Site icon Vistara News

ಮಕ್ಕಳಲ್ಲಿ ಲೈಂಗಿಕ ತಿಳಿವಳಿಕೆ | ಕೆಟ್ಟ ಸ್ಪರ್ಶ ಒಳ್ಳೆಯ ಸ್ಪರ್ಶಗಳ ಜ್ಞಾನವಿರಲಿ!

good touch bad touch

ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ದಿನ ಬೆಳಗಾದರೆ, ಪತ್ರಿಕೆಗಳಲ್ಲಿ ಕಾಣುವ ತಲೆಬರಹಗಳು ಹೆತ್ತವರಲ್ಲಿ ಒಂದು ಬಗೆಯ ಅವ್ಯಕ್ತ ಭಯವನ್ನು ಜೀವಂತವಾಗಿ ಇರಿಸಿಯೇ ಇರುತ್ತದೆ. ಎಳೆಯ ಕಂದಮ್ಮಗಳ ಮೇಲೂ ಅತ್ಯಾಚಾರ ನಡೆಯುವಂಥ ಉದಾಹರಣೆಗಳು ಬೇಕಾದಷ್ಟಿರುವಾಗ, ಮನೆಯಿಂದ ಆಗಷ್ಟೇ ಶಾಲೆಗೆ ಎಂದು ಹೊರಗೆ ಕಾಲಿಡುವ ಪುಟಾಣಿ ಮಕ್ಕಳಿಗೆ ತಮ್ಮ ಸುರಕ್ಷಿತತೆಯನ್ನು ಕಾಪಾಡಿಕೊಳ್ಳುವ ತಂತ್ರಗಳನ್ನು, ಆ ಜಾಗರೂಕತೆಯನ್ನು ತಿಳಿಸಿ ಹೇಳುವುದು ಯಾವಾಗ ಹೇಗೆ ಎಂಬ ಗೊಂದಲ ಯಾವ ಹೆತ್ತವರನ್ನೂ ಕಾಡದೆ ಇರದು. ಅಪರಿಚಿತರ ಜೊತೆಗೆ ಹೇಗಿರಬೇಕು, ಅಥವಾ ಕೆಟ್ಟ ಸ್ಪರ್ಶ ಹೇಗಿರುತ್ತದೆ ಎಂದು ಮಕ್ಕಳಿಗೆ ಅರ್ಥ ಮಾಡಿಸುವುದು ಹೇಗೆ, ಅವರ ಪುಟ್ಟ ಮನಸ್ಸಿನಲ್ಲಿ ಇಂತಹವುಗಳಿಂದ ಜಾಗರೂಕರಾಗಿರುವಂತೆ ತಿಳಿವಳಿಕೆ ನೀಡುವುದು ಹೇಗೆ ಎಂಬುದು ಪ್ರತಿಯೊಬ್ಬ ಹೆತ್ತವರಲ್ಲೂ ಒಂದು ಹಂತದಲ್ಲಿ ಕಾಡುವ ಪ್ರಶ್ನೆ.

ಇದು ಅತ್ಯಂತ ಸೂಕ್ಷ್ಮ ವಿಚಾರ ಕೂಡಾ. ಎಲ್ಲೂ ಅತಿಯಾಗದಂತೆ, ಮಕ್ಕಳ ಮನಸ್ಸಿನಲ್ಲಿ ಭಯ ಆವರಿಸದಂತೆ, ಮಕ್ಕಳಿಗೆ ಅವರ ವಯಸ್ಸಿಗೆ ಸರಿಹೊಂದುವಂತೆ, ಎಲ್ಲೂ ಅತಿರಂಜಿತವಾಗದಂತೆ, ಭಯಬೀಳದಂತೆ, ಜೊತೆಗೆ ಈ ಬಗ್ಗೆ ಸರಿಯಾಗಿ ಅರ್ಥವಾಗುವಂತೆ ವಿವರಿಸುವುದು ಬಹಳ ಸವಾಲಿನ ಕೆಲಸವೇ ಸರಿ. ಒಂದು ಅಧ್ಯಯನದ ಪ್ರಕಾರ, ಸುಮಾರು ನಾಲ್ಕನೇ ವಯಸ್ಸಿನಿಂದ ಮಕ್ಕಳಿಗೆ ಇಂತಹ ವಿಚಾರಗಳ ಬಗ್ಗೆ ತಿಳುವಳಿಕೆ ನೀಡಲು ಅರಂಭಿಸಬಹುದು ಎನ್ನಲಾಗುತ್ತದೆ. ಮಾಂಟೆಸ್ಸರಿಯಿಂದಲೇ ಈ ಬಗ್ಗೆ ಮಕ್ಕಳಲ್ಲಿ ವಿವರಿಸಿದರೂ, ಪುಸ್ತಕಗಳಲ್ಲಿ ಈ ಬಗ್ಗೆ ವಿವರಗಳು ಬಂದರೂ ಹೆತ್ತವರಾಗಿ ಮಕ್ಕಳಿಗೆ ಅರ್ಥ ಮಾಡಿಸುವ ಜವಾಬ್ದಾರಿ ಹೆತ್ತವರದ್ದೇ ಆಗಿದೆ.

