ಈತನ ಕಥೆ ಯಾವ ಸಿನೆಮಾದ ಕಥೆಗೂ ಕಡಿಮೆ ಇಲ್ಲ. ಇದು ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಕಳವು ಮತ್ತಿತರ ಅಪರಾಧಗಳನ್ನು ಮಾಡಿ, ಡ್ರಗ್ ವ್ಯಸನಿಯಾಗಿ, ಜೈಲಿಗೆ ಹೋಗಿ ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿ, ಕೊನೆಗೂ ಇವೆಲ್ಲವುಗಳಿಂದ ಹೊರಬಂದು ಹೊಸ ಮನುಷ್ಯನಾಗಿ ಬದಲಾವಣೆ ಹೊಂದಿ, ತನ್ನಂತೆ ಕಷ್ಟಡುತ್ತಿರುವವರ ಕಣ್ತೆರೆಸುವ ಕೆಲಸ ಮಾಡಿ ಪೊಲೀಸ್ ಪ್ರಶಸ್ತಿಯನ್ನೂ ತನ್ನದಾಗಿಸಿರುವ ಮೈಕೆಲ್ ಮೇಸೀ ಎಂಬಾತನ ಯಶೋಗಾಥೆ. ತಮ್ಮನ್ನು ತಾವು ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಿದೆ ಎಂದು ತೋರಿಸಿಕೊಟ್ಟು ಹಲವರಿಗೆ ಸ್ಪೂರ್ತಿಯಾದಾತನ Life story ಇದು!
ತೀರಾ ಸಣ್ಣ ವಯಸ್ಸಿನಲ್ಲೇ ಸ್ಯಾಂಡ್‌ವಿಚ್ ಮತ್ತಿತರ ತಿಂಡಿ ಕದಿಯುವುದರಿಂದ ಆರಂಭವಾದ ಈತನ ಅಪರಾಧ ಜಗತ್ತು, ಹದಿಹರೆಯದಲ್ಲೇ ದರೋಡೆಯವರೆಗೂ ವಿಸ್ತರಿಸಿತ್ತು. ತನ್ನ ಪಟಾಲಾಂ ಕಟ್ಟಿಕೊಂಡು ಸಣ್ಣ ವಯಸ್ಸಿನಲ್ಲಿ ಕದಿಯುವುದು, ದೋಚುವುದು ಮಾಡುತ್ತಾ, ಕೊನೆಗೆ ಕೇವಲ ಹನ್ನೆರಡರ ಸಣ್ಣ ವಯಸ್ಸಿಗೆ ಡ್ರಗ್ ಅಡಿಕ್ಟ್ ಆಗಿ, ಹದಿಹರೆಯದಲ್ಲೇ ಜೈಲು ಪಾಲಾದ ಮೈಕೆಲ್, ಇದೀಗ ಸಂಪೂರ್ಣ ಬದಲಾಗಿ ಇಬ್ಬರು ಮುದ್ದಾದ ಮಕ್ಕಳ ತಂದೆ! ಸುಖೀ ಸಂಸಾರ. ಈತನ ಪತ್ನಿ ಸಾಶಾ ರೈಟ್ ಬ್ಯೂಟಿ ಥೆರಪಿಸ್ಟ್. ಸದ್ಯ ೪೦ರ ಹರೆಯದ ಈ ಮೈಕೆಲ್ ೨೦೧೮ರಿಂದ ಸಿಐಪಿ (ಚೇಂಜ್ ಈಸ್ ಪಾಸಿಬಲ್) ಎಂಬ ಕಮ್ಯೂನಿಟಿ ಸಪೋರ್ಟ್ ಗುಂಪೊಂದನ್ನು ಕಟ್ಟಿಕೊಂಡು, ತನ್ನಂತೆ ಸಣ್ಣ ವಯಸ್ಸಿನಲ್ಲಿ ತೊಂದರೆ ಎದುರಿಸುತ್ತಿರುವ ಮಂದಿಗೆ ಹೆಗಲಾಗಿದ್ದಾರೆ. ಅವರ ಪಾಲಿಗೆ ಭರವಸೆಯ ಬೆಳಕು ನೀಡಲು ಪ್ರಯತ್ನಿಸುತ್ತಿದ್ದಾರೆ!
