Site icon Vistara News

Yoga For Women: ಮಹಿಳೆಯರಿಗೆ ಯಾವ ಯೋಗಾಸನಗಳು ಸೂಕ್ತ?

Yoga For Women

ಹೀಗೊಂದು ಜಾಬ್ ವಿವರ ಇದೆಯೆಂದಿಟ್ಟುಕೊಳ್ಳಿ…

ಅವಧಿ: ವಾರದಲ್ಲಿ ಏಳು ದಿನ, ಎಚ್ಚರ ಇದ್ದಷ್ಟೂ ಹೊತ್ತು!;
ಕೆಲಸದ ವಿವರ: ಮನೆಯಲ್ಲಿ ಚಾಕರಿ, ಕಚೇರಿಯಲ್ಲಿ ಕೆಲಸ, ಕುಟುಂಬದ ಎಲ್ಲರ ದೇಖರೇಖಿ, ಹಣಕಾಸಿನ ನಿರ್ವಹಣೆ, ಹಾಸ್ಪಿಟಾಲಿಟಿಯ ಹೊಣೆ, ಶಿಶುಪಾಲನೆ ಮತ್ತು ಈ ಪಟ್ಟಿ ಅಗತ್ಯಕ್ಕೆ ತಕ್ಕಂತೆ ಮುಂದುವರಿಯುತ್ತದೆ!
ಬೇಕಾದ ಕೌಶಲ್ಯಗಳು: ಸಂಘರ್ಷ ನಿವಾರಣೆ ಮತ್ತು ಸಂಧಾನದ ಸಾಮರ್ಥ್ಯ, ಸೂಪಶಾಸ್ತ್ರ ನಿಪುಣತೆ, ಆಪ್ತ ಸಮಾಲೋಚನೆಯ ಕೌಶಲ್ಯ, ಹಣಕಾಸಿನ ದೂರದೃಷ್ಟಿ, ಸಂಬಂಧ ಸುಧಾರಣಾ ಕುಶಲತೆ ಇತ್ಯಾದಿ

ಈ ಜಾಬ್ ನ ಹೆಸರು ಉದ್ಯೋಗಸ್ಥ ಮಹಿಳೆ! ಇದೀಗ ಉದ್ಯೋಗಸ್ಥ ಮಹಿಳೆಯರೇ ಈ ಪರಿಸ್ಥಿತಿಯಲ್ಲಿ ಇರಬೇಕೆಂದಿಲ್ಲ. ಹೋಮ್ ಮೇಕರ್ ಗಳ ಒದ್ದಾಟ ಇದಕ್ಕಿಂತ ಕಡಿಮೆಯದ್ದು ಎಂದು ಭಾವಿಸಕೂಡದು. ಎಲ್ಲರಿಗೂ, ಎಲ್ಲದಕ್ಕೂ ಸಮಯ ನೀಡುವ ಭರದಲ್ಲಿ ತಮ್ಮ ಸ್ವಾಸ್ಥ್ಯಕ್ಕೇ ಸಮಯವಿಲ್ಲದೆ ಒದ್ದಾಡುವುದು ಮಹಿಳೆಯರ (Yoga for Women) ಪಾಲಿನ ಸತ್ಯ.

ನಸುಕಿಗೆ ಏಳುತ್ತಿದ್ದಂತೆ ಯಾಕಾದ್ರೂ ಬೆಳಗಾಯಿತೋ ಎಂಬ ಭಾವ, ಬೆಂಬಿಡದೆ ಕಾಡುವ ಸುಸ್ತು, ದೇಹದೆಲ್ಲೆಲ್ಲೋ ನೋವುಗಳು, ಆಗಾಗ ಕಾಣೆಯಾಗುವ ಉತ್ಸಾಹ, ಬದುಕಬೇಕಲ್ಲಾ ಎಂಬ ಉದಾಸೀನತೆ- ಇವೆಲ್ಲಾ ಯಾವುದೇ ವಯಸ್ಸಿನ ಮಹಿಳೆಯರನ್ನು ಅಮರಿಕೊಳ್ಳಬಹುದು. ಇದರರ್ಥ ಸರಳ, ಅವರು ಒತ್ತಡದಿಂದ ಬಳಲುತ್ತಿದ್ದಾರೆ.

ಹಾಗೆಂದು ಇದೇ ಬದುಕಿನ ಅನಿವಾರ್ಯತೆಯೆಂದು ಭಾವಿಸಬೇಕಿಲ್ಲ. ಯೋಗ, ಧ್ಯಾನ, ಪ್ರಾಣಾಯಾಮದಂಥ ಸ್ವಾಸ್ಥ್ಯ ನಿರ್ವಹಣೆಯ ಕೌಶಲ್ಯಗಳ ಮೂಲಕ ಮಹಿಳೆಯರು ತಮ್ಮ ಬದುಕಿನ ಗುಣಮಟ್ಟವನ್ನು ನಿಶ್ಚಿತವಾಗಿಯೂ ಸುಧಾರಿಸಿಕೊಳ್ಳಬಹುದು. ತಮ್ಮ ಒತ್ತಡದ ಬದುಕಿಗೆ ಬೇಕಾದ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೊಂದುವುದಕ್ಕೆ ಸಾಧ್ಯವಿದೆ. ಲೋಕದೆಲ್ಲರಿಗೂ ಕಾಳಜಿ ತೋರುವ ಮಹಿಳೆಯರು (Yoga for Women) ತಮ್ಮ ಬಗ್ಗೆಯೂ ಕಾಳಜಿ ತೋರಿಸಿಕೊಳ್ಳುವುದು ಅಗತ್ಯವಲ್ಲವೇ?

