Site icon Vistara News

Home Remedies: ಕೆಮ್ಮಿ, ಕೆಮ್ಮಿ ಸುಸ್ತಾಯ್ತಾ? ಚಿಂತೆ ಬಿಟ್ಟು ಈ ಮನೆಮದ್ದು ಟ್ರೈ ಮಾಡಿ

cough

cough

ಬೆಂಗಳೂರು: ಇನ್ನೇನು ಚಳಿಗಾಲ (winter season) ಆರಂಭವಾಗುವ ಹೊತ್ತು. ವಾತಾವರಣ ಬದಲಾಗುವ ಜತೆಗೆ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಳ್ಳಲು ಸಮಯವಿದು. ಈ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಕೆಮ್ಮು (cough) ಮತ್ತು ಗಂಟಲು ನೋವು. ಇದು ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲ ಗಂಟಲು ಕಟ್ಟಿದಂತಾಗಿ ಆಹಾರ ಸೇವಿಸಲೂ ಸಮಸ್ಯೆ ತಂದೊಡ್ಡುತ್ತದೆ. ಹವಾಮಾನ ಬದಲಾವಣೆ ಮಾತ್ರವಲ್ಲ ಅಲರ್ಜಿ ಮತ್ತು ಮಾಲಿನ್ಯದ ಕಾರಣದಿಂದಲೂ ಈ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಕೆಲವೊಮ್ಮೆ ಅದರಲ್ಲೂ ರಾತ್ರಿ ಕೆಮ್ಮು ಬಂದರೆ ಅದನ್ನು ನಿಯಂತ್ರಿಸಲು ಸಾಧ್ಯವೇ ಆಗುವುದಿಲ್ಲ. ಆದರೆ ಚಿಂತೆ ಮಾಡಬೇಕಾಗಿಲ್ಲ. ಮನೆಯಲ್ಲೇ ದೊರೆಯುವ ವಸ್ತುಗಳ ಸಹಾಯದಿಂದ (home remedies) ಕೆಮ್ಮಿನ ಸಮಸ್ಯೆಯಿಂದ ಪಾರಾಗಬಹುದು. ಈ ಕುರಿತಾದ ವಿವರ ಇಲ್ಲಿದೆ.

ಜೇನು

ಕೆಮ್ಮು ಸಮಸ್ಯೆ ಪರಿಹಾರಕ್ಕೆ ನಮ್ಮ ಹಿರಿಯರ ಕಾಲದಿಂದಲೂ ಬಳಸುತ್ತಿರುವ ಮನೆಮದ್ದು ಎಂದರೆ ಅದು ಜೇನು. ಇತರ ಯಾವುದೇ ಅಲೋಪತಿ ಔಷಧಕ್ಕಿಂತಲೂ ಜೇನು ಕೆಮ್ಮಿನ ಸಮಸ್ಯೆಗೆ ಉತ್ತಮ ಪರಿಹಾರ. ವಿಶೇಷ ಎಂದರೆ ಇದು ಎಲ್ಲ ವಯಸ್ಸಿನವರಿಗೂ ಪರಿಣಾಮಕಾರಿ. ಇದರಲ್ಲಿನ ರೋಗ ನಿರೋಧಕ ಗುಣ, ಆ್ಯಂಟಿಮೈಕ್ರೊಬಿಯಲ್ ಶಕ್ತಿ ಗಂಟಲು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅದಾಗ್ಯೂ 1 ವರ್ಷದೊಳಗಿನ ಶಿಶುಗಳಿಗೆ ಜೇನು ನೀಡಬಾರದು. ಇದು ಅವರ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀಎಬಹುದು. ಹರ್ಬಲ್‌ ಟೀ ಅಥವಾ ಬಿಸಿ ನೀರಿಗೆ 2 ಚಮಚ ಜೇನು ಸೇರಿಸಿ ದಿನಕ್ಕೆ ಒಂದೆರಡು ಬಾರಿ ಸೇವಿಸಿ.