ಇಂಗ್ಲೆಂಡಿನ ಕ್ಲೇಹೈಡನ್ ಎಂಬ ಹಳ್ಳಿಯ ಆತನ ಈ ಹಾದಿಯ ಪಯಣದ ಬಗೆಗೆ ಆತನ ಮಾತಿನಲ್ಲೇ ಕೇಳಬೇಕು. “ಸಣ್ಣ ವಯಸ್ಸಿನಲ್ಲಿ ನಾನು ಬಹಳ ಸಿಟ್ಟಿನ, ಹೀಗೆ ಎಂದು ಹೇಳಲಾಗದ ವಿಚಿತ್ರ ಸ್ವಭಾವದ ಹುಡುಗನಾಗಿದ್ದೆ. ನಾನು ಶಾಲೆಯಲ್ಲೂ ಬಹಳ ತೊಂದರೆಗಳನ್ನು ಮಾಡಿದ್ದೇನೆ. ಹೀಗಾಗಿ ಅಲ್ಲಿ ನನ್ನನ್ನು ಎಲ್ಲರೂ ತಮ್ಮಿಂದ ದೂರವಿರಿಸಿದರು. ಹಿರಿಯರೂ ಕೂಡಾ ನನ್ನನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಸೂಪರ್ ಮಾರ್ಕೆಟಿನಲ್ಲಿ ಸ್ಯಾಂಡ್‌ವಿಚ್ ಕದಿಯುವುದರಿಂದ ಶುರುವಾದ ನನ್ನ ಕಳ್ಳತನದ ಕೆಲಸಗಳು ಮುಂದೆ ಹೆಚ್ಚಾಗುತ್ತಾ ಹೋಯಿತು. ಅಂಗಡಿಗಳಿಂದ, ದೊಡ್ಡ ದೊಡ್ಡ ಬಂಗಲೆ/ಕಾರುಗಳಿದ್ದ ಮನೆಯ ಕಾಂಪೌಂಡಿನಿಂದ ಏನಾದರೊಂದು ಕದಿಯುತ್ತಿದ್ದೆ. ಪ್ರತಿಸಲವೂ ೩೦೦ರಿಂದ ೬೦೦ ಪೌಂಡ್ ಮೌಲ್ಯದ ವಸ್ತುಗಳು ನನ್ನ ಪಾಲಾಗುತ್ತಿದ್ದವು. ಹೀಗೆ ಕದಿಯುತ್ತಾ ಕದಿಯುತ್ತಾ ಬೇರೆಯೇ ಪ್ರಪಂಚಕ್ಕೆ ಕಾಲಿಟ್ಟ ನನಗೆ ಡ್ರಗ್ಸ್ ಪರಿಚಯವಾಯಿತು. ಕೇವಲ ಹನ್ನೆರಡರ ವಯಸ್ಸಿಗೆ ಡ್ರಗ್ ದಾಸನಾಗಿಬಿಟ್ಟೆ. ನನ್ನ ಎಲ್ಲ ನೋವುಗಳನ್ನು ಮರೆಯಲು ಡ್ರಗ್ ಸೇವನೆ ಸುಲಭೋಪಾಯ ಎನಿಸುತ್ತಿತ್ತು. ಅದನ್ನು ಸೇವಿಸಿದ ತಕ್ಷಣ ನಾನು ಸ್ವರ್ಗದಲ್ಲಿದ್ದಂತೆ ಅನಿಸುತ್ತಿತ್ತು. ನನ್ನ ಪಾಲಿಗೆ ಡ್ರಗ್ ನಾನು ಮಾಡುತ್ತಿದ್ದ ಕೆಲಸಗಳಿಂದ ಸಿಗುತ್ತಿದ್ದ ಎಸ್ಕೇಪ್ ಆಗಿರುತ್ತಿತ್ತು.”
