ಬಾದಾಮಿ ಒಳ್ಳೆಯದು ಅಂದುಕೊಂಡು ಪ್ರತಿದಿನ ಬೇಕಾದ ಹಾಗೆ ಬಾದಾಮಿ ತಿನ್ನುತ್ತಿದ್ದೀರಾ? ಅತಿಯಾದರೆ ಅಮೃತವೂ ವಿಷ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ಬಾದಾಮಿಯ ವಿಷಯದಲ್ಲೂ ಇದು ನಿಜವೂ ಹೌದು. ಬಾದಾಮಿ ಒಮ್ಮೆ ಬಾಯಿಗಿಟ್ಟರೆ ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ಹಾಗೆ ರುಚಿಯಾಗಿಯೂ ಇದೆ. ಹುರಿದಿಟ್ಟು ಸ್ವಲ್ಪ ಉಪ್ಪು ಬೆರೆಸಿದ ಬಾದಾಮಿಯಾದರೆ ಕಥೆ ಮುಗಿದಂತೆಯೇ. ಒಂದಾದ ಮೇಲೆ ಒಂದರಂತೆ ಬಾದಾಮಿ ಹೊಟ್ಟೆಯೊಳಗೆ ಸೇರದೆ ಇರದು. ಬಾದಾಮಿ ತಾನೇ, ಎಷ್ಟು ತಿಂದರೂ ಸಮಸ್ಯೆಯಿಲ್ಲ ಅಂದುಕೊಂಡು ಕಡಿವಾಣವೇ ಇಲ್ಲದಂತೆ ತಿನ್ನುವ ಮೊದಲು ಯೋಚನೆ ಮಾಡಿ. ಬಾದಾಮಿಯನ್ನು ಉಪಯೋಗಿಸುವ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಅರಿವಿರಬೇಕು.
೧. ಬಾದಾಮಿಯಲ್ಲಿ ನಾರಿನಂಶ ಇದೆ ನಿಜ. ಆದರೆ, ನಾರಿನಂಶ ಒಳ್ಳೆಯದೆಂದು ಹೆಚ್ಚು ತಿಂದರೆ, ಮಲಬದ್ಧತೆಗೂ ಕಾರಣವಾಗಬಹುದು. ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಂತಾಗುವುದು, ಹೊಟ್ಟೆನೋವು, ಹೊಟ್ಟೆ ಹಿಡಿದಂತಾಗುವುದು ಮುಂತಾದ ಅಡ್ಡ ಪರಿಣಾಮಗಳೂ ಕಾಣಿಸಿಕೊಳ್ಳಬಹುದು. ಹಾಗಾಗಿ ಹೆಚ್ಚು ಬಾದಾಮಿ ತಿಂದಿರೆಂದಾದಲ್ಲಿ, ಹೆಚ್ಚು ನೀರನ್ನೂ ಕುಡಿಯಬೇಕು.
೨. ಬಾದಾಮಿಯಲ್ಲಿ ಹೆಚ್ಚು ನಾರಿನಂಶ ಇರುವುದರಿಂದ ಅದು ಖನಿಜಾಂಶಗಳಾದ ಕ್ಯಾಲ್ಶಿಯಂ, ಮೆಗ್ನೀಶಿಯಂ, ಝಿಂಕ್, ಹಾಗೂ ಕಬ್ಬಿಣಾಂಶಗಳ ಜೊತೆ ಸೇರಿಕೊಂಡು ರಕ್ತ ಅವನ್ನು ಸರಿಯಾಗಿ ಹೀರಿಕೊಳ್ಳುವಲ್ಲಿ ತಡೆಯೊಡ್ಡುತ್ತದೆ. ಹಾಗಾಗಿ, ಬಾದಾಮಿಯ ಪೂರ್ಣ ಉಪಯೋಗ ಲಭಿಸಬೇಕಾದಲ್ಲಿ ಅದನ್ನು ಬೇರೆಯದೇ ಆಗಿ ಅಥವಾ ಎರಡು ಊಟಗಳ ನಡುವಿನ ಸ್ನ್ಯಾಕ್ ಆಗಿ ಸೇವಿಸಬೇಕು.
