Site icon Vistara News

International Happiness Day 2024: ಪ್ರತಿ ದಿನವೂ ಸಂತೋಷದಿಂದ ಇರಬೇಕೆ? ಈ ಸೂತ್ರ ಪಾಲಿಸಿ!

International Happiness Day 2024

ಸಂತೋಷವನ್ನು ಅಳೆಯಲು (International Happiness Day 2024) ಸಾಧ್ಯವೇ? ಹೌದೆನ್ನುತ್ತದೆ ಇತ್ತೀಚಿನ ವರದಿಯೊಂದು. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಸಂತೋಷದ ವರದಿಯಲ್ಲಿ, ವಿಶ್ವದ 143 ದೇಶಗಳನ್ನು ಸಂತಸದ ಸೂಚ್ಯಂಕದ ಪ್ರಕಾರ ಅನುಕ್ರಮಣಿಸಿದೆ. ಇದರ ಪ್ರಕಾರ, ಭಾರತದ ಸ್ಥಾನ 126ನೆಯದು. ಅರೆ! ನಮ್ಮ ಸುಂದರ ಭಾರತದಲ್ಲಿ ಸಂತಸಕ್ಕೆ ಬರವೇ? ಅದರಲ್ಲೂ ಅಂತಾರಾಷ್ಟ್ರೀಯ ಸಂತೋಷದ ದಿನದಂದು ಈ ಪ್ರಶ್ನೆ ಮತ್ತಷ್ಟು ಪ್ರಸ್ತುತ ಎನಿಸುತ್ತದೆ. ಹೌದು, ಪ್ರತಿವರ್ಷ ಮಾರ್ಚ್‌ 20ನೇ ದಿನವನ್ನು ಅಂತಾರಾಷ್ಟ್ರೀಯ ಸಂತೋಷದ ದಿನವೆಂದು ಗುರುತಿಸಲಾಗಿದೆ.

ಈ ದಿನದ ಹಿನ್ನೆಲೆ ಏನು?

ಒತ್ತಡವೇ ಬದುಕಿನ ಜೀವಾಳ ಎನಿಸಿರುವ ಈ ದಿನಗಳಲ್ಲಿ ಒಂದು ದಿನವನ್ನು ಖುಷಿಗಾಗಿ ಮೀಸಲಿಟ್ಟು ಸಂತೋಷ ಪಡಿ ಎನ್ನುವುದು ಈ ದಿನದ ಆಶಯ. 2012ರ ಜುಲೈ 12ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ದಿನದ ಆಚರಣೆಯನ್ನು ತೀರ್ಮಾನಿಸಲಾಯಿತು. ಅಂದಿನಿಂದ ಮಾರ್ಚ್‌ 20ನೇ ದಿನವನ್ನು ಸಂತೋಷದ ದಿನವೆಂದೇ ಗುರುತಿಸಲಾಗಿದೆ. ಆದರೆ ಇದಕ್ಕಿಂತ ಮೊದಲು, ಅಂದರೆ 1970ರಲ್ಲೇ ಭೂತಾನ್‌ನಲ್ಲಿ ಸಂತೋಷದ ಮಹತ್ವವನ್ನು ಸಾರಲಾಗಿತ್ತು. ಖುಷಿಗೊಂದು ದಿನವನ್ನೂ ನಿಗದಿ ಮಾಡುವ ಬಗ್ಗೆ ನಾಂದಿ ಹಾಡಿತ್ತು.

ಸಂತಸದಿಂದ ಇರುವ ದೇಶಗಳು ಯಾವವು?

ವಿಶ್ವಸಂಸ್ಥೆಯ ಸಂತೋಷದ ಸೂಚಿಯ ಪ್ರಕಾರ, ಅತಿಹೆಚ್ಚು ಖುಷಿಯಿಂದಿರುವುದು ಫಿನ್‌ಲೆಂಡ್‌ ಜನರು. ನಂತರದ ಸ್ಥಾನಗಳು ಡೆನ್ಮಾರ್ಕ್‌, ಸ್ವಿಟ್ಜರ್ಲೆಂಡ್‌, ನೆದರ್ಲೆಂಡ್‌, ಸ್ವೀಡನ್‌ ದೇಶಗಳು. ಸೂಚಿಯ ಕೆಳಗಿನಿಂದ ಅಗ್ರಸ್ಥಾನದಲ್ಲಿ ಇರುವವರು ಇರಾಕ್‌, ನೇಪಾಳ, ಲಾವೊಸ್‌, ಐವರಿಕೋಸ್ಟ್‌ ಮುಂತಾದ ದೇಶಗಳು. ಆರ್ಥಿಕ ಪ್ರಗತಿ, ತರತಮ ಭಾವ, ಧಾರ್ಮಿಕ ಕಲಹಗಳು ಮತ್ತು ಅಭಿವೃದ್ಧಿಯ ಕೊರತೆಯಂಥ ವಿಷಯಗಳು ಜನರ ಸಂತೋಷವನ್ನು ಹಾಳು ಮಾಡುತ್ತಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಸೂಚಿಸಲಾಗಿದೆ. ಬದುಕಿನ ಸುಖ- ಸಂತೋಷ ಇರುವುದು ಸರಳ, ಸಣ್ಣ ವಿಷಯಗಳಲ್ಲಿ ಎಂಬ ಮಾತಿದೆ. ಆದರೆ ಆ ಸಣ್ಣ ಸುಖಗಳನ್ನು ಕಾಣುವುದಕ್ಕೇ ಯಾರಿಗೂ ಸಮಯವಿಲ್ಲ. ಹಾಗಾಗಿ ಒಂದಿಷ್ಟು ಮಾರ್ಪಾಡುಗಳನ್ನು ಬದುಕಿನಲ್ಲಿ ಮಾಡಿಕೊಳ್ಳುವುದರಿಂದ ನಗುನಗುತಾ ನಲಿಯುತ್ತಾ ಇರುವುದಕ್ಕೆ ಸಾಧ್ಯವೇ ಎಂಬುದನ್ನು ಪ್ರಯತ್ನಿಸಬಹುದು. ಏನವು?

