Site icon Vistara News

ವಿಶ್ವ ಋತುಬಂಧ ದಿನ | ದೇಹ ಮನಸುಗಳ ಬದಲಾವಣೆಯ ಸಹಜ ಘಟ್ಟ, ಇರಲಿ ಸಿದ್ಧತೆ

Menopause

ಇಂದು ವಿಶ್ವ ಋತುಬಂಧ ದಿನ (World Menopause Day). ಅಕ್ಟೋಬರ್‌ ತಿಂಗಳನ್ನು ಋತುಬಂಧ ಜಾಗೃತಿ ಮಾಸವನ್ನಾಗಿಯೂ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಮಹಿಳೆಯರ ಸಹಜ ದೈಹಿಕ ಸ್ಥಿತಿಯ ಬಗ್ಗೆ ವಿಶ್ವದೆಲ್ಲೆಡೆ ಅರಿವನ್ನು ಹೆಚ್ಚಿಸಿ, ಮಹಿಳೆಯರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಋತುಬಂಧ ದಿನವನ್ನು ಆಚರಿಸಲಾಗುತ್ತದೆ. ಋತುಬಂಧ ಮಾಸದ ಉದ್ದೇಶ ಸ್ವಲ್ಪ ವಿಸ್ತೃತವಾಗಿದ್ದು, ಮಹಿಳೆಯರು ಮಾತ್ರವಲ್ಲದೆ, ಪುರುಷರು, ವೈದ್ಯರು, ಶುಶ್ರೂಷಕರು, ಮಾಧ್ಯಮಗಳೆಲ್ಲರ ಸಂಘಟಿತ ಯತ್ನದ ನೆರವನ್ನು ಜಾಗೃತಿ ಮೂಡಿಸಲು ಒಗ್ಗೂಡಿಸುವ ಉದ್ದೇಶವನ್ನು ಹೊಂದಿದೆ.

ಈ ವರ್ಷದ ವಿಷಯ- ಋತುಬಂಧದಲ್ಲಿ ಮೆದುಳಿನ ಮಂಕು ಮತ್ತು ಮರೆವಿನ ಸಮಸ್ಯೆ (Brain Fog and Memory Difficulties in Menopause). ಇಂದಿನ ದಿನಗಳಲ್ಲಿ ೪೦ ವರ್ಷದ ನಂತರ ಆರಂಭವಾಗುವ ಋತುಬಂಧ-ಪೂರ್ವದ ಸ್ಥಿತಿ ಮತ್ತು ಋತುಬಂಧ- ಈ ಎರಡೂ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಿ, ಅರಿವು ಹೆಚ್ಚಿಸಬೇಕಾದ ಅಗತ್ಯವಿದೆ. ಮಹಿಳೆಯರ ಮಾನಸಿಕ ಮತ್ತು ದೈಹಿಕ ಸ್ಥಿತಿಗಳಲ್ಲಿ ಮಹತ್ತರ ಬದಲಾವಣೆ ತರುವ ಈ ಪ್ರಕ್ರಿಯೆ ಅತ್ಯಂತ ನೈಸರ್ಗಿಕವಾದದ್ದು. ಸಾಧಾರಣವಾಗಿ ೧೨ ತಿಂಗಳವರೆಗೆ ಮಾಸಿಕ ಸ್ರಾವ ಆಗದಿದ್ದಲ್ಲಿ ಅದನ್ನು ಋತುಬಂಧ ಎಂದು ಕರೆಯಲಾಗುತ್ತದೆ. ಆದರೆ ಅದಕ್ಕೂ ಮುನ್ನ ಕೆಲವು ವರ್ಷಗಳ ಕಾಲ ಋತುಬಂಧ-ಪೂರ್ವದ ಸ್ಥಿತಿಯಲ್ಲಿ ಮಹಿಳೆಯರು ಇರುತ್ತಾರೆ. ಈ ಹಂತದಲ್ಲಿ ಎದುರಾಗುವ ಆತಂಕ, ಒತ್ತಡ, ಖಿನ್ನತೆ, ಮಾನಸಿಕ ಸ್ಥಿತಿಯಲ್ಲಿನ ಏರುಪೇರು, ಚೈತನ್ಯ ಸೋರಿಹೋದಂತೆ ಭಾಸವಾಗುವುದು- ಇಂತಹ ಸ್ಥಿತಿಗಳನ್ನು ನಿರ್ವಹಿಸಲು ಮಾನಸಿಕ ಸಿದ್ಧತೆ ಬೇಕಾಗುತ್ತದೆ.

