Site icon Vistara News

Year Ender 2023: ಯುವ ಜನರಿಗೆ ಈ ವರ್ಷವೂ ಕಾಡಿತು ಹೃದಯಾಘಾತದ ಏಟು

heart attack

ಬಾಲಿವುಡ್‌ ನಟ ಶ್ರೇಯಸ್‌ ತಲ್ಪಾಡೆ (47) ಹೃದಯಾಘಾತಕ್ಕೆ ತುತ್ತಾಗಿ ಈಗ ಚೇತರಿಸಿಕೊಳ್ಳುತ್ತಿರುವ ಸುದ್ದಿಯಿದೆ. ಇತ್ತೀಚಿನ ವರ್ಷಗಳಲ್ಲಿ ಹೀಗೆ ಕಿರಿಯ ವಯಸ್ಸಿನಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಅದೃಷ್ಟವಶಾತ್‌ ಚೇತರಿಸಿಕೊಂಡ, ಕೆಲವು ಸಂದರ್ಭಗಳಲ್ಲಿ ಕೊನೆಯುಸಿರೆಳೆದವರ ಸಂಖ್ಯೆಯಲ್ಲಿ ತೀವ್ರ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ. ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಅವರಿಂದ ಹಿಡಿದು ನಮ್ಮವರೇ ಆದ ಪುನೀತ್‌ ರಾಜಕುಮಾರ್‌ವರೆಗೆ ಹಲವು ಮಂದಿ ಹೀಗೆ ಹಠಾತ್‌ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. 2023ನೇ ಸಾಲಿನಲ್ಲೂ (Year Ender 2023) ಇಂಥ ದುರ್ಘಟನೆಗಳ ಸರಣಿ ಮುಂದುವರಿದಿದೆ. ಪ್ರತಿಯೊಂದು ಇಂಥ ಹೊಸ ಪ್ರಕರಣ ಕೇಳಿಬಂದಾಗಲೂ ಮತ್ತದೇ ಪ್ರಶ್ನೆ- ಹೀಗೇಕಾಗುತ್ತಿದೆ?

ಕಾರಣಗಳು ಹಲವು

ತಜ್ಞ ವೈದ್ಯರುಗಳ ಪ್ರಕಾರ, ಇದಕ್ಕೆ ಹಲವು ಕಾರಣಗಳಿವೆ. ಎಲ್ಲಕ್ಕಿಂತ ಪ್ರಮುಖವಾದದ್ದು ಕರೋನರಿ ಆರ್ಟರಿ ಸಮಸ್ಯೆಗಳು. ದೇಹದಲ್ಲಿ ಕೊಬ್ಬು ಜಮೆಯಾಗಿ ರಕ್ತನಾಳಗಳು ಕಟ್ಟಿಕೊಂಡಾಗ ಆಗುವ ಸಮಸ್ಯೆ. ಇದು ಸಣ್ಣ ವಯಸ್ಸಿನಲ್ಲೇ ಪ್ರಾರಂಭವಾಗಿ, ವಯಸ್ಸು ಏರಿದಂತೆ ಕೊಬ್ಬು ಜಮೆಯಾಗುವುದೂ ಏರುತ್ತಾ ಹೋಗುತ್ತದೆ. ಕೊನೆಗೊಮ್ಮೆ ರಕ್ತನಾಳಗಳು ಕಟ್ಟಿಕೊಂಡಾಗ ಬರೆ ಬೀಳುವುದು ಹೃದಯಕ್ಕೆ. ಆದರೆ ಜೀವನಶೈಲಿಯ ಏರುಪೇರಿನಿಂದಾಗಿ ವಯಸ್ಸಾದ ಮೇಲೆ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ ಚಿಕ್ಕ ವಯೋಮಾನದವರಿಗೇ ಉಸಿರುಗಟ್ಟಿಸುತ್ತಿದೆ.

ಕೆಲವೊಮ್ಮೆ ವಂಶವಾಹಿಗಳು ಕಾರಣವಾಗಿ ಬೇಗನೆ ಹೃದಯದ ಸಮಸ್ಯೆಗಳು ಎದುರಾಗಬಹುದು. ಅಥವಾ ಜನ್ಮಜಾತ ದೋಷಗಳಿದ್ದು, ಪತ್ತೆಯಾಗದೆ ಹೋಗಿರಬಹುದು. ಅದಿಲ್ಲವೇ, ಹೃದಯದ ನೈಸರ್ಗಿಕ ಲಯದಲ್ಲಿ (ರಿದಂ) ಏರುಪೇರಾಗಿ ಹೃದಯಾಘಾತ ಆಗಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ, ಹೃದಯದ ಗೋಡೆಗಳು ಸ್ಥೂಲವಾಗುತ್ತಾ ಹೋಗುತ್ತವೆ. ಈ ಸಮಸ್ಯೆಯೂ ತಪಾಸಣೆಗಳಲ್ಲಿ ಕೆಲವೊಮ್ಮೆ ಪತ್ತೆಯಾಗುವುದಿಲ್ಲ. ಹೀಗಾದರೆ ಹೃದಯದ ಪಂಪ್‌ ಮಾಡುವ ಸಾಮರ್ಥ್ಯ ಕ್ಷೀಣಿಸುತ್ತದೆ. ಇಂಥವರು ತೀವ್ರ ತೆರನಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿದಾಗ ಹೃದಯಾಘಾತ ಸಂಭವಿಸುತ್ತದೆ.

