ಬೇಸಗೆ ಬಂತೆಂದರೆ ಸಾಕು ನಾವು ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ತೆರೆದು, ಗಾಳಿ ಬೆಳಕುಗಳಿಗೆ ಆಸ್ಪದ ಮಾಡಿಕೊಟ್ಟು ನಮ್ಮ ಬೇಗೆ ಕಡಿಮೆಗೊಳಿಸುಲು ಪ್ರಯತ್ನ ಪಡುತ್ತೇವೆ. ಆದರೆ, ಇದೇ ಸುಸಮಯದಲ್ಲಿ ನೊಣ, ಸೊಳ್ಳೆ, ಚಿಕ್ಕಪುಟ್ಟ ಕೀಟಗಳೆಲ್ಲ ಮನೆಯ ಒಳಗೆ ಬಂದು ಆಶ್ರಯ ಪಡೆಯುತ್ತವೆ. ನಮಗೆ ಗೊತ್ತೇ ಆಗದಂತೆ ನೊಣಗಳ ಸಂತತಿ ವೃದ್ಧಿಯಾಗುತ್ತವೆ. ಮಳೆಗಾಲದಲ್ಲೂ ಇವುಗಳ ಬಾಧೆ ತಪ್ಪಿದ್ದಲ್ಲ. ಇನ್ನು ಮನೆಯಲ್ಲಿ ತರಕಾರಿ ಹಣ್ಣುಗಳು ಇದ್ದರಂತೂ ಕಥೆ ಮುಗೀತು. ಹಣ್ಣಿನ ನೊಣಗಳು ಅವುಗಳ ಮೇಲೆ ಹಾರಾಡುತ್ತಲೇ ಇರುತ್ತವೆ. ಏನು ಮಾಡಿದರೂ ಅಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ.
ಮನೆಯನ್ನು ಕೀಟಮುಕ್ತವನ್ನಾಗಿಸಲು, ರಾಸಾಯನಿಕ ಸಿಂಪಡಿಸಲು ಹೊರಟರೆ ಆಗುವ ತೊಂದರೆಗಳು ಒಂದೆರಡಲ್ಲ. ಇಡೀ ಮನೆಯ ಎಲ್ಲ ವಸ್ತುಗಳನ್ನು ರಾಸಾಯನಿಕ ಅವುಗಳ ಮೇಲೆ ಬೀಳದಂತೆ ಮೊದಲೇ ತೆಗೆದಿಟ್ಟಿರಬೇಕು ಅಥವಾ ಚೆನ್ನಾಗಿ ಮುಚ್ಚಿಟ್ಟಿರಬೇಕು. ಒಂದು ವೇಳೆ ಇವು ಯಾವುದಾದರೂ ವಸ್ತುಗಳ ಮೇಲೆಯೂ ಬಿದ್ದಿದ್ದರೆ, ಅವನ್ನೆಲ್ಲ ತೊಳೆದಿಟ್ಟು ಒಪ್ಪ ಮಾಡಬೇಕು. ಕೀಟನಾಶಕದ ವಾಸನೆ ಭರಿಸಿಕೊಂಡು ಮನೆಯೊಳಗೆ ಇರುವುದೂ ಕಷ್ಟ. ಒಟ್ಟಾರೆ, ಒಂದೆರಡು ದಿನ ಮನೆಯೊಳಗಿನ ಕತೆ ಅಸ್ತವ್ಯಸ್ತವಾಗಿ ಬಿಡುತ್ತದೆ.
ಹಾಗಾದರೆ, ನೊಣದಂಥ ಪ್ರತಿನಿತ್ಯದ ಸಣ್ಣ ತೊಂದರೆ ಹೆಚ್ಚು ಉಲ್ಬಣ ಸ್ಥಿತಿ ತಲುಪಿರದಿದ್ದರೆ ಕೆಲವು ಸುಲಭವಾದ ನೈಸರ್ಗಿಕ ಉಪಾಯಗಳಿಂದಲೂ ನಿವಾರಿಸಿಕೊಳ್ಳಬಹುದು. ಅವುಗಳ ಬಗೆಗಿನ ಮಾಹಿತಿ ಇಲ್ಲಿದೆ.
