ಕೆಲವು ದಿನಗಳನ್ನು ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಆಚರಿಸಿದರೆ, ಕೆಲವನ್ನು ಮಹತ್ವ ಸಾರುವ ಉದ್ದೇಶದಿಂದ ಆಚರಿಸಲಾಗುತ್ತದೆ. ಫೆಬ್ರವರಿ ತಿಂಗಳ 10ನೇ ದಿನವನ್ನು ವಿಶ್ವ ಬೇಳೆ-ಕಾಳುಗಳ ದಿನವೆಂದು ಆಚರಿಸುವ ಉದ್ದೇಶವೂ ಇದೇ- ಈ ಸುಸ್ಥಿರ ಆಹಾರದ ಮಹತ್ವವನ್ನು ಸಾರುವುದು. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಲ್ಲಿ ಬೇಳೆ-ಕಾಳುಗಳ ಪಾತ್ರವೆಷ್ಟು ಮಹತ್ವದ್ದು ಎಂಬುದನ್ನು ಅರ್ಥ ಮಾಡಿಸಲು ಜಾಗತಿಕವಾಗಿ ಈ ದಿನವನ್ನು (World Pulses Day 2024) ಆಚರಿಸಲಾಗುತ್ತದೆ. ಪ್ರೊಟೀನ್ ಹೆಚ್ಚಿದ್ದರೂ ಕೊಬ್ಬು ಕಡಿಮೆಯಿರುವ ಸಸ್ಯಜನ್ಯ ಆಹಾರಗಳ ಬಗ್ಗೆ, ಅವುಗಳ ಸತ್ವಗಳ ಬಗ್ಗೆ, ಈ ಮೂಲಕ ವಿಶ್ವವನ್ನು ಕಾಡುತ್ತಿರುವ ಹಸಿವೆ ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನಗೊಳಿಸುವ ಕುರಿತು, ಇಂಥ ಅಮೂಲ್ಯ ಆಹಾರ ಬೆಳೆಯುವಲ್ಲಿ ಎದುರಾಗುತ್ತಿರುವ ಸವಾಲುಗಳ ಕುರಿತು ಜನಮನ ಸೆಳೆಯುವ ಘನ ಉದ್ದೇಶ ಈ ಆಚರಣೆಯ ಹಿಂದಿದೆ. ಬೇಳೆ-ಕಾಳುಗಳನ್ನು ತಿನ್ನುವುದರ ಲಾಭಗಳೇನು ಎಂಬುದನ್ನೀಗ ಪರಾಂಬರಿಸೋಣ.
ಸತ್ವಶಾಲಿ
ಇಡಿ ಧಾನ್ಯಗಳ ಪಟ್ಟಿಯಲ್ಲಿ ಕಾಳುಗಳನ್ನು ಸೇರಿಸಬಹುದು. ನಾರು, ಪ್ರೊಟೀನ್, ಸಂಕೀರ್ಣ ಪಿಷ್ಟಗಳು, ಫೋಲೇಟ್, ಕಬ್ಬಿಣ, ಪೊಟಾಶಿಯಂ, ಮ್ಯಾಂಗನೀಸ್ ಮುಂತಾದ ಖನಿಜಗಳು, ಜೀವಸತ್ವಗಳು ಸೇರಿದಂತೆ ಮಹತ್ವದ ಪೋಷಕಾಂಶಗಳನ್ನು ಬೇಳೆ-ಕಾಳುಗಳು ಹೊಂದಿರುತ್ತವೆ. ಬೇಳೆಗಳ ರೂಪದಲ್ಲಿ, ಕಾಳುಗಳ ಸ್ವರೂಪದಲ್ಲಿ, ಮೊಳಕೆ ತರಿಸಿಕೊಂಡು- ಹೀಗೆ ಯಾವುದೇ ರೂಪದಲ್ಲಿ ಇವುಗಳನ್ನು ಸೇವಿಸಿದರೂ ಆರೋಗ್ಯಕ್ಕೆ ಪುಷ್ಟಿಯನ್ನು ನೀಡುವಂಥವು.
ಹೃದಯಕ್ಕೆ ಪೂರಕ
ಕೊಬ್ಬು ಕಡಿಮೆ ಇದ್ದುಕೊಂಡು, ನಾರು ಮತ್ತು ಪ್ರೊಟೀನ್ ಹೆಚ್ಚಿರುವ ಈ ಆಹಾರವು ಹೃದಯಕ್ಕೆ ಸ್ನೇಹಿತನೆಂದೇ ಅಧ್ಯಯನಗಳು ಬಿಂಬಿಸುತ್ತವೆ. ಇದರಲ್ಲಿರುವ ಕರಗಬಲ್ಲ ನಾರುಗಳು ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ನಂಥ ಕೆಟ್ಟ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಜೊತೆಗೆ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನೂ ದೂರ ಮಾಡಲು ಸಹಾಯ ಮಾಡುತ್ತವೆ.
