Site icon Vistara News

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

World Milk Day

ಹಾಲನ್ನೇಕೆ ಕುಡಿಯಬೇಕು ಎಂದು ಕೇಳಿದರೆ ಯಾರಾದರೂ ನಕ್ಕಾರು. ಹಾಗಂತ ನಗುವವರಿಗೆಲ್ಲ ಹಾಲಿನ ಸದ್ಗುಣಗಳು ಗೊತ್ತಿರುತ್ತವೆ ಎಂದಲ್ಲ. ಆದರೆ ಹಾಲು ಪೌಷ್ಟಿಕವಾದ ಆಹಾರ ಎಂಬುದನ್ನಂತೂ ಎಲ್ಲರೂ ಕೇಳಿ ತಿಳಿದಿರುತ್ತಾರೆ. ಏನಿವೆ ಅಂಥ ಪೌಷ್ಟಿಕಾಂಶಗಳು ಹಾಲಿನಲ್ಲಿ? ಎಲ್ಲರೂ ಹಾಲನ್ನು ಕುಡಿಯುವುದಕ್ಕೆ ಮಾತ್ರ ಬಳಸುತ್ತಾರೆಂದಿಲ್ಲ. ಮೊಸರು, ಬೆಣ್ಣೆ, ತುಪ್ಪ, ಚೀಸ್‌, ಪನೀರ್‌ಗಳನ್ನು ಮಾಡಬಹುದು. ಹಾಲಿನಲ್ಲಿ ಸಿಹಿಗಳನ್ನು ತಯಾರಿಸಬಹುದು, ಶೇಖ್‌ ಮತ್ತು ಸ್ಮೂದಿಗಳಿಗೆ ಬಳಸಬಹುದು, ಸೀರಿಯಲ್‌ಗಳಿಗೆ ಹಾಕಿ ತಿನ್ನಬಹುದು. ಅಂತೂ ಹಾಲು ಎಲ್ಲರಿಗೂ ಎಲ್ಲ ಹೊತ್ತಿಗೂ ಸಲ್ಲುವಂಥದ್ದು. ಹಾಗಾಗಿ ಜೂನ್‌ ತಿಂಗಳ ಮೊದಲ ದಿನವನ್ನು ವಿಶ್ವ ಕ್ಷೀರ ದಿನವೆಂದು ಗುರುತಿಸಿದ್ದರೂ, ನಾವು ವರ್ಷವಿಡೀ ಕ್ಷೀರ ದಿನವನ್ನು (World Milk Day) ಆಚರಿಸಬಹುದು.

ಕ್ಯಾಲ್ಶಿಯಂ ಹೇರಳ

ನಮ್ಮ ಮೂಳೆಗಳು, ಹಲ್ಲುಗಳೆಲ್ಲ ಬಲಯುತವಾಗಿ ಇರಬೇಕೆಂದರೆ ಕ್ಯಾಲ್ಶಿಯಂ ಬೇಕು. ಕೇವಲ ಅದಕ್ಕಷ್ಟೇ ಅಲ್ಲ, ನಾವು ಮಾಡುವ ಪ್ರತಿಯೊಂದು ದೈಹಿಕ ಚಟುವಟಿಕೆಗೂ ಕ್ಯಾಲ್ಶಿಯಂ ಬಲದ ಅಗತ್ಯವಿದೆ. ಮೂಳೆಗಳು ಟೊಳ್ಳಾಗದಂತೆ, ಅವುಗಳ ಸಾಂದ್ರತೆ ಕಾಪಾಡಿಕೊಳ್ಳುವುದಕ್ಕೂ ಇದು ಬೇಕು. ಹಾಗಾಗಿ ದಿನಕ್ಕೆ 150 ಎಂ.ಎಲ್‌. ಗ್ಲಾಸ್‌ನಲ್ಲಿ ಮೂರು ಗ್ಲಾಸ್‌ ಹಾಲು ನಮ್ಮ ನಿತ್ಯದ ಕ್ಯಾಲ್ಶಿಯಂ ಅಗತ್ಯವನ್ನು ಪೂರೈಸುತ್ತದೆ.

ಉತ್ಕೃಷ್ಟ ಪ್ರೊಟೀನ್‌

ಹಾಲಿನಲ್ಲಿ ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್‌ ದೊರೆಯುತ್ತದೆ. ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಇಂಥ ಪರಿಪೂರ್ಣ ಪ್ರೊಟೀನ್‌ ಅಗತ್ಯ. ಅದರಲ್ಲೂ ಬೆಳೆಯುವ ಮಕ್ಕಳ ದೇಹಕ್ಕೆ ಆವಶ್ಯಕವಾದ ಪ್ರೊಟೀನ್‌ಗಳು ಹಾಲಿನಲ್ಲಿವೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಋತುಬಂಧದ ಆಚೀಚೆ ಇರುವ ಮಹಿಳೆಯರಿಗೆ, ವೃದ್ಧರಿಗೆ- ಹೀಗೆ ಎಲ್ಲ ವಯಸ್ಸಿನವರಿಗೂ ಅವರವರ ಅಗತ್ಯಗಳನ್ನು ಪೂರೈಸುವಂಥ ಪೋಷಕಾಂಶಗಳು ಹಾಲಿನಲ್ಲಿವೆ.

