Site icon Vistara News

Important of kitchen hygiene : ಅಡುಗೆ ಮನೆಯಲ್ಲಿದೆ ನಿಮ್ಮ ಆರೋಗ್ಯ; ಹಾಗಾಗಿ ಈ ಅಂಶಗಳನ್ನು ಮರೆಯಲೇಬೇಡಿ!

Kitchen Hygin

ಅಡುಗೆ ಮನೆ (Important of kitchen hygiene) ಆರೋಗ್ಯದ ಗುಟ್ಟು. ಯಾರ ಮನೆಯಲ್ಲಿ ಅಡುಗೆ ಮನೆ ಸ್ವಚ್ಛವಾಗಿರುತ್ತದೆಯೋ ಅವರ ಮನೆಯ ಸದಸ್ಯರ ಆರೋಗ್ಯವೂ ಚೆನ್ನಾಗಿರುತ್ತದೆ. ಅಡುಗೆ ಮನೆ ಸ್ವಚ್ಛತೆ ಕಳೆದುಕೊಂಡಿತೆಂದರೆ ಅಲ್ಲಿ ಅನಾರೋಗ್ಯ ಕಾಡುವುದು ತಪ್ಪಿದ್ದಲ್ಲ. ನಾವು ಅದೆಷ್ಟೇ ಸ್ವಚ್ಛತೆ ಮಾಡಿದರೂ ಕೆಲವೊಮ್ಮೆ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿ, ನಮ್ಮ ಆರೋಗ್ಯವನ್ನೇ ಪಣಕ್ಕಿಟ್ಟುಕೊಂಡುಬಿಡುತ್ತೇವೆ. ಪ್ರತಿಯೊಬ್ಬರು ತಮ್ಮ ಆರೋಗ್ಯದ ದೃಷ್ಟಿಯಿಂದ ಅಡುಗೆ ಮನೆಯ ಸ್ವಚ್ಛತೆ ಮತ್ತು ನಿರ್ವಹಣೆ ಕಡೆ ಗಮನ ಹರಿಸುವುದು ಅಗತ್ಯ. ಸಾಮಾನ್ಯವಾಗಿ ನಾವು ಅಡುಗೆ ಮನೆಯಲ್ಲಿ ನೆನಪಿನಲ್ಲಿಡಬೇಕಾದ ಮುಖ್ಯವಾದ ಅಂಶಗಳನ್ನು ನಾವಿಲ್ಲಿ ತಿಳಿಸಿದ್ದೇವೆ ನೋಡಿ.

ಅಡುಗೆ ಎಣ್ಣೆ ಆಯ್ಕೆ ಮುಖ್ಯ…

ಎಣ್ಣೆಯಿಲ್ಲದೆ ಅಡುಗೆಯಿಲ್ಲ. ಎಂಥದ್ದೇ ಅಡುಗೆಯಾದರೂ ಅದಕ್ಕೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ಅದರ ರುಚಿ ಹೆಚ್ಚುತ್ತದೆ. ಅದಕ್ಕೆಂದೇ ನಾನಾ ರೀತಿಯ ತೈಲಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ನೆನಪಿನಲ್ಲಿಡಿ, ಎಲ್ಲ ತೈಲಗಳು ಆರೋಗ್ಯಕರವಲ್ಲ. ತೈಲದ ಬಳಕೆ ಹೆಚ್ಚಾದಾಗ ಕಾಯಿಲೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್‌ ಸಮಸ್ಯೆ ಸೇರಿ ಅನೇಕ ರೀತಿಯ ಅನಾರೋಗ್ಯಕ್ಕೆ ಸೂಕ್ತವಲ್ಲದ ತೈಲ ಬಳಕೆಯೂ ಒಂದು ಕಾರಣವಾಗಿದೆ. ಆದಷ್ಟು ತೈಲ ಬಳಕೆ ಕಡಿಮೆ ಮಾಡಿದಷ್ಟು ಮನುಷ್ಯನ ದೇಹಕ್ಕೆ ಒಳ್ಳೆಯದಾಗಿದೆ.

