Site icon Vistara News

ಗೊರಕೆಯೆಂಬ ಘೋರ ವೈರಿ- ಇದರಿಂದ ಮುಕ್ತಿ ಹೇಗೆ?

snoring

ಗೊರಕೆ ಎಂಬ ಸಮಸ್ಯೆ ಒಬ್ಬಿಬ್ಬರದಲ್ಲ. ಸಮಸ್ಯೆ ಸಣ್ಣದಾಗಿ ಕಂಡರೂ ಪರಿಣಾಮ ದೊಡ್ಡದು. ಎಷ್ಟೋ ಸಾರಿ ಈ ಗೊರಕೆಯೇ ದಂಪತಿಗಳ ನಡುವೆ ವಿರಸ ತರಿಸಿದೆ. ವಿಚ್ಚೇದನದವರೆಗೂ ಹೋಗಿದೆ. ಒಬ್ಬರ ನಿದ್ದೆಗೆ ಇನ್ನೊಬ್ಬರ ಗೊರಕೆ ಎಂಥ ತೊಂದರೆಗಳನ್ನೂ ತಂದೊಡ್ಡಬಹುದು. ಕೆಲವರ ಗೊರಕೆ ಎಂಥಾ ಭೀಕರ ಸದ್ದುಗಳನ್ನು ಹೊರಡಿಸುತ್ತದೆ ಎಂದರೆ ಪಕ್ಕದಲ್ಲಿ ಮಲಗುವವರು ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ದರೋ ಅನಿಸಿಬಿಡುತ್ತದೆ. ಇಂಥ ಗೊರಕೆಯಿಂದ ಜೀವನ ಪರ್ಯಂತ ಮುಕ್ತಿ ಪಡೆಯುವುದು ಸಾಧ್ಯವಿಲ್ಲವಾದರೂ, ದಿನನಿತ್ಯದ ಜೀವನಕ್ರಮದಲ್ಲಿ, ಆಹಾರದಲ್ಲಿ ಒಂದಿಷ್ಟು ಬದಲಾವಣೆ, ಮಾಡಿಕೊಳ್ಳುವುದರಿಂದ ಹಾಗೂ ಕೆಲವು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆಮದ್ದುಗಳಿಂದಲೂ ಕೊಂಚ ಮಟ್ಟಿನ ಪರಿಹಾರ ಪಡೆಯಬಹುದು.

1. ನಮ್ಮ ಮೂಗು ಹಾಗೂ ಗಂಟಲ ನಡುವೆ ತೆಳುವಾದ ಪಟ್ಟಿಯಂತಹ ರಚನೆಯಿರುತ್ತದೆ. ಈ ಪಟ್ಟಿಗಳು ನಿದ್ದೆ ಬಂದಾಗ ಸಡಿಲಗೊಂಡು, ಇದರ ಮೂಲಕ ಉಸಿರಾಟದ ಗಾಳಿ ಹಾದುಹೋಗುವಾಗ ಅದು ಅದುರುತ್ತದೆ. ಈ ಅದುರುವಿಕೆಯಿಂದಲೇ ಗೊರಕೆ ಉಂಟಾಗುತ್ತದೆ.ಸಡಿಲಗೊಂಡ ಈ ಪಟ್ಟಿಗಳನ್ನು ಮತ್ತೆ ಹಳೆಯ ಸ್ಥಿತಿ ತರಲು ಶಸ್ತ್ರ ಚಿಕಿತ್ಸೆಯಿಂದ ಸಾಧ್ಯವಿದ್ದರೂ ಸಾಮಾನ್ಯವಾಗಿ ಯಾರೂ ಆ ಮಾರ್ಗವನ್ನು ಬಳಸುವುದಿಲ್ಲ. ಹಾಗಾಗಿ, ಗೊರಕೆ ಸಮಸ್ಯೆಯಿಂದ ಮುಕ್ತರಾಗಲು ಮನಸ್ಸಿದ್ದರೆ, ದೈನಂದಿನ ಜೀವನಕ್ರಮದಲ್ಲಿ ಕೆಲವು ಉಪಾಯಗಳನ್ನು ಅನುಸರಿಸಿ ಸುಧಾರಣೆ ಮಾಡಿಕೊಳ್ಳಬಹುದು.