೧. ಮಕ್ಕಳನ್ನು ಪ್ರಶಾಂತವಾದ ಸ್ಥಳದಲ್ಲಿ ಕರೆದುಕೊಂಡು ಹೋಗಿ ಮಾತಾಡಿ: ಮಕ್ಕಳಲ್ಲಿ ಚಂಚಲತೆ ಹೆಚ್ಚು. ಗದ್ದಲ, ಗೌಜು ಅಥವಾ ಬೇರಾರಾದರೂ ಜೊತೆಗೆ ಇದ್ದಾಗ ಪೂರ್ತಿಯಾಗಿ ನೀವು ಹೇಳುವ ಮಾತಿನ ಬಗ್ಗೆ ಗಮನ ಕೊಡಲು ಸಾಧ್ಯವಾಗದಿರಬಹುದು. ಅದಕ್ಕಾಗಿ ನೀವು ನಿಮ್ಮ ಮಗು ಇಬ್ಬರೇ ಇದ್ದಾಗ, ಅವರ ಗಮನ ಪೂರ್ತಿ ನಿಮ್ಮ ಜೊತೆ ಇದ್ದಾಗ, ಸದ್ದುಗದ್ದಲವಿಲ್ಲದ ಪ್ರಶಾಂತ ಸ್ಥಳದಲ್ಲಿದ್ದಾಗ ಈ ಬಗ್ಗೆ ಮಾತಾಡಿ. ಹೆಚ್ಚು ಎತ್ತರವಲ್ಲದ, ಸಹಜವಾದ ದನಿಯಲ್ಲಿ ಅವರ ಜೊತೆ ಫ್ರೆಂಡ್ಲೀ ಆಗಿ ಮಾತನಾಡಿ. ಒಮ್ಮೆ ಮಗು ನೀವು ಹೇಳುವ ಮಾತಿನೆಡೆಗೆ ಗಮನ ಹರಿಸುತ್ತಿದೆ ಎಂದು ಅರ್ಥವಾದಾಗ, ನಿಧಾನವಾಗಿ ಅವರಿಗೆ ಖಾಸಗಿ ಅಂಗಾಂಗಗಳ ಬಗ್ಗೆಯೂ ವಿವರಿಸಿ.