“ಹೀಗೆ ಕಳ್ಳತನವನ್ನೇ ಮುಂದುವರಿಸಿ ಒಂದು ದಿನ ಸಿಕ್ಕಿಬಿದ್ದೆ. ನನ್ನನ್ನು ಸಣ್ಣ ವಯಸ್ಸಿನ ಅಪರಾಧಿಗಳ ಜೈಲಿನಲ್ಲಿರಿಸಿದರು. ಆಗ ೧೯೯೯. ನನಗೆ ೧೮ ವರ್ಷವಾಗಿತ್ತು. ಪ್ರತಿ ದಿನವೂ ಬೆಳಗ್ಗೆದ್ದು ಡ್ರಗ್ ಸೇವಿಸುತ್ತಿದ್ದುದರಿಂದ ನನಗೆ ಜೈಲಿನಲ್ಲಿ ಅದರಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜೈಲಿನಲ್ಲಿ ಆತ್ಮಹತ್ಯೆಯ ಪ್ರಯತ್ನ ಮಾಡಿದೆ. ಆದರೆ, ಜೈಲಿನ ಗಾರ್ಡ್ ನನ್ನನ್ನು ರಕ್ಷಿಸಿದ. ನಾನು ಸಾಯುವುದು ಸ್ವಲ್ಪದರಲ್ಲಿ ತಪ್ಪಿತು. ಅದೇ ವರ್ಷದ ಕೊನೆಯಲ್ಲಿ ನನ್ನ ಬಿಡುಗಡೆಯೂ ಆಯಿತು. ನನಗೆ ಚಿಂದಿ ಆಯುವ ಕೆಲಸ ಕೊಟ್ಟರು. ಆ ಮೂಲಕ ಹೊಸ ಬದುಕು ಕಟ್ಟಲು ನಾನು ಆರಂಭಿಸಿದೆ.” ಎಂದು ವಿವರಿಸುತ್ತಾರೆ.
ಇದನ್ನೂ ಓದಿ | ಮೊಸಳೆ ಜಂಪ್ ಮಾಡಿ, ಓಡೋದನ್ನು ಎಂದಾದರೂ ನೋಡಿದ್ದೀರಾ? ಅಚ್ಚರಿ ಹುಟ್ಟಿಸುವ ವಿಡಿಯೋ ಇಲ್ಲಿದೆ !
“ಚಿಂದಿ ಆಯುವ ಉದ್ಯೋಗ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಆಗ ನನ್ನ ಜೀವನ ಇನ್ನೊಂದು ಮಗ್ಗುಲಿನತ್ತ ಹೊರಳಿತು. ನಿಧಾನವಾಗಿ ೧೮ರ ಆ ವಯಸ್ಸಿನಲ್ಲಿ ಜೀವನ ಆರಂಭಿಸಿದೆ. ಈ ಅವಧಿಯಲ್ಲಿ ಹಲವರು ಸಿಕ್ಕರು. ಎಲ್ಲರೂ ಎಷ್ಟೊಂದು ದಯೆ, ಪ್ರೀತಿ ಉಳ್ಳವರು ಎಂದು ಅನಿಸಲು ಶುರುವಾಯಿತು. ಇನ್ನೂ ಉತ್ತಮ ಕೆಲಸ, ಒಳ್ಳೆಯ ದುಡ್ಡು ಸಂಪಾದಿಸಲು ಕಷ್ಟಪಟ್ಟು ದುಡಿಯಬೇಕೆಂದುಕೊಂಡೆ. ೨೦೦೦ರಲ್ಲಿ ಆಲ್ಕೋಹಾಲಿಕ್ಸ್ ಅನಾನಿಮಸ್ ಮೀಟಿಂಗ್‌ನಲ್ಲಿ ಭಾಗವಹಿಸಿದೆ. ಇನ್ನೂ ಆರು ವರ್ಷದ ನಂತರ ಅಂದರೆ ನನ್ನ ೨೫ನೇ ವಯಸ್ಸಿನಲ್ಲಿ ಒಂದು ಬದಲಾವಣೆ ಆರಂಭವಾಯಿತು. ಅದು ೨೦೦೮, ಆಗ ನಾನೊಂದು ಕನ್ಸ್‌ಟ್ರಕ್ಷನ್ ಕಂಪನಿಯಲ್ಲಿ ಸೇಲ್ಸ್ ಕೆಲಸ ನೋಡಿಕೊಳ್ಳುತ್ತಿದ್ದೆ. ಇದರ ಜೊತೆಗೇ ಜೈಲುಗಳಲ್ಲಿ, ಸಣ್ಣ ವಯಸ್ಸಿಗೇ ಅಪರಾಧ ಜಗತ್ತಿಗೆ ಬಂದು ಕಷ್ಟ ಪಡುವವರ ಮನಃಪರಿವರ್ತನೆಗೆ ಸ್ವಯಂ ಆಸಕ್ತಿಯಿಂದ ಸೇರಿಕೊಂಡೆ. ನನ್ನದೇ ಉದಾಹರಣೆಯನ್ನು ಅವರಿಗೆ ಹೇಳಿದೆ. ಬದಲಾವಣೆ ಸಾಧ್ಯವಿದೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಅವರಿಗೆ ವಿವರಿಸಿದೆ.”
“ನನಗೆ ನಾನು ಎಲ್ಲ ಚಟಗಳಿಂದಲೂ ಮುಕ್ತನಾಗಿ ಎಲ್ಲರಂತೆ ಸಮಾಜದಲ್ಲಿ ತಲೆಯೆತ್ತಿ ಕಷ್ಟ ಪಟ್ಟು ಕೆಲಸ ಮಾಡಿಕೊಂಡು ನನ್ನ ಹೊಟ್ಟೆಹೊರೆದುಕೊಳ್ಳುವುದು ಜೀವನದ ಅತ್ಯಮೂಲ್ಯ ಸಾಧನೆಯೆನಿಸಿತ್ತು. ನನ್ನ ಜಗತ್ತಿನಲ್ಲಿ ಹೀಗೆ ಬದಲಾದವರನ್ನು ನಾನು ನೋಡಿರಲಿಲ್ಲ. ಹಾಗಾಗಿ ನನ್ನನ್ನು ನೋಡಿ, ಅವರಿಗೂ ಬದಲಾಗಲು ನಾನೊಂದು ಉತ್ತಮ ಉದಾಹರಣೆಯಾಗಬಹುದು ಎನಿಸಿತ್ತು. ಈ ಎಲ್ಲ ಕೆಲಸಗಳಿಂದ ನನಗೆ ಜೀವನದಲ್ಲೊಂದು ತೃಪ್ತಿ ಸಿಕ್ಕಿತ್ತು. ೨೦೧೧ರಲ್ಲಿ ಸಾಶಾಳನ್ನು ಪ್ರೀತಿಸಿ ಮದುವೆಯಾದೆ. ನನ್ನ ಬದುಕು ಸಂಪೂರ್ಣ ಬದಲಾಗಿತ್ತು. ಹೊರಜಗತ್ತಿನ ಜನರಿಗೆ ನಾನೊಬ್ಬ ಎಲ್ಲರಿಗೂ ಸಹಾಯ ಮಾಡುವ ಜೈಲಿನಿಂದ ಹೊರಬಂದು ಬದಲಾದ ವ್ಯಕ್ತಿ. ಈಗ ನನಗೆ ಇತರರಿಗೆ ಸಹಾಯ ಮಾಡುವುದರ ಹಿಂದಿನ ಸಂತೋಷದ ಅರಿವಾಗಿದೆ” ಎನ್ನುತ್ತಾರೆ.
