Site icon Vistara News

Yoga For Mental Health: ದೇಹ-ಮನಸ್ಸುಗಳ ಸ್ವಾಸ್ಥ್ಯ ಹೆಚ್ಚಿಸುವ ಯೋಗ

Yoga For Mental Health

ಒತ್ತಡ ನಿವಾರಣೆಗೆ ಅನುಸರಿಸುವ ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತದೆ. ಸಂಗೀತ ಕೇಳುವುದು, ಪುಸ್ತಕ ಓದುವುದು, ಗ್ರೀನ್‌ ಟೀ ಕುಡಿಯುವುದು, ಪ್ರವಾಸ ಹೋಗುವುದು, ಧ್ಯಾನ ಮಾಡುವುದು, ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಇತ್ಯಾದಿ ಮಾರ್ಗಗಳು ಲಾಭದಾಯಕ. ಇದೇ ಸಾಲಿನಲ್ಲಿರುವ ಮತ್ತೊಂದು ಮಾರ್ಗವೆಂದರೆ ಯೋಗ. ಹೌದು, ಮೈ-ಮನಗಳ ಸಮನ್ವಯವನ್ನೇ ಮುಖ್ಯವಾಗಿ ಸಾಧಿಸುವ ಈ ಕ್ರಮವು ದೈಹಿಕ ಚಟುವಟಿಕೆಯೂ ಹೌದು, ಒತ್ತಡ ನಿವಾರಣೆಯ ಉಪಾಯವೂ (Yoga for mental health) ಹೌದು. ನೋವು ನಿವಾರಣೆಗೆ ಜೊತೆಗೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಸುಧಾರಿಸುವಂಥ ಕೆಲವು ಆಸನಗಳು ಇಲ್ಲಿವೆ.

ಸುಖಾಸನ

ಹೆಸರೇ ಹೇಳುವಂತೆ ಸುಖವಾಗಿ ಕುಳಿತುಕೊಳ್ಳುವ ಆಸನವಿದು. ಇಡೀ ದೇಹ ಮತ್ತು ಮನಸ್ಸುಗಳನ್ನು ಒತ್ತಡ ರಹಿತವಾಗಿ (Yoga for mental health) ಇರುವಂತೆ ಪ್ರೇರೇಪಿಸುವುದು ಈ ಆಸನದ ಉದ್ದೇಶ. ನಿತ್ಯ ಬಳಕೆಯ ಹೊರತಾಗಿ, ಪ್ರಾಣಾಮಾಮ ಮತ್ತು ಧ್ಯಾನದಂಥ ಚಟುವಟಿಕೆಗಳಿಗೆ ಸೂಕ್ತವಾದ ಆಸನವಿದು.

ಸೇತುಬಂಧಾಸನ

ದೇಹಕ್ಕೆ ಬಲ ನೀಡುವುದು ಮಾತ್ರವಲ್ಲದೆ, ಶರೀರದ ಸಮನ್ವಯವನ್ನೂ ಈ ಆಸನ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಯಾವುದೇ ‌ʻಬ್ರಿಜ್ ಪೋಸ್ʼ ಎಂದು ಕರೆಸಿಕೊಳ್ಳುವಂಥ ಆಸನಗಳು ಕಾಲಿನಿಂದ ಹಿಡಿದು ಕುತ್ತಿಗೆಯವರೆಗಿನ ನಾನಾ ಭಾಗಗಳ ಬಲವನ್ನು ಹೆಚ್ಚಿಸುತ್ತವೆ. ಎರಡೂ ಪಾದಗಳನ್ನು ಊರಿ ನೆಲಕ್ಕೆ ಒತ್ತಿ, ಮುಂಡದ ಭಾಗವನ್ನು ಮೇಲಕ್ಕೆತ್ತುವ ಈ ಆಸನ ರಕ್ತಪರಿಚಲನೆಯನ್ನೂ ಸುಧಾರಿಸುತ್ತದೆ.

Dhanurasana

ಪಶ್ಚಿಮೋತ್ತಾಸನ

ಕುಳಿತು ಮುಂಬಾಗಿ ಪಾದ ಮುಟ್ಟುವ ಆಸನವಿದು. ಇದೂ ಸಹ ರಕ್ತ ಪರಿಚಲನೆಯನ್ನು ವೃದ್ಧಿಸಿ ಹೃದಯದ ಆರೋಗ್ಯ ಸುಧಾರಿಸುತ್ತದೆ ಎನ್ನುವುದು ಯೋಗಾಸಕ್ತರ ಮಾತು. ದೇಹ ಬಿಗಿಯಾಗಿದ್ದರೆ ಈ ಆಸನಗಳು ಕಷ್ಟ ಎನ್ನುವುದು ಹೌದಾದರೂ, ಇವುಗಳನ್ನು ಅಭ್ಯಾಸ ಮಾಡುತ್ತಲೇ ಕ್ರಮೇಣ ದೇಹ ಸಡಿಲವಾಗುತ್ತದೆ. ಒತ್ತಡ ನಿವಾರಣೆ ಮಾಡುವುದೇ ಅಲ್ಲದೆ ಶರೀರದ ರೋಗನಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಕಾಲು ಚಾಚಿ ಕುಳಿತು, ನಿಧಾನಕ್ಕೆ ಮುಂದೆ ಬಾಗಬೇಕು, ಕುತ್ತಿಗೆಯಿಂದಲ್ಲ, ಕಟಿಯ ಭಾಗದಿಂದ ಮುಂಬಾಗುವುದು ಸರಿಯಾದ ಕ್ರಮ. ಬಾಗುತ್ತಾ ಕೈಯಿಂದ ಪಾದಗಳನ್ನು ಹಿಡಿಯುವಷ್ಟು ಬಾಗುವುದು ಜೊತೆಗೆ ಕಿಬ್ಬೊಟ್ಟೆಯನ್ನು ತೊಡೆಗಳಿಗೆ ತಾಗಿಸುವುದು ಇದರ ಕ್ರಮ.