೨. ಕೆಟ್ಟ ಸ್ಪರ್ಶ ಹಾಗೂ ಒಳ್ಳೆ ಸ್ಪರ್ಶ ಹೇಗಿರುತ್ತದೆ ಎಂಬುದನ್ನು ವಿವರಿಸಿ: ಮಕ್ಕಳಿಗೆ ಕೆಟ್ಟ ಸ್ಪರ್ಶ ಯಾವುದು ಒಳ್ಳೆಯ ಸ್ಪರ್ಶ ಯಾವುದು ಎಂಬುದನ್ನು ಅರಿತುಕೊಳ್ಳಲು ತೀರಾ ಹದಿಹರೆಯಕ್ಕೆ ಬರುವ ಅಗತ್ಯವಿಲ್ಲ. ಮಗು ಗಂಡಾಗಲಿ ಹೆಣ್ಣಾಗಲಿ ಅವರಿಗೆ ಈ ಬಗ್ಗೆ ತಿಳುವಳಿಕೆ ಅಗತ್ಯ. ಅಪರಿಚಿತರು ಮುದ್ದು ಮಾಡುವ ನೆಪದಲ್ಲಿ ಖಾಸಗಿ ಅಂಗಾಗಗಳನ್ನು ಬೇಕೆಂದೇ ಮುಟ್ಟುವುದು, ಅಪ್ಪಿಕೊಳ್ಳುವುದು, ಎತ್ತಿಕೊಳ್ಳುವುದು, ಬಟ್ಟೆ ಬದಲಾಯಿಸುವುದು ಮತ್ತಿತರ ಕೆಲಸಗಳನ್ನು ಮಾಡುವಾಗ ಮಕ್ಕಳಿಗೆ ಒಳ್ಳೆಯ ಸ್ಪರ್ಶದ ಬಗೆಗಿನ ಅರಿವು ಹೆಚ್ಚಾಗಲಿ. ಹೆತ್ತವರನ್ನು ಹೊರತುಪಡಿಸಿದರೆ, ಬೇರೆಯವರ ಎದುರು ಬಟ್ಟೆ ಬಿಚ್ಚುವುದು ಸಲ್ಲ ಎಂಬುದೂ ಇತ್ಯಾದಿ ಸೇರಿದಂತೆ ಹಲವು ವಿಷಯಗಳನ್ನು ಅವರಿಗೆ ವಿವರಿಸಬಹುದು. ಎಷ್ಟೇ ಆತ್ಮೀಯರೇ ಆದರೂ ಅಸಹನೆಯಾಗುವಂಥ ಅಪ್ಪುಗೆ, ಸ್ಪರ್ಷಗಳ ಬಗ್ಗೆ ಅರಿವು ಮೂಡಿಸಿ. ಯಾರಾದರೂ ಹೆದರಿಸಿದರೆ, ಅವರ ಸ್ಪರ್ಶವೇ ಭಯ ಹುಟ್ಟಿಸಿದರೆ, ಇಷ್ಟವಾಗದಿದ್ದರೆ, ಪ್ರತಿಕ್ರಿಯಿಸುವಂತೆ ತಿಳಿಹೇಳಿ.

೩. ಮಕ್ಕಳಿಗೆ ತಿಳಿ ಹೇಳುವ, ಬಿಡಿಸಿ ಹೇಳುವ ಸಂದರ್ಭ ಹೆತ್ತವರು ಎಡವುವುದು ಇಲ್ಲಿಯೇ. ಕೆಟ್ಟ ಸ್ಪರ್ಶದಿಂದ ನೋವಾಗುತ್ತದೆ ಎಂದು ಮಕ್ಕಳಿಗೆ ಸುಲಭವಾಗಿಸಲು ಹೇಳಿಯೇ ಕೆಲವೊಮ್ಮೆ ಎಡವಟ್ಟಾಗುತ್ತದೆ. ಒಳ್ಳೆಯ ಸ್ಪರ್ಶವೂ ಕೂಡಾ ಕೆಲವೊಮ್ಮೆ ನೋವಾಗುತ್ತವೆ ಎಂಬುದೂ ಅವರಿಗೆ ಗೊತ್ತಿರಲಿ. ವೈದ್ಯರ ಬಳಿ ಹೋದಾಗ, ಅವರು ಏನಾದರೂ ಪರೀಕ್ಷೆ ನಡೆಸುವ ಸಂದರ್ಭಗಳು ಬಂದರೆ ನೋವಾದರೆ ಅದು ಸಹಜ ಎಂಬುದು ಅವರಿಗೆ ಗೊತ್ತಿರಲಿ. ಇಂತಹ ಸೂಕ್ಮ್ಷಗಳೂ ಅವರಿಗೆ ತಿಳಿದಿರಲಿ. ಖಾಸಗಿ ಅಂಗಾಂಗಗಳನ್ನು ವೈದ್ಯರಿಗೆ ತೋರಿಸಬೇಕಾಗಿ ಬಂದರೆ ಅದು ಸಹಜ ಎಂಬುದನ್ನೂ ವಿವರಿಸಿ. ಈ ಬಗೆಗಿನ ವ್ಯತ್ಯಾಸ ಅವರಿಗೆ ಗೊತ್ತಿರಲಿ.