ಬೆಳ್ಳುಳ್ಳಿ

ಗಾಢವಾದ ವಾಸನೆ, ಖಾರದ ಗುಣ ಹೊಂದಿರುವ ಬೆಳ್ಳುಳ್ಳಿ ನಿಮ್ಮ ಅಡುಗೆಯ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ ಆರೋಗ್ಯವನ್ನೂ ಕಾಪಾಡುತ್ತದೆ. ಇದರಲ್ಲಿ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಿ ಗುಣಗಳಿವೆ. ಹೀಗಾಗಿ ಪ್ರತಿದಿನ ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಿಸುವ ಜತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಬಹುದು. ಕೆಮ್ಮು ಕಾಣಿಸಿಕೊಂಡರೆ ಬೆಳ್ಳುಳ್ಳಿ ಎಸಳು ಮತ್ತು ಲವಂಗವನ್ನು ಹುರಿದು ಮಲಗುವ ಮುನ್ನ ಸೇವಿಸಿ. ಅಲ್ಲದೆ ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು ನಿಮ್ಮ ಆಹಾರಕ್ಕೆ ಸೇರಿಸಿಯೂ ಸೇವಿಸಬಹುದು. ಇದು ಕೆಮ್ಮಿನಿಂದ ಮುಕ್ತಿ ನೀಡುವ ಜತೆಗೆ ಜೀರ್ಣ ಕ್ರಿಯೆಯನ್ನೂ ಹೆಚ್ಚಿಸುತ್ತದೆ.

ಶುಂಠಿ

ನಮ್ಮ, ಹಿರಿಯರು ಕಂಡುಕೊಂಡ ಇನ್ನೊಂದು ಅದ್ಭುತ ಔಷಧ ಶುಂಠಿ. ನೆಗಡಿ, ಕೆಮ್ಮು, ಕಫದ ಸಮಸ್ಯೆಯಿಂದಲೂ ಇದು ನಿಮ್ಮನ್ನು ಕಾಪಾಡುತ್ತದೆ. ಅಧ್ಯಯನವೊಂದರ ಪ್ರಕಾರ ಶುಂಠಿಯಲ್ಲಿರುವ ಜಿಂಜರೋಲ್ ಎಂಬ ರಾಸಾಯನಿಕ ಸಂಯುಕ್ತವು ಕೆಮ್ಮು ಸೇರಿದಂತೆ ಅಸ್ತಮಾದ ರೋಗಲಕ್ಷಣಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಬಿಸಿ ಬಿಸಿಯಾದ ಶುಂಠಿ ಚಹಾ ಸೇವನೆ ಜತೆಗೆ ಕರಿಮೆಣಸಿನ ಪುಡಿ ಮತ್ತು ಜೇನನ್ನು ಸೇರಿಸಿದ ಶುಂಠಿ ಜ್ಯೂಸ್‌ ಕುಡಿಯುವುದರಿಂದ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ. ಆದರೆ ನೆನಪಿಡಿ ಶುಂಠಿಯ ಅತಿಯಾದ ಸೇವನೆಯೂ ಅಪಾಯಕಾರಿ. ಶುಂಠಿಯ ಪ್ರಮಾಣ ಶರೀರದಲ್ಲಿ ಹೆಚ್ಚಿದರೆ ಎದೆಯುರಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅನಾನಸ್

