ನೀವು ಚಹಾ ಪ್ರಿಯರಾಗಿದ್ದರೆ, ಒಂದು ಕಪ್ ಚಹಾಕ್ಕೆ ನೀವು ಯಾವತ್ತೂ, ಬೇಡ ಎನ್ನಲಾರಿರಿ. ಚಹಾ ಪ್ರೀತಿಯೇ ಅಂಥದ್ದು., ಒಂದು ಕಪ್ ಚಹಾ ಜೊತೆಗೆ ಕುಡಿಯೋಣ ಎಂದು ಯಾರಾದರೂ ಪ್ರೀತಿಯಿಂದ ಆಹ್ವಾನಿಸಿದರೆ, ನೀವು ಇಲ್ಲ ಎನ್ನಲಾರಿರಿ. ಅದು ದಿನದ ಯಾವುದೇ ಸಮಯ ಇರಲಿ, ಚಹಾಕ್ಕೆ ಸಮಯ ಎಂಬುದಿಲ್ಲ. ಇಂಥ ಸಂದರ್ಭ ಒಮ್ಮೆಯಾದರೂ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಚಹಾ ಕಪ್ ಕೈ ಜಾರಿ ನಿಮ್ಮ ಮೈಮೇಲೆ ಚೆಲ್ಲಿಕೊಂಡಿರುತ್ತೀರಿ. ಅಥವಾ ಕಚೇರಿಗೆ ಧರಿಸುವ ಬೆಳ್ಳನೆಯ ಶರ್ಟ್ ಮೇಲೆ ಬೀಳಿಸಿಕೊಂಡಿರುತ್ತೀರಿ. ಅವತ್ತಷ್ಟೇ ಮೊದಲ ಬಾರಿಗೆ ಉಟ್ಟುಕೊಂಡ ಹೊಸ ಸೀರೆಯ ಮೇಲೋ ಅಥವಾ ಹೊಸ ತಿಳಿ ಬಣ್ಣದ ಟಿ ಶರ್ಟ್ ಮೇಲೆ ಇಷ್ಟೇ ಇಷ್ಟು ಚಹಾ ಚೆಲ್ಲಿಬಿಟ್ಟಿರಲೂಬಹುದು. ಚಹಾದ ಮೇಲೆ ಪ್ರೀತಿಯಿದ್ದರೂ ಆ ಕ್ಷಣಕ್ಕೆ ಖಂಡಿತಾ ನಿಮಗೆ ಚಹಾದ ಮೇಲೆ ಒಂದು ಸಣ್ಣ ಸಾತ್ವಿಕ ಸಿಟ್ಟು ಬಂದಿರುತ್ತದೆ. ಸಹಜ ಕೂಡಾ. ಯಾಕೆಂದರೆ, ಚಹಾದ ಕಲೆ ಅಷ್ಟು ಸುಲಭವಾಗಿ ಹೋಗದು. ಅದರಲ್ಲೂ, ತಿಳಿ ಬಣ್ಣದ ಬಟ್ಟೆಗಳ ಮೇಲೆ ಬಿದ್ದರಂತೂ ಚಹಾದ ಸಣ್ಣದೊಂದು ಕಲೆ ಬಹಳ ಕಾಲ ಹಾಗೆಯೇ ಇದ್ದು, ಬಟ್ಟೆಯ ಸೌಂದರ್ಯವನ್ನೇ ಹಾಳು ಮಾಡಿಬಿಟ್ಟಿರುತ್ತದೆ. ಇಂತಹ ಹಠಮಾರಿ ಕಲೆಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಯಾಕಿಲ್ಲ ಹೇಳಿ! ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುವಂತೆ ಚಹಾ ಕಲೆಗೂ ಖಂಡಿತ ಪರಿಹಾರ (how to remove tea stains from clothes) ಇದ್ದೇ ಇದೆ. ಅವೇನು ಗೊತ್ತೇ, ಇಲ್ಲಿವೆ ಟಿಪ್ಸ್.
ತಕ್ಷಣ ತೊಳೆಯಿರಿ
ಚಹಾ ಚೆಲ್ಲಿಕೊಂಡ ತಕ್ಷಣ ತಣ್ಣೀರಿನಿಂದ ಆ ಭಾಗವನ್ನು ತೊಳೆಯಿರಿ. ಹೆಚ್ಚು ತಡ ಮಾಡಬಾರದು. ಸಹಾ ನೀರಿನಲ್ಲಿ ಕರಗುವ ಕಾರಣ ತಕ್ಷಣ ತೊಳೆದರೆ, ಸುಲಭವಾಗಿ ಹೋಗುತ್ತದೆ. ಒಣಗಿ ಈ ಕಲೆ ಅಂಟಿಕೊಂಡರೆ ಹೋಗಿಸುವುದು ಕಷ್ಟ. ನಳ್ಳಿಯ ನೀರಿಗೆ ಒಡ್ಡಿಕೊಂಡು ಕೂಡಲೇ ಆ ಜಾಗವನ್ನು ನೀರಿನಿಂದ ತಿಕ್ಕಿ ತೊಳೆಯಿರಿ.
