Site icon Vistara News

World stroke day | ಪಾರ್ಶ್ವವಾಯು ಬಗೆಗೆ ಇರಲಿ ಜಾಗೃತಿ: ಸಮಯ ಅಮೂಲ್ಯ

world stroke day

ಇಂದು ಪಾರ್ಶ್ವವಾಯು ಜಾಗೃತಿ ದಿನ. ಈ ಅಪಾಯಕಾರಿ ಸಮಸ್ಯೆಯ ತಡೆ ಮತ್ತು ತ್ವರಿತ ಚಿಕಿತ್ಸೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅಕ್ಟೋಬರ್‌ ತಿಂಗಳ ೨೯ನೇ ದಿನವನ್ನು ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಆರೋಗ್ಯಕರ ಜೀವನಶೈಲಿಯಿಂದ ಇಂಥ ಆರೋಗ್ಯ ಹಾನಿಯನ್ನು ತಪ್ಪಿಸಬಹುದು ಎಂಬುದು ಸಹ ಜಾಗೃತಿಯ ಭಾಗವಾಗಿ ಅರಿವಿಗೆ ಬರಬೇಕಿದೆ.

ಪಾರ್ಶ್ವವಾಯುವನ್ನು ಲಕ್ವ ಹೊಡೆಯುವುದು, ಗಾಳಿ ಹೊಡೆಯುವುದು ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಮೆದುಳಿಗೆ ಪೂರೈಕೆಯಾಗುವ ರಕ್ತಕ್ಕೆ ಸ್ವಲ್ಪ ಅಥವಾ ಪೂರ್ಣ ಪ್ರಮಾಣದಲ್ಲಿ ತಡೆಯಾದರೆ, ಮೆದುಳಿನ ಕೋಶಗಳಿಗೆ ಆಗುವ ತಾತ್ಕಾಲಿಕ ಅಥವಾ ಶಾಶ್ವತ ಹಾನಿಯಿಂದ ಸಂಭವಿಸುವ ಆರೋಗ್ಯ ಸಮಸ್ಯೆಯಿದು. ಇದರಿಂದ ಆಗುವ ಪರಿಣಾಮ ಕೆಲವೊಮ್ಮೆ ಜೀವಘಾತುಕವೂ ಇರಬಹುದು.

ಈ ವರ್ಷದ ಅರಿವಿನ ದಿನದ ಧ್ಯೇಯ ʻಸಮಯ ಅಮೂಲ್ಯʼ ಎಂಬುದು. ಪಾರ್ಶ್ವವಾಯು ಸಂಭವಿಸಿದಲ್ಲಿ, ತಡಮಾಡದೆ ರೋಗಿಗೆ ಚಿಕಿತ್ಸೆ ನೀಡಿದಲ್ಲಿ ಜೀವವನ್ನು ಉಳಿಸಬಹುದು ಎಂಬ ಉದ್ದೇಶವನ್ನು ಈ ಧ್ಯೇಯ ವಾಕ್ಯ ವಿಸ್ತರಿಸುತ್ತದೆ. ಪಾರ್ಶ್ವವಾಯು ಸಂಭವಿಸಿದ ನಂತರದ ಕೆಲ ಸಮಯ ಅಮೂಲ್ಯ. ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ರೋಗಿಗೆ ನೀಡಿದಲ್ಲಿ ಜೀವ ಉಳಿಸುವುದು ಮಾತ್ರವಲ್ಲ, ದೇಹದ ಅಂಗಾಂಗಗಳಿಗೆ ಆಗಬಹುದಾದ ಶಾಶ್ವತ ಹಾನಿಯನ್ನು ತಪ್ಪಿಸಬಹುದು.

ಇದನ್ನೂ ಓದಿ | Blood Type | ಈ ರಕ್ತದ ಗುಂಪಿನ ಮಂದಿಗೆ ಸಣ್ಣ ಪ್ರಾಯದಲ್ಲೇ ಲಕ್ವ ಹೊಡೆವ ಸಾಧ್ಯತೆ ಹೆಚ್ಚಂತೆ!

ಲಕ್ಷಣಗಳು: ಪಾರ್ಶ್ವವಾಯುವಿನ ಲಕ್ಷಣಗಳನ್ನು ಗುರುತಿಸುವುದು ಅತಿ ಮುಖ್ಯ. ಆಗ ಮಾತ್ರ ರೋಗಿಯ ಜೊತೆಗಿದ್ದವರು ಸೂಕ್ತ ರೀತಿಯಲ್ಲಿ, ತ್ವರಿತವಾಗಿ ಸ್ಪಂದಿಸುವುದಕ್ಕೆ ಸಾಧ್ಯ. ಇದ್ದಕ್ಕಿದ್ದಂತೆ ಮುಖ, ಕೈ, ಕಾಲು ಅಥವಾ ದೇಹದ ಒಂದು ಪಕ್ಕಕ್ಕೆ ಜೋಮು ಹಿಡಿದಂತೆ ಅಥವಾ ವಶ ತಪ್ಪಿದಂತೆ ಆಗಬಹುದು. ಮಾತಾಡುವುದಕ್ಕೆ, ಮಾತಾಡಿದ್ದನ್ನು ಕೇಳಿ ಸ್ಪಂದಿಸುವುದಕ್ಕೆ ಆಗದಿರಬಹುದು, ಮರೆವು, ಗೊಂದಲ ಕಾಣಿಸಬಹುದು. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ಅಸ್ಪಷ್ಟವಾಗಬಹುದು. ದೇಹದ ಸಮತೋಲನ ತಪ್ಪಿದಂತಾಗಿ ನಡೆಯುವುದಕ್ಕೆ ಆಗದೆ, ತಲೆ ಸುತ್ತಿದಂತೆ ಬೀಳಬಹುದು. ಯಾವುದೇ ಕಾರಣವಿಲ್ಲದೆ ಅತೀತ ತಲೆನೋವು ಕಾಣಿಸಬಹುದು. ಇಂಥ ಲಕ್ಷಣಗಳು ಕಂಡರೆ ರೋಗಿಯನ್ನು ತ್ವರಿತವಾಗಿ ವೈದ್ಯರಲ್ಲಿ ಕರೆದೊಯ್ಯಬೇಕಾಗುತ್ತದೆ. ಮೊದಲ ಒಂದೆರಡು ಗಂಟೆಗಳಲ್ಲಿ ಚಿಕಿತ್ಸೆ ದೊರೆಯುವುದು ಅತಿ ಮುಖ್ಯ.

ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ

Exit mobile version