ನಮ್ಮ ಮನದ ಭಾವನೆಗಳಿಗೂ ಶಕ್ತಿಯಿದೆ. ಅಂದರೆ ಎದುರಿಗಿರುವ ಬಂಡೆಯನ್ನು ಉರುಳಿಸುತ್ತೇನೆ ಎಂದು ಮನದಲ್ಲೇ ಮಂಡಿಗೆ ತಿಂದರೆ, ಬಂಡೆ ಉರುಳುತ್ತದೆ ಎಂದಲ್ಲ! ಆದರೆ ನಕಾರಾತ್ಮ ಭಾವನೆಗಳಿಗಿಂತ ಧನಾತ್ಮಕ ಭಾವನೆಗಳು ನಮ್ಮ ಆರೋಗ್ಯ ಮತ್ತು ವರ್ತನೆಗಳನ್ನು ಸುಧಾರಿಸುತ್ತವೆ ಎಂಬುದು ಸುಳ್ಳಲ್ಲ. ಭಾವನೆಗಳಲ್ಲಿರುವ ಶಕ್ತಿಯ ಕಾರಣದಿಂದ, ಅವುಗಳನ್ನು ಮನದಲ್ಲೇ ಹಿಡಿದಿಡುವುದು ಅಪಾಯಕಾರಿ. ಮನಸ್ಸು ಮತ್ತು ದೇಹದ ಸ್ವಾಸ್ಥ್ಯಕ್ಕಾಗಿ ಭಾವನೆಗಳಿಗೆ ಆಗಾಗ ಕೋಡಿ ಬಿದ್ದು ಹೊರಗೆ ಹರಿಯುವುದು ಕ್ಷೇಮ.
ಒತ್ತಿಟ್ಟ ಭಾವನೆಗಳಿಂದಾಗಿ ಕೋಪ, ಹತಾಶೆ, ಹೊಟ್ಟೆಕಿಚ್ಚು ಮುಂತಾದ ಋಣಾತ್ಮಕ ಭಾವನೆಗಳು ಬಾಧಿಸತೊಡಗುತ್ತವೆ. ಇದರಿಂದಾಗಿ ವಿಪರೀತ ಶಾಪಿಂಗ್ ಮಾಡುವುದು, ತಿನ್ನುವುದು, ಕುಡಿಯುವುದು, ನಾನಾ ರೀತಿಯ ಚಟಗಳು, ವ್ಯಸನಗಳು- ಇಷ್ಟಾಗಿಯೂ ಮನಸ್ಸಿಗೆ ನೆಮ್ಮದಿಯಿಲ್ಲದೆ ಒದ್ದಾಡುವುದಿದೆ. ಕಂಗೆಟ್ಟು ಆತ್ಮಹತ್ಯೆಗೆ ಯತ್ನಿಸುವುದೂ ಇದೆ. ಭಾವನೆಗಳಲ್ಲಿರುವ ಶಕ್ತಿಯನ್ನು ನಾಶ ಮಾಡಲು ಸಾಧ್ಯವಿಲ್ಲದಿದ್ದರೂ, ಅವುಗಳನ್ನು ಧನಾತ್ಮಕವಾಗಿ ತಿರುಗಿಸಲು ಸಾಧ್ಯವಿದೆ. ಹಾಗಾಗಿಯೇ ನಮ್ಮ ದೇಹದಂತೆ ಮನಸ್ಸಿಗೂ ಬೇಕು ಡಿಟಾಕ್ಸ್.
