ವೀಕೆಂಡು ಬಂದಾಕ್ಷಣ ವಾರ ಪೂರ್ತಿ ದುಡಿದ ಆಯಾಸ ಪರಿಹಾರಕ್ಕೆ, ಗೆಳೆಯರು, ಕುಟುಂಬ ಎಂದು ಪ್ರೀತಿಪಾತ್ರರನ್ನು ಕರೆದುಕೊಂಡು ಸುತ್ತಾಡುವಾಗ ಹಣ ನೀರಿನಂತೆ ಖರ್ಚಾಗುತ್ತದೆ. ರಸ್ತೆ ಬದಿಯಲ್ಲಿ ನಡೆದು ಹೋಗುವಾಗ, ಅಂಗಡಿಯ ಗಾಜಿನ ಪೆಟ್ಟಿಗೆಯಲ್ಲಿ ಲಕಲಕನೆ ಹೊಳೆಯುತ್ತಿದ್ದ ವಸ್ತುವೊಂದು ಕಣ್ಣಿಗೆ ಬೀಳುತ್ತದೆ. ಇನ್ಯಾವುದೋ ಸಂದರ್ಭ ಪಕ್ಕದ ಮನೆಯಲ್ಲಿ ಕಂಡ ವಸ್ತು ನನಗೂ ಬೇಕು ಅನಿಸುತ್ತದೆ. ಮತ್ತೊಮ್ಮೆ, ಬೆಡ್‌ಶೀಟು ತರಲೆಂದು ಅಂಗಡಿಗೆ ಹೋಗಿ ಮನೆಮಂದಿಗೆಲ್ಲ ಸೀರೆ, ಅಂಗಿ ಕೊಂಡು ತಂದುಬಿಡುತ್ತೇವೆ. ಸಾಧಾರಣ ಮೊಬೈಲು ಖರೀದಿಸಲು ಹೋಗಿ ಐಫೋನ್ ಖರೀದಿಸಿ ಬಂದುಬಿಡುತ್ತೇವೆ. ಅಥವಾ ಇನ್ಯಾವುದೋ ವಸ್ತು ಫ್ರೀ ಸಿಗುತ್ತದೆಂದು ಮತ್ತೊಂದು ವಸ್ತುವನ್ನು ಅಗತ್ಯವಿಲ್ಲದಿದ್ದರೂ ಕೊಂಡು ತರುತ್ತೇವೆ!
ಜಾಹಿರಾತುಗಳ ಪ್ರಭಾವವೋ, ಮಾರ್ಕೆಟಿಂಗ್ ಮಾತುಗಳಿಗೆ ಬಲಿಬಿದ್ದೋ ಅಗತ್ಯ, ಅನಗತ್ಯ ವಸ್ತುಗಳ ಅಂತರವೇ ನಮಗೆ ಗೊತ್ತಾಗದೆ ಮನೆಯಲ್ಲಿ ವಸ್ತುಗಳು ರಾಶಿ ಬೀಳುತ್ತವೆ. ಎಷ್ಟೋ ಸಲ, ಕೊನೆಗೊಮ್ಮೆ ಬಂದ ಹಣ ಬಂದಷ್ಟೇ ವೇಗವಾಗಿ ಖರ್ಚಾಗಿ ಬಿಡುವಾಗ ಅರೆ, ಪ್ರತಿ ತಿಂಗಳು ಬಂದ ಹಣವೆಲ್ಲ ಎಲ್ಲಿ ಹೋಗುತ್ತದೆ, ಇಷ್ಟರವರೆಗೆ ದುಡಿದದ್ದು ಏನಾಯಿತು ಎಂದು ಗೊಂದಲಕ್ಕೆ ಬೀಳುವುದುಂಟು. ಮಧ್ಯಮ ವರ್ಗದ ಮಂದಿಯ ಹಣೆಬರಹವಿದು. ಹಾಗಾದರೆ, ನಾವು ಎಷ್ಟು ಖರ್ಚು ಮಾಡುತ್ತೇವೆ? ಖರ್ಚು ಕಡಿಮೆ ಮಾಡುವಂತೆ ಮುಂಜಾಗರೂಕತೆ ಮೊದಲೇ ಮಾಡಿಕೊಳ್ಳಬಹುದೇ? ಎಂಬಿತ್ಯಾದಿ ಯೋಚನೆಗಳು ನಿಮ್ಮ ತಲೆಯಲ್ಲಿ ಬಂದಿದ್ದರೆ, ಖರ್ಚು ಕಡಿಮೆ ಮಾಡಬೇಕೆಂದು ಅನಿಸಿದ್ದರೆ ನಿಮ್ಮ ಮೇಳೆ ಕಡಿವಾಣ ನೀವೇ ಹಾಕಬೇಕೆಂದು ಬಯಸಿದ್ದರೆ ಈ ನಿಯಮಗಳನ್ನು ನೀವು ಅನುಸರಿಸಬಹುದು.