ಅನಾನಸ್ ಹಣ್ಣು ಕೂಡ ಕೆಮ್ಮನ್ನು ನಿಯಂತ್ರಿಬಲ್ಲದು. ಇದರಲ್ಲಿ ಬ್ರೊಮೆಲೈನ್ ಎಂಬ ಅಂಶವಿದ್ದು, ಇದನ್ನು ಕೆಮ್ಮಿಗೆ ಪರಿಣಾಮಕಾರಿ ಪರಿಹಾರವೆಂದು ಪರಿಗಣಿಸಲಾಗಿದೆ. ಈ ಅಂಶವು ಕೆಮ್ಮನ್ನು ನಿಗ್ರಯಂತ್ರಿಸಲು ಮತ್ತು ಕಟ್ಟಿದ ಕಫವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ಅನಾನಸ್ ಸೈನಸೈಟಿಸ್ ಮತ್ತು ಅಲರ್ಜಿ ಆಧಾರಿತ ಸೈನಸ್ ಸಮಸ್ಯೆಗಳನ್ನು ನಿವಾರಿಸಲೂ ಸಹಾಯ ಮಾಡುತ್ತದೆ. ಕೆಮ್ಮು ನಿಯಂತ್ರಣಕ್ಕೆ ಬರಲು ಅನಾನಸು ಹಣ್ಣಿನ ತುಂಡನ್ನು ಆಗಾಗ ತಿನ್ನುತ್ತಿರಿ ಅಥವಾ ಅನಾನಸು ತಾಜಾ ಜ್ಯೂಸ್‌ ಅನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ಕೋಲ್ಡಾಗಿರುವ ಹಣ್ಣು ಮತ್ತು ಜ್ಯೂಸ್‌ ಸೇವಿಸಬೇಡಿ.

ಅರಶಿನ

ಭಾರತೀಯ ಪ್ರತಿ ಅಡುಗೆ ಮನೆಯಲ್ಲಿ ಕಾಣಸಿಗುವ ಅರಶಿನ ಅದ್ಭುತ ಔಷಧೀಯ ಗುಣಕ್ಕೆ ಪ್ರಸಿದ್ಧ. ಆಗಾಗ ಕಂಡುಬರುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ. ಶತಮಾನಗಳ ಹಿಂದೆಯೇ ಆಯುರ್ವೇದ ಪ್ರಕಾರದಲ್ಲಿ ಅರಶಿನವನ್ನು ಬಳಸಲಾಗುತ್ತಿತ್ತು. ಇದರಲ್ಲಿ ಆ್ಯಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮಲಗುವ ಮುನ್ನ ಬಿಸಿ ಹಾಲಿಗೆ ಕಾಲು ಚಮಚ ಅರಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕುಡಿಯುವುದರಿಂದ ಕೆಮ್ಮನ್ನು ನಿವಾರಿಸಬಹುದು.

ಉಪ್ಪು ನೀರು

ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುವುದು ಗಂಟಲು ನೋವಿಗಿರುವ ಪರಿಣಾಮಕಾರಿ ಔಷಧ. ಇದನ್ನೇ ವೈದ್ಯರು ಕೂಡ ಸೂಚಿಸುತ್ತಾರೆ. ಇದು ಮೂಗು ಮತ್ತು ಇತರೆಡೆಗಳಲ್ಲಿ ಕಟ್ಟಿ ನಿಂತಿರುವ ಕಫವನ್ನು ಕರಗಿಸುತ್ತದೆ. ಆದರೆ ಇದನ್ನು ಮಕ್ಕಳಲ್ಲಿ ಪ್ರಯೋಗಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರು ಈ ನೀರನ್ನು ಕುಡಿದು ಬಿಡುವ ಸಾಧ್ಯತೆ ಇದೆ. ಒಂದು ಲೋಟ ಬಿಸಿ ನೀರಿಗೆ ಕಾಲು ಚಮಚ ಕಲ್ಲು ಉಪ್ಪು ಸೇರಿಸಿ ದಿನದಲ್ಲಿ ಮೂರ್ನಾಲ್ಕು ಬಾರಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವಿನಿಂದ ಶೀಘ್ರ ಪರಿಹಾರ ಪಡೆಯಬಹುದು.