ಅಧೋಮುಖಾಸನ

ಇದನ್ನು ಅಧೋಮುಖ ಶ್ವಾನಾಸನ ಎಂದೂ ಕರೆಯಲಾಗುತ್ತದೆ. ಇದು ಸಹ ಮುಂದೆ ಬಾಗಿ ಮಾಡುವಂಥ ಆಸನವೇ. ಶರೀರ ಮತ್ತು ಮನಸ್ಸುಗಳನ್ನು ನಿಧಾನವಾಗಿ ಒತ್ತಡರಹಿತ ಸ್ಥಿತಿಗೆ ನೂಕುತ್ತದೆ ಈ ಭಂಗಿ. ಬೆನ್ನು ನೋವು ಅಥವಾ ಸಯಟಿಕಾ ನೋವುಗಳನ್ನು ಕ್ರಮೇಣ ಕಡಿಮೆ ಮಾಡುವ ಸಾಮರ್ಥ್ಯ ಈ ಭಂಗಿಗಿದೆ. ಸ್ನಾಯುಗಳ ಬಲವರ್ಧಿಸಿ, ಶರೀರದ ಸಮತೋಲನ ಕಾಪಾಡುವ ಭಂಗಿಯಿದು.

ಮಾರ್ಜರಿಯಾಸನ

ಬೆನ್ನುಹುರಿಯನ್ನು ಸಡಿಲ ಮಾಡಿ, ಶಕ್ತಿವರ್ಧಿಸುವ ಆಸನವಿದು. ಇದನ್ನು ಅಭ್ಯಾಸ ಮಾಡುವುದರಿಂದ ಇಡೀ ಮುಂಡದ ಭಾಗ, ಕುತ್ತಿಗೆ, ಭುಜಗಳ ಬಲ ಹೆಚ್ಚುತ್ತದೆ. ಮೊದಲಿಗೆ ನಿಂತಿರುವಂಥ ಬೆಕ್ಕಿನ ಭಂಗಿಯಲ್ಲಿ, ಅಂದರೆ ಅಂಬೆಗಾಲಿಡುವ ಮಗುವಿನ ಭಂಗಿಗೆ ಬಂದು, ಉಸಿರೆಳೆದುಕೊಳ್ಳುತ್ತಾ ಮೇಲೆ ನೋಡಬೇಕು. ಜೊತೆಗೆ ಬೆನ್ನುಹುರಿ ಮತ್ತು ಹೊಟ್ಟೆಯನ್ನು ಕೆಳಗೆ ತಳ್ಳಬೇಕು. ಉಸಿರನ್ನು ಹೊರಗೆ ಬಿಡುವಾಗ, ಗಲ್ಲವನ್ನು ಎದೆಯತ್ತ ತಂದು, ಇಡೀ ಬೆನ್ನು ಮೂಳೆಯನ್ನು ಬಾಗಿಸಿ ಹಿಗ್ಗಿಸಬೇಕು.

ಧನುರಾಸನ

ಈ ಆಸನ ಮಾಡುವ ಲಾಭಗಳು ಬಹಳಷ್ಟಿವೆ. ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆ ಮತ್ತು ತೊಡೆಗಳು ಬೊಜ್ಜು ನಿವಾರಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ಶಮನ ಮಾಡುತ್ತದೆ. ಮುಟ್ಟಿನ ಹೊಟ್ಟೆ ನೋವಿನ ಉಪಶಮನಕ್ಕೂ ಇದು ಉಪಯುಕ್ತವಾಗಿದೆ. ಬೆನ್ನು ಮತ್ತು ಸೊಂಟದ ಬಲವರ್ಧನೆಗೂ ಇದು ಸಹಾಯಕ. ಮೊದಲಿಗೆ, ಮುಖ ಅಡಿಯಾಗುವಂತೆ ಮಲಗಿ, ಕೈಕಾಲುಗಳನ್ನು ನೇರವಾಗಿ ಚಾಚಬೇಕು. ಕಾಲು ಮಡಿಸಿ, ಗಜ್ಜೆ ಹಾಕುವ ಭಾಗವನ್ನು ಕೈಗಳಿಂದ ಹಿಡಿಯಬೇಕು. ಕಾಲುಗಳನ್ನು ದೇಹದ ಅಗಲಕ್ಕಿಂತ ಹೆಚ್ಚು ಅಗಲ ಇರಿಸುವಂತಿಲ್ಲ. ಈಗ ಕೈಗಳಿಂದ ಕಾಲೆಳೆಯುತ್ತಾ, ಕಾಲುಗಳಿಂದ ಕೈ ಎಳೆಯುತ್ತಾ ಎರಡೂ ಕಾಲುಗಳನ್ನು ಮತ್ತು ಮುಖವನ್ನು ಮೇಲಕ್ಕೆತ್ತಬೇಕು. ನೋಡುವುದಕ್ಕೆ ಬಿಲ್ಲಿನಂತೆ ಬಾಗಿರುವಂತೆ ಕಾಣುತ್ತದೆ ದೇಹ.

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

Exit mobile version