೧. ನಿಮ್ಮ ಆದ್ಯತೆಯನ್ನು ಅರ್ಥ ಮಾಡಿಕೊಳ್ಳಿ: ಇದು ಹೇಳಲು ಮಾತ್ರ ಸುಲಭ ಹೌದು. ಆದರೆ, ಒಳ್ಳೆಯ ಅಭ್ಯಾಸ ಎಂಬುದರಲ್ಲಿ ಸಂಶಯವಿಲ್ಲ. ಆನ್‌ಲೈನ್ ಇರಬಹುದು ಅಥವಾ ಹೊರಗಡೆ ಶಾಪಿಂಗ್ ಹೋದಾಗಲಿರಬಹುದು ನಿಜವಾಗಿ ಬೇಕಾಗಿರುವ ವಸ್ತುಗಳೆಡೆ ಗಮನ ಕೊಡಿ. ಪ್ರತಿ ಬಾರಿಯೂ ಇದು ನನಗೆ ಅಗತ್ಯವೋ ಅಥವಾ ಸುಮ್ಮನೆ ಐಷಾರಾಮಿ ಆಸೆಗಾಗಿ ಕೊಂಡುಕೊಳ್ಳುತ್ತಿದ್ದೇನೆಯೇ ಎಂದು ನಿಮಗೆ ನೀವೇ ಪ್ರಶ್ನೆ ಹಾಕಿ. ಆಗ ಬಹುಶಃ ಬರುವ ಉತ್ತರದಿಂದ ನೀವು ಮನಸ್ಸು ಬದಲಾಯಿಸಲೂಬಹುದು!
೨. ಬಜೆಟ್ ನಿಗದಿ: ಯಾವಾಗಲೂ ಶಾಪಿಂಗ್ ಹೊರಡುವ ಮೊದಲು ಅಥವಾ ಏನೇ ಖರೀದಿಗೂ ಮೊದಲು ಒಂದು ಬಜೆಟ್ ಎಂಬುದನ್ನು ನಿಗದಿಪಡಿಸಿಕೊಳ್ಳಿ. ಇಷ್ಟು ರೂಪಾಯಿಗಳೊಳಗೆ ಖರ್ಚು ಮಾಡುವೆ ಎಂಬ ಅಂದಾಜು ಲೆಕ್ಕ ಇರಲಿ. ನಿಮ್ಮ ಆದಾಯದ ಒಂದು ಭಾಗ ಒಂದಿಷ್ಟು ಉಳಿತಾಯಕ್ಕೆ, ಒಂದಿಷ್ಟು ಹೂಡಿಕೆಗೆ, ಒಂದಿಷ್ಟು ತುರ್ತಿಗೆ ಅಂತ ಎತ್ತಿಡುವುದನ್ನು ಕಲಿಯಿರಿ. ಇದಾಗಿ ಒಂದಿಷ್ಟು ಹಣ ಖುಷಿಗೆ, ನಿಮಗಾಗಿ, ನಿಮ್ಮ ಪ್ರೀತಿಪಾತ್ರರಿಗಾಗಿ ಇರಲಿ. ಆಗ ನಿಮ್ಮ ಹಣ ಎಲ್ಲಿ ಹೋಗುತ್ತದೆ ಎಂಬ ಲೆಕ್ಕವೂ ನಿಮಗೆ ಸಿಗುತ್ತದೆ. ಅನವಶ್ಯಕ ಖರ್ಚುಗಳು ತಪ್ಪುತ್ತದೆ.
