ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿಯ ಸೆಲೆಬ್ರೇಷನ್ ನಂತರ ರಂಗು ರಂಗಾದ ಮುಖ ಹಾಗೂ ಕೂದಲಿನ ಆರೈಕೆ ಮಾಡುವುದು ಅಗತ್ಯ ಎನ್ನುತ್ತಾರೆ ಸೌಂದರ್ಯ ತಜ್ಞರು.
“ಹೋಳಿಯ ಸಂಭ್ರಮದಲ್ಲಿ ಮಿಂದಿದ್ದಾಯಿತು. ತ್ವಚೆ ಹಾಗೂ ಕೂದಲು ಕೂಡ ರಂಗು ರಂಗಾಯಿತು. ಆದರೆ, ಸುಕೋಮಲವಾಗಿದ್ದ ಮುಖ ಒರಟಾಗಿದೆ. ಇನ್ನು ಗಾಳಿಯಲ್ಲಿ ಹಾರಾಡುತ್ತಿದ್ದ ಕೂದಲು ನೆಟ್ಟಗೆ ಪೊರಕೆಯಂತಾಗಿದೆ. ಇದೇನಿದು ಎಂದು ಆಶ್ಚರ್ಯ ಪಡಬೇಡಿ! ಇದೆಲ್ಲಾ ಹೋಳಿ ಸಂಭ್ರಮದ ಸೈಡ್ ಎಫೆಕ್ಟ್! ಹಾಗಾಗಿ, ಸೆಲೆಬ್ರೇಷನ್ ನಂತರ ಸೂಕ್ತ ಆರೈಕೆ ತೆಗೆದುಕೊಂಡಲ್ಲಿ ಅತಿ ಬೇಗ ಮೊದಲಿನ ಸೌಂದರ್ಯವನ್ನು ಮರಳಿ ಪಡೆಯಬಹುದು” ಎನ್ನುತ್ತಾರೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್.
ರಂಗಿನಿಂದ ತ್ವಚೆಯನ್ನು ಮುಕ್ತವಾಗಿಸಲು ಹೀಗೆ ಮಾಡಿ
ಹೋಳಿಯಾಡಿದ ನಂತರ ಮುಖದ ಅಂದ ಕಳೆಗುಂದುವುದು. ಬಣ್ಣಗಳು ತ್ವಚೆಯ ಚರ್ಮವನ್ನು ಒರಟುಗೊಳಿಸುತ್ತವೆ. ಸುಕೋಮಲವಾದ ತ್ವಚೆ ಕೊಂಚ ಹಾನಿಗೀಡಾಗುತ್ತದೆ. ಜತೆಗೆ ಬಣ್ಣ ಮುಖದಲ್ಲಿನ ರಂಧ್ರದಲ್ಲಿಸೇರಿ ಮೊಡವೆಗಳಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ತಕ್ಷಣ ಮುಖದ ಆರೈಕೆ ಅತ್ಯಗತ್ಯ. ಮುಖವನ್ನು ಬಾರಿ ಬಾರಿ ತೊಳೆಯುವ ಬದಲು,
ಸ್ಟೀಮ್ ತೆಗೆದುಕೊಳ್ಳಿ. ವಾರದ ಕಾಲ ಕ್ಲೆನ್ಸಿಂಗ್ ಮಾಡಿ
ಹೋಳಿಯ ನಂತರ ಒಂದೆರೆಡು ದಿನ ಕ್ಲೆನ್ಸಿಂಗ್ ರೂಢಿಸಿಕೊಂಡಲ್ಲಿ ಮುಖ ಮತ್ತೊಮ್ಮೆಸುಕೋಮಲವಾಗುವುದು. ಕ್ಲೆನ್ಸಿಂಗ್ ಮಾಡಲು ಹೀಗೆ ಮಾಡಿ. ಕೊಂಚ ತಣ್ಣೀರಿಗೆ, ಒಂದು ಚಮಚ ಆಲಿವ್ ಆಯಿಲ್, ಸ್ವಲ್ಪ ಹಾಲು ಸೇರಿಸಿ. ಇದರಲ್ಲಿ ಹತ್ತಿ ಅದ್ದಿ, ಮೃದುವಾಗಿ ಮುಖಕ್ಕೆ ಸವರಿ ಕ್ಲೆನ್ಸಿಂಗ್ ಮಾಡಿ. ವಾರದವರೆಗೂ ಆಗಾಗ್ಗೆ ಕ್ಲೆನ್ಸ್ ಮಾಡಿ. ತ್ವಚೆ ಸುಕೋಮಲವಾಗುವುದು.
ಕೂದಲ ಬಣ್ಣ ತೆಗೆಯಲು ಹೀಗೆ ಮಾಡಿ
ಹೋಳಿ ಆಡಿದ ನಂತರ ಕೂದಲಲ್ಲಿ ಬಣ್ಣದ ಪುಡಿಯಂತವು ಸೇರಿಕೊಂಡಿರುತ್ತವೆ. ಹಾಗಾಗಿ ಬಣ್ಣದ ಎರೆಚಾಟದ ನಂತರ ತಲೆ ಸ್ನಾನದ ಬಗ್ಗೆ ಗಮನಹರಿಸುವುದು ಮುಖ್ಯ. ಸಾದಾ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಒಣಗಿದಂತಾಗಿರುವ ಕೂದಲಿಗೆ ಕಂಡಿಷನಿಂಗ್ ಮಾಡುವುದು ಅಗತ್ಯ. ಉಗುರು ಬೆಚ್ಚಗಿನ ಸಾದಾ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕೊನೆಯಲ್ಲಿ ನಿಂಬೆರಸವನ್ನು ನೀರಿಗೆ ಮಿಕ್ಸ್ ಮಾಡಿ ಕೂದಲನ್ನು ವಾಶ್ ಮಾಡಿ. ಹರ್ಬಲ್ ಶಾಂಪೂ ಬಳಸಬಹುದು. ಒಂದೆರೆಡು ದಿನ ಕಂಡೀಷನರ್ ಬಳಸಿ ಹೇರ್‌ವಾಶ್ ಮಾಡಿದಲ್ಲಿಕೂದಲು ಮೊದಲಿನಂತಾಗುವುದು.
ವಧನಕ್ಕೆ ಎಫೆಕ್ಟ್ ಆಗದಂತೆ ಹೋಳಿಯಾಡುವುದು ಹೇಗೆ?
- ಕಣ್ಣಿನ ಸಂರಕ್ಷಣೆಗೆ ಸನ್ಗ್ಲಾಸ್ ಧರಿಸಿ.
- ಕೂದಲನ್ನು ಹಾರಾಡದಂತೆ ಪೋನಿಟೇಲ್ ಹಾಕಿ.
- ಮೇಕಪ್ ಹಚ್ಚಿ ಹೋಳಿಯಾಡಬೇಡಿ.
- ನೈಸರ್ಗಿಕ ಬಣ್ಣಗಳನ್ನು ಹೋಳಿಯಾಡಲು ಬಳಸಿ.
- ಮುಖಕ್ಕೆ ಉಜ್ಜಿ ಉಜ್ಜಿ ಬಣ್ಣ ಹಚ್ಚದಿರಿ.
- ಲಿಕ್ವಿಡ್ ಹೋಳಿಯಾಟವನ್ನು ಆದಷ್ಟೂ ಆವಾಯ್ಡ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Organic Holi: ಕಲರ್‌ಫುಲ್ ಹೋಳಿ ಆಚರಣೆಗೆ ಬಂತು ನೈಸರ್ಗಿಕ ಬಣ್ಣಗಳು