Site icon Vistara News

World Mosquito Day: ಸೊಳ್ಳೆಗಳಿಗೂ ಒಂದು ದಿನ! ಇವುಗಳ ಕುರಿತ 7 ಸುಳ್ಳುಗಳಿಗೆ ಇಲ್ಲಿದೆ ಉತ್ತರ!

Mosquitoes Bite

ಇಂದು ವಿಶ್ವ ಸೊಳ್ಳೆ ದಿನ. ಹಾಗೆ ನೋಡಿದರೆ, ವರ್ಷದ ಅಷ್ಟೂ ದಿನವೂ ಸೊಳ್ಳೆ ದಿನವೇ (World Mosquito Day) ಎಂಬಂತಾಗಿದೆ! ಮಲೇರಿಯ ಮತ್ತು ಸೊಳ್ಳೆಯ ನಡುವಣ ನಂಟನ್ನು ಪತ್ತೆ ಹಚ್ಚಿ, ಮಾರಕ ಮಲೇರಿಯ ನಿಯಂತ್ರಣಕ್ಕೆ ಬುನಾದಿ ಹಾಕಿದ ಸರ್‌ ರೊನಾಲ್ಡ್‌ ರಾಸ್‌ ಅವರ ಸಂಶೋಧನೆಯನ್ನು ನೆನಪಿಸಿಕೊಳ್ಳುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಣ್ಣ ಜೀವಿಗಳೆಂದು ಉಪೇಕ್ಷೆ ಮಾಡದೆ, ಅವುಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರಿಂದ ಬಹಳಷ್ಟು ರೀತಿಯ ರೋಗಗಳನ್ನು ಮಟ್ಟ ಹಾಕಬಹುದೆಂಬುದು ನಮಗೆಂದೋ ಅರಿವಾಗಿದೆ. ಆದರೂ, ಸೊಳ್ಳೆಗಳ ಸುತ್ತಮುತ್ತ ಹಲವು ರೀತಿಯ ಮಿಥ್ಯೆಗಳು, ತಪ್ಪು ಕಲ್ಪನೆಗಳು ಹೆಣೆದುಕೊಂಡಿವೆ. ಇದರಿಂದ ರೋಗ ನಿಯಂತ್ರಣಕ್ಕೆ ತೊಡಕಾಗಬಹುದು. ಈ ಹಿನ್ನೆಲೆಯಲ್ಲಿ, ಸೊಳ್ಳೆಗಳ ಸುತ್ತಲಿನ ಸುಳ್ಳಿನ ಬಲೆಯನ್ನು ತೆಗೆಯೋಣ.

ಎಲ್ಲಾ ಸೊಳ್ಳೆಗಳೂ ಮನುಷ್ಯರಿಗೆ ಕಚ್ಚುತ್ತವೆ?

ಇಲ್ಲ. ಸೊಳ್ಳೆಗಳಲ್ಲಿ 3,500 ಜಾತಿಗಳಿದ್ದು, ಅವುಗಳಲ್ಲಿ ಕೆಲವು ಮಾತ್ರವೇ ಮಾನವರಿಗೆ ಕಚ್ಚುತ್ತವೆ. ಕೆಲವು ಜಾತಿಯ ಸೊಳ್ಳೆಗಳು ಪ್ರಾಣಿಗಳ ರಕ್ತವನ್ನು ಹೀರುತ್ತವೆ. ಬಹಳಷ್ಟು ಜಾತಿಯ ಸೊಳ್ಳೆಗಳು, ಅದರಲ್ಲೂ ಗಂಡು ಸೊಳ್ಳೆಗಳು ಹೂವು-ಗಿಡಗಳ ರಸಗಳನ್ನು ಹೀರಿ ಬದುಕುತ್ತವೆ. ತಮ್ಮ ಮೊಟ್ಟೆಗಳ ಬೆಳವಣಿಗೆಗೆ ಬೇಕು ಎನ್ನುವ ಕಾರಣಕ್ಕಾಗಿ ಹೆಣ್ಣು ಸೊಳ್ಳೆಗಳು ಮಾತ್ರ ಮಾನವರ ರಕ್ತವನ್ನು ಹೀರುವಂಥವು!

ಸೊಳ್ಳೆಗಳು ಬೆವರಿನತ್ತ ಆಕರ್ಷಿತವಾಗುತ್ತವೆ?

