Site icon Vistara News

Tips To Calm The Mind: ಮನಸ್ಸನ್ನು ಪ್ರಶಾಂತಗೊಳಿಸುವುದು ಹೇಗೆ? ಇಲ್ಲಿವೆ ಸುಲಭೋಪಾಯಗಳು!

Tips To Calm The Mind

ಶಾಂತಿ ಯಾರಿಗೆ ಬೇಡ ಹೇಳಿ. ಎಲ್ಲರೂ ಶಾಂತಿಯನ್ನು ಬಯಸುವವರೇ. ಎಲ್ಲರಿಗೂ ಬೇಕಾದ ಈ ಶಾಂತಿ ಮನಃಶಾಂತಿ. ಆದರೆ, ಎಂಥ ಸಂದರ್ಭದಲ್ಲೂ ಧೃತಿಗೆಡದೆ, ಧೈರ್ಯಗುಂದದೆ, ಶಾಂತಚಿತ್ತರಂತೆ ವರ್ತಿಸುವುದು ಎಷ್ಟು ಮಂದಿಗೆ ದಕ್ಕೀತು ಹೇಳಿ. ಬಯಸುವುದು ಎಲ್ಲರೂ ಇದನ್ನೇ ಆದರೂ, ಸಂದರ್ಭಕ್ಕೆ ತಕ್ಕ ಹಾಗೆ ಎಲ್ಲರೂ ಚಿತ್ತ ಸ್ವಾಸ್ಥ್ಯ ಕಳೆದುಕೊಳ್ಳುವವರೇ. ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆಂದು ತಿಳಿಯದೇ, ಏನೂ ಮಾಡಲಿಕ್ಕಾಗದೆ ಒದ್ದಾಡುವವರೇ. ಆದರೆ, ಸರಿಯಾದ ನಿರ್ಧಾರ ತೆಗೆದುಕೊಳ್ಳಲು, ಗುರಿಯತ್ತ ನಡೆಯಲು, ಪರಿಸ್ಥಿತಿಯನ್ನು ನಿಭಾಯಿಸಲು, ಸರಿಯಾದ ಹಾದಿಯಲ್ಲಿ ಯೋಚಿಸಲು ಶಾಂತಚಿತ್ತ ಬೇಕೇಬೇಕು. ಹಾಗಾದರೆ, ಈ ಶಾಂತಚಿತ್ತವನ್ನು ರೂಢಿಸಿಕೊಳ್ಳಲು ಸಾಧ್ಯವಿಲ್ಲವೇ ಎಂಬುದು ಬಹಳಷ್ಟು ಮಂದಿಯ ಪ್ರಶ್ನೆಯಿರಬಹುದು. ಖಂಡಿತ ಸಾಧ್ಯವಿದೆ. ಪ್ರಯತ್ನಪಟ್ಟರೆ ಯಾವುದು ತಾನೇ ಸಾಧ್ಯವಿಲ್ಲ ಹೇಳಿ. ಆದರೆ, ನಿರಂತರ ಪ್ರಯತ್ನ ಅತ್ಯಂತ ಅಗತ್ಯ. ಶ್ರದ್ಧೆ, ಅಚಲ ಗುರಿ, ಆತ್ಮವಿಶ್ವಾಸವಿದ್ದರೆ, ಮನಸ್ಸಿನ ಮೇಲೆ ಎಂಥ ಹಿಡಿತವೂ ಸಾಧ್ಯವಿದೆ. ಹಾಗಾದರೆ ಬನ್ನಿ, ಯಾವ ವಿಧಾನಗಳಿಂದ ನಿಮ್ಮ ಮನಸ್ಸಿನ ಮೇಲಿನ ಶಾಂತತೆಯ ಪ್ರಭುತ್ವವನ್ನು ಸಾಧಿಸಬಹುದು (Tips to calm the mind) ಎಂಬುದನ್ನು ನೋಡೋಣ.

ಪ್ರಕೃತಿಯ ಜೊತೆ ಬೆರೆಯಿರಿ

ಒಂದು ವಾಕ್‌ ಮಾಡಿ. ಮನಸ್ಸು ಉದ್ವಿಗ್ನವಾದಾಗ, ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೆನಿಸಿದಾಗ, ಸಿಟ್ಟು ಅತಿಯಾದಾಗ, ಉದ್ವೇಗವನ್ನು ನಿಮ್ಮ ಕೈಯಲ್ಲಿ ನಿಮಗೇ ನಿಭಾಯಿಸದಾದಾಗ ಸುಮ್ಮನೆ ಒಂದು ವಾಕ್‌ ಹೋಗಿ ಬನ್ನಿ. ಹೊರಗೆ ಪ್ರಕೃತಿಗೆ ನಿಮ್ಮ ನರಮಂಡಲವನ್ನು ಶಾಂತಿಯತ್ತ ಕೊಂಡೊಯ್ಯುವ ಅಪರೂಪದ ಶಕ್ತಿಯಿದೆ. ಇದು ನಿಮ್ಮ ಮನಸ್ಸಿನ ತಳಮಳ, ಸಿಟ್ಟು, ಅಸಹನೆ ಇವೆಲ್ಲವನ್ನೂ ದೂರ ಮಾಡುತ್ತದೆ. ಸುಮ್ಮನೆ ಪ್ರಕೃತಿಯ ಜೊತೆಗೆ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ದೀರ್ಘವಾಗಿ ಉಸಿರಾಡಿ

