Site icon Vistara News

ಬ್ಯಾಚುಲರ್‌ ಕಿಚನ್‌: ಫಿಟ್ನೆಸ್‌ ಪ್ರಿಯ ಬ್ಯಾಚುಲರ್‌ಗಳಿಗೆ ದಿಢೀರ್‌ ಪನೀರ್‌ ಫ್ರೈ!

paneer fry

ಬ್ಯಾಚುಲರ್‌ ಅಂದ್ಮೇಲೆ ಸುಮ್ನೇನಾ? ಆಫೀಸು, ಕೆಲಸ, ಗೆಳೆಯರು ಎಂದೆಲ್ಲ ಸಮಯ ಕಳೆದು ರೂಮಿಗೆ ಬಂದು ಬಿದ್ದುಕೊಳ್ಳುವಷ್ಟರಲ್ಲಿ ಸೋಮಾರಿತನ ಅಡರಿಕೊಳ್ಳುತ್ತದೆ. ಪ್ರತಿ ದಿನವೂ ಹೊರಗೆ ತಿನ್ನುತ್ತಿದ್ದರೆ ಆರೋಗ್ಯದ ಕಥೆ ಏನಾಗ್ಬೇಕು ಹೇಳಿ? ಹಾಗಾದರೆ, ಬಿಸಿಬಿಸಿಯಾಗಿ, ಆರೋಗ್ಯಕರವಾಗಿ ಏನಾದರೂ ಮಾಡಿ ತಿನ್ನಬೇಕು ಅಂತ ಅಂದುಕೊಂಡು ಮಾಡಲು ಸೋಮಾರಿತನ ಬಿಡದೆ, ಮಾಡಿದ ಮೇಲೆ ಪಾತ್ರೆ ಯಾರು ತೊಳೆಯೋದು ಅನಿಸಿ ಏನಾದರೊಂದು ಆರ್ಡರ್‌ ಮಾಡಿಕೊಂಡರಾಯಿತು ಎಂದು ಫೋನು ತೆಗೆಯುತ್ತೀರಿ. ಆರ್ಡರ್‌ ಮಾಡಿ ಅದು ಬರುವಷ್ಟರ ಮೊದಲೇ ಮಾಡುವಂಥದ್ದೊಂದು ಹೊಟ್ಟೆ ತುಂಬುವ, ಆದರೆ ಆರೋಗ್ಯಕರವಾದದ್ದು ಇದ್ದಿದ್ದರೆ? ಅಂತ ಅನಿಸಿದರೆ, ಹೆಚ್ಚೆಂದರೆ 20 ನಿಮಿಷ ನಿಮ್ಮ ಬಳಿ ಇದ್ದರೆ ಇದನ್ನು ಮಾಡಬಹುದು.

ಬೆಳಿಗ್ಗೆ ಎದ್ದು ಜಿಮ್‌ ಎಂದುಕೊಂಡು ದೇಹ ದಂಡಿಸಿ ಮನೆಗೆ ಬಂದಿರುತ್ತೀರಿ. ಕಟ್ಟುಮಸ್ತಾದ ದೇಹ ಕೊಂಚ ಯಾಮಾರಿದರೂ, ಬೇಸರವಾಗುವ ಕಾಲ ಇದು. ಇಂಥ ವಯಸ್ಸಿನಲ್ಲಿ ಇದು ಸಹಜವೂ ಕೂಡಾ. ಹಾಗಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಪ್ರೋಟೀನನ್ನು ಭರಪೂರ ಹೊಂದಿರುವ ಪನೀರ್‌ ಫ್ರೈ ಸುಲಭೋಪಾಯ.

ಪನೀರ್‌ ಜೊತೆಗೆ ನೀವು ಏನನ್ನು ತಿನ್ನ ಬಯಸುತ್ತೀರೆಂಬುದನ್ನು ಯೋಚಿಸಿ ಅದಕ್ಕೆ ಬೇಕಾದ ತಯಾರಿಯನ್ನೂ ಮಾಡಿ. ಇಲ್ಲಿ ಹೇಳಿದ ಪನೀರಿನ ಅಡುಗೆ ಚಪಾತಿಯ ಜೊತೆ ತಿಂದರೆ ರುಚಿ ಹೆಚ್ಚು.

ಕಾಲು ಕೆಜಿ ಪನೀರು, ದೊಡ್ಡ ಮೆಣಸಿನಕಾಯಿ ಒಂದು, ಟೊಮೇಟೋ ಒಂದು, ಈರುಳ್ಳಿ ಒಂದು, ಹಸಿಮೆಣಸಿನಕಾಯಿ, ನಾಲ್ಕೈದು ಎಸಳು ಬೆಳ್ಳುಳ್ಳಿ, ಒಂದು ಚಮಚ ಜೀರಿಗೆ, ಸ್ವಲ್ಪ ಅಚ್ಚಕಾರದ ಪುಡಿ, ಕರಿಯಲು ಒಂದು ಚಮಚ ತುಪ್ಪ/ಎಣ್ಣೆ, ಅರಿಶಿನ ಪುಡಿ, ಗರಂ ಮಸಾಲೆ, ಕೊತ್ತಂಬರಿ ಸೊಪ್ಪು ಸ್ವಲ್ಪ ಇದ್ದರೆ ಈ ಅಡುಗೆ ಮಾಡಿಕೊಳ್ಳಬಹುದು.