೩. ದಿನಕ್ಕೆ ೨೦ಕ್ಕಿಂತ ಹೆಚ್ಚು ಬಾದಾಮಿಯನ್ನು ಹೊಟ್ಟೆಗಿಳಿಸಿದಿರೆಂದಾದಲ್ಲಿ ಖಂಡಿತವಾಗಿಯೂ ತೂಕ ಹೆಚ್ಚಾಗುತ್ತದೆ. ಸರಿಯಾದ ವ್ಯಾಯಾಮ ಇಲ್ಲದೆ, ಸುಮ್ಮನೆ ಕೂತು, ತಾನೇ ತಾನಾಗಿ ಬಾದಾಮಿ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಬಾದಾಮಿಯ ಮೇಲೆ ಭಾರ ಹಾಕಿದರೆ ಕೆಲಸ ಆಗುವುದಿಲ್ಲ. ಕೊಂಚ ದೇಹ ದಂಡನೆ, ಸರಿಯಾದ ಪ್ರಮಾಣದಲ್ಲಿ ಬಾದಾಮಿಯ ಸೇವನೆ ಮಾತ್ರ ಒಳ್ಳೆಯ ಫಲ ನೀಡುತ್ತದೆ.
೪. ವಾಲ್‌ನಟ್ ಮತ್ತು ಗೋಡಂಬಿಯನ್ನು ತಿಂದಾದ ಮೇಲೆ ಬಾದಾಮಿಯನ್ನು ತಿಂದರೆ ಅಲರ್ಜಿಯನ್ನೂ ತರಿಸಬಹುದು. ಸಾಮಾನ್ಯವಾಗಿ ಬಾದಾಮಿ ತಿಂದಾಗ ಬಾಯಿ ತುರಿಕೆ, ಗಂಟಲು ಕೆರೆತ, ನಾಲಿಗೆ ಬಾಯಿ ಹಾಗೂ ತುಟಿಗಳು ದಪ್ಪವಾದಂತಾಗುವುದು ಮತ್ತಿತರ ಅಲರ್ಜಿ ಸಮಸ್ಯೆಗಳು ಕೆಲವರಿಗೆ ಇದರಿಂದ ಉಂಟಾಗಬಹುದು. ಬಾದಾಮಿಯಲ್ಲಿ ಅನಾಫಿಲಿಕ್ಸ್ ಎಂಬ ಅಲರ್ಜಿ ಉಂಟಾಗುವ ಸಂಭವವೂ ಇದ್ದು, ಇದು ಉಸಿರುಗಟ್ಟಿದಂತಾಗುವುದು, ತಲೆಸುತ್ತುವುದು, ವಾಂತಿ, ಗೊಂದಲ, ಸ್ವರದಲ್ಲಿ ಬದಲಾವಣೆ, ರಕ್ತದೊತ್ತಡ ಕಡಿಮೆಯಾಗುವುದು ಮತ್ತಿತರ ತೊಂದರೆಗಳು ಗೋಚರಿಸಬಹುದು.
ಇದನ್ನೂ ಓದಿ: ವಿಜ್ಞಾನಿಗಳಿಂದ ನ್ಯಾನೋ ಹಚ್ಚೆ ಸಂಶೋಧನೆ; ಆರೋಗ್ಯ ಸಮಸ್ಯೆಗಳಿಂದ ರಕ್ಷೆ?
