Site icon Vistara News

World Osteoporosis Day | ಕಾರಣವೇ ಇಲ್ಲದೆ ಮೂಳೆ ಮುರಿಯುತ್ತಿದೆಯಾ? ಹೀಗೆ ಜಾಗ್ರತೆ ಮಾಡಿ

osteoporosis

ಕೆಮ್ಮಿದ್ದಕ್ಕೆ, ಆಕಳಿಸಿದ್ದಕ್ಕೆ, ಬಗ್ಗಿದ್ದಕ್ಕೆಲ್ಲ ಮೂಳೆ ಮುರಿದುಕೊಂಡವರ ಬಗ್ಗೆ ಎಂದಾದರೂ ಕೇಳಿರಬಹುದು. ಅವರೆಲ್ಲ ಅದೆಷ್ಟು ಸೂಕ್ಷ್ಮ ಎಂದು ಅಚ್ಚರಿಯನ್ನೂ ಪಟ್ಟಿರಬಹುದು, ಸಹಜವಾಗಿ. ಆದರೆ ಹೀಗೆ ಕಾರಣವೇ ಅಲ್ಲದಂಥ ಕಾರಣಕ್ಕೆ ಮೂಳೆ ಮುರಿಯುವುದಕ್ಕೆ ಕಾರಣವಿದೆ. ತನ್ನ ಇರುವಿಕೆಯನ್ನೇ ತಿಳಿಸದೆ, ಮೂಳೆಗಳನ್ನು ಒಳಗಿಂದಲೇ ಟೊಳ್ಳಾಗಿಸುವ ರೋಗ ಆಸ್ಟಿಯೊಪೊರೊಸಿಸ್‌ ಇದಕ್ಕೆಲ್ಲಾ ಕಾರಣ. ಅಂದಹಾಗೆ, ಇಂದು ವಿಶ್ವ ಆಸ್ಟಿಯೊಪೊರೊಸಿಸ್‌ ದಿನ.

ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಕಾಡುವ ರೋಗ ಇದು ಹೌದಾದರೂ, ಹೋಲಿಕೆಗೆ ಹೇಳುವುದಾದರೆ ಮಹಿಳೆಯರಲ್ಲಿ ಇದು ಸ್ವಲ್ಪ ಹೆಚ್ಚು. ಅದರಲ್ಲೂ ಋತುಬಂಧದ ನಂತರ ದೇಹದಲ್ಲಿ ಈಸ್ಟ್ರೋಜನ್‌ ಹಾರ್ಮೋನಿನ ಮಟ್ಟ ಕಡಿಮೆ ಆಗುವುದರಿಂದ ಮೂಳೆಗಳು ದುರ್ಬಲವಾಗತೊಡಗುತ್ತವೆ. ಪ್ರಾಯ ಹೆಚ್ಚಿದಂತೆ ಈ ರೋಗವೂ ಬೆಳೆಯುತ್ತಾ ಹೋಗಿ, ಅನಿರೀಕ್ಷಿತವಾಗಿ- ಸಣ್ಣ ವಿಷಯಗಳಿಗೂ ಮೂಳೆ ಮುರಿಯುವ ಅವಸ್ಥೆ ಉಂಟಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಸುಮಾರು ೫ ಕೋಟಿ ಜನ ಈ ರೋಗದಿಂದ ಬಳಲುತ್ತಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ.

ಏನಾಗುತ್ತದೆ?: ಪ್ರಾಯ ಹೆಚ್ಚುತ್ತಿದ್ದಂತೆ ದೇಹದ ಅಂಗಗಳು ದುರ್ಬಲವಾಗುವುದು ಸಾಮಾನ್ಯ ಪ್ರಕ್ರಿಯೆ. ಜೊತೆಗೆ- ಋತುಬಂಧ ಬೇಗನೆ ಆಗಿದ್ದರೆ, ಬಿಎಂಐ ೧೯ಕ್ಕಿಂತ ಕಡಿಮೆ ಇರುವಷ್ಟು ತೂಕ ಕಡಿಮೆಯಿದ್ದರೆ, ಕೆಲವು ರೀತಿಯ ಕ್ಯಾನ್ಸರ್‌ಗಳು, ಮಧುಮೇಹ ಮತ್ತು ರುಮಟಾಯ್ಡ್‌ ಆರ್ಥರೈಟಿಸ್‌ ಇದ್ದರೆ, ದೀರ್ಘ ಕಾಲದವರೆಗೆ ಕೆಲವು ಸ್ಟೆರಾಯ್ಡ್‌ಗಳನ್ನು ಬಳಸಿದ್ದಲ್ಲಿ, ಆನುವಂಶಿಕವಾಗಿ ಈ ರೋಗ ಇದ್ದರೆ, ಕ್ಯಾನ್ಸಿಯಂ ಮತ್ತು ವಿಟಮಿನ್‌ ಡಿ ಕೊರತೆಯಿದ್ದಲ್ಲಿ, ವ್ಯಾಯಾಮರಹಿತ ಜೀವನಶೈಲಿ ಇದ್ದರೆ, ಧೂಮಪಾನ ಮತ್ತು ಅಲ್ಕೋಹಾಲ್‌ ಚಟವಿದ್ದರೆ- ಈ ರೋಗ ವಕ್ಕರಿಸುವ ಸಾಧ್ಯತೆ ಹೆಚ್ಚು.

