ಬೆಂಗಳೂರು: ಮಾನವನ ಪಂಚೇಂದ್ರೀಯಗಳಲ್ಲಿ ಕಣ್ಣು ಪ್ರಮುಖವಾದುದು. ಇದೀಗ ಸ್ಮಾರ್ಟ್ ಫೋನ್, ಗ್ಯಾಝೆಟ್‌ಗಳ ಬಳಕೆ ಹೆಚ್ಚಾಗಿದ್ದು, ಇವುಗಳಿಂದ ಕಣ್ಣಿಗೆ ಆಗುವ ಹಾನಿಯನ್ನು ತಪ್ಪಿಸುವ ಅಗತ್ಯ ಬಹಳಷ್ಟಿದೆ. ವಿಶ್ವದಲ್ಲಿ ಈಗ ಸುಮಾರು 3.5 ಬಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ ಮತ್ತು ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಪ್ರತಿದಿನ ಸರಾಸರಿ 3 ಗಂಟೆ 15 ನಿಮಿಷಗಳನ್ನು ಕಳೆಯುತ್ತಾರೆ. ಹೀಗಾಗಿ ಸೆಲ್ ಫೋನ್ ಬಳಕೆಯಿಂದ ಕಣ್ಣಿಗೆ ಉಂಟಾಗುವ ಹಾನಿಯನ್ನು ತಿಳಿದುಕೊಳ್ಳುವುದು, ಅದನ್ನು ತಪ್ಪಿಸಲು ಕಾರ್ಯ ಪ್ರವೃತ್ತರಾಗುವುದು ಅನಿವಾರ್ಯ ಕೂಡ ಹೌದು. ಇಂದು ವಿಶ್ವ ದೃಷ್ಟಿ ದಿನ (World Vision Day 2023). ಈ ಹಿನ್ನಲೆಯಲ್ಲಿ ಕಣ್ಣಿನ ಆರೋಗ್ಯದತ್ತ ಗಮನ ಹರಿಸೋಣ.
ಸಮಸ್ಯೆಗಳೇನು?
ಸ್ಮಾರ್ಟ್‌ಫೋನ್ ದೀರ್ಘಕಾಲ ನೋಡುವುದರಿಂದ ಆಯಾಸ, ತುರಿಕೆ, ಕಣ್ಣು ಶುಷ್ಕವಾಗುವುದು ಅಥವಾ ಮಸುಕಾದ ದೃಷ್ಟಿ ಮತ್ತು ತಲೆನೋವುಗಳಂತಹ ವಿವಿಧ ಸಮಸ್ಯೆಗಳಿಗೆ ಕಂಡುಬರಬಹುದು. ಮೊಬೈಲ್ ಫೋನ್ ಬಳಕೆಯಿಂದ ಉಂಟಾಗುವ ಕಣ್ಣಿನ ಹಾನಿಯು ದೀರ್ಘಕಾಲೀನವಾಗಿರುವುದರಿಂದ ನಂತರ ಚಿಕಿತ್ಸೆಯನ್ನು ಹುಡುಕುವ ಬದಲು ಅದನ್ನು ತಡೆಗಟ್ಟುವುದು ಜಾಣತನ. ಸಂಶೋಧನೆಗಳ ಪ್ರಕಾರ ಮೊಬೈಲ್ ಫೋನ್ ಹೊರ ಸೂಸುವ ನೀಲಿ ಬೆಳಕು ಕಣ್ಣು ಮತ್ತು ರೆಟಿನಾಗೆ ಅಪಾಯಕಾರಿ. ಏಕೆಂದರೆ ಈ ಬೆಳಕನ್ನು ಕಾರ್ನಿಯಾ ಮತ್ತು ಲೆನ್ಸ್ ತಡೆಯುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್‌ನಿಂದ ಕಣ್ಣಿಗೆ ಉಂಟಾಗುವ ಅಪಾಯವನ್ನು ನಿಯಂತ್ರಿಸಲು ಈ ಕ್ರಮಗಳನ್ನು ಅನುಸರಿಸಿ.