೫. ಬಾದಾಮಿ ಎಂದರೆ ವಿಟಮಿನ್ ಇ. ಆದರೆ ವಿಟಮಿನ್ ಇ ದಕ್ಕೀತು ಎಂದು ಬೇಕಾಬಿಟ್ಟಿ ತಿಂದರೆ, ಅಗತ್ಯಕ್ಕಿಂತ ಹೆಚ್ಚು ಮಿಟಮಿನ್ ಇ ನಿಮ್ಮ ದೇಹವನ್ನು ಸೇರಿ ತೊಂದರೆಯಲ್ಲಿ ಸಿಲುಕಿಸಬಹುದು. ಯಾಕೆಂದರೆ, ದಿನನಿತ್ಯ ನೀವು ನಾನಾ ಆಹಾರಗಳ ರೂಪದಲ್ಲಿ ವಿಟಮಿನ್ ಇ ತೆಗೆದುಕೊಳ್ಳುತ್ತಿರುವುದರಿಂದ ಅತಿಯಾದ ವಿಟಮಿನ್ ಇ ಒಳ್ಳೆಯದಲ್ಲ. ಇದರಿಂದ ರಕ್ತ ಪರಿಚಲನೆಯಲ್ಲೂ ಏರಿಳಿತಗಳಾಗಬಹುದು.
೬. ಅತಿಯಾದ ಬಾದಾಮಿ ಕಿಡ್ನಿ ಸ್ಟೋನ್ ಸಮಸ್ಯೆ ತಂದೊಡ್ಡಬಹುದು. ೧೦೦ ಗ್ರಾಂ ಹುರಿದ ಬಾದಾಮಿಯಲ್ಲಿ ೪೬೯ ಮಿಲಿಗ್ರಾಂಗಳಷ್ಟು ಓಕ್ಸಲೇಟ್‌ಗಳಿದ್ದು ಇದು ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ.
೭. ಮುಖ್ಯವಾಗಿ ಕಹಿ ಬಾದಾಮಿಯಲ್ಲಿ ವಿಷಕಾರಕ ಎಚ್‌ಸಿಎನ್ ಮಟ್ಟ ಸಿಹಿ ಬಾದಾಮಿಗಿಂತ ೪೦ ಪಟ್ಟು ಅಧಿಕವಾಗಿರುವುದರಿಂದ, ಇದು ಉಸಿರಾಟದ ತೊಂದರೆ, ಉಸಿರುಗಟ್ಟಿದಂಥ ಅನುಭವಗಳನ್ನೂ ನೀಡಬಹುದು. ಹಾಗಾಗಿ, ಹಾಲುಣಿಸುವ ತಾಯಂದಿರು, ಗರ್ಭಿಣಿಯರು ಕಹಿ ಬಾದಾಮಿಯಿಂದ ದೂರವಿರುವುದು ಒಳ್ಳೆಯದು.
ಹಾಗಾದರೆ ಎಷ್ಟು ಬಾದಾಮಿಯನ್ನು ಸಾಮಾನ್ಯರು ತಿನ್ನಬಹುದು ಎಂಬ ಪ್ರಶ್ನೆಗಳೇಳುವುದು ಸಹಜ. ಇಂತಿಷ್ಟೇ ತಿನ್ನಬೇಕು ಎಂಬ ನಿಬಂಧನೆಗಳೇನೂ ಇಲ್ಲದಿದ್ದರೂ ಅಂದಾಜು ಹೆಚ್ಚೆಂದರೆ ಒಬ್ಬ ಪ್ರತಿದಿನ, ೧೦- ೧೫ ಬಾದಾಮಿ ತಿನ್ನಬಹುದು. ಅದೂ ಆತನ ಇತರ ಆಹಾರ ಹಾಗೂ ವ್ಯಾಯಾಮದ ಮೇಲೆ ಅವಲಂಬಿತವಾಗಿದೆ. ಹುರಿದ ಬಾದಾಮಿಗಿಂತಲೂ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದ ಬಾದಾಮಿ ಹೆಚ್ಚು ಉತ್ತಮ.
ಇದನ್ನೂ ಓದಿ: Health Tips | ಮೆದುಳಿಗೆ ಮರೆವು ಆವರಿಸದಿರಲು ಬೇಕು ವಿಟಮಿನ್ ಬಿ12