ಜೀವನಶೈಲಿ

ಇದು ಎಲ್ಲಕ್ಕಿಂತ ಪ್ರಮುಖ ಕಾರಣವಾಗಿ ಹೊರಹೊಮ್ಮಿದೆ. ಸರಿಯಾದ ಪ್ರಮಾಣದಲ್ಲಿ ವ್ಯಾಯಾಮ ಇಲ್ಲದಿರುವುದು, ಅತಿಯಾದ ಕೊಬ್ಬಿನ ಆಹಾರಗಳು, ಸಿಕ್ಕಾಪಟ್ಟೆ ಸಂಸ್ಕರಿತ ಆಹಾರಗಳ ಸೇವನೆ, ಬೊಜ್ಜು, ಮಾನಸಿಕ ಒತ್ತಡ, ನಿದ್ದೆಯಿಲ್ಲದಿರುವುದು, ಧೂಮಪಾನ, ಆಲ್ಕೋಹಾಲ್‌ ಸೇವನೆ- ಇವೆಲ್ಲವೂ ಹೃದಯಕ್ಕೆ ಅಳಿಸಲಾಗದ ಬರೆಯನ್ನು ಹಾಕುತ್ತಿವೆ.
ಬೊಜ್ಜು ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳನ್ನೂ ಕಾಡುತ್ತಿದೆ. ಇದರಿಂದ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌ ಹೆಚ್ಚಳದಂಥ ತೊಂದರೆಗಳು ಹೃದಯಕ್ಕೆ ಹೆಚ್ಚಿನ ಭೀತಿಯನ್ನು ಒಡ್ಡುತ್ತಿವೆ. ಇವೆಲ್ಲವಕ್ಕೂ ಕಳಶಪ್ರಾಯವಾಗಿ ಚಟುವಟಿಕೆಯಿಲ್ಲದ ಜಡ ಜೀವನ ಮತ್ತು ಮಾನಸಿಕ ಒತ್ತಡಗಳು ಎಲ್ಲಾ ವಯೋಮಾನದವರನ್ನೂ ಸಾವಿನ ದವಡೆಗೆ ದೂಡುತ್ತಿವೆ. ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತಿರುವುದು, ನಿದ್ದೆಗೆಡುವುದು, ಹಲವು ಕಾರಣಗಳಿಗಾಗಿ ಹೆಚ್ಚುವ ಮಾನಸಿಕ ಒತ್ತಡಗಳ ನಡುವೆ ಎಲ್ಲರ ಹರೆಯವೂ ನಲುಗುತ್ತಿದೆ. ಹೃದಯ ಮುದುಡುತ್ತಿದೆ.

ಏನು ಮಾಡಬೇಕು?

ನಮ್ಮನಮ್ಮ ಬೊಗಸೆಯಲ್ಲಿ ಹಿಡಿಯುವಷ್ಟೇ ಆಹಾರ ನಮಗೆ ದಕ್ಕುವುದು ಎಂಬ ಮಾತಿದೆ. ಅದರಂತೆ ಹೇಳುವುದಾದರೆ, ಆ ಬೊಗಸೆಯಲ್ಲಿ ಗುಜರಿ ತಿನಿಸುಗಳನ್ನು ತುಂಬಿಸುತ್ತೀರೋ ಪೌಷ್ಟಿಕ ಆಹಾರವನ್ನೋ ಎಂಬುದನ್ನು ಆಲೋಚಿಸಿ. ಜೀವನಕ್ಕೊಂದು ಶಿಸ್ತಿರಲಿ. ಕಾಲಕಾಲಕ್ಕೆ ಚಳಿ-ಮಳೆ ಇಲ್ಲದಿದ್ದರೆ ಎಲ್ಲೆಡೆ ಅಸಮತೋಲನ ಆಗುವಂತೆ, ಸರಿಯಾದ ಸಮಯಕ್ಕೆ ಊಟ-ನಿದ್ದೆ ಮಾಡುವುದು ಅಗತ್ಯ.

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ

ಉಸಿರುಗಟ್ಟಿದಂತಾಗುವ, ಆಯಾಸದ, ಹೊಟ್ಟೆ-ಎದೆ ಉರಿಯಂಥ ಯಾವುದೇ ಅನುಭವಗಳಿದ್ದರೆ ಮೊದಲು ವೈದ್ಯರಲ್ಲಿ ಹೋಗಿ. ವಾಂತಿಯಾಗಿ, ಎದೆ ನೋವು ಬರುವವರೆಗೆ ಕಾಯಬೇಕೆಂದಿಲ್ಲ. ಇದ್ದಕ್ಕಿದ್ದಂತೆ ಎಚ್ಚರ ತಪ್ಪುವುದು, ಬೀಳುವುದು ಮುಂತಾದವು ಎಚ್ಚರಿಕೆಯ ಗಂಟೆ, ಇದನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: Health Benefits Of Curd Rice: ಮೊಸರನ್ನ ಎಂಬ ಅಮೃತ: ಹೊಟ್ಟೆಗೂ ಹಿತ, ದೇಹಕ್ಕೂ ಹಿತ!

Exit mobile version