Site icon Vistara News

Yoga Day 2023 : ಸಮತೆ- ಮಾನವೀಯತೆ ಕಲಿಸುವ ಯೋಗಾಯೋಗ

vachananda swamiji

#image_title

ಜಗದ್ಗುರು ಶ್ರೀ ಶ್ರೀ ವಚನಾನಂದ ಸ್ವಾಮೀಜಿ
ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.

vachananda swamiji

ಅರಿವೆ ಗುರು ಆಚಾರವೆ ಶಿಷ್ಯ ಜ್ಞಾನವೆ ಲಿಂಗ
ಪರಿಣಾಮವೆ ತಪ ಸಮತೆಯೆಂಬುದೆ ಯೋಗದಾಗು ನೋಡಾ
ಈಸುವನರಿಯದೆ ವೇಷವ ಧರಿಸಿ ಲೋಚು
ಬೋಳಾದಡೆ ಮಹಾಲಿಂಗ ಕಲ್ಲೇಶ್ವರದೇವರು ನಗುವರು

– ಹಾವಿನಾಳು ಕಲ್ಲಯ್ಯ ಶರಣರು

2013 ನೇ ಇಸವಿಯಲ್ಲಿ ನಾವು ಕೆನಡಾದ ಟೊರಾಂಟೊ ನಗರಕ್ಕೆ ಯೋಗ ಪ್ರಸಾರಕ್ಕಾಗಿ ಹೋಗಿದ್ದೆವು. ನಮ್ಮನ್ನು ಇಳಿಸಿದ್ದ ಸ್ಥಳ ಟೊರಾಂಟೊ ನಗರದಿಂದ ಸುಮಾರು ನೂರು ಕಿಲೋಮೀಟರ್‌ ದೂರದಲ್ಲಿತ್ತು. ಒಂದು ದಿನ ಯೋಗ ರಿಟ್ರೀಟ್ ಮುಗಿಸಿ ಹಿಂದಿರುಗುವಾಗ ರಾತ್ರಿ ಬಹಳ ತಡವಾಗಿಬಿಟ್ಟಿತು. ಮೆಟ್ರೊ ಸ್ಟೇಷನ್ನಿನಲ್ಲಿ ಯಾವ ರೈಲು ಹಿಡಿದು ಹೇಗೆ ಹೋಗಬೇಕು ಎನ್ನುವ ಬಗ್ಗೆ ಸ್ವಲ್ಪ ಗೊಂದಲವಾಯಿತು. ಅಲ್ಲೇ ನಿಂತಿದ್ದ ಯುವಕ ಯುವತಿಯರನ್ನು ಕೇಳಿದಾಗ, ಅಲ್ಲಿದ್ದ ಯುವತಿ ಬನ್ನಿ ತೋರಿಸುತ್ತೇನೆ ಎಂದು ನಮ್ಮ ಜೊತೆಗೇ ಮೆಟ್ರೊನಲ್ಲಿ ಬಂದು, ಸುಮಾರು ನಲವತ್ತೈದು ನಿಮಿಷಗಳ ಪ್ರಯಾಣದ ನಂತರ ಮೆಟ್ರೊದಿಂದ ಇಳಿದು ನಮ್ಮನ್ನು ಹತ್ತಿರದ ಬಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ಬಸ್ ತೋರಿಸಿ ಡ್ರೈವರ್ ಗೆ ನಮ್ಮನ್ನು ಎಲ್ಲಿ ಇಳಿಸಬೇಕು ಎಂದು ತಿಳಿಸಿದರು.

ಇದನ್ನು ಕಂಡ ನಮಗೆ ಶಾಕ್ ಆಯಿತು. “ಸುಮ್ಮನೆ ಹೇಗೆ ಹೋಗಬೇಕೆಂದು ಹೇಳಿದ್ದರೆ ಸಾಕಿತ್ತಲ್ಲಾ ನೀವೇ ಯಾಕೆ ಬಂದಿರಿ?” ಎಂದು ಕೇಳಿದಾಗ ಆಕೆ ಹೇಳಿದ್ದು “ನಿಮ್ಮನ್ನು ನೋಡಿದರೆ ನೀವೊಬ್ಬ ʻಕಂಪಾಶನೇಟ್ ಮ್ಯಾನ್ʼ ಯೋಗಿ ಕಂಡ ಹಾಗೆ ಕಂಡಿತು, ಅದಕ್ಕೇ ಬಂದೆ, ನಾನೊಬ್ಬಳು ಯೋಗ ಟೀಚರ್” ಎಂದರು! ಆಗ ನಾವು ಹೇಳಿದೆವು “ನಿಜವಾಗಿ ನಿಮ್ಮೊಳಗೇ ಕಂಪಾಶನ್ – ಅನುಕಂಪ- ಇದೆ, ಅದನ್ನು ನೀವು ನಮ್ಮೊಳಗೆ ಕಂಡಿರಿ”