ಹೌದು. ದೀರ್ಘವಾಗಿ ಉಚ್ವಾಸ ಹಾಗೂ ನಿಚ್ವಾಸಗಳನ್ನು ಮಾಡಿ. ಮತ್ತೆ ಮತ್ತೆ ಮಾಡಿ. ನಿಧಾನವಾಗಿ ನಿಮ್ಮ ಉಸಿರಾಟದ ವೇಗವನ್ನು ಗಮನಿಸಿ. ಅದು ಒಳಗೆ ಹೋಗುವ ಕ್ರಿಯೆಯನ್ನು ಅನುಭವಿಸಿ. ಹೊರಗೆ ಬರುವುದನ್ನೂ. ನಿಮ್ಮ ಮನಸ್ಸು ಶಾಂತವಾಗುತ್ತದೆ. ನೀವು ಏನು ಮಾಡಬೇಕೆಂದು ತಿಳೀಯದಂತಾದ ಪರಿಸ್ಥಿತಿಯಲ್ಲಿ ದೀರ್ಘವಾದ ಇಂತಹ ಉಸಿರಾಟ ನಡೆಸಿದ ತಕ್ಷಣ ನಿಮ್ಮ ಮನಸ್ಸು ನಿಮ್ಮ ಹತೋಟಿಗೆ ಬರುತ್ತದೆ. ಶಾಂತವಾಗುತ್ತೀರಿ. ಶಾಂತವಾದ ಮನಸ್ಸಿನಿಂದ ಮುಂದಿನ ನಿರ್ಧಾರ ತೆಗೆದುಕೊಳ್ಳಲು, ಮಾಡಬೇಕಾದ ಕಾರ್ಯದೆಡೆಗೆ ಗಮನ ಹರಿಸಲು ಸುಲಭವಾಗುತ್ತದೆ.

ಬಿಸಿನೀರಿನಲ್ಲೊಂದು ಸ್ನಾನ ಮಾಡಿ ಬನ್ನಿ

ಹದವಾದ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದಾಗ ಮೈಮನಸ್ಸು ಹಾಯೆನಿಸುತ್ತದೆ. ಪರಿಸ್ಥಿತಿ ನಿಮ್ಮ ಹತೋಟಿಗೆ ತರಲು ಇದು ಸಹಾಯ ಮಾಡುತ್ತದೆ. ನಿಮ್ಮ ನರನಾಡಿಗಳು ಶಾಂತವಾಗಿ ಮನಸ್ಸು ತಿಳಿಯಾಗುತ್ತದೆ.

ಬರೆಯಿರಿ

ಹೌದು. ನಿಮ್ಮ ಯೋಚನೆಗಳನ್ನು, ನಿಮ್ಮ ಬೇಸರಗಳನ್ನು, ನಿಮ್ಮನ್ನು ಅಲ್ಲಾಡಿಸಿದ ಘಟನೆಯನ್ನು, ಮನಸ್ಸಿನಲ್ಲಿರುವ ಏನೇ ಭಾರವಾದ ಯೋಚನೆಗಳನ್ನೂ ಅಕ್ಷರ ರೂಪಕ್ಕಿಳಿಸಿ. ಬರೆದಾಗ ಮನಸ್ಸು ಹಗುರವಾಗುತ್ತದೆ. ನಿಮ್ಮ ಮನಸ್ಸು ಖಾಲಿಯಾಗುತ್ತದೆ. ಮುಂದಿನ ಯೋಚನೆಗೆ ಮನಸ್ಸು ಶಾಂತವಾಗಿ ತೆರೆಯುತ್ತದೆ.

ಸಂಗೀತ ಕೇಳಿ

ಹೌದು. ಮನಸ್ಸಿಗೆ ಹಾಯೆನಿಸುವ ಮಧುರ ಗೀತೆಗಳನ್ನು ಕೇಳಿ. ಅದು ಯಾವುದೇ ಭಾಷೆಯಿರಬಹುದು. ಸಂಗೀತಕ್ಕೆ ಮನಸ್ಸನ್ನು ತಣಿಸುವ ಅದ್ಭುತ ಶಕ್ತಿಯಿದೆ. ಸಂಗೀತ ಸವಿಯುವ ಅಭ್ಯಾಸವಿದ್ದರೆ ಅಂಥವರಿಗೆ ಎಂದಿಗೂ ಏಕಾಂಗಿತನ ಬಾಧಿಸದು. ಆದರೆ, ಬೇಸರದ ಸಂದರ್ಭ ಬೇಸರದ ಹಾಡನ್ನೇ ಕೇಳಬೇಡಿ. ಉಲ್ಲಾಸದಾಯಕ, ಮಧುರ ಹಾಡುಗಳನ್ನು ಆರಿಸಿಕೊಳ್ಳಿ. ನಿಮ್ಮ ಮನಸ್ಸು ಬಹುಬೇಗನೆ ಶಾಂತವಾಗುತ್ತದೆ.

ಇದನ್ನೂ ಓದಿ: Best Ways To Clean Fruits: ಹಣ್ಣುಗಳನ್ನು ತಿನ್ನುವ ಮೊದಲು ನೀವು ಈ ವಿಧಾನದಲ್ಲಿ ತೊಳೆದುಕೊಂಡಿದ್ದೀರಾ?

Exit mobile version