Site icon Vistara News

World’s smallest skin cancer: ವಿಶ್ವದ ಅತಿ ಸಣ್ಣ ಚರ್ಮದ ಕ್ಯಾನ್ಸರ್ ಪತ್ತೆ

World smallest skin cancer Detect under eye of woman

#image_title

ವಿಶ್ವದ ಅತಿ ಸಣ್ಣ ಚರ್ಮದ ಕ್ಯಾನ್ಸರ್ ಕೋಶವನ್ನು ಪತ್ತೆ ಮಾಡಲಾಗಿದ್ದು, ೦.65 ಮಿ. ಮೀ. (೦.೦25 ಇಂಚು) ಪರಿಧಿ ಮಾತ್ರವಷ್ಟೆ ಇರುವ ಇದನ್ನು (world’s smallest skin cancer) ಕಣ್ಣಿನ ಕೆಳಗಿನ ಭಾಗದ ಚರ್ಮದ ಮೇಲ್ಪದರದಲ್ಲಿ ಕಂಡುಹಿಡಿಯಲಾಗಿದೆ.

ಅಮೆರಿಕದ ಒರೆಗಾನ್ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ (OHSU) ವಿಜ್ಞಾನಿಗಳು ಬರಿಗಣ್ಣಿಗೆ ಕಾಣದಂಥ ಸೂಕ್ಷ್ಮ ಕ್ಯಾನ್ಸರ್ ಕೋಶವನ್ನು ಪತ್ತೆ ಮಾಡಿದ್ದಾರೆ. ಆರ್ ಸಿ ಎಂ ಮತ್ತು ಡೆರ್ಮಸ್ಕೋಪಿಗಳ ಮೂಲಕ ಇದನ್ನು ಪತ್ತೆ ಮಾಡಲಾಗಿದ್ದು, ಈವರೆಗೆ ಪತ್ತೆಯಾದ ಚರ್ಮದ ಕ್ಯಾನ್ಸರ್ ಕೋಶಗಳಲ್ಲೇ ಇದು ಅತಿ ಸಣ್ಣದು ಎಂದು ಹೇಳಲಾಗಿದೆ. ಕಣ್ಣಿನ ಕೆಳಗೆ ವಿಚಿತ್ರ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ಚಿಂತಿತರಾಗಿದ್ದ ಮಹಿಳೆಯೊಬ್ಬರು, ಹಲವಾರು ಚರ್ಮರೋಗ ತಜ್ಞರಲ್ಲಿ ಭೇಟಿ ನೀಡಿದ್ದರು. ಅವುಗಳಿಂದ ಯಾವುದೇ ಹಾನಿಯಿಲ್ಲ ಎಂದು ವೈದ್ಯರು ಹೇಳಿದ್ದರೂ ಆಕೆಯ ಆತಂಕ ದೂರವಾಗಿರಲಿಲ್ಲ. ಹಾಗಾಗಿ OHSU ನಲ್ಲಿ ಪರಿಣಿತರಾಗಿದ್ದ ಡಾ. ಅಲೆಕ್ಸಾಂಡರ್ ವಿಟ್ಕೋವ್ಸ್ಕಿ ಅವರನ್ನು ಭೇಟಿ ಮಾಡಿದರು. ಈಕೆಗೆ ಆತಂಕ ಮೂಡಿಸಿದ್ದ ಕಲೆಗಳು ಹಾನಿ ಮಾಡುವಂಥವಲ್ಲ ಎಂಬುದನ್ನು ಹೇಳಿದ ವೈದ್ಯರಿಗೆ ಅಲ್ಲೇ ಪಕ್ಕದಲ್ಲಿದ್ದ ಸೂಕ್ಷ್ಮ ಕಪ್ಪು ಚುಕ್ಕೆಯೊಂದು ಗಮನ ಸೆಳೆಯಿತು.

ಬರಿಗಣ್ಣಿಗೆ ಕಾಣುವುದೂ ದುಸ್ತರವಾಗಿದ್ದ ಈ ಚುಕ್ಕೆಯನ್ನು ಇನ್ನಷ್ಟು ತನಿಖೆ ಮಾಡಬೇಕೆಂಬ ನಿಟ್ಟಿನಲ್ಲಿ, ಹೈಟೆಕ್ ಯಂತ್ರಗಳ ಮೂಲಕ, ಚರ್ಮಕ್ಕೆ ಯಾವುದೇ ಹಾನಿ ಮಾಡದೇ ಅಥವಾ ಕತ್ತರಿಸದೇ ಅದನ್ನು ಪರಾಂಬರಿಸಲಾಯಿತು. ಗಂಭೀರ ಸ್ವರೂಪದ ಚರ್ಮದ ಕ್ಯಾನ್ಸರ್ ಕೋಶವು (world’s smallest skin cancer) ಅಲ್ಲಿ ಪತ್ತೆಯಾಯಿತು. ಆರಂಭಿಕ ಹಂತದಲ್ಲಿರುವ ಇದೀಗ `ವಿಶ್ವದಲ್ಲಿ ಪತ್ತೆಯಾದ ಅತಿಸಣ್ಣ ಚರ್ಮದ ಕ್ಯಾನ್ಸರ್’ ಎಂದು ಗಿನ್ನೆಸ್ ದಾಖಲೆಗೆ ಸೇರಿದೆ. ಇದನ್ನು ಪತ್ತೆ ಮಾಡಿದ ವೈದ್ಯರ ತಂಡಕ್ಕೆ ಗಿನ್ನೆಸ್ ವಿಶ್ವ ದಾಖಲೆ ಸಮಿತಿಯಿಂದ ಈ ಕುರಿತ ಪ್ರಮಾಣಪತ್ರಗಳು ಲಭ್ಯವಾಗಿವೆ.

ಇದನ್ನೂ ಓದಿ: ಕ್ಯಾನ್ಸರ್​ನಿಂದಾಗಿ ಶೇ.90ರಷ್ಟು ನಾಲಿಗೆಯನ್ನು ಕಳೆದುಕೊಂಡರೂ ಮಾತನಾಡಿದ ಮಹಿಳೆ; ವೈದ್ಯರಿಗೇ ಅಚ್ಚರಿ!

ಆರಂಭಿಕ ಹಂತದಲ್ಲೇ ತಮ್ಮ ಕ್ಯಾನ್ಸರ್ ಪತ್ತೆಯಾಗಿದ್ದಕ್ಕೆ ಮಹಿಳೆ ನೆಮ್ಮದಿಯ ಉಸಿರಿಟ್ಟಿದ್ದಾರೆ. ಚರ್ಮದ ಉಳಿದ ಭಾಗಗಳಿಗೆ ಹಬ್ಬುವ ಮುನ್ನವೇ ಈ ಮಾರಕ ರೋಗ ಪತ್ತೆಯಾಗಿದ್ದು, ರೋಗಿ ಗುಣವಾಗುವ ಸಾಧ್ಯತೆಯಿದೆ. ಸರಿಯಾದ ಸಮಯಕ್ಕೆ ಸೂಕ್ತ ವ್ಯಕ್ತಿಯ ಬಳಿ ಸಮರ್ಪಕ ತ್ಂತ್ರಜ್ಞಾನದ ನೆರವು ತಮಗೆ ದೊರಕಿದ ಬಗ್ಗೆ ಆಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Exit mobile version