ಯೋಗ ಮೊಟ್ಟಮೊದಲನೆಯದಾಗಿ ನಮಗೆ ಕಲಿಸುವುದು ಅನುಕಂಪವನ್ನೇ. ನಮ್ಮೊಳಗೆ ಅನುಕಂಪ ಇಲ್ಲದಿದ್ದರೆ ನಾವು ಎಷ್ಟೇ ಆಸನ, ಪ್ರಾಣಾಯಾಮ ಮಾಡಿದರೂ ಪ್ರಯೋಜನವಿಲ್ಲ. ಯೋಗ ನಮ್ಮನ್ನು ಸಮತೆಯತ್ತ, ಮಾನವೀಯತೆಯತ್ತ ಕೊಂಡೊಯ್ಯುತ್ತದೆ. ಯೋಗದ ಅಂತಃಸತ್ವವನ್ನು ಅರಿಯದೇ ಕೇವಲ ಡಂಬಾಚಾರದ ವೇಷ ಧರಿಸಿದರೆ ದೇವರು ನಗುತ್ತಾನೆ ಎಂದು ಹಾವಿನಾಳು ಕಲ್ಲಯ್ಯ ಶರಣರು ಎಚ್ಚರಿಸಿದ್ದಾರೆ.

ಯೋಗ ಅಂತಾರಾಷ್ಟ್ರೀಯ ಬ್ರಾಂಡ್!

ಆದರೆ ಇಂದಿನ ಆಧುನಿಕ ಯುಗದಲ್ಲಿ ನಾವು ಯೋಗವನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಇದಕ್ಕೆ ಒಂದು ರೀತಿಯ ನಿರ್ಲಕ್ಷ್ಯ ಅಥವಾ ಉದಾಸೀನ ಕಾರಣವಾಗಿದೆ. ನಮ್ಮ ಹಳೆಯ ಜ್ಞಾನವೆಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ನಾವು ಕೆಟ್ಟದರ ಜೊತೆಗೆ ಒಳ್ಳೆಯದನ್ನೂ ಎಸೆದುಬಿಡುತ್ತಿದ್ದೇವೆ. ಯೋಗದ ಬಗೆಗಿನ ಈ ಉದಾಸೀನತೆಯನ್ನು ನಿವಾರಿಸಲೆಂದೇ ನಾವು ಬೆಂಗಳೂರಿನಲ್ಲಿ ಶ್ವಾಸಯೋಗ ಕೇಂದ್ರವನ್ನು ಸ್ಥಾಪಿಸಿ ಯೋಗವನ್ನು ಜನಪ್ರಿಯಗೊಳಿಸಲು ಪ್ರಾರಂಭಿಸಿದೆವು. ಯೋಗಥಾನ್ ಗಳು, ಯೋಗ ಶಿಬಿರಗಳು, ಯೋಗ ರಥಯಾತ್ರೆಗಳು ಸಾವಿರಾರು, ಲಕ್ಷಾಂತರ ಜನರು ಯೋಗಕ್ಕೆ ಆಕರ್ಷಿತರಾಗುವಂತೆ ಮಾಡಿದವು. ಇಂದು ಯೋಗ ಎನ್ನುವುದು ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿದೆ. ಯುವಜನತೆ  ಯೋಗದತ್ತ ಮುಖ ಮಾಡುವಂತಾಗಿದೆ.