ಇದನ್ನೂ ಓದಿ | Kids food | ಮಕ್ಕಳೂಟವೆಂದರೆ ಮಕ್ಕಳಾಟವಲ್ಲ, ಅದಕ್ಕೇ ಹೀಗೆ ಮಾಡಿ

೪. ಮಕ್ಕಳಿಗೆ ಖಾಸಗಿ ಅಂಗಾಂಗಗಳ ಬಗ್ಗೆ ವಿವರಿಸುವುದು ಕಷ್ಟ. ಸಣ್ಣ ವಯಸ್ಸಿನಲ್ಲಿಯೇ ಇವುಗಳ ಬಗ್ಗೆ ಅತಿಯಾದ ಜ್ಞಾನ ಕೊಡುವುದು ಅಗತ್ಯವಿಲ್ಲವೆಂಬುದೂ ನಿಜವೇ. ಆದರೆ ಮಕ್ಕಳಿಗೆ ನಾವು ಈ ಸೂಕ್ಷ್ಮ ವಿಚಾರವನ್ನು ಹೇಗೆ ಸರಳವಾಗಿ ಸುಲಭವಾಗಿ ದಾಟಿಸುವುದು ಹೇಗೆ ಎಂಬುದು ಬಹಳ ಮುಖ್ಯ. ಮಕ್ಕಳು ಸ್ವಿಮ್‌ ಸೂಟ್‌ ಹಾಕಿದಾಗ, ಸುಲಭವಾಗಿ ಯಾವ ಭಾಗಗಳು ಮುಚ್ಚಿರುವುದೋ ಅವುಗಳ ಸ್ಪರ್ಷ ಇತರರು ಮಾಡಬಾರದು ಎಂಬ ಬಗ್ಗೆ ಸರಳವಾಗಿ ವಿವರಿಸಿ ಹೇಳಬಹುದು.

ಈ ವಿಚಾರವನ್ನು ಮಕ್ಕಳಿಗೆ ದಾಟಿಸುವುದು ಕಷ್ಟವಿರಬಹುದು. ಆದರೆ ಇದು ಈಗಿನ ಅತ್ಯಂತ ಅವಶ್ಯಕ ವಿಚಾರಗಳಲ್ಲೊಂದು. ಅವರಿಗೆ ಈ ಬಗ್ಗೆ ಬರುವ ಸಂದೇಹಗಳನ್ನು ನಿವಾರಿಸುತ್ತಾ, ಸರಳವಾಗಿ ಹೇಗೆ ಅರ್ಥಮಾಡಿಸಬಹುದೆಂಬುದನ್ನು ಯೋಚಿಸಿ. ಬದಲಾಗಿ, ಅವರ ಗೊಂದಲಗಳನ್ನು ತಳ್ಳಿ ಹಾಕಿ ಅವರನ್ನು ಮತ್ತೆ ಗೊಂದಲದ ಗೂಡಾಗಿಸುವುದು ಬೇಡ. ಅವರು ನಿಮ್ಮ ಬಳಿ ಎಲ್ಲವನ್ನೂ ಸಹಜವಾಗಿ ವಿವರಿಸಿ ಹೇಳುವ, ಅನುಮಾನಗಳ್ನು ಪರಿಹರಿಸಬಹುದಾದ ವಾತಾವರಣ ಸೃಷ್ಠಿ ಮಾಡಿ. ಆಗ ಏರ್ಪಡುವ ಬಂಧದಲ್ಲಿ ಅವರು ಸಹಜವಾಗಿ ಯಾವ ಭಯವೂ ಇಲ್ಲದೆ ವಿಹರಿಸಲು ಸಾಧ್ಯವಾದೀತು.

ಇದನ್ನೂ ಓದಿ | ಪ್ರತಿ ಹೆತ್ತವರೂ ತಮ್ಮ ಹೆಣ್ಣುಮಕ್ಕಳಿಗೆ ಕಲಿಸಲೇಬೇಕಾದ 10 ಸಂಗತಿ!

Exit mobile version