Site icon Vistara News

Heat Wave: ಬಿಸಿಗಾಳಿಯನ್ನು ಎದುರಿಸುವುದು ಹೇಗೆ?

Heat Wave

ದೇಶದ ಹಲವೆಡೆಗಳಲ್ಲಿ ಬೇಗನೇ ಬೇಸಿಗೆ ಆರಂಭವಾಗಿದೆ. ಸಾಲದೆಂಬಂತೆ ಬಿಸಿಗಾಳಿಯೂ (Heat Wave) ಬೀಸುತ್ತಿದೆ. ಈಗಿನ್ನೂ ಚಳಿಗಾಲ ಕಡಿಮೆಯಾಗಿ, ಬೇಸಿಗೆಯ ಆರಂಭದ ದಿನಗಳು ಎನ್ನುವಾಗಲೇ ಸೂರ್ಯನ ಪ್ರಕೋಪ ಅನುಭವಕ್ಕೆ ಬರುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಈ ಸಮಯದಲ್ಲಿ ಇರುವುದಕ್ಕಿಂತ ಹೆಚ್ಚಿನ ಬಿಸಿಲಿನ ಬೇಗೆ ಅಕಾಲದಲ್ಲಿ ಸುಡುತ್ತಿದೆ.

ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ಹಲವೆಡೆ ಬಿಸಿಗಾಳಿ ಹೊಡೆತದ ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ಕೆಲವು ಸ್ಪಷ್ಟ ಮಾರ್ಗದರ್ಶನಗಳನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, ಯಾವುದು ಸೂಕ್ತ- ಯಾವುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಮಧ್ಯಾಹ್ನ 12 ಗಂಟೆ ಮತ್ತು 3 ಗಂಟೆಯ ನಡುವಿನ ಅವಧಿಯಲ್ಲಿ ಸಾಧ್ಯವಾದಷ್ಟೂ ಬಿಸಿಲಿಗೆ ಹೊರಗೆ ಹೋಗದೆ ಜಾಗ್ರತೆ ಮಾಡುವಂತೆ ಹೇಳಿದೆ.

ದಿನದಲ್ಲಿ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಅಗತ್ಯವಿದ್ದಲ್ಲಿ ಒಆರ್‌ಎಸ್‌ ಮತ್ತು ಇತರ ಎಲೆಕ್ಟ್ರೋಲೈಟಿಕ್‌ ದ್ರವಗಳನ್ನು ಸೇವಿಸಬೇಕು. ಮಾತ್ರವಲ್ಲ, ಋತುಮಾನಕ್ಕೆ ಸೂಕ್ತವಾದ, ನೀರಿನಂಶ ಹೆಚ್ಚಿರುವ ರಸಭರಿತ ಹಣ್ಣು ಮತ್ತು ತರಕಾರಿಗಳು ಆಹಾರದ ಭಾಗವಾಗಿರಬೇಕು. ಮನೆಯಲ್ಲೇ ತಯಾರಿಸಿದ ನಿಂಬೆಹಣ್ಣಿನ ಪಾನಕ, ಹಣ್ಣಿನ ರಸಗಳು, ಲಸ್ಸಿ ಅಥವಾ ಮಜ್ಜಿಗೆಯಂಥವು ದೇಹಕ್ಕೆ ಅಗತ್ಯ. ಇವುಗಳನ್ನು ಸೇವಿಸುವಾಗ ಅಲ್ಪ ಪ್ರಮಾಣದಲ್ಲಿ ಉಪ್ಪು ಸೇರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅತಿಯಾಗಿ ಉಪ್ಪು ಮತ್ತು ಸಕ್ಕರೆ ಇರುವಂಥ ಆಹಾರಗಳಿಂದ ದೂರ ಇರುವುದು ಸೂಕ್ತ. ಅಲ್ಕೋಹಾಲ್‌, ಚಹಾ, ಕಾಫಿ ಮತ್ತು ಸೋಡಾ ಅಥವಾ ಕೋಲಾದಂಥ ಪೇಯಗಳು ಈಗ ಹವಾಮಾನಕ್ಕೆ ಸೂಕ್ತವಲ್ಲ. ಇಂಥಾ ಸಕ್ಕರೆಭರಿತ ಪೇಯಗಳಿಂದ ದೇಹದಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕುಸಿಯುತ್ತದೆ. ಹೊಟ್ಟೆಯ ಸಮತೋಲವೂ ಹಾಳಾಗುತ್ತದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅತ್ಯಂತ ಹೆಚ್ಚು ಪ್ರೊಟೀನ್‌ ಹೊಂದಿದ ಮತ್ತು ಹಳೆದ ಅಥವಾ ಹಳಸಿದ ಆಹಾರ ಪದಾರ್ಥಗಳಿಂದ ದೂರವಿರುವುದು ಕ್ಷೇಮ. ಮಾಂಸಾಹಾರದಂಥ ಹೆಚ್ಚಿನ ಮಸಾಲೆಯುಕ್ತ ಮತ್ತು ಪ್ರೊಟೀನ್‌ಭರಿತ ಆಹಾರಗಳು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ದೇಹದ ಉಷ್ಣತೆ ಹೆಚ್ಚಿ, ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ನೋವು, ಅಜೀರ್ಣದ ತೊಂದರೆಗಳು ಕಾಣಿಸಿಕೊಳ್ಳಬಹುದು. ಬದಲಿಗೆ, ಸುಲಭವಾಗಿ ಪಚನವಾಗುವ ಆಹಾರಗಳ ಸೇವನೆ ಯೋಗ್ಯ. ಮಜ್ಜಿಗೆ, ಎಳನೀರು ಮುಂತಾದವು ಅಗತ್ಯವಾಗಿ ದೇಹಕ್ಕೆ ಬೇಕು ಎಂದು ಹೇಳಿಕೆ ವಿವರಿಸಿದೆ.