ಯೋಗವು ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿ ಇಡುವುದರಿಂದ ಅದನ್ನು ಯಾವುದೇ ಭೇದ ಭಾವ ಇಲ್ಲದೆ ಸಕಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ, ಮತ, ಧರ್ಮ, ವರ್ಗ, ಲಿಂಗ, ವಯಸ್ಸು ಇತ್ಯಾದಿ ಮಿತಿಗಳನ್ನು ಮೀರಿ ಯೋಗ ಜನರನ್ನು ಒಂದುಗೂಡಿಸುತ್ತದೆ. ಪ್ರತಿದಿನ ಯೋಗಾಭ್ಯಾಸ ಮಾಡಿದರೆ ಅದರ ಪರಿಣಾಮ ಅದ್ಭುತ. ವಾರದಲ್ಲಿ ಒಂದು ದಿನ ಯೋಗ ಮಾಡಿದರೆ ನಿಮ್ಮ ಮನಸ್ಸು ಬದಲಾಗುತ್ತದೆ. ವಾರದಲ್ಲಿ ಎರಡು ಬಾರಿ ಯೋಗ ಮಾಡಿದರೆ ದೇಹದ ಸ್ಥಿತಿಯೇ ಬದಲಾಗುತ್ತದೆ. ಪ್ರತಿನಿತ್ಯ ಯೋಗ ಮಾಡಿದರೆ ಅದು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಯೋಗವೆಂದರೆ ಬೆಸೆಯುವುದು!

vachananda swamiji

ಯೋಗ ಅನುಕಂಪವನ್ನು ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿಸುವುದು. ಯೋಗ ಮತ್ತು ಧ್ಯಾನ ನಮ್ಮನ್ನು ದೈವತ್ವದೆಡೆಗೆ ಸಾಗಲು ಪ್ರೇರೇಪಿಸುತ್ತದೆ.  ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಬೆಸೆಯುವುದೇ ಯೋಗ. ಸರಳವಾಗಿ ವಿವರಿಸಬೇಕೆಂದರೆ, ಪುರುಷ ಮತ್ತು ಪ್ರಕೃತಿ ಎನ್ನುವ ಎರಡು ದ್ವಂದ್ವಗಳು, ಜೀವದಲ್ಲಿ ಸಾಕ್ಷಿ ಪ್ರಜ್ಞೆ ಮತ್ತು ಸಂಯಮ ರೂಪದಲ್ಲಿ ಸಂಯೋಜಿತವಾಗಿರುತ್ತದೆ. ಇವು ಹಲವು ಕಾರಣಗಳಿಂದ ಸಮತೋಲನವನ್ನು ಕಳೆದುಕೊಂಡಾಗ ಅಜ್ಞಾನದ ಸ್ಥಿತಿ ಉಂಟಾಗಿ ಬದುಕು ಭಾರವಾಗುತ್ತದೆ. ಯೋಗದ ಮೂಲಕ ಈ ಅಸಮತೋಲನ ಅಥವಾ ಅಜ್ಞಾನದ ಸ್ಥಿತಿಯನ್ನು ನಿವಾರಿಸಿಕೊಂಡಾಗ ಬಿಡುಗಡೆ ಅಥವಾ ಮೋಕ್ಷ ಪ್ರಾಪ್ತವಾಗುತ್ತದೆ. ಇದನ್ನೇ ಯೋಗದ ಬೆಳಕು ಅನ್ನುತ್ತಾರೆ. ಅದು ನಮ್ಮೊಳಗೆ ಪ್ರವಹಿಸಿ ಆತ್ಮಶುದ್ಧಿ ಮಾಡುತ್ತದೆ. ಯೋಗದ ಬೆಳಕಲ್ಲಿ ನಡೆದರೆ ದೇಹ ಮತ್ತು ಮನಸ್ಸು ಎರಡೂ ಶುದ್ಧಿಯಾಗುತ್ತದೆ, ಆನಂದ ಪಡೆಯುತ್ತದೆ. ಯೋಗ ಸುಖಾಸುಮ್ಮನೆ ಹುಟ್ಟಿದ್ದಲ್ಲವೇ ಅಲ್ಲ.  ಅದರ ಹುಟ್ಟಿನ ಹಿಂದೆ ಸಮಸ್ತ ಮನುಕುಲದ ಹಿತದ ಉದ್ದೇಶವಿದೆ. 

ಆಲೋಚನೆಗಳು ಮತ್ತು ಪಂಚೇಂದ್ರಿಯಗಳಿಂದ ಕೂಡಿದ ಮನಸ್ಸು ಸ್ಥಬ್ಧವಾದಾಗ ಮತ್ತು ಬುದ್ಧಿ ಅತ್ತಿತ್ತ ಕದಲದೆ ನಿಶ್ಚಲವಾದಾಗ ಅದನ್ನು ಯೋಗ ಎಂದು ಕರೆಯುತ್ತಾರೆ.  ಯೋಗ ಎಂದರೆ ಇಂದ್ರಿಯಗಳ ನಿಶ್ಚಲತೆ, ಮನಸ್ಸಿನ ಏಕಾಗ್ರತೆ. ಅದೊಂದು ಸೃಷ್ಟಿ ಮತ್ತು ವಿಸರ್ಜನೆಯ ಕ್ರಿಯೆ ಎಂದು ಕಠೋಪನಿಷತ್ತಿನಲ್ಲಿ ಹೇಳಿದೆ.