ಎನರ್ಜಿ ಹೀಲಿಂಗ್ ತತ್ವಗಳ ಪ್ರಕಾರ, ದೇಹದ ಪ್ರತಿಯೊಂದು ಕೋಶಕ್ಕೂ ತನ್ನದೇ ಆದ ಕಂಪನವಿದೆ. ಸ್ವಸ್ಥ ಕೋಶಗಳು ಅಸ್ವಸ್ಥ ಕೋಶಗಳಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಕಂಪಿಸುತ್ತವೆ. ಹಾಗಾಗಿಯೇ ಋಣಾತ್ಮಕ ಭಾವನೆಗಳು ದೇಹವನ್ನು ಮೂಲಭೂತವಾದ ಕೋಶಗಳ ಮಟ್ಟದಿಂದಲೇ ಶಿಥಿಲಗೊಳಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಧನಾತ್ಮಕ ಭಾವನೆಗಳು ಆರೋಗ್ಯವನ್ನು ಸುಧಾರಿಸುವುದು ಸಹ ಮೂಲದಿಂದಲೇ. ದ್ವೇಷ, ತಪ್ಪಿತಸ್ಥ ಭಾವನೆ, ಅಸಮಾಧಾನ, ಕ್ಷಮೆಯಿಲ್ಲದಂಥ ಭಾವನೆಗಳು ಕ್ಯಾನ್ಸರ್‌ನಂಥ ಅತಿ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂಬುದರ ಬಗ್ಗೆ ವೈದ್ಯ ವಿಜ್ಞಾನ ಹೆಚ್ಚಿನ ಸಂಶೋಧನೆ ನಡೆಸುತ್ತಿದೆ. ಇದೇ ಕಾರಣಕ್ಕಾಗಿ ಕೆಲವೆಡೆ ಕ್ಯಾನ್ಸರ್ ರೋಗಿಗಳಿಗೆ ಕ್ಷಮೆ ನೀಡುವ ಮತ್ತು ಕ್ಷಮೆ ಬೇಡುವ ʻಫರ್ಗಿವ್‌ನೆಸ್ ಥೆರಪಿʼಯನ್ನು ಪ್ರಯೋಗಿಸಲಾಗುತ್ತಿದೆ. ಅಂತೂ ದೇಹದ ಕೋಶಗಳ ವರ್ತನೆಯಲ್ಲಿ ಮನಸ್ಸಿನ ಭಾವನೆಗಳು ಮಹತ್ವದ ಪಾತ್ರ ವಹಿಸುವುದು ನಿಜವೇ ಹೌದು.
ಭಾವನೆಗಳು ಹೇಗೆ ರೋಗವನ್ನು ತರಬಲ್ಲವು?: ಎಂಬ ಪ್ರಶ್ನೆಯನ್ನು ನೋಡೋಣ. ದ್ವೇಷವನ್ನು ಸಾಧಿಸುವವರಲ್ಲಿ ಹೃದಯಾಘಾತ, ಹೊಟ್ಟೆಯಲ್ಲಿ ಅಲ್ಸರ್, ಆರ್ಥರೈಟಿಸ್, ಬೆನ್ನು ನೋವು, ತಲೆ ನೋವು ಮುಂತಾದ ಲಕ್ಷಣಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅತಿಯಾಗಿ ಕೋಪಿಸಿಕೊಳ್ಳುವವರನ್ನು ಅಲರ್ಜಿ, ಅಸ್ತಮಾ, ಶೀತ-ನೆಗಡಿ, ಚರ್ಮದ ಸಮಸ್ಯೆಗಳು ಹೆಚ್ಚು ಬಾಧಿಸುತ್ತವಂತೆ. ಮಾತ್ರವಲ್ಲ, ಕೋಪವನ್ನು ಅತಿಯಾಗಿ ಹತ್ತಿಕ್ಕಿಕೊಳ್ಳುವವರಲ್ಲಿ ಬಹಳಷ್ಟು ಮಂದಿ ಕ್ಯಾನ್ಸರ್‌ನಿಂದ ಬಳಲಿದ ಉದಾಹರಣೆಯನ್ನು ರೋಚೆಸ್ಟರ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಂಶೋಧಕರು ನೀಡುತ್ತಾರೆ.
