Site icon Vistara News

Nonstick Tava: ಕಬ್ಬಿಣದ ಕಾವಲಿಯನ್ನು ನಾನ್‌ಸ್ಟಿಕ್‌ ಮಾಡಬೇಕೇ? ಹಾಗಾದರೆ ಇದನ್ನು ಓದಿ!

tava nonstick

ಭಾರತೀಯ ಬ್ರೇಕ್‌ಫಾಸ್ಟ್‌ಗಳಿಗೆ ಕಾವಲಿ (Tava)ಎಂಬುದು ಮುಖ್ಯದೇವರ ಹಾಗೆ. ದೋಸೆ, ಪಡ್ಡು, ಉತ್ತಪ್ಪಂ, ಚಪಾತಿ, ಪರಾಠಾ, ಚೀಲಾ, ಆಮ್ಲೆಟ್‌ ಹೀಗೇ ಏನೇ ಮಾಡಲು ಹೊರಟರೂ ಕಾವಲಿ ಬೇಕೇಬೇಕು. ಇದನ್ನೆಲ್ಲ ಆರೋಗ್ಯದ ದೃಷ್ಟಿಯಿಂದ ಕಡಿಮೆ ಎಣ್ಣೆ (less oil) ಅಥವಾ ತುಪ್ಪ ಬಳಸಿ ಮಾಡುವುದು ಹೇಗೆ ಎಂಬ ವಿಚಾರಕ್ಕೆ ಬಂದಾಗ ನಾನ್‌ಸ್ಟಿಕ್‌ (nonstick tava) ಒಂದೇ ಏಕೈಕ ಪರಿಹಾರವಾಗಿ ಮೊದಲ ನೋಟಕ್ಕೆ ಕಾಣುತ್ತದೆ ನಿಜ. ಆದರೆ, ನಾನ್‌ಸ್ಟಿಕ್‌ನಲ್ಲಿರುವ ಟೆಫ್ಲಾನ್‌ (teflon coating) ಪದರದ ಕಾರಣದಿಂದ ಇದು ಆರೋಗ್ಯಕ್ಕೆ ಅತ್ಯಂತ ಮಾರಕ (unhealthy) ಎಂಬ ಸಾಮಾನ್ಯಜ್ಞಾನ ಬಹುತೇಕರಿಗೆ ಇದೀಗ ಅರಿವಿಗೆ ಬರುತ್ತಿದೆ. ಈ ಅರಿವಿನಿಂದ ನಾನ್‌ಸ್ಟಿಕ್‌ ತವಾಗಳನ್ನು ಬಳಸುವುದನ್ನೂ ಬಿಟ್ಟು ಹಲವರು ಹಳೆಯ ಪ್ರಕಾರದ ಕಬ್ಬಿಣದ ಕಾವಲಿಯೆಡೆಗೇ (steel tava) ಮತ್ತೆ ಮರಳುತ್ತಿದ್ದಾರೆ. ಆದರೆ, ಬಹುತೇಕ ಎಲ್ಲರ ಸಮಸ್ಯೆ ಎಂದರೆ ಕಬ್ಬಿಣದ ಕಾವಲಿಯಲ್ಲಿ ಎಣ್ಣೆಯಿಲ್ಲದೆ ದೋಸೆ ಕಾವಲಿಯಿಂದ ಏಳದು ಎಂಬುದು. ಕಬ್ಬಿಣದ ಕಾವಲಿಯಲ್ಲಿ ನಾನ್‌ಸ್ಟಿಕ್‌ನಂತೆ ಗರಿಗರಿಯಾಗಿ ದೋಸೆ ಬರುವುದೇ ಇಲ್ಲ ಎಂಬುದು ಎಲ್ಲರ ದೂರು. ಆದರೆ, ಮನಸ್ಸು ಮಾಡಿದರೆ ನಿಮ್ಮ ಕಬ್ಬಿಣದ ಕಾವಲಿಯೂ ನಾನ್‌ಸ್ಟಿಕ್‌ನಂತೆ ವರ್ತಿಸುತ್ತದೆ ಎಂಬ ಸತ್ಯ ನಿಮಗೆ ಗೊತ್ತೇ? ಕೆಲವೊಂದು ಟಿಪ್ಸ್‌ಗಳನ್ನು (kitchen tips) ಪಾಲಿಸಿದರೆ, ಕಬ್ಬಿಣದ ಕಾವಲಿಯಲ್ಲೂ ನಾನ್‌ಸ್ಟಿಕ್‌ನಂತೆಯೇ ಗರಿಗರಿಯಾಗಿ ದೋಸೆ (making dosa) ಮಾಡಬಹುದು. ಹೇಗೆ ಎಂಬುದನ್ನು ತಿಳಿಯಬೇಕಾದರೆ ಇಲ್ಲಿ ಓದಿ.

