ಸಕಾರಾತ್ಮಕ ಮನೋಭಾವ (ಪಾಸಿಟಿವ್ ಥಿಂಕಿಂಗ್) ಬೆಳೆಸಿಕೊಳ್ಳಿ ಎಂದು ಹೇಳುವುದು ಸುಲಭ. ಆದರೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಅಂತನಿಸುತ್ತಿದೆಯೇ? ಹೌದು. ಪಾಸಿಟಿವ್ ಥಿಂಕಿಂಗ್ ತಾನೇ ತಾನಾಗಿ ಬರುವುದಿಲ್ಲ. ಅದನ್ನು ಸಾಧಿಸಲು ಕೊಂಚ ಪ್ರಯತ್ನವನ್ನೂ ಪಡಬೇಕಾಗುತ್ತದೆ. ಪ್ರಯತ್ನ ಪಡುತ್ತಲೇ ಇದ್ದರೆ ನಿಧಾನವಾಗಿ ಅದು ನಮ್ಮ ಹಾದಿಗೆ ಬರುತ್ತದೆ. ಹಾಗಾದರೆ ಪಾಸಿಟಿವ್ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ? ಯಾವೆಲ್ಲ ಅಭ್ಯಾಸಗಳಿಂದ ನಮ್ಮ ಮಿದುಳು ಪಾಸಿಟಿವ್ ಮನೋಭಾವದ ಹಾದಿಗೆ ಪಳಗುತ್ತದೆ, ಅದಕ್ಕೆ ಪ್ರಯತ್ನ ಪಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ ಏಳು ಸಲಹೆಗಳು.
೧. ಯಾವುದೇ ಕೆಲಸದ ಸಂದರ್ಭ ಸವಾಲುಗಳು ಹಾಗೂ ಅಡೆತಡೆಗಳು ಸಾಮಾನ್ಯ. ಆದರೆ, ಆ ಕೆಲಸದತ್ತ ಗಮನ ಹರಿಸುವಾಗ ಪ್ರಯತ್ನಪಟ್ಟು ಒಳ್ಳೆಯ ವಿಚಾರಗಳನ್ನಷ್ಟೆ ಗಣನೆಗೆ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ಪಾಸಿಟಿವ್ ವಿಚಾರ ತೀರಾ ಸಣ್ಣದಿರಬಹುದು. ಕಷ್ಟ ದೊಡ್ಡದಿರಬಹುದು. ಆದರೂ, ಮಾಡಿ ಮುಗಿಸಬೇಕೆಂಬ ಹಠದೊಂದಿಗೆ ಆಗುವ ಲಾಭಗಳನ್ನಷ್ಟೇ ಯೋಚಿಸಿ. ಹೀಗೆ ಮಾಡಲು ಅಭ್ಯಾಸ ಮಾಡುವುದರಿಂದ ಪ್ರತಿಯೊಂದರಲ್ಲೂ ಆಶಾಕಿರಣ ನಿಮ್ಮೆದುರು ಕಾಣಲಾರಂಭಿಸುತ್ತದೆ. ಅದರಲ್ಲಿ ಸಿಗುವ ಸುಖ ಯಾವ ಸವಾಲಿಗೂ ಕಮ್ಮಿ ಇಲ್ಲ ಎಂಬ ಸತ್ಯದ ಅರಿವಾಗಲಾರಂಭಿಸುತ್ತದೆ.