ಮನವನ್ನು ಡಿಟಾಕ್ಸ್ ಮಾಡುವುದು ಹೇಗೆ?: ಅಳುತ್ತಾ ಕೂತರೆ ಪ್ರಯೋಜನವಿಲ್ಲ ಎಂದುಕೊಂಡರೆ- ತಪ್ಪು! ಮನಸ್ಸು ಹಗುರವಾಗುವಷ್ಟು ಅಳುವುದರಿಂದ ಭಾವನೆಗಳಿಗೆ ಸುಲಭದಲ್ಲಿ ಕೋಡಿ ಬಿದ್ದಂತಾಗುತ್ತದೆ. ಅಳುವುದು ದೌರ್ಬಲ್ಯ, ಅವಿವೇಕ ಎಂಬಂಥ ಮಾತುಗಳೆಲ್ಲಾ ಅರ್ಥಹೀನ. ಹೊಸ ಭಾವನೆಗಳು ಮನ ತುಂಬುವುದಕ್ಕೆ ಹಳೆಯವು ಖಾಲಿ ಆಗಲೇ ಬೇಕು. ಒತ್ತಿಟ್ಟ ಭಾವನೆಗಳು ಖಾಲಿಯಾಗುವವರೆಗೂ ಹರಿಯಲಿ ಕಣ್ಣೀರು.
ಇದನ್ನೂ ಓದಿ: Prerane : ನನಗೆ ಗೊತ್ತಿಲ್ಲವೆಂಬ ಅರಿವೇ ಆಧ್ಯಾತ್ಮಿಕತೆಯ ಅಡಿಪಾಯ!
ಯೋಗ ಮತ್ತು ಧ್ಯಾನ: ಇವೆರಡೂ ಕೆಲಸ ಮಾಡುವುದು ಮನಸ್ಸಿನ ಶಕ್ತಿಯ ಮೇಲೆ. ಮನದಲ್ಲಿ ಕುಳಿತು ಕೊಳೆಯುತ್ತಿರುವ ಬೇಡದ ಕೊಳೆಯನ್ನು ತೆಗೆಯುವುದಕ್ಕೆ ಈ ಮೂಲಕ ಅವಕಾಶವಾಗುತ್ತದೆ. ಮನದಲ್ಲಿ ಹತ್ತಿಕ್ಕಿದ ಭಾವಗಳನ್ನು ಹರಿ ಬಿಡುವುದಕ್ಕೆ ಧ್ಯಾನ ಪ್ರಭಾವಶಾಲಿ ಮಾರ್ಗ.
ಕೃತಜ್ಞತೆ: ಬದುಕಿನ ಅತ್ಯ್ತುತ್ತಮ ಔಷಧಿಗಳಲ್ಲಿ ಇದೂ ಒಂದು. ಏನಿದ್ದರೂ, ಎಷ್ಟಿದ್ದರೂ ಕೊರಗುತ್ತಿರುವ ನಮಗೆ, ಇರುವುದರ ಬಗ್ಗೆ ಕನಿಷ್ಟ ಕೃತಜ್ಞತೆಯೂ ಇರುವುದಿಲ್ಲ. ಸದಾ ಕಾಲ ರಸ್ತೆ, ಸರಿಯಿಲ್ಲ, ಹಾಳು ವಾತಾವರಣ, ದರಿದ್ರ ಟ್ರಾಫಿಕ್, ಹುಳುಕು ಸಹೋದ್ಯೋಗಿಗಳು, ಕೊಳಕು ಮನಸ್ಥಿತಿಗಳು ಎಂದೆಲ್ಲಾ ಗೊಣಗುತ್ತ, ಗಲಾಟೆ ಮಾಡುತ್ತಲೇ ಇದ್ದರೆ ಸಮಾಧಾನದಿಂದ ಇರುವುದಾದರೂ ಯಾವಾಗ? ನಮ್ಮ ಹೊರತಾಗಿ ಉಳಿದೆಲ್ಲವೂ ನಮ್ಮ ನಿಯಂತ್ರಣಕ್ಕೆ ಒಳಪಡದ ವಿಷಯಗಳು. ಹಾಗಾದರೆ ನಮಗಿರುವ ಒಳ್ಳೆಯ ಮತ್ತು ಅನುಕೂಲಕರ ವಿಷಯಗಳಿಗೆ ಬೆಲೆಯೇ ಇಲ್ಲವೇ? ಅವೂ ಇಲ್ಲದಿದ್ದರೆ ಹೇಗಿರುತ್ತಿತ್ತು ನಮ್ಮ ಬದುಕು? ಹಾಗಾಗಿ ಇರುವುದಕ್ಕೆ ಮರೆಯದೇ ಥ್ಯಾಂಕ್ಸ್ ಹೇಳಿ.