ಸುಲಭವಾಗಿ ನೊಣಗಳನ್ನು ನಿಮ್ಮ ಮನೆಯಿಂದ ಓಡಿಸಲು ನೀವೇ ಮನೆಯಲ್ಲೊಂದು ಸ್ಪ್ರೇ ತಯಾರು ಮಾಡಿಟ್ಟುಕೊಳ್ಳಬಹುದು. ಮಿಂಟ್, ಲೆಮೆನ್ ಗ್ರಾಸ್ ಹಾಗೂ ಲ್ಯಾವೆಂಡರ್‌ಗಳ ಸುವಾಸನೆಯುಕ್ತ ಎಸೆನ್ಶಿಯಲ್ ಆಯಿಲ್ ನಿಮ್ಮ ಬಳಿಯಿದ್ದರೆ ಇವುಗಳಲ್ಲಿ ಯಾವುದಾದರೊಂದು ತೈಲದ ಕೆಲವು ಹನಿಗಳಿಗೆ ನೀರು ಸೇರಿಸಿ ಅಡುಗೆ ಮನೆ ಹಾಗೂ ಇತರ ಜಾಗಗಳಿಗೆ ಇವುಗಳನ್ನು ಸಿಂಪಡಿಸಬಹುದು. ಸಾಮಾನ್ಯವಾಗಿ ಪುದಿನ, ನಿಂಬೆ ಹುಲ್ಲಿನಂಥವುಗಳ ಸುವಾಸನೆ ನೊಣಗಳಿಗೆ ಆಗಿ ಬರುವುದಿಲ್ಲವಾದ್ದರಿಂದ ಇವುಗಳ ಸುವಾಸನೆಗೆ ನೊಣಗಳು ಜಾಗ ಖಾಲಿ ಮಾಡುತ್ತವೆ. ನೈಸರ್ಗಿಕವಾಗಿ ನೊಣಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಮುಖ್ಯವಾಗಿ ನಿಮ್ಮ ಮನೆಯ ಕಸದ ತೊಟ್ಟಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕಸದ ಬುಟ್ಟಿಯಲ್ಲಿ ಕೊಳೆತ ವಸ್ತುಗಳು, ಇಂತಹ ಕೀಟಗಳನ್ನು ಬಹುಬೇಗನೆ ಆಕರ್ಷಿಸುತ್ತವೆ. ಹಾಗಾಗಿ ಇವುಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ. ನಿಮ್ಮ ಕಸದ ಬುಟ್ಟಿಯನ್ನು ಕೆಟ್ಟ ವಾಸನೆಯಿಂದ ದೂರವಿರಿಸಲು ಬುಟ್ಟಿಯ ಅಡಿಯಲ್ಲಿ ಬೇಕಿಂಗ್ ಸೋಡಾ ಸಿಂಪಡಿಸಿಕೊಳ್ಳಿ. ಇದು ವಾಸನೆಯನ್ನು ಹೀರಿಕೊಳ್ಳುವುದರಿಂದ ನೊಣದಂತಹ ಕೀಟಗಳಿಂದ ದೂರವಿರಬಹುದು.