ಲಕ್ಷಣಗಳೇನು?: ಇದೇ ಸಮಸ್ಯೆ! ಮೇಲ್ನೋಟಕ್ಕೆ ಹೇಳುವಂಥ ಲಕ್ಷಣಗಳಾವುವೂ ಇಲ್ಲದೆ ಗುಪ್ತವಾಗಿ ಅಮರಿಕೊಳ್ಳುವ ರೋಗವಿದು. ಹಾಗೂ ಹೇಳುವುದಾದರೆ- ಎತ್ತರದಲ್ಲಿ ಸ್ವಲ್ಪ, ಅಂದರೆ ಒಂದಿಂಚಿನಷ್ಟು, ಕಡಿಮೆಯಾಗಬಹುದು. ಡಿಸ್ಕ್‌ಗಳು ಕುಗ್ಗುವುದರಿಂದ ಶ್ವಾಸಕೋಶಗಳು ಒತ್ತಿದಂತಾಗಿ ಉಸಿರಾಟಕ್ಕೆ ತೊಂದರೆಯಾಗಬಹುದು. ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಅಥವಾ ಶರೀರ ಸ್ವಲ್ಪ ಮುಂಬಾಗಿದಂತೆ ಕಾಣಬಹುದು. ಕಡೆಯದಾಗಿ, ಮೂಳೆ ಮುರಿತ- ಇಂಥ ಲಕ್ಷಣಗಳ ಬಗ್ಗೆ ಎಚ್ಚರಿಕೆ ಬೇಕು.

ಇದನ್ನೂ ಓದಿ | ಕುಳಿತು ಕುಳಿತೇ ಸುಸ್ತಾದ ಮಾಂಸಖಂಡಗಳಿಗೆ ಆರಾಮ ನೀಡಿ!

ಏನು ಮಾಡಬಹುದು?: ಆರೋಗ್ಯಕರ ಜೀವನಶೈಲಿಯಿಂದ ಇದೊಂದೇ ಅಲ್ಲ, ಇನ್ನೂ ಬಹಳಷ್ಟು ಕಾಯಿಲೆಗಳನ್ನು ದೂರ ಇಡಬಹುದು. ಊಟದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಮತ್ತು ಡಿ ಜೀವಸತ್ವ ಇರುವಂತೆ ನೋಡಿಕೊಳ್ಳುವುದು ಮಹತ್ವದ್ದು. ಸೊಪ್ಪು ಮತ್ತು ಹಸಿರು ತರಕಾರಿಗಳು, ಹಾಲು, ಸೋಯಾ, ಅಂಜೂರ, ಮೊಟ್ಟೆ, ಅಣಬೆ, ಸಾಲ್ಮನ್‌ ನಂತಹ ತೈಲಯುಕ್ತ ಮೀನುಗಳು- ಇಂಥವೆಲ್ಲ ಸಾಕಷ್ಟು ಕ್ಯಾಲ್ಸಿಯಂ ಮತ್ತು ಅಲ್ಪ ಪ್ರಮಾಣದ ವಿಟಮಿನ್‌ ಡಿ ದೊರೆಯುವಂತೆ ನೋಡಿಕೊಳ್ಳುತ್ತವೆ. ದಿನಂಪ್ರತಿ ಸೂರ್ಯನ ಬೆಳಕಿಗೆ ಬೀಳಲೇಬೇಕು. ಇದರಿಂದ ಯಥೇಚ್ಛವಾಗಿ ಡಿ ಜೀವಸತ್ವ ದೊರೆಯುತ್ತದೆ. ಜೊತೆಗೆ ಆಹಾರದಲ್ಲಿ ಫಾಸ್ಫರಸ್‌ ಮತ್ತು ವಿಟಮಿನ್‌ ಕೆ ಇರುವುದೂ ಅಗತ್ಯ.

ಉಪ್ಪಿನ ಅಂಶ ಹೆಚ್ಚಿರುವ ಕ್ಷಾರಯುಕ್ತ ಆಹಾರಗಳು, ಕೆಫೇನ್‌ಗಳಿಂದ, ಧೂಮಪಾನ, ತಂಬಾಕು ಮತ್ತು ಅಲ್ಕೋಹಾಲ್‌ನಿಂದ ದೂರವಿರಲೇಬೇಕು. ಆರೋಗ್ಯಕರ ಜೀವನಶೈಲಿ ಎಂದರೆ ಸರಿಯಾದ ಊಟದ ಕ್ರಮದ ಜೊತೆಗೆ ಸೂಕ್ತ ವ್ಯಾಯಾಮವೂ ಸೇರಿದ್ದು. ಇವುಗಳನ್ನು ಬದುಕಿನ ರೀತಿಯನ್ನಾಗಿ ಸ್ವೀಕರಿಸಬೇಕು. ೬೦ ವರ್ಷದ ಮೇಲ್ಪಟ್ಟವರು ವೈದ್ಯರ ಸಲಹೆ ಮೇರೆಗೆ ಮೂಳೆ ಸಾಂದ್ರತೆ ಪರೀಕ್ಷೆಯನ್ನೂ ಮಾಡಿಸಬಹುದು.

ಇದನ್ನೂ ಓದಿ | Back Pain | ವರ್ಕ್‌ ಫ್ರಂ ಹೋಂ ತಂದಿಟ್ಟ ಬೆನ್ನುನೋವಿಗೆ ಪರಿಹಾರಗಳೇನು?

Exit mobile version