ಕೆಲವರಿಗೆ ಮಾತ್ರವೇ ಸೊಳ್ಳೆಗಳು ಕಚ್ಚುವುದು ಹೆಚ್ಚು, ಹಾಗಾಗಿ ಅವರ ಬೆವರಿನ ವಾಸನೆಗೆ ಸೊಳ್ಳೆಗಳು ಹತ್ತಿರ ಬರುತ್ತವೆ ಎಂಬ ಭಾವನೆಗಳು ಪ್ರಚಲಿತವಿದೆ. ನಿಜವೆಂದರೆ, ಆ ಕೆಲವರಿಗೆ ಸೊಳ್ಳೆ ಕಚ್ಚುವುದಿಲ್ಲ ಎಂದಲ್ಲ, ಕಚ್ಚುವುದು ತಿಳಿಯುವುದಿಲ್ಲ! ಬೆವರಿನಲ್ಲಿರುವ ರಾಸಾಯನಿಕಗಳು ಸೊಳ್ಳೆಗಳನ್ನು ಆಕರ್ಷಿಸುವುದಕ್ಕಿಂತಲೂ, ಮಾನವರು ಉಸಿರಿನಲ್ಲಿ ಬಿಡುವ ಇಂಗಾಲದ ಡೈ ಆಕ್ಸೈಡ್‌ ಮತ್ತು ಶರೀರದ ಉಷ್ಣತೆಯತ್ತ ಸೊಳ್ಳೆಗಳು ಸೆಳೆಯಲ್ಪಡುತ್ತವೆ. ಚೆನ್ನಾಗಿ ಬೆವರಿದಾಗ ದೇಹದ ಶಾಖವೂ ಹೆಚ್ಚುವುದು ಹೌದಲ್ಲವೇ? ಹಾಗಾಗಿ ಬೆವರೇ ಸೊಳ್ಳೆಗಳನ್ನು ಕರೆಯುತ್ತದೆಂಬ ಭಾವ ಬರಬಹುದು.

ಸೊಳ್ಳೆಗಳಿಗೆ ಎಚ್ಚರವಾಗುವುದು ರಾತ್ರಿ ಮಾತ್ರ?

ಸೊಳ್ಳೆಗಳೇನು ನಿಶಾಚರಿಗಳಲ್ಲ. ಆದರೆ ಕೆಲವು ಜಾತಿಯ ಸೊಳ್ಳೆಗಳು, ಮುಸ್ಸಂಜೆ ಮತ್ತು ನಸುಕಿನಲ್ಲಿ ಹೆಚ್ಚು ಚುರುಕಾಗುತ್ತವೆ ಎಂಬುದು ನಿಜ. ಹೆಚ್ಚಿನ ಜಾತಿಯ ಸೊಳ್ಳೆಗಳು ಹಗಲು ಹೊತ್ತೇ ರಕ್ತ ಹೀರಲು ಬರುತ್ತವೆ. ಈಗ ಪ್ರಚಲಿತವಿರುವ ಡೆಂಗು, ಜಿಕಾ ಮುಂತಾದ ರೋಗ ತರುವ ಸೊಳ್ಳೆಗಳು ಕಚ್ಚುವುದು ಹಗಲಿನಲ್ಲೇ ಅಧಿಕ. ಹಾಗಾಗಿ ಹಗಲು- ರಾತ್ರಿ ಎಂಬ ವ್ಯತ್ಯಾಸವಿಲ್ಲದೆ, ಸೊಳ್ಳೆಗಳು ಯಾವಾಗ ಬೇಕಿದ್ದರೂ ಕಚ್ಚಬಹುದು.

ಇವು ಉಷ್ಣವಲಯದಲ್ಲಿ ಮಾತ್ರ ಜೀವಿಸುವಂಥವೆ?

ಸೊಳ್ಳೆಗಳು ಉಷ್ಣ ಮತ್ತು ಸಮಶೀತೋಷ್ಣ ವಲಯಗಳಿಗೆ ಗುತ್ತಿಗೆಗೆ ಹೋದವಲ್ಲ! ಅವು ಯಾವುದೇ ಹವಾಮಾನದಲ್ಲೂ ಬದುಕಬಲ್ಲವು, ಬದುಕುತ್ತವೆ ಮತ್ತು ಕಚ್ಚುತ್ತವೆ. ಅವು ಹಲವರು ರೀತಿಯ ವಾತಾವರಣಗಳಿಗೆ ಹೊಂದಿಕೊಳ್ಳಬಲ್ಲವು. ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಇವು ಹೆಚ್ಚು ಮತ್ತು ಸೊಳ್ಳೆಗಳಿಂದ ಉಂಟಾಗುವ ರೋಗಗಳು ಸಹ ಹೆಚ್ಚು ಎಂಬುದು ನಿಜವಾದರೂ, ಜಿಕಾ ಮತ್ತು ವೆಸ್ಟ್‌ ನೈಲ್‌ ಜ್ವರಗಳು ಯುರೋಪ್‌ ಮತ್ತು ಉತ್ತರ ಅಮೇರಿಕದ ಹಲವು ಭಾಗಗಳಲ್ಲಿವೆ.