ಇದನ್ನೂ ಓದಿ | Winter Fashion 2022 | ಚಳಿಗಾಲಕ್ಕೆ ಬಂತು ಬೆಚ್ಚನೆಯ ಲೇಯರ್ ಲುಕ್ ನೀಡುವ ಫ್ಯಾಷನ್
೩. ಹಣಕ್ಕೆ ತಕ್ಕ ಬೆಲೆ: ಪ್ರತಿ ಖರೀದಿಯ ಸಂದರ್ಭವೂ ಇಷ್ಟು ಮೊತ್ತ ಆ ವಸ್ತುವಿಗೆ ಕೊಡಬಹುದಾ ಯೋಚಿಸಿ. ಅಷ್ಟು ದುಡ್ಡು ತೆತ್ತಿರುವುದಕ್ಕೆ ಅದು ನಿಮಗೆ ಸಂತೋಷ ಕೊಡಬಹುದಾ ಯೋಚಿಸಿ. ಆಗ ಖರೀದಿಸಬಹುದೇ ಬೇಡವೇ ಎಂಬ ನಿರ್ಧಾರ ಸುಲಭವಾಗುತ್ತದೆ.
೪. ಹಲವು ಆದಾಯ: ನಿಮ್ಮ ನಿರ್ದಿಷ್ಟ ಆದಾಯದ ಮೂಲಕ್ಕೆ ಬದಲಾಗಿ ಕೊಂಚ ಇತರ ಮೂಲಗಳ ಸಾಧ್ಯತೆಗಳನ್ನೂ ಹುಡುಕಿ. ಖರ್ಚು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತವೆ, ಜವಾಬ್ದಾರಿಗಳೂ ಸಹ. ಹಾಗಾಗಿ, ಕುಟುಂಬ ನಿರ್ವಹಣೆಗೆ ಪರ್ಯಾಯ ಮೂಲಗಳನ್ನೂ ನೀವು ಹುಡುಕುವುದು ಉತ್ತಮ ನಿರ್ಧಾರವೇ ಸರಿ.
೫. ಹೋಲಿಕೆ ಬೇಡ: ಇನ್ನೊಬ್ಬರ ಜೊತೆ ಪ್ರತಿಯೊಂದಕ್ಕೂ ನಿಮ್ಮನ್ನು ನೀವು ಹೋಲಿಸಿಕೊಳ್ಳಬೇಡಿ. ನಿಮ್ಮ ಗೆಳೆಯ/ಗೆಳತಿ ತನ್ನ ಮನೆಗೆ ಖರೀದಿಸಿದ ವಸ್ತುವನ್ನು ನೀವೂ ಖರೀದಿಸಬೇಕೆಂಬ ಆಸೆ ಬೇಡ. ಅಗತ್ಯವಿದೆಯೇ ಎಂಬ ಯೋಚನೆಯೊಂದಿಗೆ ಮುಂದುವರಿಯಿರಿ.
ಒಮ್ಮೆ ನಿಮ್ಮ ಮೊದಲ ವೇತನ ಸಿಕ್ಕಾಗ ಆದ ಖುಷಿಯನ್ನು ನೆನೆಯಿರಿ. ಕಷ್ಟಪಟ್ಟು ದುಡಿದಾಗ ಸಿಕ್ಕ ಹಣದ ಘನತೆಯನ್ನು ಅರಿಯಿರಿ. ಆಗ, ತಾನೇ ತಾನಾಗಿ ನಿಮಗೆ ಯಾವುದು ಎಲ್ಲಿ ಯಾವಾಗ ಹೇಗೆ ಖರ್ಚು ಮಾಡಬೇಕು ಎಂಬ ಸೂಕ್ಷ್ಮಗಳು ಅರಿವಾಗುತ್ತಾ ಹೋಗುತ್ತದೆ. ಆಪತ್ಕಾಲಕ್ಕೆ ಹಣ ಕೈಯಲ್ಲಿ ಉಳಿಯುತ್ತದೆ.
ಇದನ್ನೂ ಓದಿ | ನೀವು ಹೆಚ್ಚು ಶಾಪಿಂಗ್ ಮಾಡುವಂತೆ ಹೇಗೆ ಟ್ರಿಕ್ ಮಾಡ್ತಾರೆ ಗೊತ್ತಾ?