತೊಂದರೆ, ಕೆಮ್ಮಿನಲ್ಲಿ ರಕ್ತ, ಎದೆನೋವು, ಕಾರಣವಿಲ್ಲದೆ ತೂಕ ಇಳಿಯುವುದು, ಮುಗಿಯದ ಸುಸ್ತು, ಆಯಾಸ, ಮೂಳೆ-ಕೀಲುಗಳಲ್ಲಿ ನೋವು, ತೀವ್ರ ಉರಿಯೂತ, ಮುಖದ ಪಾರ್ಶ್ವವಾಯು ಮುಂತಾದ ಯಾವುದೇ ಲಕ್ಷಣಗಳು ಇದ್ದರೂ ತುರ್ತಾಗಿ ವೈದ್ಯರಲ್ಲಿಗೆ ಧಾವಿಸಿ.

ಕಾರಣಗಳೇನು?

ಧೂಮಪಾನ ಮತ್ತು ತಂಬಾಕು ಇಂದಿಗೂ ಪುಪ್ಪುಸ ಕ್ಯಾನ್ಸರ್‌ನ ಕಾರಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಆನುವಂಶೀಯತೆಯೂ ಇದರ ಪ್ರಮುಖ ಕಾರಣಗಳಲ್ಲೊಂದು. ಇದಲ್ಲದೆ, ವ್ಯೋಮವನ್ನೆಲ್ಲ ಕವಿದಿರುವ ವಾಯು ಮಾಲಿನ್ಯ ಇದಕ್ಕೆ ದೊಡ್ಡ ಮಟ್ಟದಲ್ಲಿ ಕಾರಣವಾಗಿದೆ. ಆಸ್ಬೆಸ್ಟೋಸ್‌, ಆರ್ಸೆನಿಕ್‌, ಯುರೇನಿಯಂ, ವಾಹನಗಳ ಹೊಗೆ, ಸಿಲಿಕಾ, ಕಲ್ಲಿದ್ದಲ ಉತ್ಪನ್ನಗಳು ಮತ್ತು ಕೆಲವು ಕೈಗಾರಿಕಾ ರಾಸಾಯನಿಕಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಲ್ಲವು.
ನೇರವಾಗಿ ಧೂಮಪಾನ ಮಾಡದಿದ್ದರೂ, ಮನೆಯಲ್ಲಿ ಧೂಮಪಾನಿಗಳಿದ್ದರೆ, ಕಚೇರಿಯಲ್ಲಿ ಅಥವಾ ಸುತ್ತಮುತ್ತ ಅಂಥವರಿದ್ದರೆ, ಅದರ ಪಾರ್ಶ್ವ ಪರಿಣಾಮವಾಗಿ ಧೂಮಪಾನಿಗಳಲ್ಲದವರಿಗೂ ಕ್ಯಾನ್ಸರ್‌ ಬಂದಿರುವ ಉದಾಹರಣೆಗಳಿವೆ. ಇದೇ ಘೋರ ಪರಿಣಾಮವನ್ನು ಸರ್ವವ್ಯಾಪಿಯಾಗಿರುವ ವಾಯು ಮಾಲಿನ್ಯ ಉಂಟುಮಾಡುತ್ತಿದೆ. ಅದರಲ್ಲೂ ಘನ ಕಣಗಳು ಸಾಂದ್ರವಾಗಿರುವ (ಪಾರ್ಟಿಕಲ್‌ ಮ್ಯಾಟರ್‌) ಮಾಲಿನ್ಯ ಪುಪ್ಪುಸಗಳಿಗೆ ತೀವ್ರಹಾನಿಯನ್ನು ತರಬಲ್ಲದು. ಈ ಸೂಕ್ಷ್ಮ ಕಣಗಳು ಘನ ಮತ್ತು ದ್ರವ ಕಣಗಳ ಮಿಶ್ರಣ. ಯಾವುದೇ ಉರುವಲು ಮತ್ತು ಇಂಧನಗಳು ಸೂಸುವಂಥ ಹೊಗೆಯಿಂದ ಇವು ವಾತಾವರಣ ಸೇರುತ್ತವೆ. ಅದರಲ್ಲೂ ೨.೫ ಮೈಕ್ರಾನ್‌ಗಿಂತ (ಪಿಎಂ 2.5) ಸಣ್ಣದಾದ (ನಮ್ಮ ಕೂದಲಿನ ವ್ಯಾಸದ 1/7ರಷ್ಟು ಸೂಕ್ಷ್ಮವಾದವು!) ಕಣಗಳು ಸಿಕ್ಕಾಪಟ್ಟೆ ಅಪಾಯ ಒಡ್ಡುತ್ತವೆ. ಇವು ನಮ್ಮ ಶ್ವಾಸಕೋಶಗಳಲ್ಲಿ ಗಪ್ಪಾಗಿ ಕೂತು, ಪ್ರತಿರೋಧಕ ಶಕ್ತಿಗಳ ಹಿಡಿತಕ್ಕೂ ಸಿಗದೆ ಕ್ಯಾನ್ಸರ್‌ ತರುತ್ತಿವೆ.
ಪುಪ್ಪುಸ ಕ್ಯಾನ್ಸರ್‌ಗಳ ಪೈಕಿ ಸುಮಾರು ಶೇ. 8ರಷ್ಟು ಪ್ರಕರಣಗಳಿಗೆ ಪಿಎಂ 2.5 ಕಣಗಳೇ ಮೂಲವಾಗಿವೆ. ಇವು ಹೊರಗಿನ ವಾತಾವರಣದಲ್ಲಿ ಮಾತ್ರವಲ್ಲ, ಮನೆಯೊಳಗೂ ಇರಬಲ್ಲವು. ಸೌದೆ ಒಲೆಗಳ ಹೊಗೆಯಲ್ಲಿ, ಯಾವುದೇ ವಸ್ತುಗಳನ್ನು ಕೆಂಡದಲ್ಲಿ ಸುಟ್ಟು ಬೇಯಿಸುವಾಗಲೂ ಇವು ಹೊರಹೊಮ್ಮಬಲ್ಲವು. ಅದರಲ್ಲೂ ಹೀಗೆ ಒಲೆ ಉರಿ ಇರುವಂಥ ಸ್ಥಳಗಳಲ್ಲಿ ಚೆನ್ನಾಗಿ ಗಾಳಿ-ಬೆಳಕು ಇಲ್ಲದಿದ್ದರೆ ಸಮಸ್ಯೆ ಇನ್ನೂ ಹೆಚ್ಚುತ್ತದೆ. ಹಾಗಾಗಿ ಮನೆಯೊಳಗೆ ಹೊಗೆ ಸಾಂದ್ರವಾಗದಂತೆ ಜಾಗ್ರತೆ ಮಾಡಿ.