೨. ಕೃತಜ್ಞತೆಯನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹಲವು ಒತ್ತಡಗಳನ್ನು, ಮಾನಸಿಕ ತುಮುಲಗಳ್ನು ನಿವಾಳಿಸಿ ಎಸೆದುಬಿಡುವ ಸಾಮರ್ಥ್ಯ ಈ ಕೃತಜ್ಞತೆಗಿದೆ. ಇದು ನಿಮ್ಮಲ್ಲಿ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಕಷ್ಟಕಾಲದಲ್ಲಿ ಆತ್ಮವಿಶ್ವಾಸ, ಛಲದ ಜೊತೆಗೆ ಸರ್ವರನ್ನೂ ಪ್ರೀತಿಸುವ, ಮಮತೆ ಹಂಚುವ ಗುಣವನ್ನೂ ಚಿಮ್ಮಿಸುತ್ತದೆ. ನಿಮಗೆ ಕಂಫರ್ಟ್ ನೀಡುವ ಜನರು, ಸ್ಥಳ, ಇತ್ಯಾದಿಗಳ ಬಗ್ಗೆ ಯೋಚಿಸಿ. ಪ್ರತಿ ದಿನವೂ ಬದುಕಿನ ಉತ್ತಮ ವಿಷಯಗಳಿಗೆ ಕೃತಜ್ಞತಾ ಭಾವ ಹೊಂದುವುದನ್ನು, ನೆನಪಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ. ನಿಮಗೆ ಸಹಾಯ ಮಾಡಿದ ಯಾರೋ ಅಪರಿಚಿತ, ಅಥವಾ ಒಂದು ನಾಯಿ, ಅಥವಾ ಊಟ ಹಾಕಿದ ಪುಣ್ಯಾತ್ಮ ಎಲ್ಲವೂ ನಿಮಗೆ ಬದುಕಿನ ಬಗೆಗೆ ಬೇರೆಯದೇ ದೃಷ್ಠಿಕೋನವನ್ನು ಹೊಂದುವಂತೆ ಮಾಡುತ್ತದೆ.
೩. ಡೈರಿ ಬರೆಯಿರಿ. ದಿನವೂ ಕೊಂಚ ಹೊತ್ತು, ನಿಮ್ಮ ಬದುಕಿಗೆ ಆ ದಿನ ಸಂತಸ ಕೊಟ್ಟ ಜೀವಗಳು, ಮನಸುಗಳು ಅಥವಾ ಖುಷಿ ಕೊಟ್ಟ ಗಳಿಗೆಗಳನ್ನು ಬರೆಯಲು ಮೀಸಲಿಡಿ. ನೀವು ನಿಮ್ಮ ಜೊತೆ ಕಳೆಯುವ ನಿಮ್ಮದೇ ಸಮಯವಿದು. ಈ ಸಂಪೂರ್ಣ ಸಮಯ ನಿಮ್ಮ ಶ್ರೇಯಸ್ಸಿಗೇ ಮೀಸಲು. ನಿಮ್ಮ ಮೇಲೆ ವರ್ಕ್ ಮಾಡಿ. ದಿನಚರಿ ಬರೆಹ ರೂಪಕ್ಕೆ ಇಳಿಯುವಾಗ ಪ್ರತಿದಿನದ ಸಣ್ಣ ಸಣ್ಣ ಕ್ಷಣಗಳೂ ಅಮೋಘ ಖುಷಿ ಕೊಡುವ ಸಾಮರ್ಥ್ಯ ಹೊಂದಿವೆ ಎಂದು ಅರಿವಾಗುತ್ತದೆ.
ಇದನ್ನೂ ಓದಿ | World heart day | ಕಾಪಾಡಿಕೊಳ್ಳಲು ಹೃದಯವನ್ನು, ಸೇವಿಸಿ ಪ್ರತಿದಿನ ಇವನ್ನು
೪. ನಗು, ತಮಾಷೆಗೆ ಸಮಯ ಕೊಡಿ. ನಗುವಿನಷ್ಟು ದಿವ್ಯೌಷಧ ಇನ್ನೊಂದಿಲ್ಲ. ಒತ್ತಡ, ಚಿಂತೆ, ಖಿನ್ನತೆಯಂತಹ ಮಾನಸಿಕ ತುಮುಲಗಳನ್ನು ದೂರ ಇಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ, ನಿಮ್ಮ ಪ್ರೀತಿಪಾತ್ರರ ಜೊತೆ ಕಳೆಯಲು ಕೊಂಚ ಸಮಯ ಮೀಸಲಿಡಿ. ಸಂಬಂಧಗಳ ಮಹತ್ವ ಅರಿತು ಅವರ ಜೊತೆಗೆ ಪ್ರಿತಿ, ತಮಾಷೆ, ಲಘು ಹರಟೆಗಳಲ್ಲಿ ನಕ್ಕು ಹಗುರಾಗಿ.