2. ನೇರವಾಗಿ ಮಲಗುವ ಬದಲು ಒಂದು ಬದಿಗೆ ವಾಲಿ ಮಲಗಿಕೊಳ್ಳಿ. ಬಹುತೇಕರಿಗೆ ಈ ಕ್ರಮದಿಂದ ಪರಿಹಾರ ಸಿಗುತ್ತದೆ.

3. ಮಲಗುವಾಗ ಒಂದು ಹೆಚ್ಚುವರಿ ದಿಂಬನ್ನು ತಲೆಯಡಿ ಇರಿಸಿ. ತಲೆಯನ್ನು ಸ್ವಲ್ಪ ಏರಿಸಿದ ಭಂಗಿಯಲ್ಲಿ ಮಲಗಿಕೊಳ್ಳಬಹುದು. ಇದರಿಂದ ಉಸಿರಾಟದ ಗಾಳಿ ಸರಾಗವಾಗಿ ಹೋಗಲು ಅನುಕೂಲ ಸಿಕ್ಕಿದಂತಾಗಿ ಪಟ್ಟಿಯ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಹಾಗಾಗಿ ಅವುಗಳ ಅದುರುವಿಕೆ ಕಡಿಮೆಯಾಗಿ ಶಬ್ದವೂ ಕಡಿಮೆಯಾಗುತ್ತದೆ.

4. ಒಂದು ವೇಳೆ ನೀವು ಧೂಮಪಾನ, ಮದ್ಯಪಾನ ಮಾಡುತ್ತಿದ್ದರೆ ಅದನ್ನು ಬಿಡಲು ಪ್ರಯತ್ನಿಸಿ. ಗೊರಕೆಗೆ ಬಹಳ ಸಾರಿ ಈ ಕಾರಣವೂ ಇರುತ್ತದೆ. ಒಂದು ಅಭ್ಯಾಸವನ್ನು ಬಿಡುವುದು ಕಷ್ಟವಾದರೂ ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಯೋಚನೆಯಿರಲಿ. ಆಗ ನೀವು ಪ್ರಯತ್ನಪೂರ್ವಕವಾಗಿಯಾದರೂ ಬಿಡುವತ್ತ ಗಮನ ಹರಿಸುತ್ತೀರಿ.

5. ನಿಮ್ಮ ನಿದ್ದೆಯ ಕ್ರಮವನ್ನು ಗಮನಿಸಿ. ಪ್ರತಿದಿನಕ್ಕೆ ಬೇಕಾದ ಎಂಟು ಗಂಟೆಗಳ ನಿದ್ದೆ ನಿಮಗೆ ಸಿಗುತ್ತದೋ ನೋಡಿ. ಬಹಳ ಸಾರಿ ನಿದ್ದೆಯ ಕೊರತೆಯಿಂದ, ಎಷ್ಟೆಷ್ಟು ಹೊತ್ತಿಗೋ ನಿದ್ದೆ ಮಾಡುವುದರಿಂದ ಅಂಕೆ ತಪ್ಪಿ ಗೊರಕೆ ಬಂದಿರುತ್ತದೆ. ರಾತ್ರಿ ಬೇಗ ಮಲಗಿ ಬೇಗ ಏಳುವ ಕ್ರಮ ರೂಢಿಸಿಕೊಳ್ಳಿ.

6. ಅಗತ್ಯ ಸಂದರ್ಭಗಳಲ್ಲಿ ನೇಸಲ್‌ ಸ್ಟ್ರಿಪ್‌ ಬಳಸಿ. ಇದನ್ನು ಮೂಗಿನ ಬ್ರಿಡ್ಜ್‌ ಮೇಲೆ ಅಂಟಿಸಿಕೊಳ್ಳುವುದರಿಂದಲೂ ಗೊರಕೆಯಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: ಕಣ್ಣಿನ ಸುತ್ತ ಕಪ್ಪು ರಿಂಗ್‌ ರೋಡು! ತೊಲಗಿಸುವ ಉಪಾಯ ಇಲ್ಲಿದೆ ನೋಡು!!