ಇದನ್ನೂ ಓದಿ: Vitamin D Deficiency: ನೀವು ಸಂತೋಷವಾಗಿಲ್ಲವೇ? ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಕಾರಣವಿರಬಹುದು!

ಕಾಪಾಡಿಕೊಳ್ಳುವುದು ಹೇಗೆ?

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ವಾಯು ಗುಣಮಟ್ಟವನ್ನು ವೃದ್ಧಿಸಿಕೊಳ್ಳುವುದು ಮಹತ್ವದ್ದು. ನಾವು ವಾಸಿಸುವ ಪ್ರದೇಶ ಆದಷ್ಟೂ ಹಸಿರಾಗಿರುವಂತೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ನಿಮ್ಮ ಸ್ಥಳದ ವಾಯು ಗುಣಮಟ್ಟ ಸೂಚಿಯನ್ನು ಆಗಾಗ ಪರಿಶೀಲಿಸಿ, ಅದು ಹೆಚ್ಚಿದ್ದಲ್ಲಿ ಹೊರಗಿನ ಚಟುವಟಿಕೆಯನ್ನು ಕಡಿಮೆ ಮಾಡಿ. ಯಾವುದೇ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಓಡುವುದು, ನಡೆಯುವುದು, ವ್ಯಾಯಾಮ ಮಾಡುವುದು ಮುಂತಾದವನ್ನು ಮಾಡದಿರಿ.
ಮನೆಯೊಳಗಿನ ಗಾಳಿಯನ್ನು ಶುದ್ಧೀಕರಿಸುವಂಥ ಗಿಡಗಳನ್ನು ಇರಿಸಿಕೊಳ್ಳಿ. ಅಗತ್ಯವಿದ್ದರೆ ಏರ್‌ ಪ್ಯೂರಿಫಯರ್‌ ಬಳಸಿ. ಸುಮ್ಮನೆ ನಿಂತು ಮಾತಾಡುವಾಗ ವಾಹನದ ಎಂಜಿನ್‌ ಸ್ತಬ್ಧಗೊಳಿಸಿ. ಅದರಲ್ಲೂ ಡೀಸೆಲ್‌ ಎಂಜಿನ್‌ಗಳು ಹೆಚ್ಚಿನ ಮಾಲಿನ್ಯವನ್ನು ಉಂಟುಮಾಡುತ್ತವೆ. ಕಸವನ್ನು ಎಂದಿಗೂ ಸುಡಬೇಡಿ, ಬದಲಿಗೆ ಬೇರ್ಪಡಿಸಿ ಕಸ ಸಂಗ್ರಹಿಸುವವರಿಗೆ ನೀಡಿ. ಆರೋಗ್ಯಪೂರ್ಣವಾದ ಜೀವನಕ್ಕಾಗಿ ಸತ್ವಯುತ ಆಹಾರ ತಿನ್ನಿ, ತಪ್ಪದೆ ವ್ಯಾಯಾಮ ಮಾಡಿ.

Exit mobile version