ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಈಗಾಗಲೇ ನಾನಾ ವಿನ್ಯಾಸದ ಓಕುಳಿಯನ್ನು ಬಿಂಬಿಸುವ ಪ್ರಿಂಟೆಡ್ ಸೀರೆಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ. ನೋಡಲು ಓಕುಳಿಯಾಡಿದಂತಹ ಅನುಭವ ನೀಡುವ ಈ ಸೀರೆಗಳು ಇದೀಗ ಮಾನಿನಿಯರ ಮನ ಸೆಳೆದಿವೆ.
ಇವುಗಳಲ್ಲಿ ಆರ್ಟಿಸ್ಟಿಕ್ ವಿನ್ಯಾಸದವು, ಬ್ರಶ್ ಸ್ಟ್ರೋಕ್ ವಿನ್ಯಾಸ ಹಾಗೂ ಓಕುಳಿಯಾಡಿದಾಗ ಉಂಟಾಗುವಂತಹ ಬಣ್ಣದ ಕಲರ್‌ಫುಲ್ ಪ್ರಿಂಟ್ಸ್ ಬಗೆಯವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅಷ್ಟು ಮಾತ್ರವಲ್ಲ, ಶ್ವೇತ ವರ್ಣದ ಸೀರೆಯ ಮೇಲೆ ಬಣ್ಣ ಎರಚಿದಂತಿರುವಂತಹ ಪ್ರಿಂಟ್‌ನವು ಸಖತ್ ಡಿಮ್ಯಾಂಡ್ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಪರಂಪರಾ ಕ್ರಿಯೇಟಿವ್ ಡಿಸೈನರ್.
ಹೋಳಿಯಲ್ಲಿ ಆರ್ಟಿಸ್ಟಿಕ್ ಸೀರೆಗಳಿಗೆ ಡಿಮ್ಯಾಂಡ್
ಮುಂಬರುವ ಸೀಸನ್‌ಗೆ ಹೊಂದುವಂತಹ ಕಾಟನ್, ಸಾಫ್ಟ್ ಕಾಟನ್ ಹಾಗೂ ಮಲ್‌ಮಲ್ ಕಾಟನ್ ಸೀರೆಗಳು ಆರ್ಟಿಸ್ಟಿಕ್ ಪ್ರಿಂಟ್ಸ್‌ನ ವಿನ್ಯಾಸದಲ್ಲಿ ದೊರಕುತ್ತಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಸೀರೆಗಳು ಆಫೀಸ್‌ವೇರ್ ಕೆಟಗರಿಯಲ್ಲೂ ದೊರಕುತ್ತಿವೆ. ಓಕುಳಿಯಾಡದೆ ಹಬ್ಬವನ್ನು ರೆಪ್ರೆಸೆಂಟ್ ಮಾಡುವ ಇವು ಸಂಭ್ರಮವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಸೀರೆ ಪ್ರೇಮಿ ಪಾಯಲ್ ಸೇನ್ ಗುಪ್ತಾ. ಅವರ ಪ್ರಕಾರ, ಈ ಸೀಸನ್‌ಗೆ ಇವು ಆಕರ್ಷಕವಾಗಿ ಕಾಣುತ್ತವಲ್ಲದೇ ಧರಿಸಿದಾಗ ಆರಾಮ ಎನಿಸುತ್ತವೆ. ಅಷ್ಟೊಂದು ಸಾಫ್ಟ್ ಆಗಿರುತ್ತವೆ ಎನ್ನುತ್ತಾರೆ ಅವರು.