ಪದೇ ಪದೆ ಕಣ್ಣು ಮಿಟುಕಿಸಿ
ಕೆಲವರು ಸ್ಮಾರ್ಟ್‌ಫೋನ್ ನೋಡುವಾಗ ಎಷ್ಟು ತನ್ಮಯರಾಗಿರುತ್ತಾರೆ ಎಂದರೆ ಕಣ್ಣು ಮಿಟುಕಿಸಲೂ ಮರೆಯುತ್ತಾರೆ. ಇದು ಬಹಳ ಅಪಾಯಕಾರಿ. ಆದ್ದರಿಂದ ಆಗಾಗ ಕಣ್ಣು ಮಿಟುಕಿಸುತ್ತಿರಿ. ಕಾಲಕಾಲಕ್ಕೆ ಕಣ್ಣು ಮಿಟುಕಿಸುವುದು ಎರಡು ರೀತಿಯಲ್ಲಿ ಸಹಾಯ ಮಾಡುತ್ತದೆ. ಮೊದಲನೆಯದಾಗಿ ನಿಮ್ಮ ಕಣ್ಣುಗಳನ್ನು ತೇವವಾಗಿಡುವ ಮೂಲಕ ಶುಷ್ಕತೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಎರಡನೆಯದಾಗಿ, ನಿಮ್ಮ ಕಣ್ಣುಗಳನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. 15 ನಿಮಿಷಗಳಲ್ಲಿ ಸುಮಾರು 10 ಬಾರಿ ಕಣ್ಣು ಮಿಟುಕಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
20-20-20 ನಿಯಮ ಪಾಲಿಸಿ
20-20-20 ನಿಯಮ ಎಂದರೆ ಪ್ರತಿ 20 ನಿಮಿಷಗಳಿಗೊಮ್ಮೆ, 20 ಸೆಕೆಂಡುಗಳ ಕಾಲ, ನಿಮ್ಮ ಸ್ಮಾರ್ಟ್‌ಫೋನ್ ಪರದೆಯಿಂದ 20 ಅಡಿ ದೂರದಲ್ಲಿರುವ ವಸ್ತುವನ್ನು ನೋಡುವುದು. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿ ನೀಡುತ್ತದೆ.
ಬ್ರೈಟ್‌ನೆಸ್ ಕಡಿಮೆ ಮಾಡಿ
ನಿಮ್ಮ ಮೊಬೈಲ್ ಫೋನ್‌ನ ಡಿಸ್‌ಪ್ಲೇ ಪ್ರಕಾಶವು ಪರಿಸರದಲ್ಲಿನ ಬೆಳಕಿಗೆ ಸಮಾನವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಡಿಸ್‌ಪ್ಲೇ ತುಂಬಾ ಪ್ರಕಾಶಮಾನವಾಗಿ ಅಥವಾ ತುಂಬಾ ಗಾಢವಾಗಿರುವುದು ಕಣ್ಣುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಡಿಸ್‌ಪ್ಲೇ ಬ್ರೈಟ್‌ನೆಸ್ ಕಡಿಮೆ ಮಾಡುವುದು ಕಣ್ಣಿನ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರಬಲ್ಲದು.
ಅಕ್ಷರ, ಕಾಂಟ್ರಾಸ್ಟ್ ಸರಿಹೊಂದಿಸಿ
ನಿಮ್ಮ ಸ್ಕ್ರೀನ್‌ನ ಅಕ್ಷರ ಮತ್ತು ಕಾಂಟ್ರಾಸ್ಟ್ ಅನ್ನು ಸೂಕ್ತವಾಗಿ ಹೊಂದಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದು ಹೆಚ್ಚು ಒತ್ತಡವನ್ನು ಉಂಟು ಮಾಡದೆ ನಿಮ್ಮ ಕಣ್ಣುಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಸಂದೇಶಗಳು, ಇಮೇಲ್, ವೆಬ್ ಅನ್ನು ಸುಲಭವಾಗಿ ಓದಲು ಸಹಾಯ ಮಾಡುತ್ತದೆ.