ವಿಟಮಿನ್‌, ಖನಿಜಗಳು

ಬಹಳಷ್ಟು ರೀತಿಯ ಜೀವಸತ್ವಗಳು ಮತ್ತು ಖನಿಜಗಳು ಹಾಲಿನಲ್ಲಿವೆ. ವಿಟಮಿನ್‌ ಡಿ, ವಿಟಮಿನ್‌ ಬಿ12, ರೈಬೊಪ್ಲೇವಿನ್‌, ಫಾಸ್ಫರಸ್‌, ಪೊಟಾಶಿಯಂ, ಸೆಲೆನಿಯಂ, ಮೆಗ್ನೀಶಿಯಂ ಮುಂತಾದ ಸತ್ವಗಳು ಇದರಲ್ಲಿವೆ. ಇವೆಲ್ಲವೂ ನಮ್ಮ ಶರೀರದ ಶಕ್ತಿಯನ್ನು ಸುಸ್ಥಿರವಾಗಿ ಕಾಯ್ದುಕೊಳ್ಳುವುದಕ್ಕೆ ಬೇಕಾದಂಥವು. ಅದಲ್ಲದೆ, ನರಗಳ ಕ್ಷಮತೆ ಕಾಯ್ದುಕೊಳ್ಳುವುದಕ್ಕೆ ಮತ್ತು ಶರೀರದ ಚಯಾಪಚಯ ನಿರ್ವಹಣೆಯಲ್ಲೂ ಇವು ಪ್ರಮುಖವಾಗಿವೆ.

ಸತ್ವಗಳು ಇಷ್ಟೇ ಅಲ್ಲ

ಒಂದು ಲೋಟ ಹಸುವಿನ ಹಾಲಿನಿಂದ 145 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದರಲ್ಲಿ ಸುಮಾರು 8 ಗ್ರಾಂ ಪ್ರೊಟೀನ್‌, ಅಷ್ಟೇ ಪ್ರಮಾಣದ ಕೊಬ್ಬು, ಶೇ. 28ರಷ್ಟು ಕ್ಯಾಲ್ಶಿಯಂ, 24% ವಿಟಮಿನ್‌ ಡಿ, 26% ವಿಟಮಿನ್‌ ಬಿ2, 18% ವಿಟಮಿನ್‌ ಬಿ12, 22% ಫಾಸ್ಫರಸ್‌, 13% ಸೆಲೆನಿಯಂ ಇದರಲ್ಲಿ ಪ್ರಮುಖವಾಗಿ ದೊರೆಯುತ್ತದೆ. ಇದಲ್ಲದೆ, ವಿಟಮಿನ್‌ ಎ, ಸತು ಮತ್ತು ಥಿಯಮಿನ್‌ ಸಹ ಇವೆ.

ಎಲ್ಲದಕ್ಕೂ ಸಲ್ಲುತ್ತದೆ

ಕಾಫಿ, ಚಹಾ, ಮಿಲ್ಕ್‌ಶೇಖ್‌, ಸ್ಮೂದಿ, ಸೀರಿಯಲ್‌ಗಳು, ಪಾಯಸ, ಖೀರು, ಹಲ್ವಾಗಳು, ಕೇಕ್‌ಗಳು, ಗ್ರೇವಿಗಳು ಮುಂತಾದ ಬಹಳಷ್ಟು ರೀತಿಯ ಅಡುಗೆಗಳಿಗೆ ಹಾಲು ನೇರವಾಗಿ ಸಲ್ಲುತ್ತದೆ. ಅದಲ್ಲದೆ, ಮೊಸರು, ಚೀಸ್‌, ಪನೀರ್‌, ಬೆಣ್ಣೆ-ತುಪ್ಪಗಳನ್ನು ಇನ್ನೂ ಹೆಚ್ಚಿನ ಆಹಾರಗಳಿಗೆ ಪೂರಕವಾಗಿ ಬಳಸಬಹುದು. ಹಾಗೆಂದು ಹಾಲಿನ ಕೊಬ್ಬಿನಿಂದ ಮಾಡಿದ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಬಹುದು.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಜಾಗ್ರತೆ ಮಾಡಿ

ಹಾಲು ಸರ್ವರಿಗೂ ಸಲ್ಲುವಂಥ ಆಹಾರ. ಅನಾರೋಗ್ಯದ ಸಂದರ್ಭಗಳಲ್ಲೂ ಕೆಲವೊಮ್ಮೆ ಹಾಲಿನ ಸೇವನೆ ಪ್ರಯೊಜನ ನೀಡಬಹುದು. ಆದರೆ ಅತಿ ಸ್ಥೂಲ ದೇಹಿಗಳು ಮತ್ತು ಕೆಲವು ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸುವುದು ಅಗತ್ಯ. ಈಗಾಗಲೇ ಬೊಜ್ಜಿನ ಸಮಸ್ಯೆ ಇದ್ದವರು ಕಡಿಮೆ ಕೊಬ್ಬಿನ ಹಾಲನ್ನು ಸೇವಿಸುವುದು ಉತ್ತಮ. ಏರಿದ ಕೊಲೆಸ್ಟ್ರಾಲ್‌, ಹೃದಯ ರೋಗಗಳನ್ನು ಹೊಂದಿದವರು ಸಹ ಕೊಬ್ಬು ರಹಿತ ಹಾಲು ಕುಡಿಯುವುದು ಒಳ್ಳೆಯ ಆಯ್ಕೆ. ಲ್ಯಾಕ್ಟೋಸ್‌ ಅಲರ್ಜಿ ಇರುವವರಿಗೆ ಹಾಲು ಆಗಿ ಬರುವುದಿಲ್ಲ. ಒಂದೊಮ್ಮೆ ಹಾಲು ಸೇವಿಸಿದರೂ ಹೊಟ್ಟೆ ನೋವು, ಹೊಟ್ಟೆಯುಬ್ಬರ, ಡಯರಿಯಾದಂಥ ತೊಂದರೆಗಳು ಬಾಧಿಸಬಹುದು.

Exit mobile version