ಲಕ್ಷಣಗಳೇನು?: ಋತುಬಂಧ ಸಮೀಪಿಸುತ್ತಿದ್ದಂತೆ ಮಾಸಿಕ ಸ್ರಾವದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಮೈ-ಮುಖವೆಲ್ಲಾ ಬಿಸಿಯಾಗಿ ಬೆವರುವುದು, ರಾತ್ರಿ ನಿದ್ದೆ ಸರಿಯಾಗಿ ಬಾರದಿರುವುದು, ತೂಕ ಹೆಚ್ಚಳ, ಶಕ್ತಿ ಕುಂದಿದಂತೆ ಎನಿಸುವುದು, ಕೂದಲು ಮತ್ತು ಚರ್ಮದಲ್ಲಿ ಶುಷ್ಕತೆ, ಕೀಲುಗಳಲ್ಲಿ ನೋವು, ಆತಂಕ, ಕೋಪ, ಮಾನಸಿಕ ಒತ್ತಡ, ಮೆದುಳಿಗೆ ಮಂಕು ಕವಿದಂತೆ- ಮರೆವು, ಗಮನ ಕಡಿಮೆಯಾವುದು, ಬದುಕಿದ್ದೂ ದಂಡ ಎಂಬ ವಿಚಿತ್ರ ವೈರಾಗ್ಯ ಇತ್ಯಾದಿಗಳು. ಋತುಬಂಧದಿಂದಾಗಿ ದೇಹದಲ್ಲಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟಿರಾನ್‌ ಹಾರ್ಮೋನ್‌ ಮಟ್ಟ ವ್ಯತ್ಯಾಸವಾಗುವುದು ಇದಕ್ಕೆ ಪ್ರಮುಖ ಕಾರಣ. ದೇಹದ ಫಲವಂತಿಕೆಯ ಮೇಲೆ ಬೀರುವ ಪರಿಣಾಮವೂ ಅಗಾಧ. ಈ ಎಲ್ಲಾ ಕಾರಣಗಳಿಗಾಗಿ ಮಹಿಳೆಯರು ಸೂಕ್ಷ್ಮ ಮಾನಸಿಕ ಸ್ಥಿತಿಗೆ ಒಯ್ಯಲ್ಪಡುತ್ತಾರೆ.

ಯಾಕಿಷ್ಟು ಸೂಕ್ಷ್ಮ?: ಈವರೆಗೆ ದೊಡ್ಡದೆಂದು ಅನಿಸದ ಎಷ್ಟೋ ಚಿಕ್ಕ-ಪುಟ್ಟ ವಿಷಯಗಳು ಈ ಹಂತದಲ್ಲಿ ದೊಡ್ಡ ತೊಡಕು ಎನಿಸಬಹುದು. ಸ್ನೇಹಿತರು, ಬಂಧು-ಬಳಗವನ್ನು ಭೇಟಿ ಮಾಡಲು ಉದಾಸೀನ ಎನಿಸಬಹುದು. ʻದೇವರೇ, ಏಳಬೇಕಲ್ಲಾ!ʼ ಎಂಬ ಭಾವದಿಂದಲೇ ದಿನ ಆರಂಭವಾಗಬಹುದು. ʻಆಫೀಸಿನಲ್ಲಿ ಕೆಲಸ ಸರಿಯಾಗುತ್ತೋ ಇಲ್ಲವೋʼ ಎಂಬ ಆತಂಕದಲ್ಲಿ ರಜೆ ಹಾಕುವ ಎನಿಸಬಹುದು. ಅಷ್ಟೂ ವರ್ಷಗಳು ಮಾಡುತ್ತ ಬಂದ ಕೆಲಸಗಳನ್ನು ಮಾಡುವುದೆಂದರೆ ಈಗೀಗ ಗುಡ್ಡ ಕಡಿದಷ್ಟು ಶ್ರಮ, ಆಯಾಸ ಎನಿಸಬಹುದು. ಏನು ಮಾಡುವುದಕ್ಕೆ ಹೊರಟಿದ್ದೆ ಎಂದು ಯೋಚಿಸುವಷ್ಟು ಬುದ್ಧಿಗೆ ಮಂಕು ಕವಿಯಬಹುದು. ಇವೆಲ್ಲ ಈ ಹಂತದ ಅತ್ಯಂತ ಸಹಜ ಬದಲಾವಣೆಗಳು.