ಪ್ರಾಚೀನ ಕಾಲದಲ್ಲಿ ಸಾಂಖ್ಯ, ನ್ಯಾಯ, ವೈಶೇಷಿಕ, ಮೀಮಾಂಸಾ ಮತ್ತು ವೇದಾಂತ ಎನ್ನುವ ಸಾಂಪ್ರದಾಯಿಕ ತತ್ವಶಾಸ್ತ್ರಗಳ ಅಂಗವಾಗಿ ಯೋಗವೂ ಇತ್ತು, ಅದು  ಪ್ರತ್ಯೇಕ ಶಾಸ್ತ್ರವಾಗಿರಲಿಲ್ಲ. ನಂತರ ಪತಂಜಲಿಯ ಯೋಗ ಸೂತ್ರಗಳಲ್ಲಿ ಒಂದು ವ್ಯವಸ್ಥಿತ ಪದ್ಧತಿ ದಾಖಲಾಗಿದ್ದು, ಯೋಗವು ವ್ಯಕ್ತಿಯಲ್ಲಿ ನೈತಿಕತೆ, ಧನಾತ್ಮಕ ಮೌಲ್ಯಗಳು ವ್ಯಕ್ತಿತ್ವದ ಅಂಗವಾಗಲು ಕಾರಣವಾಗುತ್ತದೆ ಎಂದು ಹೇಳಿದೆ.  ಹಾಗಾಗಿಯೇ ಯೋಗಾಭ್ಯಾಸಿಗಳಿಗೆ ಸಹಜವಾಗಿ ಅನುಕಂಪ ಅಥವಾ ಸಹಾನುಭೂತಿ ಅವರ ವ್ಯಕ್ತಿತ್ವದಲ್ಲಿ ಒಡಗೊಂಡಿರುತ್ತದೆ. ಅದೇ ಮಾನವೀಯತೆಯ ಪ್ರಧಾನ ಲಕ್ಷಣ.

ಚೀನಾದ ತಾಯ್ ಚಿ ಬಗ್ಗೆ ಗೊತ್ತೇ?

ಚೀನಾದೇಶದ ಅತ್ಯಂತ ಪ್ರಾಚೀನ ಯೋಗ ಪದ್ಧತಿ ತಾಯ್ ಚಿ.  ಇದನ್ನು ಚೀನೀಯರು ಆಂತರಿಕ ಸಮರ ಕಲೆ, ಧ್ಯಾನ ಪದ್ಧತಿ ಮತ್ತು ಆರೋಗ್ಯ ಪದ್ಧತಿ ಎಂದು ವರ್ಣಿಸುತ್ತಾರೆ.  ಚೀನೀ ತತ್ವಶಾಸ್ತ್ರದಲ್ಲಿ ಮತ್ತು ಕನ್ಫ್ಯೂಷಿಯನಿಸಂ, ತಾವೊ ತತ್ತ್ವ ಮತ್ತು ಬೌದ್ಧಧರ್ಮದಲ್ಲಿ ಈ ಪದ ಬಳಕೆಯಲ್ಲಿದೆ.  ಒಂದು ಕುತೂಹಲಕಾರಿ ವಿಷಯವೆಂದರೆ ಇಲ್ಲಿಯೂ ಯಿನ್ ಮತ್ತು ಯಾಂಗ್ ಎನ್ನುವ ಎರಡು ಪರಿಕಲ್ಪನೆಗಳು – ನಮ್ಮ ಪುರುಷ ಮತ್ತು ಪ್ರಕೃತಿಗೆ ಸಮಾನಾಂತರವಾಗಿ-  ಚಲನೆ ಮತ್ತು ಸ್ಥಿರತೆಯ ಪ್ರತೀಕವಾಗಿದೆ.  ಇದೇ ದೇಹ ಮತ್ತು ಆತ್ಮದ ಕೂಡುವಿಕೆಗೆ ಸಂಬಂಧಪಟ್ಟಿದ್ದು. ಯೋಗ ಎನ್ನುವ ಪದ ನಿಷ್ಪತ್ತಿಯೂ ಕೂಡುವುದನ್ನೇ ಸೂಚಿಸುತ್ತದೆ.