ಮೊದಲು ಪನೀರನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈರುಳ್ಳಿ, ಟೊಮೆಟೋ, ದೊಡ್ಡ ಮೆಣಸನ್ನು ಹೆಚ್ಚಿಕೊಳ್ಳಿ. ತೀರಾ ಚಿಕ್ಕದಾಗಿ ಹೆಚ್ಚುವುದು ಬೇಡ. ಈಗ ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಒಂದು ಚಮಚ ಹಾಕಿ, ಒಂದು ಚಮಚ ಜೀರಿಗೆಯನ್ನು ಎಣ್ಣೆಯಲ್ಲಿ ಹುರಿಯಿರಿ. ಈಗ ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಿಮ್ಮ ರುಚಿಗೆ ತಕ್ಕಂತೆ ಹಸಿಮೆಣಸನ್ನು ಹಾಕಿ. ನಂತರ ಹೆಚ್ಚಿದ ಈರುಳ್ಳಿ ಸೇರಿಸಿ. ಹದ ಉರಿಯಲ್ಲಿ ಬಾಡಿಸಿ. ಈಗ ದೊಡ್ಡ ಮೆಣಸಿನಕಾಯಿ ಹಾಕಿ. ನಂತರ ಟೊಮೇಟೋ ಸೇರಿಸಿ. ಒಂದೆರಡು ನಿಮಿಷ ಬಾಡಲು ಬಿಡಿ.

ಇದನ್ನೂ ಓದಿ: ಆಸ್ಟ್ರೇಲಿಯಾ ಮಾಸ್ಟರ್‌ ಶೆಫ್‌ನಲ್ಲಿ ಮಿಂಚಿದ ಭೇಲ್‌ಪುರಿ!

ಈಗ ಚಿಟಿಕೆ ಅರಿಶಿನ ಹಾಗೂ ಅಚ್ಚಕಾರದ ಪುಡಿ, ಸ್ವಲ್ಪ ಗರಂ ಮಸಾಲೆ, ನಿಮ್ಮ ರುಚಿಗೆ ಅನುಸಾರವಾಗಿ ಉಪ್ಪು ಹಾಕಿ. ಕತ್ತರಿಸಿದ ಪನೀರನ್ನು ಹಾಕಿ ಎಲ್ಲವನ್ನು ಚೆನ್ನಾಕಿ ಮಿಕ್ಸ್‌ ಮಾಡಿ. ಮೂರ್ನಾಲ್ಕು ನಿಮಿಷ ಬಿಡಿ. ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿ ಹಾಕಿ ಕೆಳಗಿಳಿಸಿ. ಈಗ ರುಚಿಯಾದ ಪನೀರ್‌ ಫ್ರೈ ರೆಡಿ. ಇದರ ವಿಶೇಷವೆಂದರೆ, ಇದನ್ನು ಹಾಗೆಯೂ ಕೂಡಾ ತಿನ್ನಬಹುದು. ಡಯಟ್‌ ಮಾಡುವವರಿಗೆ, ಫಿಟ್ನೆಸ್‌ ಬಗ್ಗೆ ಅತೀವ ಕಾಳಜಿ ಹೊಂದಿರುವವರು, ಜಿಮ್‌ಗೆ ಹೋಗುವವರು, ನೈಸರ್ಗಿಕ ಪ್ರೋಟೀನಿನ ಮೂಲಕವೇ ಫಿಟ್‌ ಆಗಿರಬಯಸುವವರೆಲ್ಲರಿಗೂ ಇದು ಅತ್ಯುತ್ತಮ ಆಹಾರ.

ಹಾಗೆಯೇ ತಿನ್ನುವುದು ಬೇಡ ಅಂತನಿಸಿದರೆ, ಲೈಟಾಗಿ ಒಂದೋ ಎರಡೋ ಚಪಾತಿ ಮಾಡಿಕೊಂಡು ಅದರೊಂದಿಗೂ ತಿನ್ನಬಹುದು. ಚಪಾತಿ ಲಟ್ಟಿಸಿಕೊಳ್ಳುವುದು ಕಷ್ಟವಪ್ಪಾ ಅಂತನಿಸಿದರೆ ಒಂದು ದೋಸೆ ಮಾಡಿಕೊಂಡು ಅದರೊಳಗೆ ಈ ಪನೀರ್‌ ಫ್ರೈ ಹಾಕಿ ರೋಲ್‌ ಮಾಡಿಯೂ ತಿನ್ನಬಹುದು. ಇದ್ಯಾವುದರ ಕಷ್ಟ ಬೇಡಪ್ಪಾ ಅಂತನಿಸಿ ರಾತ್ರಿ ಹೆಚ್ಚು ತಿನ್ನದೆ ಹಗುರವಾದ ಹೊಟ್ಟೆಯೊಂದಿಗೆ ಮಲಗಲು ಬಯಸುವವರು, ಪನೀರ್‌ ಫ್ರೈ ಹಾಗೆಯೂ ತಿನ್ನಬಹುದು. ಹೇಗೆ ತಿಂದರೂ ಇದು ರುಚಿಯಾಗಿಯೂ ಸಮೃದ್ಧವಾಗಿಯೂ ಇರುತ್ತದೆ.

ಇದನ್ನೂ ಓದಿ: ಬ್ಯಾಚುಲರ್ ಕಿಚನ್: ಅವಸರದ ಹೊಟ್ಟೆಗೆ ಅರ್ಧ ಗಂಟೇಲಿ ಬ್ರೇಕ್‌ಫಾಸ್ಟ್!

Exit mobile version