ಇದನ್ನೂ ಓದಿ | Sprouts | ಎನರ್ಜಿ ಬೇಕಿದ್ದರೆ ಮೊಳಕೆ ಕಾಳು ಮರೆಯದೇ ಸೇವಿಸಿ

ಏನು ಮಾಡಬಹುದು?: ಋತುಬಂಧ ಸಮೀಪಿಸಿದೆಯೇ ಎಂಬುದನ್ನು ತಿಳಿದುಕೊಳ್ಳಲು ಮೊದಲು ವೈದ್ಯರನ್ನು ಕಾಣಿ. ಈ ಹಂತದಲ್ಲಿ ಬೇಕಾಗಬಹುದಾದ ಕೆಲವು ಪೂರಕ ಮಾತ್ರೆಗಳನ್ನು ಅವರು ನೀಡಬಹುದು. ಇದು ಆಯಾ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾರ್ಮೋನ್‌ ಚಿಕಿತ್ಸೆ ಅಗತ್ಯವಾಗಿದ್ದರೆ ತಜ್ಞ ವೈದ್ಯರ ಬಳಿ ವಿವರವಾಗಿ ಚರ್ಚಿಸಿ ತೀರ್ಮಾನಿಸುವುದು ಸೂಕ್ತ. ನಿದ್ದೆಯ ಗುಣಮಟ್ಟ ಹೆಚ್ಚಿಸಿ, ಆತಂಕ ಮತ್ತು ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಮತ್ತು ನಿಯಮಿತ ವ್ಯಾಯಾಮ ಅತ್ಯಂತ ಪ್ರಯೋಜನಕಾರಿ. ಇವೆಲ್ಲವುಗಳ ಜೊತೆಗೆ ಸಮತೋಲಿತ ಆಹಾರ ತೀರಾ ಅಗತ್ಯ. ಇದರಿಂದ ತೂಕವನ್ನೂ ನಿಯಂತ್ರಣದಲ್ಲಿ ಇರಿಸಬಹುದು.

ಇವೆಲ್ಲ ಆಯಾ ಮಹಿಳೆಯರು ಮಾಡಬೇಕಾದ ಕೆಲಸಗಳು. ಆದರೆ ಅವರ ಕುಟುಂಬಕ್ಕೂ ಈ ಬದಲಾವಣೆಯನ್ನು ಒಪ್ಪಿಕೊಳ್ಳಬೇಕಾದ ಬದ್ಧತೆ ಇರುವುದು ಮುಖ್ಯ. ದಿನವಿಡೀ ಪತ್ನಿ, ಮಗಳು, ಸೊಸೆ, ಅಮ್ಮ ಎಂದು ನಾನಾ ಪಾತ್ರಗಳಲ್ಲಿ ಕುಟುಂಬದೊಳಗೆ ದುಡಿಯುತ್ತಿದ್ದ ಕೈಗಳೀಗ ಸೋಲಬಹುದು, ಎಲ್ಲರನ್ನೂ ಆಧರಿಸುತ್ತಿದ್ದ ಮನಸ್ಸಿಗೀಗ ಸಾಂತ್ವನ ಬೇಕಾಗಬಹುದು ಎಂಬುದನ್ನು ಕುಟುಂಬದವರು ಅರ್ಥ ಮಾಡಿಕೊಳ್ಳುವುದು ಅಗತ್ಯ. ಎಲ್ಲಾ ಮಹಿಳೆಯರ ಬದುಕಿನಲ್ಲಿ ಬರಲೇಬೇಕಿರುವ ಸಹಜ ಘಟ್ಟವೊಂದನ್ನು ಹೆಚ್ಚಿನ ಆಯಾಸವಿಲ್ಲದೆ ದಾಟಲು, ಅವರ ಆಪ್ತೇಷ್ಟರ ನೆರವು ಮುಖ್ಯವಾದದ್ದು.

ಇದನ್ನೂ ಓದಿ | Hair care | ತಲೆ ಕೆಡಿಸಿಕೊಳ್ಳಬೇಡಿ, ಚಳಿಗಾಲದಲ್ಲಿ ತಲೆಕೂದಲ ಆರೈಕೆ ಹೀಗೆ ಮಾಡಿ

Exit mobile version