Site icon Vistara News

Beauty Care: ನೆಕ್‌ ಬ್ಯೂಟಿಗೆ ಇಲ್ಲಿದೆ 5 ಐಡಿಯಾ

neck beauty

ಮುಖದ ಸೌಂದರ್ಯದಷ್ಟೇ ಕುತ್ತಿಗೆ ಹಾಗೂ ಕತ್ತಿನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಕೆಲವರಲ್ಲಿ ಮುಖದ ಬಣ್ಣ ಇರುವಂತೆ ಕತ್ತಿನ ಬಣ್ಣ ಇರುವುದಿಲ್ಲ. ಮುಖ ಹಾಗೂ ಕತ್ತಿನ ಬಣ್ಣ ಪ್ರತ್ಯೇಕವಾಗಿರುವಂತೆ ಕಾಣುತ್ತದೆ. ಹಾಗಾಗಿ ಕತ್ತಿನ ಚರ್ಮಕ್ಕೂ ಆರೈಕೆ ಅಗತ್ಯ ಎನ್ನುತ್ತಾರೆ ಬ್ಯೂಟಿ ತಜ್ಞೆ ಉಮಾ ಜಯಕುಮಾರ್‌. ಇದಕ್ಕಾಗಿ ಅವರು 5 ಸಲಹೆಗಳನ್ನು ನೀಡಿದ್ದಾರೆ.

  1. ಸೌತೆಕಾಯಿ ಸ್ಕ್ರಬ್‌ನಿಂದ ತಿಳಿಯಾಗುವ ಚರ್ಮ

ಸೌತೆಕಾಯಿಯನ್ನು ತುರಿದು ಅದನ್ನು ಸುಮಾರು ಒಂದೈದು ನಿಮಿಷ ಕುತ್ತಿಗೆಯ ಭಾಗಕ್ಕೆ ಮೃದುವಾಗಿ ಮಸಾಜ್‌ ಮಾಡಿ. ಕನಿಷ್ಠ ಪಕ್ಷ ವಾರಕ್ಕೆರಡು ಬಾರಿ ಈ ರೀತಿ ಮೃದುವಾದ ಮಸಾಜ್‌ ಮಾಡುವುದರಿಂದ ಚರ್ಮವು ಕ್ರಮೇಣ ತಿಳಿಯಾಗುತ್ತದೆ. ಮಾತ್ರವಲ್ಲ, ಮೃದುವಾಗುತ್ತದೆ.

  1. ನಿಂಬೆರಸದ ಪ್ಯಾಕ್‌ನಿಂದ ಕಪ್ಪು ಕಲೆ ಮಾಯ

ಮೂರ್ನಾಲ್ಕು ಹನಿ ನಿಂಬೆರಸ ಹಾಗು ಅರಿಷಿಣ ಪುಡಿಯನ್ನು ಮಿಶ್ರ ಮಾಡಿ. ಪೇಸ್ಟ್‌ನಂತೆ ಮಾಡಿ. ಕತ್ತಿನ ಭಾಗದ ಸುತ್ತಲೂ ಲೇಪಿಸಿ. ಸುಮಾರು 15 ನಿಮಿಷ ಹಾಗೆಯೇ ಬಿಡಿ. ಇದು ಕತ್ತಿನಲ್ಲಿರುವ ಕಪ್ಪು ಕಲೆ ಮಾಯವಾಗಲು ಸಹಕಾರಿ.

  1. ಕಾಂತಿಯುಕ್ತವಾಗಲು ಪ್ಯಾಕ್‌

ಕ್ರಮವಾಗಿ ಒಂದೆರೆಡು ಹನಿ ಜೇನುತುಪ್ಪ, ಟೊಮೆಟೊ ರಸ, ನಿಂಬೆರಸ, ಬಾದಾಮಿ ಪೌಡರ್‌ ಮಿಶ್ರ ಮಾಡಿಕೊಂಡು ಪೇಸ್ಟ್‌ ಮಾಡಿ. ಇದನ್ನು ಕತ್ತಿನ ಸುತ್ತಲೂ ಪ್ಯಾಕ್‌ನಂತೆ ಲೇಪಿಸಿ. ಪ್ಯಾಕ್‌ ಹಾಕಿ ಹದಿನೈದು ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಆಗಾಗ್ಗೆ ಹೀಗೆ ಮಾಡುವುದರಿಂದ ಚರ್ಮ ಕಾಂತಿಯುತವಾಗುತ್ತದೆ.

  1. ಹಾಲಿನ ಕ್ಲೆನ್ಸಿಂಗ್‌ ಮಾಡಿ

ಕತ್ತಿನ ಚರ್ಮ ಸ್ವಚ್ಛವಾಗಿರಿಸಲು ಕ್ಲೆನ್ಸಿಂಗ್‌ ಸಹಕಾರಿ. ಆಗಾಗ ಕತ್ತಿನ ಭಾಗವನ್ನು ಕ್ಲೆನ್ಸ್‌ ಮಾಡುವ ಅಭ್ಯಾಸ ರೂಢಿಸಿಕೊಂಡಲ್ಲಿ ತ್ವಚೆಯ ಚರ್ಮ ತಿಳಿಯಾಗುತ್ತದೆ. ಹಾಲಿನಲ್ಲಿ ಹತ್ತಿಯನ್ನು ಅದ್ದಿ ಕತ್ತಿನ ಸುತ್ತ ಮುತ್ತಲ ಚರ್ಮವನ್ನು ಒರೆಸಿ. ಪ್ರತಿದಿನ ಹೀಗೆ ಮಾಡುವುದರಿಂದ ಅದು ಕ್ಲೆನ್ಸಿಂಗ್‌ನಂತೆ ಕಾರ್ಯ ನಿರ್ವಹಿಸುತ್ತದೆ.

  1. ಅಲೋವೆರಾ ಲೇಪನ

ಕತ್ತಿನ ಭಾಗ ಒರಟಾಗಿದ್ದಲ್ಲಿ ಪ್ರತಿನಿತ್ಯ ಅಲೋವೆರಾ ರಸವನ್ನು ಹಚ್ಚುವುದರಿಂದ ಕತ್ತಿನ ಸುತ್ತಮುತ್ತಲ ಭಾಗದ ಚರ್ಮ ಸುಕೋಮಲವಾಗುತ್ತದೆ.

ಈ ಮೇಲಿನ ಐದು ವಿಧಾನಗಳನ್ನು ಮನೆಯಲ್ಲೆ ಮಾಡುವುದರಿಂದ ಕುತ್ತಿಗೆಯ ಭಾಗದ ಚರ್ಮ ಸುಕೋಮಲವಾಗುವುದರೊಂದಿಗೆ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
…………

Exit mobile version