ಇದನ್ನೂ ಓದಿ: Drinking Habits | ನಿಮಗೆ ಇವುಗಳನ್ನು ಕುಡಿಯುವ ಅಭ್ಯಾಸವಿದ್ದರೆ ರಕ್ತದ ಒತ್ತಡ ಹೆಚ್ಚಬಹುದು
ಸಿಂಕಿನಲ್ಲಿ ಸದಾ ತೊಳೆಯುವ ಪಾತ್ರೆಗಳನ್ನು ತುಂಬಿಸಿಟ್ಟು ಗಂಟೆಗಟ್ಟಲೆ ಇಡಬೇಡಿ. ಆಗಾಗಿನ ಪಾತ್ರೆಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ. ಇದರಿಂದ ಸಿಂಕಿನ ಸುತ್ತಮುತ್ತಲ ಪ್ರದೇಶ ಬ್ಯಾಕ್ಟೀರಿಯಾದಿಂದ ಮುಕ್ತವಾಗುವುದಲ್ಲದೆ, ಇವುಗಳು ಇಂಥ ಜಾಗಗಳಲ್ಲಿ ಮೊಟ್ಟೆಯಿಟ್ಟು ಸಂತಾನಾಭಿವೃದ್ಧಿ ಮಾಡುವುದರಿಂದ ತಪ್ಪಿಸುತ್ತದೆ.
ಉಳಿದ ಅಥವಾ ಎಸೆಯಲಿರುವ ಆಹಾರಗಳನ್ನು ತೆರೆದಿಡಬೇಡಿ. ಇವುಗಳನ್ನು ಚೆನ್ನಾಗಿ ಒಂದು ಕವರ್‌ನಲ್ಲಿ ಹಾಕಿಟ್ಟು ಮುಚ್ಚಿಡಿ. ತೆರೆದಿಟ್ಟ ಇಂತಹ ಆಹಾರ ಪದಾರ್ಥಗಳು ನೊಣಗಳು ಹಾಗೂ ಇತರ ಕೀಟಗಳನ್ನು ಆಕರ್ಷಿಸುತ್ತವೆ.
ಮನೆಯಲ್ಲಿ ಹಣ್ಣಿನ ನೊಣಗಳಿದ್ದರೆ ಆಪಲ್ ಸೈಡರ್ ವಿನೆಗರ್ ಉಪಯುಕ್ತ. ಒಂದು ಗ್ಲಾಸ್‌ನಲ್ಲಿ ಅರ್ಧದಷ್ಟು ಆಪಲ್ ಸೈಡರ್ ವಿನೆಗರ್ ತುಂಬಿಸಿ ಅದಕ್ಕೊಂದು ತೆಳುವಾದ ಪಾರದರ್ಶಕ ಪ್ಲಾಸ್ಟಿಕ್‌ನಿಂದ ಮುಚ್ಚಿ, ಅದರ ಮೇಲೆ ತೂತುಗಳನ್ನು ಮಾಡಿ ಇಡಿ. ನೊಣಗಳು ಇವಕ್ಕೆ ಆಕರ್ಷಿತರಾಗಿ ಸಮಸ್ಯೆ ದೂರವಾಗುತ್ತದೆ.
ತುಳಸಿ/ ಕಾಮಕಸ್ತೂರಿಯೂ ಕೂಡಾ ನೊಣಗಳಿಗೆ ರಾಮಬಾಣ. ಮನೆಯೊಳಗೆ ತುಳಸಿ ಹಾಗೂ ಕಾಮಕಸ್ತೂರಿಯಂಥ ಸೊಪ್ಪುಗಳನ್ನು ಇಡುವುದರಿಂದ, ಅಥವಾ ಮನೆಯೊಳಗೆ ಬೆಳೆಸುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಕಾಣಬಹುದು. ಪುದಿನ ಕೂಡಾ ಇವುಗಳ ಜೊತೆಯಲ್ಲಿಯೇ ಬೆಳೆಸಬಹುದು. ಇವೆಲ್ಲವೂಗಳ ವಾಸನೆಯನ್ನು ಕೀಟಗಳು ಸಹಿಸುವುದಿಲ್ಲವಾದ್ದರಿಂದ ನೊಣಗಳ ಸಮಸ್ಯೆ ಅಷ್ಟಾಗಿ ಇರುವುದಿಲ್ಲ.
ಇದನ್ನೂ ಓದಿ: Skin care: ಪುರುಷರೇ ನಿಮ್ಮ ಚರ್ಮ ನಿರ್ಲಕ್ಷಿಸಬೇಡಿ!