ಬಟ್ಟೆಯ ಮೇಲೂ ಸೊಳ್ಳೆಗಳು ಕಚ್ಚುತ್ತವೆಯೇ?

ಇದು ಅರ್ಧ ಸತ್ಯ. ಸೊಳ್ಳೆಗಳು ಹೆಚ್ಚಾಗಿ ಅರಸುವುದು ಚರ್ಮದ ಭಾಗವನ್ನೇ. ಕೆಲವೊಮ್ಮೆ ತೆಳ್ಳಗಿನ ವಸ್ತ್ರಗಳ ಮೇಲೂ ಕಚ್ಚಬಹುದು. ಅದಿಲ್ಲದಿದ್ದರೆ, ತೀರಾ ಬಿಗಿಯಾದ ಉಡುಪಿನ ಮೇಲೆ ಕಚ್ಚಬಹುದು. ಆದರೆ ದಪ್ಪನೆಯ ಮತ್ತು ಸಡಿಲವಾದ ವಸ್ತ್ರಗಳ ಮೇಲೆ ಕುಳಿತು ಕಚ್ಚುವುದಕ್ಕೆ ಅವುಗಳಿಗೆ ಆಗದು. ಹಾಗಾಗಿ ಸೊಳ್ಳೆ ಇರುವಲ್ಲಿ ಉದ್ದವಾದ ದಪ್ಪನೆಯ ವಸ್ತ್ರಗಳನ್ನು ಮೈ ತುಂಬಾ ಧರಿಸುವುದರಿಂದ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.

ಕೆಲವು ಆಹಾರಗಳನ್ನು ತಿನ್ನುವುದರಿಂದ ಸೊಳ್ಳೆ ಹತ್ತಿರ ಬರುವುದಿಲ್ಲ?

ಬೆಳ್ಳುಳ್ಳಿ, ಈರುಳ್ಳಿ, ಬಾಳೆಹಣ್ಣು ಮುಂತಾದ ಯಾವ್ಯಾವುದೋ ಆಹಾರಗಳನ್ನು ತಿನ್ನುವುದರಿಂದ ಸೊಳ್ಳೆಗಳು ಹತ್ತಿರ ಬರುವುದಿಲ್ಲ ಎಂಬುದು ನಿಜವಲ್ಲ. ಇಂಥ ಕೆಲವು ಆಹಾರಗಳನ್ನು ತಿನ್ನುವುದರಿಂದ ನೈಸರ್ಗಿಕ ತನುಗಂಧ ಬದಲಾಗುವುದು ನಿಜ. ಆದರೆ ಇದರಿಂದ ಸೊಳ್ಳೆಗಳನ್ನ ಹತ್ತಿರಕ್ಕೆ ಬಾರದಂತೆ ಓಡಿಸಬಹುದು ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಇಂಥ ಪ್ರಯೋಗಗಳನ್ನು ಮಾಡಿ ಸೊಳ್ಳೆ ಕಚ್ಚಿಸಿಕೊಳ್ಳುವ ಬದಲು, ಒಳ್ಳೆಯ ರಿಪೆಲ್ಲೆಂಟ್‌ ಬಳಸಿ.

ಇದನ್ನೂ ಓದಿ: Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

ಸೊಳ್ಳೆಗಳು ಎಲ್ಲಾ ರೋಗಗಳನ್ನೂ ಹರಡುತ್ತವೆಯೆ?

ಇಲ್ಲ, ದೇಹದಲ್ಲಿ ಯಾವುದೇ ವೈರಸ್‌ ಇದ್ದರೂ ಆ ಸೋಂಕನ್ನೆಲ್ಲ ಸೊಳ್ಳೆಗಳು ಇತರರಿಗೆ ಹರಡುವುದಿಲ್ಲ. ಕೆಲವು ವೈರಸ್‌ಗಳ ಸೋಂಕನ್ನು ಮಾತ್ರವೇ ಸೊಳ್ಳೆಗಳು ಒಬ್ಬರಿಂದೊಬ್ಬರಿಗೆ ಹರಡಬಲ್ಲವು. ಮಲೇರಿಯ, ಡೆಂಗು, ಚಿಕುನ್‌ಗುನ್ಯ, ಜಿಕಾ ಮುಂತಾದ ವೈರಸ್‌ಗಳನ್ನು ಮಾತ್ರವೇ ಹರಡಬಲ್ಲವು.

Exit mobile version