೫. ಪಾಸಿಟಿವ್ ಮನಸ್ಥಿತಿಯ ಮಂದಿಯೊಂದಿಗೆ ಕಾಲ ಕಳೆಯಿರಿ. ಅವರ ಮಾತುಗಳು, ಅವರು ಮಾಡುವ ಕೆಲಸಗಳು ನಿಮಗೆ ಸ್ಪೂರ್ತಿ ಕೊಡುವಂತಿರಲಿ. ಸಮಯದ ಸದ್ಭಳಕೆ ಇಂಥವರಿಂದ ನೋಡಿ ಕಲಿಯಬೇಕು ಎಂದು ಅನಿಸುವ ಮಂದಿಯ ಜೊತೆಗೆ ಸ್ನೇಹವಿರಲಿ. ಪ್ರತಿಯೊಂದರಲ್ಲೂ ಹೊಸತನ ಕಾಣುವ, ಬದುಕನ್ನು ಖುಷಿಯಿಂದ ಪಾಸಿಟಿವ್ ಆಗಿ ತೆಗೆದುಕೊಳ್ಳುವ, ಕಷ್ಟದ ಸಂದರ್ಭದಲ್ಲೂ ಪಟ್ಟು ಬಿಡದೆ ಪಾಸಿಟಿವ್ ಮನೋಭಾವದಿಂದ ಹೋರಾಡುವ ಮಂದಿ ನಿಮ್ಮ ಜೊತೆಗಿದ್ದರೆ, ಖಂಡಿತ ನಿಮಗೂ ಅವರ ಗಾಳಿ ಬೀಸುತ್ತದೆ.
೬. ನೀವು ಮಾಡಿದ ಕೆಲಸಗಳ ಬಗೆಗೆ ನಿಮ್ಮ ನೆಗೆಟಿವ್ ವಿಚಾರಗಳ ಮೇಲೆ ವರ್ಕ್ ಮಾಡಿ. ನಿಮ್ಮ ವೀಕ್‌ನೆಸ್‌ಗಳನ್ನು ಪತ್ತೆ ಹಚ್ಚಿ. ಅವುಗಳನ್ನು ಸರಿಪಡಿಸಿಕೊಳ್ಳುವಲ್ಲಿಗೆ ಗಮನ ಕೊಡಿ. ಇನ್ನೊಬ್ಬರು ನಿಮ್ಮ ನೆಗೆಟಿವ್ ಅಂಶಗಳನ್ನು ಹೇಳಿದಾಗ ಅದನ್ನು ಉತ್ತಮ ಮನೋಭಾವದಲ್ಲಿ ಸ್ವೀಕರಿಸಲು ಪ್ರಯತ್ನಿಸಿ.
೭. ಪ್ರತಿದಿನದ ಆರಂಭವನ್ನೂ ಒಂದು ಪಾಸಿಟಿವ್ ಮನೋಭಾವದಿಂದ ಆರಂಭಿಸಿ. ಬೆಳಗ್ಗೆ ಬೇಗ ಏಳುವುದರಿಂದ ಹಿಡಿದು, ನಿಮ್ಮ ಪ್ರೀತಿ ಪಾತ್ರರಿಗೆ ನೆರವಾಗುವುದು, ನಿಮ್ಮ ದೈಹಿಕ ಮಾನಸಿಕ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮಗಳನ್ನು ಮಾಡುವುದು ಹೀಗೆ ಎಲ್ಲವೂ ನಿಮ್ಮ ಇಡೀ ದಿನಕ್ಕೆ ಚೈತನ್ಯ ನೀಡುತ್ತದೆ. ಇತರರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ. ಇತರರ ಕೆಲಸಗಳಿಗೆ ನೀವೂ ಹೆಗಲು ಕೊಟ್ಟು ಖುಷಿಯನ್ನು ಹಂಚಿ. ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಖಂಡಿತವಾಗಿಯೂ ಇದರಲ್ಲಿ ನೀವು ಸಫಲರಾಗುತ್ತೀರಿ.
ಇದನ್ನೂ ಓದಿ | Bad dreams | ಪದೇ ಪದೇ ದುಃಸ್ವಪ್ನ ಬೀಳುತ್ತಿದೆಯೇ? ಇದು ಮರೆವಿನ ಕಾಯಿಲೆಯ ಲಕ್ಷಣ!