ನಮ್ಮ ದೇಹಕ್ಕೆ ಅಗತ್ಯವಾದ ಖನಿಜಾಂಶಗಳ ಪೈಕಿ ಕ್ಯಾಲ್ಶಿಯಂಗೆ ಬಹುಮುಖ್ಯ ಸ್ಥಾನ. ಅದರಲ್ಲೂ ಮಹಿಳೆಯರ ಆರೋಗ್ಯದಲ್ಲಿ ಕ್ಯಾಲ್ಶಿಯಂನ ಪಾತ್ರ ಇನ್ನೂ ಮಹತ್ವದ್ದು. ಈ ಕ್ಯಾಲ್ಶಿಯಂ ಅನ್ನು ಪಡೆಯಲು ನಾವು ನಿತ್ಯವೂ ಹಾಲು, ಮೊಸರು, ಮೊಟ್ಟೆ ಇತ್ಯಾದಿಗಳನ್ನು ಸೇವಿಸುತ್ತೇವೆ ಎಂಬುದು ನಿಜವೇ ಆದರೂ, ಕೇವಲ ಇವಿಷ್ಟೇ ನಮ್ಮ ನಿತ್ಯದ ಅಗತ್ಯ ಪೂರೈಸಲು ಸಾಕಾಗುವುದಿಲ್ಲ ಎಂಬುದೂ ನಿಜ. ಬೇರೆಬೇರೆ ಆಹಾರದ ಮೂಲಗಳಿಂದ ಕ್ಯಾಲ್ಶಿಯಂ ದೊರೆಯುತ್ತದಾದರೂ, ಮಹಿಳೆಯರು ಕ್ಯಾಲ್ಶಿಯಂನಿಂದ ಸಮೃದ್ಧವಾದ ಆಹಾರದ ಬಗ್ಗೆ ತಿಳಿದುಕೊಂಡು ಅವುಗಳ ಸೇವನೆ ಮಾಡಬೇಕು. ಯಾಕೆಂದರೆ, ನಮ್ಮ ದೇಹಕ್ಕೆ ನೈಸರ್ಗಿಕವಾಗಿ ಪೋಷಕಾಂಶಗಳು ಸಿಗುವುದು ಬಹಳ ಮುಖ್ಯ. ಇಲ್ಲವಾದರೆ, ಮಹಿಳೆಯರಿಗೆ ನಲುವತ್ತು ದಾಟುವಷ್ಟರಲ್ಲಿ ಮೂಳೆ ಸಂಬಂಧೀ ಸಮಸ್ಯೆಗಳಷ್ಟೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಹಾಗಾದರೆ ಬನ್ನಿ, ಯಾವೆಲ್ಲ ಹಣ್ಣುಗಳ ಸೇವನೆ ಮಾಡುವ ಮೂಲಕ ನಾವು ಕ್ಯಾಲ್ಶಿಯಂ ಅನ್ನು ಪಡೆಯಬಹುದು (Benefits Of Eating Fruits) ಎಂಬುದನ್ನು ನೋಡೋಣ.
ಆಪ್ರಿಕಾಟ್
ಹೌದು, ಆಪ್ರಿಕಾಟ್ ಹಣ್ಣನ್ನು ನಾವು ದಕ್ಷಿಣ ಭಾರತೀಯರು ನಿತ್ಯವೂ ಬಳಸುವುದು ಕಡಿಮೆ. ಇದು ನಮಗೆ ತೀರಾ ಎಲ್ಲರಿಗೂ ಚಿರಪರಿಚಿತ ಹಣ್ಣಲ್ಲವಾದರೂ ಈಗ ಈ ಹಣ್ಣನ್ನು ಖರೀದಿಸುವುದು ದೊಡ್ಡ ವಿಚಾರವೇನಲ್ಲ. ಮಾರುಕಟ್ಟೆಯಲ್ಲಿ ಈಗ ಎಲ್ಲವೂ ಲಭ್ಯವಿರುತ್ತದೆ. ಇಂತಹ ಆಪ್ರಿಕಾಟ್ ಹಣ್ಣಿನಲ್ಲಿ ಕ್ಯಾಲ್ಶಿಯಂ ಶ್ರೀಮಂತವಾಗಿದೆಯಂತೆ. ಆಗಾಗ ಆಪ್ರಿಕಾಟ್ ಹಣ್ಣನ್ನು ಸಲಾಡ್‌ಗಳಲ್ಲಿ, ಬೆಳಗಿನ ಉಪಹಾರದಲ್ಲಿ, ಬಳಸುತ್ತಿದ್ದರೆ, ದೇಹಕ್ಕೆ ಬೇಕಾದ ಪೋಷಣೆ ಇದರಿಂದ ಲಭ್ಯ.