ಡಿಸ್‌ಪ್ಲೇಯನ್ನು ನಿಯಮಿತವಾಗಿ ಶುಚಿಗೊಳಿಸಿ
ನಿಮ್ಮ ಸ್ಮಾರ್ಟ್‌ಫೋನ್ ಡಿಸ್ ಪ್ಲೇಯನ್ನು ಆಗಾಗ ಸ್ವಚ್ಛವಾದ ಒಣ ಬಟ್ಟೆಯಿಂದ ಒರೆಸಿ. ಇದು ಸಂಗ್ರಹವಾಗಿರುವ ಕೊಳೆ, ಧೂಳನ್ನು ಹೋಗಲಾಡಿಸಿ ಸ್ಪಷ್ಟವಾಗಿ ಕಾಣಿಸಲು ನೆರವಾಗುತ್ತದೆ. ಇದರಿಂದ ಕಣ್ಣುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: Spinach benefits: ಚಳಿಗಾಲದಲ್ಲಿ ದಿನವೂ ಪಾಲಕ್ ತಿನ್ನಿ, ಆರೋಗ್ಯವಾಗಿರಿ!
ಸರಿಯಾದ ಅಂತರ ಕಾಪಾಡಿಕೊಳ್ಳಿ
ಹೆಚ್ಚಿನ ಜನರು ತಮ್ಮ ಫೋನ್ ಅನ್ನು ಮುಖದಿಂದ ಸುಮಾರು 8 ಇಂಚು ದೂರದಲ್ಲಿ ಹಿಡಿದಿರುತ್ತಾರೆ. ಇನ್ನು ಕೆಲವರು ತುಂಬಾ ಹತ್ತಿರ ಹಿಡಿಯುತ್ತಾರೆ. ಇದು ಎರಡು ಕೂಡ ಅಪಾಯಕಾರಿ. ಆದ್ದರಿಂದ ದೀರ್ಘಕಾಲದ ಸ್ಮಾರ್ಟ್‌ಫೋನ್ ಬಳಕೆಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸುಮಾರು 16ರಿಂದ 18 ಇಂಚುಗಳ ಅಂತರವನ್ನು ಕಾಪಾಡಿಕೊಳ್ಳಿ.
ಸುತ್ತಮುತ್ತ ಸಾಕಷ್ಟು ಬೆಳಕಿರಲಿ
ಬಹಳಷ್ಟು ಮಂದಿ ತಮ್ಮ ಸುತ್ತಮುತ್ತಲಿನ ಪ್ರದೇಶಗಳು ಸಂಪೂರ್ಣವಾಗಿ ಕತ್ತಲಾಗಿದ್ದಾಗ ಸ್ಮಾರ್ಟ್‌ಫೋನ್ ಬಳಸುತ್ತಾರೆ. ಇದು ಕಣ್ಣುಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಇದನ್ನು ತಪ್ಪಿಸುವುದು ಉತ್ತಮ. ಅದಗ್ಯೂ ಕತ್ತಲೆಯಲ್ಲಿ ಫೋನ್ ಬಳಸಲೇಬೇಕು ಎಂದಿದ್ದರೆ ಬ್ರೈಟ್‌ನೆಸ್ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಜತೆಗೆ ಬೆಡ್ ಲ್ಯಾಂಪ್ ಬಳಸಬಹುದು. ಸ್ಮಾರ್ಟ್‌ಫೋನ್‌ನಲ್ಲಿರುವ ಡಾರ್ಕ್ ಮೋಡ್ ಅಥವಾ ನೈಟ್ ಲೈಟ್ ವೈಶಿಷ್ಟ್ಯಗಳನ್ನು ಉಪಯೋಗಿಸಬಹುದು.