ಫ್ರಿಜ್‌ ಪ್ರಾಮುಖ್ಯತೆ…

ಮನೆಯಲ್ಲಿ ಏನೇ ಅಡುಗೆ ಉಳಿದರೂ ಅದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಮರುದಿನ ತಿನ್ನುವ ಅಭ್ಯಾಸ ನಮ್ಮದಾಗಿಬಿಟ್ಟಿದೆ. ಆದರೆ ರೆಫ್ರಿಜರೇಟರ್‌ನಲ್ಲಿ ನೀವು ಯಾವ ರೀತಿಯ ಆಹಾರವನ್ನು ಯಾವ ರೀತಿಯಲ್ಲಿ ಸಂಗ್ರಹಿಸಿಡುತ್ತೀರಿ ಎನ್ನುವುದೂ ಅತಿ ಮುಖ್ಯ. ಬೇಯಿಸಿರುವ ಆಹಾರವನ್ನು ಪಾತ್ರೆಯಲ್ಲಿ ಹಾಕಿ ಅದನ್ನು ನೀಟಾಗಿ ಮುಚ್ಚಿಟ್ಟು, ನಂತರವೇ ರೆಫ್ರಿಜರೇಟರ್‌ನಲ್ಲಿ ಇಡಬೇಕು. ಹಾಗೆಯೇ ತೆರೆದ ಪಾತ್ರೆಯಲ್ಲಿ ಇಡುವುದು ಸರಿಯಲ್ಲ. ಹಣ್ಣುಗಳು, ತರಕಾರಿ, ಮಾಂಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡಬೇಕು. ರೆಫ್ರಿಜರೇಟರ್‌ನಲ್ಲಿ ಆಹಾರವನ್ನು ಸರಿಯಾಗಿ ಶೇಖರಿಸಿಡಲಿಲ್ಲವೆಂದರೆ ಅದರಲ್ಲಿ ಹಾನಿಕಾರಕ ಸೂಕ್ಷ್ಮಜೀವಿಗಳು ಹುಟ್ಟಿಕೊಳ್ಳಬಹುದು. ಅದರಿಂದ ಆಹಾರ ಪೋಷಕಾಂಶವನ್ನು ಕಳೆದುಕೊಳ್ಳುವುದರೊಂದಿಗೆ ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಬಹುದು.

ಮಸಾಲೆ, ಅಲಂಕಾರಿಕ ವಸ್ತು ಬಗ್ಗೆ ಎಚ್ಚರ…

ಈಗ ಎಲ್ಲದಕ್ಕೂ ಸಿದ್ಧ ಪುಡಿಗಳು ಬಂದುಬಿಟ್ಟಿವೆ. ಬಿರಿಯಾನಿ ಇಂದ ಹಿಡಿದು ಬಿಸಿ ಬೇಳೆ ಬಾತ್‌ವರೆಗೂ ಎಲ್ಲದಕ್ಕೂ ಸಿದ್ಧ ಪುಡಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನೇ ಹಾಕಿ ಅಡುಗೆ ಮಾಡುವ ಸುಲಭ ವಿಧಾನವನ್ನು ಮಹಿಳೆಯರು ಕಂಡುಕೊಂಡಿದ್ದಾರೆ. ಆದರೆ ಎಲ್ಲದಕ್ಕೂ ಸಿದ್ಧ ಮಸಾಲೆ ಬಳಸುವುದು ಸೂಕ್ತವಲ್ಲ. ಹಾಗೆಯೇ ಅಡುಗೆಯನ್ನು ಅಲಂಕಾರ ಮಾಡುವುದಕ್ಕೆಂದು ಕೆಲವು ಪದಾರ್ಥ ಬಳಸುವುದನ್ನೂ ನೀವು ನೋಡಿರುತ್ತೀರಿ. ಅದೂ ಕೂಡ ಆರೋಗ್ಯಕ್ಕೆ ಹಾನಿಕರವಾಗಬಹುದು. ಸಿದ್ಧ ಮಸಾಲೆ ಪದಾರ್ಥಗಳು ಮತ್ತು ಡ್ರೆಸ್ಸಿಂಗ್‌ಗಳು ಬೇಗ ಕೆಡಬಾರದು ಎನ್ನುವ ಕಾರಣಕ್ಕೆ ಅವುಗಳಿಗೆ ಹೆಚ್ಚು ಪ್ರಮಾಣದಲ್ಲಿ ಸಂರಕ್ಷಕಗಳನ್ನು ಹಾಕಲಾಗಿರುತ್ತದೆ. ಹಾಗಾಗಿ ಅದರ ಬಳಕೆ ನಿಮ್ಮ ಆರೋಗ್ಯವನ್ನು ಕೆದಕುವ ಕೆಲಸ ಮಾಡಲೂಬಹುದು. ಹಾಗಾಗಿ ಆದಷ್ಟು ಮನೆಯಲ್ಲೇ ಮಸಾಲೆ ಸಿದ್ಧ ಪಡಿಸಿ ಅಡುಗೆ ಮಾಡಿ.