ಕಿವಿ
ಅಯ್ಯೋ ಹುಳಿ ಎಂದು ಕಿವಿಯ ಬಗ್ಗೆ ನಿರ್ಲಕ್ಷ್ಯ ತೋರದಿರಿ. ಕಿವಿ ಎಂಬ ಹಣ್ಣು ಕೇವಲ ವಿಟಮಿನ್ ಸಿಯಿಂದ ಮಾತ್ರ ತುಂಬಿಕೊಂಡಿದೆ ಎಂದು ನೀವು ಅಂದುಕೊಂಡರೆ ಅದು ಮೂರ್ಖತನ. ಕಿವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಇರುವಂತೆ ಕ್ಯಾಲ್ಶಿಯಂ ಕೂಡಾ ಇದೆ. ಇದರಲ್ಲಿ 60 ಮಿಲಿಗ್ರಾಂನಷ್ಟು ಕ್ಯಾಲ್ಶಿಯಂ ಇರುವುದರಿಂದ ಆಗಾಗ ನಿಮ್ಮ ಆಹಾರದ ಭಾಗವಾಗಿ ಕಿವಿ ಹಣ್ಣನ್ನೂ ತಿನ್ನಿ.
ಕಿತ್ತಳೆ
ಕಿತ್ತಳೆ ಹಣ್ಣು ಎಂದಾಕ್ಷಣ ವಿಟಮಿನ್ ಸಿ ಎಂದುಕೊಂಡರೆ ಹೇಗೆ? ಕಿತ್ತಳೆ ಹಣ್ಣಿನ ನಿಜವಾದ ಮಹತ್ವವವನ್ನು ಅರಿಯದೆ ನಾವು ಇದನ್ನು ಬಳಸುತ್ತಲೇ ಇರುತ್ತೇವೆ. ಇದರಲ್ಲಿ ಹೇರಳವಾಗು ವಿಟಮಿನ್ ಸಿ ಇರುವುದು ಹೌದಾದರೂ, ನಂತರದ ಸ್ಥಾನ ಕ್ಯಾಲ್ಶಿಯಂನದ್ದು.
ಬೆರ್ರಿ ಹಣ್ಣುಗಳು
ಬ್ಲ್ಯಾಕ್‌ಬೆರ್ರಿ, ಸ್ಟ್ರಾಬೆರ್ರಿ, ರಸ್‌ಬೆರ್ರಿ ಹಣ್ಣುಗಳನ್ನು ಬಹುತೇಕರು ಬಳಸುವುದು ಕಡಿಮೆ. ಆದರೆ, ಈ ಹಣ್ಣುಗಳು ಆಯಾ ಋತುಮಾನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವಾಗ ಅವುಗಳನ್ನು ತಿನ್ನುವುದು ಒಳ್ಳೆಯದು. ಯಾಕೆಂದರೆ ಈ ಬೆರ್ರಿ ಹಣ್ಣುಗಳಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಮುಖ್ಯವಾಗಿ ವಿಟಮಿನ್ ಸಿ ಹಾಗೂ ಕ್ಯಾಲ್ಶಿಯಂ ಇವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ.
ಅನಾನಸು
ಅನಾನಸು ಹಣ್ಣು ಅತ್ಯಂತ ಪೋಷಕಾಂಶಗಳಿರುವ ಒಂದು ಸಮೃದ್ಧ ಹಣ್ಣು. ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲವಾದರೂ ಸಾಮಾನ್ಯರು ತಿನ್ನಬೇಕಾದ ಅದ್ಭುತ ರುಚಿಯ ಜ್ಯೂಸಿ ಹಣ್ಣು. ಇದರಲ್ಲಿ ವಿಟಮಿನ್ ಸಿ ಹಾಗೂ ಕ್ಯಾಲ್ಶಿಯಂ ಶ್ರೀಮಂತವಾಗಿದ್ದು, ಖನಿಜಾಂಶ ಹಾಗೂ ಪೋಷಕಾಂಶಗಳಿಂದ ಸಂಪದ್ಭರಿತವಾಗಿದೆ.