ಹೀಗೆ ಮಾಡಿ
ಕಲೆ ಕೇವಲ ನೀರಿನಿಂದ ಹೋಗುತ್ತಿಲ್ಲ ಅನಿಸಿದರೆ, ನೀವು ನಿತ್ಯವೂ ಬಳಸುವ ಅಥವಾ ಯಾವುದಾದರೂ ಲಿಕ್ವಿಡ್ ಡಿಟರ್ಜೆಂಟ್ ಮೂಲಕ ತೊಳೆಯಿರಿ. ಬಟ್ಟೆಯಲ್ಲಿ ಅರ್ಧ ಕಾಲ ಡಿಟರ್ಜೆಂಟ್ ನೀರಿನಲ್ಲಿ ಅದ್ದಿಡಿ. ಬಟ್ಟೆ ಸರಿಯಾಗಿ ನೆನೆದ ಮೇಲೆ ಆ ಜಾಗಕ್ಕೆ ಡಿಟರ್ಜೆಂಟ್ ಹಾಕಿ ಕೈಯಲ್ಲೇ ತಿಕ್ಕಿ ತೊಳೆಯಿರಿ. ಮತ್ತೆ ನೀರಿನಲ್ಲಿ ತೊಳೆದು ನೋಡಿ. ಕಲೆ ಸಂಪೂರ್ಣವಾಗಿ ಹೋಗಿದ್ದರೆ ಹೀಗೆ ಮಾಡುವುದನ್ನು ಬಿಡಿ.
ಬೇಕಿಂಗ್ ಸೋಡಾ
ಸಾಮಾನ್ಯ ಡಿಟರ್ಜೆಂಟ್‌ನಲ್ಲೂ ಕಲೆ ಹೋಗದು ಎಂದಾದರೆ, ಬೇಕಿಂಗ್ ಸೋಡಾ ಸಹಾಯಕ್ಕೆ ಬರುತ್ತದೆ. ಯಾವುದೇ ಹಠಮಾರಿ ಕಲೆಯನ್ನು ತೆಗೆಯುವ ತಾಕತ್ತು ಇದಕ್ಕಿದೆ. ಕಲೆಯಾದ ಜಾಗವನ್ನು ಒದ್ದೆ ಮಾಡಿ, ಅದರ ಮೇಲೆ ಬೇಕಿಂಗ್ ಸೋಡಾ ಪುಡಿಯನ್ನು ಚಿಮುಕಿಸಿ ಒಂದು ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ಎದ್ದ ಮೇಲೆ ಆ ಜಾಗವನ್ನು ಉಜ್ಜಿ ತೊಳೆಯಿರಿ.
ವಿನೆಗರ್ ಹಾಕಿ
ವಿನೆಗರ್ ಮೂಲಕವೂ ಹಠಮಾರಿ ಕಲೆಯನ್ನು ಇಲ್ಲವಾಗಿಸಬಹುದು. ಕಲೆಯಾದ ಬಟ್ಟೆಯನ್ನು ನೀರಿನಲ್ಲಿ ನೆನೆ ಹಾಕಿ, ಅದಕ್ಕೆ ಒಂದೆರಡು ಚಮಚದಷ್ಟು ವಿನೆಗರ್ ಹಾಕಿ. ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಬಟ್ಟೆಯನ್ನು ತೊಳೆಯಿರಿ. ಕಲೆ ಮಾಯವಾಗುತ್ತದೆ.
ನಿಂಬೆ ಹಣ್ಣು ಬಳಸಿ
ನಿಂಬೆಹಣ್ಣಿನ ಮೂಲಕವೂ ಕಲೆಯನ್ನು ತೆಗೆಯಬಹುದು. ಕಲೆಯಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿಟ್ಟು ಅದಕ್ಕೆ ಒಂದಿಡೀ ನಿಂಬೆಹಣ್ಣನ್ನು ಹಿಂಡಿ. ನಂತರ ಸ್ವಲ್ಪ ಗಂಟೆ ಬಿಟ್ಟು ಬಟ್ಟೆಯನ್ನು ತೊಳೆದು ನೋಡಿ. ಕಲೆ ಹೋಗುತ್ತದೆ. ಬಟ್ಟೆ ಹೊಸದರಂತೆ ಕಂಗೊಳಿಸುತ್ತದೆ.
ಇದನ್ನೂ ಓದಿ: Lifestyle Tips: ನಲ್ವತ್ತರ ನಂತರವೂ ಕಳೆಕಳೆಯಾಗಿ ಕಂಗೊಳಿಸಬೇಕಾದರೆ ಈ 8 ಸೂತ್ರಗಳು ನೆನಪಿರಲಿ!