1. ಕಬ್ಬಿಣದ ಕಾವಲಿಯನ್ನು ಬಳಸಿದ ಮೇಲೆ ಅದನ್ನು ಹಾಗೆಯೇ ತಣ್ಣಗಾಗಲು ಬಿಡಿ. ಬಿಸಿಯಾದ ತವಾವನ್ನೇ ನಲ್ಲಿಯ ಕೆಳಗೆ ಹಿಡಿದು ತೊಳೆಯಬೇಡಿ. ಕಾವಲಿ ತಣ್ಣಗಾದ ಮೇಲೆ ಸ್ವಲೊ ಬಿಸಿನೀರನ್ನು ಕಾವಲಿಯ ಮೇಲೆ ಹಾಕಿ ನೆನೆಸಿ ಆಮೇಲೆ, ಹೆಚ್ಚು ಗರಗರನೆ ಉಜ್ಜದೆ ಮೆದುವಾಗಿ ತೊಳೆಯಿರಿ. ಮೆಟಲ್‌ ಸ್ಕ್ರಬರ್‌ಗಳಿಂದ ಉಜ್ಜದೆ, ಸ್ವಲ್ಪವೇ ಸ್ವಲ್ಪ ಸೋಪು ಹಾಕಿ ಮೆತ್ತಗೆ ಉಜ್ಜಿ ತೊಳೆಯಿರಿ.

2. ತೊಳೆದ ತವಾವನ್ನು ಬಟ್ಟೆಯಿಂದ ಒರಸಿ ಇಟ್ಟುಕೊಳ್ಳಿ. ತೊಳೆದು ಹಾಗೆಯೇ ಟಬ್‌ ಮೇಲೆ ಹಾಕುವುದರಿಂದ ಕಬ್ಬಿಣಕ್ಕೆ ಬಹುಬೇಗನೆ ತುಕ್ಕು ಹಿಡಿಯುತ್ತದೆ. ಅದಕ್ಕಾಗಿ ಕಬ್ಬಿಣದ ತವಾಗಳನ್ನು ತೊಳೆದ ತಕ್ಷಣ ಒರೆಸಿ.

3. ಕಬ್ಬಿಣದ ತವಾ ನಾನ್‌ಸ್ಟಿಕ್‌ನಂತೆ ವರ್ತಿಸಬೇಕಾದರೆ, ಪ್ರತಿ ಒರೆಸಿದ ತವಾವನ್ನು ಮುಂದಿನ ಅಡುಗೆಗೆಂದು ಸೀಸನ್‌ ಮಾಡಿಡಿ. ಮುಖ್ಯವಾಗಿ ಕಬ್ಬಿಣಕ್ಕೆ ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವುದು ಅಗತ್ಯ.

4. ತವಾವನ್ನು ಸೀಸನ್‌ ಮಾಡಲು ಒರೆಸಿದ ತವಾದ ಮೇಲೆ ಒಂದೆರಡು ಬಿಂದು ಅಡುಗೆ ಎಣ್ಣೆಯನ್ನು (ಎಳ್ಳೆಣ್ಣೆಯಾದರೆ ಒಳ್ಳೆಯದು) ಹಾಕಿ ತವಾದ ಎಲ್ಲ ಭಾಗಗಳಿಗೂ ಈ ಎಣ್ಣೆ ಹರಡುಕೊಳ್ಳುವಂತೆ ಹಚ್ಚಿ ನಂತರ ಒಲೆಯ ಮೇಗೆ ಹದ ಉರಿಯಲ್ಲಿ ಸ್ವಲ್ಪ ಬಿಸಿಮಾಡಿ, ತವಾದಿಂದ ಇನ್ನೇನು ಹೊಗೆ ಏಳುತ್ತದೆ ಎಂಬಂತಾಗುವಾಗ ಉರಿ ಆರಿಸಿ. ಇದು ತವಾವನ್ನು ಪಾಲಿಮರೈಸ್‌ ಮಾಡಿ ನಾನ್‌ಸ್ಟಿಕ್‌ನಂತೆ ವರ್ತಿಸಲು ಸಹಾಯ ಮಾಡುತ್ತದೆ.