ಪುದೀನಾ

ಪುದೀನಾ ಎಲೆಗಳಲ್ಲಿ ಮೆಂಥಾಲ್‌ ಎನ್ನುವ ರಾಸಾಯನಿಕವಿದ್ದು ಇದು ಕೆಮ್ಮಿನಿಂದ ನಿಮಗೆ ಮುಕ್ತಿ ಒದಗಿಸುತ್ತದೆ. ದಿನಕ್ಕೆ 2-3 ಬಾರಿ ಪುದೀನಾ ಚಹಾ ಕುಡಿಯುವ ಮೂಲಕ ಕೆಮ್ಮಿನ ಸಮಸ್ಯೆಯಿಂದ ಪಾರಾಗಬಹುದು. ಅಲ್ಲದೆ ಪುದೀನಾ ಎಣ್ಣೆಯನ್ನೂ ಬಳಸಬಹುದು.

ಸ್ಟೀಮ್‌

ಇದು ಕೆಮ್ಮು, ಕಫದ ಸಮಸ್ಯೆಯಿಂದ ಪಾರಾಗಲು ಕೈಗೊಳ್ಳಬಹುದಾದ ಸರಳ ವಿಧಾನ. ನೀವು ಎಳೆದುಕೊಳ್ಳುವ ಬಿಸಿ ಬಿಸಿಯಾದ ಗಾಳಿ ಕಫವನ್ನು ಕರಗಿಸಿ ಕೆಮ್ಮಿನ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡುತ್ತದೆ. ಒಂದು ಪಾತ್ರೆಯಲ್ಲಿ ಕುದಿಯುವ ನೀರು ತೆಗೆದುಕೊಳ್ಳಿ. ಅದಕ್ಕೆ ವಿಕ್ಸ್‌, ನೀಲಗಿರಿ ಎಣ್ಣೆ ಮತ್ತಿತರ ಕಫ ನಿರೋಧಕ ಔಷಧವನ್ನು ಬೆರೆಸಿ, ಮುಖ, ತಲೆ ಕವರ್‌ ಆಗುವಂತೆ ಟವೆಲ್‌ ಹೊದ್ದು ಬಗ್ಗಿ ಹೊಗೆಯನ್ನು ಮೂಗಿನ ಮೂಲಕ ಎಳೆಯಿರಿ. ಹೀಗೆ ಸುಮಾರು 5 ನಿಮಿಷಗಳ ಕಾಲ ಮಾಡಿ. ಆದರೆ ಬಾಗುವಾಗ ಮುಖಕ್ಕೆ ಬಿಸಿ ನೀರು ಸೋಂಕದಂತೆ ಎಚ್ಚರಿಕೆ ವಹಿಸಿ ಮತ್ತು ಸ್ಟೀಮ್‌ ತೆಗೆದುಕೊಂಡ ಕೂಡಲೇ ಸಾಕಷ್ಟು ನೀರು ಕುಡಿಯಿರಿ.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆಯು ನಿಮಗೆ ಕೆಮ್ಮಿನ ಸಮಸ್ಯೆಯಿಂದ ಪರಿಹಾರ ಒದಗಿಸುತ್ತದೆ. ಈ ತೈಲದ ಒಂದೆರಡು ಹನಿ ತೆಗೆದುಕೊಂಡು ಎದೆಯ ಮೇಲೆ ಮಸಾಜ್‌ ಮಾಡುವುದರಿಂದ ಕಫ ಕರಗಿ ಕೆಮ್ಮಿನ ಸಮಸ್ಯೆಯಿಂದ ಮುಕ್ತಿ ಲಭಿಸುತ್ತದೆ. ತೆಂಗಿನೆಣ್ಣೆಗೆ ನೀಲಗಿರಿ ಎಣ್ಣೆಯನ್ನು ಮಿಕ್ಸ್‌ ಮಾಡಿ ಎದೆ ಮತ್ತು ಗಂಟಲಿನ ಭಾಗವನ್ನು ಮಸಾಜ್‌ ಕೂಡ ಮಾಡಬಹುದು.

ಇದನ್ನೂ ಓದಿ: Home Remedies: ಇರುವೆ ಕಾಟದಿಂದ ಮುಕ್ತಿ ಬೇಕೆ? ಈ ಮನೆಮದ್ದು ಟ್ರೈ ಮಾಡಿ

Exit mobile version