ಇದನ್ನೂ ಓದಿ : Health Benefits of Cereals: ಸಿರಿ ಧಾನ್ಯಗಳನ್ನೇಕೆ ತಿನ್ನಬೇಕು ಗೊತ್ತೇ?

ಸಲಕರಣೆಗಳ ಕಡೆ ಇರಲಿ ಗಮನ…

ಅಡುಗೆ ಮನೆಯಲ್ಲಿ ನಾವು ಗಮನ ಕೊಡದೆ ಉಳಿದುಕೊಳ್ಳುವ ವಸ್ತುಗಳಲ್ಲಿ ಕೆಲವೆಂದರೆ ಅದು ತರಕಾರಿ ಕತ್ತರಿಸುವ ಮಣೆ, ಕೈ ಒರೆಸಿಕೊಳ್ಳಲು ಇಟ್ಟುಕೊಂಡಿರುವ ಬಟ್ಟೆ ಹಾಗೆಯೇ ಅಡುಗೆ ಮನೆಯ ಮೇಜನ್ನು ಸ್ವಚ್ಛ ಮಾಡಲು ಇಟ್ಟುಕೊಂಡಿರುವ ಬಟ್ಟೆ. ಇವುಗಳ ಮೇಲೆ ಬ್ಯಾಕ್ಟೀರಿಯಾಗಳು ಬೇಗನೇ ಆಗಿಬಿಡಬಹುದು. ಹಾಗಾಗಿ ಅವುಗಳ ಬಗ್ಗೆ ಗಮನ ಇರಲಿ. ಆದಷ್ಟು ಇವುಗಳನ್ನು ಸ್ವಚ್ಛ ಮಾಡುತ್ತಿರಿ. ಒರೆಸುವ ಬಟ್ಟೆಗಳನ್ನು ಪ್ರತಿನಿತ್ಯ ತೊಳೆಯುವುದು ಒಳ್ಳೆಯದು. ಹಾಗೆಯೇ ತರಕಾರಿ ಕತ್ತರಿಸುವ ಮಣೆಯನ್ನೂ ಕೂಡ ಸ್ವಚ್ಛ ಮಾಡುತ್ತಿರಿ. ತರಕಾರಿ ಕತ್ತರಿಸುವುದಕ್ಕೆ ಮತ್ತು ಮಾಂಸ ಕತ್ತರಿಸುವುದಕ್ಕೆ ಪ್ರತ್ಯೇಕ ಮಣೆಗಳನ್ನು ಇರಿಸಿಕೊಳ್ಳಿ.

ಮಾಂಸ ಶೇಖರಣೆ…

ಮಾಂಸವನ್ನು ಫ್ರಿಜ್‌ನಲ್ಲಿ ಶೇಖರಿಸಿಡುವುದು ಒಳ್ಳೆಯ ಅಭ್ಯಾಸವಲ್ಲ. ಮಾಂಸವನ್ನು ಶೇಖರಿಸಿಡಲು ಹೆಚ್ಚು ಫ್ರೀಜ್‌ ಮಾಡುವ ಸಾಮರ್ಥ್ಯವಿರಬೇಕು. ಮಾಮೂಲಿ ಫ್ರಿಜ್‌ಗಳಲ್ಲಿ ಆ ಸಾಮರ್ಥ್ಯ ಇರುವುದಿಲ್ಲ. ಹಾಗಾಗಿ ಫ್ರಿಜ್‌ನಲ್ಲಿ ಹೆಚ್ಚು ದಿನ ಮಾಂಸ ಶೇಖರಣೆ ಮಾಡಿಡುವುದು ಒಳ್ಳೆಯದಲ್ಲ. ಮಾಂಸವನ್ನು ಫ್ರಿಜ್‌ನಲ್ಲಿ ಹೆಚ್ಚೆಂದರೆ ಏಳು ದಿನಗಳ ಕಾಲ ಶೇಖರಿಸಿಡಬಹುದು. ಹಾಗೆಯೇ ಸುಮ್ಮನೆ ಮಾಂಸವನ್ನು ತೆರೆದ ಪಾತ್ರೆಯಲ್ಲಿ ಇಟ್ಟರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಮುಚ್ಚಿದ ಪಾತ್ರೆಯಲ್ಲಿ ಮಾಂಸವನ್ನು ಶೇಖರಿಸಿಡಿ. ಆದಷ್ಟು ಬೇಗ ಮಾಂಸವನ್ನು ಖಾಲಿ ಮಾಡುವ ಅಭ್ಯಾಸ ಮಾಡಿಕೊಳ್ಳಿ.

Exit mobile version