ಯೋಗಕ್ಕೆ ಸಂಬಂಧಿಸಿದ ವಿವಿಧ ಲೇಖನಗಳನ್ನು ಓದಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ತಾಯ್ ಚಿ ಅನ್ನು ಇಲ್ಲಿ ಪ್ರಸ್ತಾಪಿಸುವುದರ ಕಾರಣವೇನೆಂದರೆ, ಈ ಪುರಾತನ ಯೋಗ ಪದ್ಧತಿಯನ್ನು ಕಮ್ಯುನಿಸ್ಟರು ಸಂಪೂರ್ಣವಾಗಿ ನಾಶ ಮಾಡಿದರು. ಕಮ್ಯುನಿಸಂ ನ ಕ್ರಾಂತಿಯ ಸಮಯದಲ್ಲಿ ಚೀನಾದ ಎಲ್ಲ ಪುರಾತನ ಕಲೆ, ಸಂಸ್ಕೃತಿಯನ್ನು ನಾಶ ಮಾಡಿದ ಹಾಗೇ ತಾಯ್ ಚಿ ಅನ್ನೂ ನಾಶಪಡಿಸಿದರು.  ಆದರೆ ಭಾರತದ ಯೋಗವು ವಿಶ್ವಮಾನ್ಯವಾಗಿ ಗುರುತಿಸಲಾಗಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವಸಂಸ್ಥೆ (ಯುಎನ್‌) ಘೋಷಿಸಿದ ಮೇಲೆ ಮತ್ತು ಜಾಗತಿಕ ಮಟ್ಟದಲ್ಲಿ ಇದರ ಆಚರಣೆ ಪ್ರಾರಂಭವಾದ ಮೇಲೆ ಚೀನೀಯರು ತಾವು ತಮ್ಮ ಯೋಗಪದ್ಧತಿಯನ್ನು ಕಳೆದುಕೊಂಡ ಬಗ್ಗೆ ಪಶ್ಚಾತ್ತಾಪಪಟ್ಟು ಅದನ್ನು ಮತ್ತೆ ಪುನರುಜ್ಜೀವನಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ ತಾಯ್ ಚಿ ಗುರುಗಳೇ ಲಭ್ಯವಿಲ್ಲದೇ ಪರಿತಪಿಸುತ್ತಿದ್ದಾರೆ. ನಾವು ನಮ್ಮ ಯೋಗ ನಿಧಿಯನ್ನು ಕಳೆದುಕೊಳ್ಳದೆ ಕಾಪಾಡಿಕೊಳ್ಳಬೇಕು.

ಈ ಲೇಖನವನ್ನೂ ಓದಿ : yoga day 2022: ದೇಶದಾರೋಗ್ಯಕ್ಕಾಗಿ ನಾವೆಲ್ಲರೂ ಯೋಗ ಮಾಡೋಣ!

ಇಂದಿನ ತಪ್ತ ಮನಸ್ಸುಗಳ ಯುಗದಲ್ಲಿ ಜನರನ್ನು ಸಂತೈಸಲು ಯೋಗ ಅತ್ಯಂತ ಅಗತ್ಯ ಸಾಧನವಾಗಿದೆ. ಮಾನವೀಯತೆ, ಅನುಕಂಪ, ಸಹಾನುಭೂತಿ, ಜೊತೆಗೆ ಆತ್ಮಗೌರವ, ಆತ್ಮವಿಶ್ವಾಸ, ಆರೋಗ್ಯ ಎಲ್ಲವನ್ನೂ ಸುಸ್ಥಿತಿಯಲ್ಲಿಡಲು ಯೋಗ ಕಾರಣವಾಗುತ್ತದೆ. ಯೋಗ ಒಂದು ಕಲೆ. ಅದು ನೈಪುಣ್ಯತೆ. ಅದೊಂದು ತಂತ್ರ. ಅದನ್ನು ಪರಿಣಿತ ಗುರುಗಳ ಪದತಲದಲ್ಲಿ ಕಲಿತಾಗ ಮಾತ್ರ ಸಿದ್ಧಿಸುತ್ತದೆ.

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭ ಹಾರೈಕೆಗಳು.

ಇದನ್ನೂ ಓದಿ : Yoga Day 2023: ವಿಶ್ವವನ್ನೇ ಬೆರಗುಗೊಳಿಸುತ್ತಿರುವ ಯೋಗದ ಇತಿಹಾಸ, ಥೀಮ್, ಆಚರಣೆಯ ಹಿನ್ನೆಲೆ ಏನು?

Exit mobile version