ಲಿಚಿ
ಇತರ ಹಣ್ಣುಗಳಿಗೆ ಹಲಿಸಿದರೆ, ಲಿಚಿ ಹಣ್ಣಿನಲ್ಲಿ ಕ್ಯಾಲ್ಶಿಯಂ ಕಡಿಮೆಯೇ ಇರುವುದಾದರೂ, ಇದರಲ್ಲಿರುವ ಎಲ್ಲ ಖನಿಜಾಂಶಗಳು ದೇಹಕ್ಕೆ ಅತ್ಯಂತ ಅಗತ್ಯವಾಗಿರುವಂಥವು.
ಪಪ್ಪಾಯಿ
ಪಪ್ಪಾಯಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರುವುದರಿಂದ ಅಗತ್ಯವಾಗಿ ಸೇವಿಸಲೇಬೇಕಾದ ಹಣ್ಣುಗಳ ಪೈಕಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ನೂರು ಗ್ರಾಂ ಪಪ್ಪಾಯಿಯಲ್ಲಿ 20 ಮಿಲಿಗ್ರಾಂಗಳಷ್ಟು ಕ್ಯಾಲ್ಶಿಯಂ ಇದೆ. ಇದನ್ನು ಹಣ್ಣಾಗಿ ಅಥವಾ ಕಾಯಿಯನ್ನು ಅಡುಗೆಗೆ ಬಳಸಿಯಾದರೂ ಇದರ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಸಿಗುವಂತೆ ಮಾಡಬಹುದು.
ಒಣ ಅಂಜೂರ
ಅಂಜೂರದ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ಕೇವಲ 100 ಗ್ರಾಂ ಹಣ್ಣಿನಲ್ಲಿ 160 ಮಿಲಿಗ್ರಾಂಗಳಷ್ಟು ಕ್ಯಾಲ್ಶಿಯಂ ಇವೆ.
ಪೇರಳೆ
ಪೇರಳೆ ಹಣ್ಣು ಸಾಮಾನ್ಯವಾಗಿ ಎಲ್ಲರ ಮನೆಯಂಗಳದಲ್ಲಿ ಬೆಳೆಯಬಹುದಾದ, ಮಾರುಕಟ್ಟೆಯಲ್ಲೂ ಲಭ್ಯವಿರುವ ಹಣ್ಣು. ಇದರಲ್ಲಿ ಸಾಕಷ್ಟು ಖನಿಜಾಂಶಗಳಿದ್ದು, ಕ್ಯಾಲ್ಶಿಯಂ ಕೂಡಾ ಸಾಕಷ್ಟು ಇದೆ.
ಬಾಳೆಹಣ್ಣು
ಬಾಳೆಹಣ್ಣು ಬಡವರ ಹಣ್ಣು. ಸಾಮಾನ್ಯವಾಗಿ ಎಲ್ಲರ ಕೈಗೆ ಎಟುಕಬಹುದಾದ, ಎಲ್ಲರನ್ನೂ ಹಸಿವೆಯಿಂದ ಪಾರು ಮಾಡುವ ಸುಲಭವಾಗಿ ಸಿಗುವ ಹಣ್ಣು. ಇದರಲ್ಲೂ ಸಾಕಷ್ಟು ಖನಿಜಾಂಶಗಳಿದ್ದು, ಕೊಂಚ ಪ್ರಮಾಣದಲ್ಲಿ ಕ್ಯಾಲ್ಶಿಯಂ ಕೂಡಾ ಇದೆ.
ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುವ ಹಣ್ಣುಗಳು ಕೇವಲ ಕ್ಯಾಲ್ಶಿಯಂ ಕಾರಣಕ್ಕಲ್ಲ, ಇವು ಆರೋಗ್ಯಕರ ಜೀವನಶೈಲಿಯತ್ತ ನಮ್ಮನ್ನು ಕರೆದೊಯ್ಯುವ ಮೂಲಕ ಸಾಕಷ್ಟು ಮುಖ್ಯವೇ ಆಗಿವೆ. ಕೆಲವು ಹಣ್ಣುಗಳಲ್ಲಿ ನೈಸರ್ಗಿಕವಾಗಿ ಸಾಕಷ್ಟು ಸಿಹಿಯ ಅಂಶ ಇರುವುದರಿಂದ ಮಧುಮೇಹಿಗಳಿಗೆ ಒಳ್ಲೆಯದಲ್ಲವಾದರೂ, ಅಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆದುಕೊಂಡು ಸೇವಿಸಿ.
ಇದನ್ನೂ ಓದಿ: Health Tips For Women: ಮಹಿಳೆಯರ ಆರೋಗ್ಯದ ಏರುಪೇರಿಗೂ ಕ್ಯಾಲ್ಶಿಯಂಗೂ ಇದೆ ಸಂಬಂಧ!