5. ಸೀಸನ್‌ ಮಾಡಿದ ತವಾವನ್ನು ಹಾಗೆಯೇ ತಣ್ಣಗಾಗಲು ಬಿಡಿ. ಒಮ್ಮೆ ತಣ್ಣಗಾದ ಮೇಲೆ, ಹೆಚ್ಚುವರಿ ಎಣ್ಣೆಯನ್ನು ಟಿಶ್ಯೂನಲ್ಲೋ ಅಥವಾ ಬಟ್ಟೆಯಲ್ಲೋ ಒರೆಸಿ ತೆಗೆಯಿರಿ. ಹೆಚ್ಚು ಒರೆಸುವುದು ಬೇಡ. ಮೆದುವಾಗಿ ಒರೆಸಿ. ಎಣ್ಣೆಯ ತೆಳುವಾದ ಪದರ ಕಾವಲಿಯಲ್ಲಿ ಹಾಗೆಯೇ ಇರಲಿ.

nonstick tava

6. ಸೀಸನಿಂಗ್‌ ಮಾಡುವಾಗ ಎಣ್ಣೆ ಅತಿಯಾಗಿ ಸುರಿಯಬೇಡಿ. ಕಾವಲಿಯ ಎಲ್ಲ ಮೂಲೆಗೂ ಎನ್ಣೆ ಹದವಾಗಿ ಹರಡುವಷ್ಟೇ ಇರಲಿ.

7. ಕಬ್ಬಿಣದ ಕಾವಲಿಗೆ ಸರಿಯಾದ ಬಗೆಯಲ್ಲಿ ಕಾಳಜಿ ಬೇಕು. ಹೀಗೆಯೇ ಪ್ರತಿ ಬಾರಿಯೂ ಜತನದಿಂದ ಮಾಡುತ್ತಾ ಬಂದಲ್ಲಿ ನಿಮ್ಮ ಕಾವಲಿಯು ಯಾವ ನಾನ್‌ಸ್ಟಿಕ್‌ಗೂ ಕಡಿಮೆಯೇ ಇರುವುದಿಲ್ಲ. ದೋಸೆ ಹುಯ್ದ ಮೇಲೆ ಗಡಿಬಿಡಿಯಲ್ಲಿ ಬಿಸಿಯಾದ ಕಾವಲಿ ಮೇಲೆ ತಣ್ಣೀರು ಹುಯ್ದು ನಂತರ ಗರಗರನೆ ಡಿಟರ್ಜೆಂಟ್‌ ಬಳಸಿ ತಿಕ್ಕಿ ತಿಕ್ಕಿ ಜಿಡ್ಡು ತೆಗೆದು ಟಬ್‌ ಮೇಲೆ ಇಟ್ಟರೆ, ಮತ್ತೆ ಮರುದಿನವಷ್ಟೇ ಬೆಳಗೆ ತಿಂಡಿಗೆ ತೆಗೆದರೆ, ನೀವು ಮಾಡಿ ಅಷ್ಟೂ ಅದ್ವಾನಗಳಿಂದ ಉಳಿಸಿಕೊಂಡ ಸಮಯವನ್ನು ದೋಸೆ ಯಾಕೆ ಏಳುತ್ತಿಲ್ಲ ಎಂದು ಹರಸಾಹಸ ಪಡುವುದರಲ್ಲೇ ಕಳೆದುಬಿಡುತ್ತೀರಿ. ಕಬ್ಬಿಣದ ಕಾವಲಿ ನಿಮ್ಮ ಮಗುವಿನ ಹಾಗೆ. ಅದಕ್ಕೆ ಅದರದ್ದೇ ಆದ ಸಮಯ, ಕಾಳಜಿಯ ಅಗತ್ಯ ಇದೆ. ಅದನ್ನು ನೀವು ನೀಡಿದರೆ, ಖಂಡಿತಾ ಆರೋಗ್ಯಕರವಾದ ರುಚಿರುಚಿಯಾದ ತಿಂಡಿಗಳನ್ನು ಯಾವ ಕೆನ್ಷನ್‌ ಇಲ್ಲದೇ ನೀವು ಮಾಡುವಿರಿ!

ಇದನ್ನೂ ಓದಿ: Kitchen Tips: ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸುವಾಗ ನಿಮ್ಮ ಆರೋಗ್ಯದ ಬಗ್ಗೆ ಈ ಅಂಶಗಳು ತಿಳಿದಿರಲಿ!

Exit mobile version