ಜೀರ್ಣಾಂಗಗಳ ಕ್ಷಮತೆ ಹೆಚ್ಚಳ
ಮಲಬದ್ಧತೆಯಂಥ ಸಮಸ್ಯೆಗಳು ಜೀರ್ಣಾಂಗಗಳ ತೊಂದರೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಅಥವಾ ಜೀರ್ಣಾಂಗಗಳ ತೊಂದರೆಯೇ ಮಲಬದ್ಧತೆಗೂ ಕಾರಣವಾಗಬಹುದು. ಹಾಗಾಗಿ ಆಹಾರದಲ್ಲಿ ನಾರಿನಂಶ ಇರಬೇಕಾದದ್ದು ಮೂಲಭೂತ ಅಗತ್ಯಗಳಲ್ಲಿ ಒಂದು. ಇದು ಜೀರ್ಣಾಂಗಗಳ ಕ್ಷೇಮವನ್ನು ಮಾತ್ರವೇ ಅಲ್ಲ, ಕರುಳಿನ ಬ್ಯಾಕ್ಟೀರಿಯಗಳ ಸಂಖ್ಯೆಯನ್ನೂ ಸಮತೋಲನದಲ್ಲಿ ಇರಿಸುತ್ತದೆ. ಜೊತೆಗೆ, ಕಾಳುಗಳಲ್ಲಿರುವ ನಾರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.
ಸಸ್ಯಜನ್ಯ ಪ್ರೊಟೀನ್
ಪ್ರೊಟೀನ್ ಎನ್ನುತ್ತಿದ್ದಂತೆ ಚಿಕನ್, ಮೀನು ಮುಂತಾದ ಮಾಂಸಾಹಾರಗಳಿಗೇ ಪ್ರಾಧಾನ್ಯತೆ ಇದೆ. ಆದರ ಕೆಲವು ಆರೋಗ್ಯಕರ ಪ್ರೊಟೀನ್ ಮೂಲಗಳಲ್ಲಿ ಕಾಳುಗಳೂ ಒಂದು. ಯಾವುದೇ ಕೊಬ್ಬಿಲ್ಲದಂತೆ ಕೇವಲ ಪ್ರೊಟೀನ್ ಮಾತ್ರ ದೇಹಕ್ಕೆ ದೊರೆಯಬೇಕೆಂದರೆ ಇಂಥ ಆಹಾರಗಳೇ ಅಗತ್ಯ. ಸ್ನಾಯುಗಳ ಬೆಳವಣಿಗೆ, ದುರಸ್ತಿ ಮತ್ತು ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಅಗತ್ಯ ಆಹಾರವೆಂದು ಬೇಳೆ-ಕಾಳುಗಳನ್ನು ಪರಿಗಣಿಸಲಾಗಿದೆ.
ತೂಕ ಇಳಿಕೆಗೆ ಬೇಕು
ಮೊಳಕೆ ಕಾಳುಗಳು ತೂಕ ಇಳಿಸುವವರಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಅಧಿಕ ಪ್ರಮಾಣದಲ್ಲಿ ನಾರು ಮತ್ತು ಪ್ರೊಟೀನ್ ಒದಗಿಸಿ, ದೀರ್ಘ ಕಾಲದವರೆಗೆ ಹಸಿವನ್ನು ತಣಿಸುತ್ತವೆ, ತಿಂದ ಆಹಾರಕ್ಕೆ ಪೂರಕವಾದ ತೃಪ್ತಿಯನ್ನು ನೀಡುತ್ತವೆ. ಇದರಿಂದ ದೇಹ ಬಳಲದಂತೆ ಕಾಪಾಡಿಕೊಂಡು ತೂಕ ಇಳಿಸಲು, ಶರೀರದಲ್ಲಿನ ಕೊಬ್ಬನ್ನು ಕರಗಿಸಿ, ಸ್ನಾಯುಗಳನ್ನು ಬೆಳೆಸಲು ಖಂಡಿತ ಸಾಧ್ಯವಿದೆ.
ಅಡುಗೆಗಳು ಸುಲಭ
ಕಾಳು-ಬೇಳೆಗಳನ್ನು ಬಳಸಿ ಅಡುಗೆ ಮಾಡುವುದು ಕಷ್ಟವಲ್ಲ. ಯಾವುದೇ ದೇಶಗಳ, ಸಂಸ್ಕೃತಿಗಳ ಅಡುಗೆಗಳಲ್ಲೂ ಸುಲಭವಾಗಿ ಸ್ಥಾನ ಪಡೆಯಬಹುದಾದಂಥ ರುಚಿ ಮತ್ತು ಗುಣ ಇವುಗಳದ್ದು. ಸೂಪ್, ಸಲಾಡ್‌ಗಳಿಂದ ತೊಡಗಿ, ಸಿಹಿ ತಿಂಡಿಗಳವರೆಗೆ ಎಂಥ ಅಡುಗೆಗೂ ಬೇಳೆ-ಕಾಳುಗಳು ಒಗ್ಗಿಕೊಳ್ಳುತ್ತವೆ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರರೆಗೆ ಯಾವುದೇ ಕಿಸೆಗೂ ಭಾರವಾಗದ ರೀತಿಯಲ್ಲಿ ಇವುಗಳನ್ನು ಕೊಂಡು ಸೇವಿಸಬಹುದು.
ಇದನ್ನೂ ಓದಿ: Benefits Of Soaking Black Raisins: ಕಪ್ಪು ಒಣದ್ರಾಕ್ಷಿಗಳನ್ನು ಮೆಲ್ಲುವುದನ್ನು ಎಂದಿಗೂ ತಪ್ಪಿಸಬೇಡಿ!