“ಮನೆಯೊಳಗೆ ನೇರವಾಗಿ ಬಿಸಿಲು ಬರುವಂಥ ಕಿಟಕಿ-ಬಾಗಿಲುಗಳನ್ನು ಹಗಲಿನಲ್ಲಿ ಮುಚ್ಚಿ, ಪರದೆ ಹಾಕಬೇಕು. ರಾತ್ರಿ ತಂಪಾದ ನಂತರ ಈ ಕಿಟಕಿಗಳನ್ನು ತೆರೆಯುವುದು ಸೂಕ್ತ” ಎಂದಿರುವ ಹೇಳಿಕೆ, ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆಗಳನ್ನೇ ಧರಿಸಬೇಕು. ಬಿಸಿಲಿಗೆ ಹೋಗುವಾಗ ಟೋಪಿ, ಛತ್ರಿಯಂಥವನ್ನು ಬಳಸಬೇಕು ಎಂದು ಸೂಚಿಸಿದೆ.

ತಂಪು ಪಾನೀಯಗಳು

ಬಿಸಿಲ ಬೇಗೆ ತಡೆಯಲು ಅನುಕೂಲವಾಗುವಂತೆ ಎಳನೀರು, ನಿಂಬೆ ಪಾನಕ, ಮಜ್ಜಿಗೆ ಅಥವಾ ಲಸ್ಸಿಗಳ ಸೇವನೆ ಒಳ್ಳೆಯದು. ಅದಲ್ಲದೆ, ಇನ್ನೂ ಕೆಲವು ತಂಪು ಪಾನೀಯಗಳನ್ನು ಹೀಗೆ ತಯಾರಿಸಬಹುದು.

ಪುದೀನಾ ಪಂಚ್

ಒಂದು ಲೀಟರ್‌ನಷ್ಟು ನೀರಿಗೆ ಕೆಲವು ಸೌತೇಕಾಯಿ ಹೋಳುಗಳು, ಒಂದೆರಡು ಅನಾನಸ್‌ ತುಂಡುಗಳು ಮತ್ತು ಹಲವಾರು ಎಲೆ ಪುದೀನಾಗಳನ್ನು ಹಾಕಿಡಿ. ಒಂದು ತಾಸಿನ ನಂತರ ಘಮಘಮಿಸುವ ಪುದೀನಾ ಪಂಚ್‌ ಸಿದ್ಧ

ತರಕಾರಿ ಜ್ಯೂಸ್‌

ಕ್ಯಾರೆಟ್‌, ಸೌತೇಕಾಯಿ, ಬೀಟ್‌ರೂಟ್‌ ಮುಂತಾದ ತರಕಾರಿಗಳನ್ನು ಉಪಯೋಗಿಸಿ ಜ್ಯೂಸ್‌ ತಯಾರಿಸಬಹುದು. ನಾನಾ ಹಣ್ಣುಗಳ ರಸವನ್ನೂ ಮನೆಯಲ್ಲೇ ಮಾಡಿಕೊಳ್ಳಬಹುದು. ಆದಷ್ಟೂ ಪ್ಯಾಕ್‌ ಮಾಡಿದ ಪೇಯಗಳನ್ನು ದೂರವಿರಿಸಿ. ಇವುಗಳು ಸೇವನೆಗೆ ಸುಲಭ ಹೌದಾದರೂ, ಆರೋಗ್ಯಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು.

ಕೋಕಂ ಪಾನಕ

ಬೇಸಿಗೆಯ ಪಿತ್ತ ನಿವಾರಣೆಗೆ ಅತ್ತ್ಯುತ್ತಮ ಆಯ್ಕೆಯಿದು. ಎರಡು ಕೋಕಂ ಹಣ್ಣುಗಳನ್ನು ತೊಳೆದು ಬಿಡಿಸಿಕೊಳ್ಳಿ. ಹೊರಗಿನ ಸಿಪ್ಪೆ ಮತ್ತು ಒಳಗಿನ ಬೀಜದ ಸಮೇತ ಇಡೀ ಹಣ್ಣನ್ನು ಅರ್ಧ ಲೀಟರ್‌ ನೀರಲ್ಲಿ ನೆನೆಸಿ ಕಿವುಚಿಡಿ. ಅರ್ಧ ಗಂಟೆಯ ನಂತರ, ಹಣ್ಣು ತನ್ನ ಕೆಂಪಾದ ರಸವನ್ನು ನೀರಿಗೆ ಬಿಟ್ಟಿರುತ್ತದೆ. ಹಣ್ಣಿನ ಭಾಗಗಳನ್ನು ಸೋಸಿ ತೆಗೆಯಿರಿ. ಕೋಕಂ ರಸದ ನೀರಿಗೆ ರುಚಿಗೆ ಬೇಕಷ್ಟು ಬೆಲ್ಲ, ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಬೆರೆಸಿ ಸೇವಿಸಿ.

ಇದನ್ನೂ ಓದಿ: Health Care Tips: ನಮ್ಮ ಆಹಾರದಲ್ಲಿ ಇರಬೇಕಾದ ಬೀಜಗಳು ಮತ್ತು ಅವುಗಳ ಕೆಲವು ಸತ್ವಗಳ ಬಗ್ಗೆ ತಿಳಿಯಿರಿ

Exit mobile version