ಬ್ರಶ್‌ಸ್ಟ್ರೋಕ್ ಸೀರೆಗಳು
ಇನ್ನು ಬ್ರಶ್ ಸ್ಟೋಕ್ ಪ್ರಿಂಟ್‌ನ ಸೀರೆಗಳು ಅಷ್ಟೇ ನೋಡಲು ಮನಮೋಹಕವಾಗಿ ಕಾಣುತ್ತವೆ. ಕಲಾತ್ಮಕ ಚಿತ್ತಾರಗಳನ್ನು ಇಷ್ಟಪಡುವವರಿಗೆ ಇವು ಹೆಚ್ಚು ಪ್ರಿಯವಾಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸೀಸನ್‌ಗೆ ಹೇಳಿಮಾಡಿಸಿದಂತಹ ಸೀರೆಗಳಿವು. ಮೂರಕ್ಕಿಂತ ಹೆಚ್ಚು ಬಣ್ಣಗಳು ಇಡೀ ಸೀರೆಯ ಮೇಲೆ ಕಲಾತ್ಮಕವಾಗಿ ಹರಡಿರುವಂತೆ ಕಾಣುತ್ತದೆ. ಇದು ಈ ಸೀರೆಗಳ ವಿಶೇಷ. ಇವು ಕೂಡ ವರ್ಕಿಂಗ್ ವುಮೆನ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಇದೀಗ ಶ್ವೇತ ವರ್ಣದ ಸೀರೆಗಳ ಮೇಲೆ ಇಂತಹ ಬಣ್ಣ ಬಣ್ಣದ ಪ್ರಿಂಟ್ಸ್ ಇರುವಂತವು ದೊರೆಯುತ್ತಿವೆ ಎನ್ನುತ್ತಾರೆ ವಿನ್ಯಾಸಕರು.
ಹೋಳಿ ಹ್ಯಾಂಡ್‌ಲೂಮ್ ಸೀರೆಗಳು
ಹೋಳಿ ಹಬ್ಬದಲ್ಲಿ ಬಣ್ಣವನ್ನು ಎರಚದೇ ಹಬ್ಬವನ್ನು ಸಂಭ್ರಮಿಸಲು ಬಯಸುವವರು ಈ ಹ್ಯಾಂಡ್‌ಲೂಮ್‌ನಲ್ಲಿ ಸಿದ್ಧಪಡಿಸಿದ ಹೋಳಿ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಉಟ್ಟರೇ ಸೆಕೆಯಾಗುವುದಿಲ್ಲ. ನೋಡಲು ಕೂಡ ಆಕರ್ಷಕವಾಗಿ ಕಾಣುತ್ತವೆ. ವರ್ಕಿಂಗ್ ವುಮೆನ್‌ಗೆ ಹೇಳಿ ಮಾಡಿಸಿದಂತಿರುತ್ತವೆ.
ಹೋಳಿ ಸಂಭ್ರಮಕ್ಕೆ ಸೀರೆಗಳನ್ನು ಉಡುವವರಿಗೆ 4 ಸಲಹೆ
- ಸೀರೆ ಉಟ್ಟಾಗ ಮೈಗೆ ಅಂಟದಿರುವಂತಿರಬೇಕು.
- ಸೀರೆ ಮೇಲಿನ ಹೋಳಿ ಬಣ್ಣದ ಪ್ರಿಂಟ್ಸ್ ಕಾಂಟ್ರಾಸ್ಟ್ ಆಗಿರಬೇಕು.
- ಸೀರೆಗೆ ಧರಿಸುವ ಆಕ್ಸೆಸರೀಸ್ ಮಲ್ಟಿಪಲ್ ಕಲರ್ಸ್ನದ್ದಾಗಿರುವುದು ಉತ್ತಮ.
- ಈ ಸೀರೆ ಹೋಳಿಯಾಡಲು ಸೂಕ್ತವಲ್ಲ, ಹಬ್ಬದ ಸಂಭ್ರಮಕ್ಕಷ್ಟೇ ಎಂಬುದು ನೆನಪಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Organic Holi: ಕಲರ್‌ಫುಲ್ ಹೋಳಿ ಆಚರಣೆಗೆ ಬಂತು ನೈಸರ್ಗಿಕ ಬಣ್ಣಗಳು