7. ಹಾಲಿನ ಉತ್ಪನ್ನಗಳನ್ನು ಕಡಿಮೆ ಮಾಡಿ. ಮಲಗುವ ಮೊದಲು ಹಾಲಿನ ಉತ್ಪನ್ನ ಸೇವಿಸಬೇಡಿ. ಸೇವಿಸಿದ್ದರೂ ನಿದ್ದೆಗೆ ಮೊದಲು ಕೆಲವು ಗಂಟೆಗಳ ಗ್ಯಾಪ್‌ ಇರಲಿ.

8. ತೂಕ ಇಳಿಸಿಕೊಳ್ಳಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಉತ್ತಮ ಆಹಾರ ಕ್ರಮ ರೂಡಿಸಿಕೊಳ್ಳಿ. ಜಂಕ್‌ನಿಂದ ದೂರವಿರಿ. ಇವೆಲ್ಲವುಗಳಿಂದ ಶಿಸ್ತಾದ ಜೀವನಕ್ರಮ ರೂಢಿಸಿಕೊಳ್ಳುವ ಮೂಲಕವೂ ಗೊರಕೆ ಕಾಲ ಕ್ರಮೇಣ ಕಡಿಮೆಯಾಗುತ್ತದೆ.

9. ನಿಮ್ಮ ದೈನಂದಿನ ಬದುಕಿನಲ್ಲಿ ಈ ಕೆಲವು ಬದಲಾವಣೆಗಳ ಜೊತೆಗೆ ಕೆಲವು ಮನೆಮದ್ದುಗಳನ್ನೂ ಟ್ರೈ ಮಾಡಬಹುದು. ಪ್ರತಿದಿನ ಮಲಗುವ ಮುನ್ನ ಬಿಸಿ ಹಾಲಿಗೆ ಅರಿಶಿನ ಸೇರಿಸಿ ಕುಡಿಯಿರಿ. ಶೀತ, ನೆಗಡಿಯಂತ ಸಮಸ್ಯೆಯಿಂದ ಗೊರಕೆ ಬರುತ್ತಿದ್ದರೆ ಇದರಿಂದ ಕಡಿಮೆಯಾಗುತ್ತದೆ. ದಿನನಿತ್ಯ ಹಸಿ ಬೆಳ್ಳುಳ್ಳಿಯನ್ನು ಅನ್ನದೊಂದಿಗೆ ಬೆರೆಸಿ ಸೇವಿಸುತ್ತಾ ಬಂದಲ್ಲಿ ನಿಧಾನವಾಗಿ ಗೊರಕೆಯಿಂದ ಮುಕ್ತಿ ದೊರೆಯುತ್ತದೆ. ಹಸುವಿನ ಹಾಲಿನ ಬದಲು ಸೋಯಾ ಹಾಲನ್ನು ಬಳಸುತ್ತಾ ಬಂದಲ್ಲಿ ಗೊರಕೆಯ ಸಮಸ್ಯೆಯಿಂದ ಕೊಂಚ ಪಾರಾಗಬಹುದು. ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವಿಸಿ. ಏಲಕ್ಕಿಯ ಪರಿಮಳವನ್ನು ಆಘ್ರಾಣಿಸುತ್ತಿರುವುದರಿಂದ ಶೀತ ನೆಗಡಿ, ಕಟ್ಟಿದ ಮೂಗಿನ ಸಮಸ್ಯೆ ಕಡಿಮೆಯಾಗುತ್ತದೆ. ಏಲಕ್ಕಿ ಪುಡಿಯನ್ನು ನೀರಿನಲ್ಲಿ ಕುದಿಸಿ ಅದನ್ನು ಬಿಸಿಯಾಗಿಯೇ ಕುಡಿಯುವ ಮೂಲಕವೂ ಗೊರಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಯೋಗ ದಿನ ಅಷ್ಟೇ ಅಲ್ಲ, ದಿನಾ ಯೋಗ ಮಾಡಬೇಕೆನ್ನಲು 11 ಕಾರಣಗಳು!

Exit mobile version