ಇದನ್ನೂ ಓದಿ | ಪೀರಿಯಡ್ ರೆಡ್ ಸ್ಟಿಕ್ಕರ್! ಋತುಸ್ರಾವ ಸೂಚನೆಗೆ ಇಲ್ಲೊಬ್ಬನ ವಿಚಿತ್ರ ಐಡಿಯಾ!
ಇತರರಿಗೆ ಸಹಾಯ ಮಾಡುವ, ಅನೇಕರ ಬದುಕಿಗೆ ದಾರಿದೀಪವಾಗಿ ಕೆಲಸ ಮಾಡುತ್ತಿರುವ ಈತನನ್ನು ಗುರುತಿಸಿದ ನಗರ ಪೊಲೀಸ್ ಇಲಾಖೆ ಈತನಿಗೆ ೨೦೧೪ರಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ೨೦೧೮ರಲ್ಲಿ ಈತ ತನ್ನ ಹುಟ್ಟೂರಿನಲ್ಲಿಯೇ ಸಿಐಪಿ (ಚೇಂಜ್ ಈಸ್ ಪಾಸಿಬಲ್) ಪ್ರಾಜೆಕ್ಟ್ ಎಂಬ ಸ್ವಯಂಸೇವಾ ಸಂಸ್ಥೆಯೊಂದನ್ನೂ ಹುಟ್ಟುಹಾಕಿದ್ದು, ಆ ಮೂಲಕ ದುಶ್ಚಟಗಳ ದಾಸರಾದವರನ್ನು ಅದರಿಂದ ಹೊರಗೆ ತರುವಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ಸಂಸ್ಥೆಗಾಗಿ ೨೫ ಎಕರೆ ಭೂಮಿಯನ್ನು ಹೊಂದಿದ್ದು, ಇಲ್ಲೇ ತನ್ನದೊಂದು ತಂಡ ಕಟ್ಟಿಕೊಂಡು, ಅನೇಕರನ್ನು ದುಶ್ಚಟಗಳಿಂದ ಹೊರತರಲು ಕಾರ್ಯಾಗಾರಗಳನ್ನು, ತರಬೇತಿಗಳನ್ನೂ ನಡೆಸುತ್ತಿದ್ದಾರೆ!
ಮೈಕಲ್ ಅವರೇ ಹೇಳುವಂತೆ, “ನಾನೀಗ ಒಳ್ಳೆಯ ಗಂಡ, ಮೇಲಾಗಿ ಒಳ್ಳೆಯ ಅಪ್ಪ. ನನ್ನ ಮಕ್ಕಳು ಎಂದಿಗೂ ನಾನು, ಕುಡಿಯುವುದನ್ನು, ಅಥವಾ ಡ್ರಗ್ ತೆಗೆದುಕೊಂಡಿದ್ದನ್ನು ನೋಡಿಲ್ಲ. ನನ್ನಲ್ಲಿನ ಈ ಬದಲಾವಣೆ ನನ್ನ ಜೀವಮಾನದ ಸಾಧನೆ. ಅದರ ಬಗ್ಗೆ ಅತ್ಯಂತ ಖುಷಿಯಿದೆ. ಇತರರೂ ಹೀಗೆ ಬದಲಾದರೆ ಅತ್ಯಂತ ಹೆಚ್ಚು ಖುಷಿ ಪಡುತ್ತೇನೆ. ಬದುಕಿನಲ್ಲಿ ಎಲ್ಲವೂ ಸಾಧ್ಯವಿದೆ ಎಂದು ತೋರಿಸಿಕೊಡಲು ಬಯಸುತ್ತೇನೆ” ಎನ್ನುತ್ತಾರೆ.
ಈತನ ಬದುಕು ದಾರಿ ತಪ್ಪಿ ನಡೆದ ಹಲವರಿಗೆ ಸ್ಪೂರ್ತಿಯಾಗಲಿ.