ಮಹಿಳೆಯರ ಅಗತ್ಯಗಳಿಗೆ ತಕ್ಕಂತೆ ಯೋಗಾಸನಗಳನ್ನು ಸೂಕ್ತ ಗುರುಗಳ ಮುಖೇನ ಆಯ್ದು ಮಾಡಬಹುದು. ಅಂದರೆ, ಉದ್ಯೋಗಸ್ಥ ಮಹಿಳೆಯರಿಗೆ, ಗರ್ಭಿಣಿಯರಿಗೆ, ರಜೋನಿವೃತ್ತಿಯಲ್ಲಿರುವ ಸ್ತ್ರೀಯರಿಗೆ- ಅವರವರ ಮಾನಸಿಕ ಮತ್ತು ದೈಹಿಕ ಅಗತ್ಯಕ್ಕೆ ತಕ್ಕಂತೆ ಯೋಗ ಭಂಗಿಗಳನ್ನು, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡುವುದು ಉಪಯುಕ್ತ.

ಉದ್ಯೋಗಸ್ಥ ಮಹಿಳೆಯರಿಗೆ

ಕಚೇರಿಯಲ್ಲಿ ಕುಳಿತಲ್ಲೇ ಕುತ್ತಿಗೆ, ಭುಜ, ಮಣಿಕಟ್ಟು ಮತ್ತು ಪಾದಗಳನ್ನು ವೃತ್ತ ಮತ್ತು ಪರಿವೃತ್ತದ ದಿಸೆಗಳಲ್ಲಿ ತಿರುಗಿಸುವುದು ಅಗತ್ಯ. ಕಣ್ಣಿನ ವ್ಯಾಯಾಮವೂ ಒತ್ತಡ ನಿವಾರಣೆಗೆ ಸಹಕಾರಿ. ಚೆನ್ನಾಗಿ ನೀರು ಕುಡಿಯಿರಿ. ಸಾಧ್ಯವಿರುವಲ್ಲೆಲ್ಲ ನಡೆಯಿರಿ, ಅಂದರೆ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಬಹುದೇ ನೋಡಿ. ಮೊಬೈಲ್ ನಲ್ಲಿ ಮಾತಾಡುವಾಗ ನಡೆಯುತ್ತಿರಲು ಸಾಧ್ಯವೇ ಪ್ರಯತ್ನಿಸಿ. ನಡುವೆ ವಿರಾಮ ತೆಗೆದುಕೊಳ್ಳಿ. ಈ ವಿರಾಮದ ಸಮಯದಲ್ಲಿ ನಾಡಿಶೋಧನದಂಥ ಪ್ರಾಣಾಯಾಮಗಳು ಅಥವಾ ಸರಳ ಧ್ಯಾನದ ತಂತ್ರಗಳು ಆಯಾಸ ಪರಿಹರಿಸಬಲ್ಲವು. ಮನೆಯಲ್ಲಿ ೨೦ ನಿಮಿಷಗಳ ಯೋಗಾಭ್ಯಾಸ- ಸೂರ್ಯನಮಸ್ಕಾರದಿಂದ ಆರಂಭಿಸಿ ನಿಂತು, ಕುಳಿತು ಮತ್ತು ಮಲಗಿ ಮಾಡುವ ಎರಡೆರಡು ಭಂಗಿಗಳು ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ಇವುಗಳನ್ನು ನಿಯಮಿತವಾಗಿ ಮಾಡುವುದು ಬದುಕಿನ ಮಟ್ಟವನ್ನೇ ಉನ್ನತಿಗೇರಿಸಬಲ್ಲವು..

ಗರ್ಭಿಣಿಯರಿಗೆ

ಈ ನವಮಾಸಗಳು ಮಹಿಳೆಯರ ಬದುಕಿನ ಮಹತ್ವದ ಹಂತಗಳು. ಇವು ಮಹಿಳೆಯರ ಬದುಕಿಗಷ್ಟೇ ಅಲ್ಲ, ಇಡೀ ಕುಟುಂಬಕ್ಕೇ ನಿರೀಕ್ಷೆಯ ಮಾಸಗಳು. ಹಾಗಾಗಿ ಮೊದಲಿಗೆ ಯೋಗ ಮಾಡುವುದು ಆಯಾ ಗರ್ಭಿಣಿಯ ಆರೋಗ್ಯಕ್ಕೆ ಸೂಕ್ತವೇ ಎಂಬುದನ್ನು ವೈದ್ಯರಲ್ಲಿ ದೃಢಪಡಿಸಿಕೊಳ್ಳಬೇಕು. ಆನಂತರ ಅನುಭವಿ ಯೋಗ ಶಿಕ್ಷಕರ ಮಾರ್ಗದರ್ಶನ ಪಡೆಯುವುದು ಸರಿಯಾದ ಮಾರ್ಗ.

ಮೊದಲಿನ ಮೂರು ತಿಂಗಳು ನಿಂತು ಮಾಡುವ ಆಸನಗಳು ಬೇಕಾಗುತ್ತವೆ. ಇದರಿಂದ ಕಾಲುಗಳ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ ಯಾವುದೇ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಭಂಗಿಗಳು ಗರ್ಭಿಣಿಯರಿಗೆ ಸೂಕ್ತವಲ್ಲ. ತಿರುಗುವ ಆಸನಗಳು ಶರೀರದ ಮೇಲಿನ ಭಾಗಗಳಿಗೇ ಹೊರತು ಕಿಬ್ಬೊಟ್ಟೆ ಮತ್ತು ಕಟಿಯ ಭಾಗಕ್ಕಲ್ಲ. ತಲೆಕೆಳಗು ಮಾಡುವ ಆಸನಗಳು ಸಹ ಗರ್ಭಿಣಿಯರಿಗೆ ಸಲ್ಲದು.

ಯಾವುದು ಸೂಕ್ತ?

ವಜ್ರಾಸನ, ತಾಡಾಸನ, ಬದ್ಧಕೋನಾಸನ, ವೀರಭದ್ರಾಸನ, ಮಾರ್ಜರಿಯಾಸನ, ಶವಾಸನ, ಯೋಗನಿದ್ರೆ ಮುಂತಾದವು ಗರ್ಭಿಣಿಯರಿಗೆ ಹಿತವಾದ ಭಂಗಿಗಳು.

ದೀರ್ಘ ಉಸಿರಾಟದಿಂದಲೂ ಬಹಳಷ್ಟು ಪ್ರಯೋಜನವಿದೆ ಭಾವೀ ತಾಯಂದಿರಿಗೆ. ಕಡೆಯ ಮೂರು ತಿಂಗಳುಗಳಲ್ಲಿ ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಯೋಜನ ಕಾಣಬಹುದು. ಆದರೆ ಭಸ್ತ್ರಿಕಾ, ಕಪಾಲಭಾತಿಯಂಥ ಉಸಿರಾಟದ ಕ್ರಮಗಳನ್ನು ಈ ದಿನಗಳಲ್ಲಿ ಮಾಡದಿದ್ದರೆ ಒಳಿತು. ಬದಲಿಗೆ, ನಾಡಿಶೋಧನ ಮತ್ತು ಭ್ರಾಮರಿಯಂಥ ಪ್ರಾಣಾಯಾಮ, ಧ್ಯಾನ ಮುಂತಾದವು ಗರ್ಭಿಣಿಯರಿಗೆ ಸೂಕ್ತವಾದದ್ದು.

ಋತುಮತಿಯಾಗಿರುವ ಸ್ತ್ರೀಯರಿಗೆ

ಈ ದಿನಗಳಲ್ಲಿ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಸ್ಥರಗಳಲ್ಲಿ ಮಹಿಳೆಯರು ಮಹತ್ವದ ಬದಲಾವಣೆಗೆ ಒಳಗಾಗುತ್ತಾರೆ. ವಯಸ್ಸು, ದೇಹ, ಶಕ್ತಿ, ತಾರುಣ್ಯ ಎಲ್ಲವೂ ಕಳೆದುಹೋದಂತಹ ಭಾವನೆ ಬರುವುದು ಹಾರ್ಮೋನ್ ವ್ಯತ್ಯಾಸದಿಂದ. ಈ ದಿನಗಳಲ್ಲೂ ಒಂದಿಷ್ಟು ಯೋಗಭಂಗಿಗಳು ಬದುಕು ಬದಲಿಸುವುದಕ್ಕೆ ನೆರವಾಗಬಲ್ಲವು.

ಯಾವುದು ಸೂಕ್ತ?

ತಾಡಾಸನ, ಹಸ್ತಪಾದಾಸನ, ತ್ರಿಕೋಣಾಸನ, ಬದ್ಧಕೋನಾಸನ, ವೃಕ್ಷಾಸನ, ಪದ್ಮಾಸನ, ಭುಜಂಗಾಸನ, ಪವನಮುಕ್ತಾಸನ ಇತ್ಯಾದಿ ಭಂಗಿಗಳು ಸೂಕ್ತವಾದವು. ನಾಡಿಶೋಧನ, ಕಪಾಲಭಾತಿ, ಭ್ರಾಮರಿಯಂಥ ಪ್ರಾಣಾಯಾಮಗಳು ಮತ್ತು ಧ್ಯಾನ ಅಗತ್ಯವಾಗಿ ಬೇಕಾದವು.

ಇದನ್ನೂ ಓದಿ: Men’s Health After 40: 40ರ ನಂತರ ಪುರುಷರ ಆರೋಗ್ಯ ಕಾಳಜಿ ಹೀಗಿರಲಿ

Exit mobile version