ಡಿಜಿಟಲ್‌ ಸನ್ಯಾಸ

ಬೇಡದ ತಲೆಹರಟೆಯನ್ನು ಬದುಕಿನಲ್ಲಿ ತುಂಬುವ ಕೇಡಿಗನಿಗೆ ಗೆಜೆಟ್‌ಗಳೆಂದು ಹೆಸರು. ಇವುಗಳನ್ನು ನಾವೇ ಬಯಸಿ ನಮ್ಮ ಬದುಕಿಗೆ ತಂದುಕೊಂಡಿದ್ದೇವೆ. ನಿಮಗಾಗಿ, ನಿಮ್ಮವರಿಗಾಗಿ ಸಮಯ ಕೊಡಬೇಕು, ಅದರಲ್ಲಿರುವ ಸರಳ ಸುಖವನ್ನು ಮನಗಾಣಬೇಕು ಎಂದಿದ್ದರೆ, ಅಗತ್ಯ ಸಮಯದ ಹೊರತಾಗಿ ಉಳಿದೆಲ್ಲ ಹೊತ್ತಿನಲ್ಲಿ ಡಿಜಿಟಲ್‌ ಸನ್ಯಾಸ ಕೈಗೊಳ್ಳಿ. ಮೊದಲಿಗೆ ದಿನಕ್ಕೆ ಒಂದು ತಾಸು ಗೆಜೆಟ್‌ ಮುಟ್ಟುವುದಿಲ್ಲ ಎಂದು ಪ್ರಾರಂಭಿಸಿ, ಈ ಸಮಯವನ್ನು ಕ್ರಮೇಣ ವಿಸ್ತರಿಸುತ್ತಾ ಹೋಗಿ.

ಚಟುವಟಿಕೆಯಿಂದಿರಿ

ದೇಹ-ಮನಸ್ಸುಗಳನ್ನು ಉಲ್ಲಾಸದಿಂದ ಇರಿಸುವಂಥ ಯಾವುದಾದರೂ ಚಟುವಟಿಕೆಯನ್ನು ರೂಢಿಸಿಕೊಳ್ಳಿ. ದೈನಂದಿನ ವ್ಯಾಯಾಮವು ದೇಹದಲ್ಲಿ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ನೆರವಾಗುತ್ತದೆ. ಇದಕ್ಕೆ ಹಿಮಾಲಯಕ್ಕೇ ಚಾರಣ ಹೋಗಬೇಕೆಂದಿಲ್ಲ, ದಿನಕ್ಕೆ ಅರ್ಧ ತಾಸಿನ ಸರಳ ವಾಕಿಂಗ್‌ ಸಹ ಆದೀತು. ನಿಮಗೇನಿಷ್ಟವೋ ಅಂಥದ್ದೇ ದೈಹಿಕ ಚಟುವಟಿಕೆಯನ್ನು ಮಾಡಿ.

ನಿದ್ದೆ

ನಮ್ಮ ಸಂತೋಷ ಹಾಳು ಮಾಡುವ ಸಾಲಿನಲ್ಲಿ ನಿದ್ದೆಗೇಡುತನಕ್ಕೆ ಅಗ್ರ ಸ್ಥಾನವಿದೆ. ಹದಾ ನಿದ್ದೆಗೆಟ್ಟಂತಿದ್ದರೆ ಆರೋಗ್ಯ, ಖುಷಿ- ಎರಡೂ ಹಾಳು. ಹಾಗಾಗಿ ನಿದ್ದೆಗೂ ಬದುಕಿನಲ್ಲಿ ಪ್ರಾಶಸ್ತ್ಯ ನೀಡಿ. ಸಾಕಷ್ಟು ವಿಶ್ರಾಂತಿ ದೊರೆತರೆ, ಮಾಡುವ ಕೆಲಸದಲ್ಲಿ ಉತ್ಸಾಹವಿರುತ್ತದೆ. ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ. ಬದುಕಿನಲ್ಲಿ ಯಶಸ್ಸು ಹಾಗೂ ಸಂತೋಷವೂ ಹೆಚ್ಚುತ್ತದೆ.

ಗೆಳೆಯರು ಬೇಕು

ವನವೆಲ್ಲ ಕೆಡಿಸುವ ಕೋತಿಯಂಥ ಗೆಳೆಯರಲ್ಲ; ಬದುಕನ್ನು ಚಂದಗಾಣಿಸುವ ಮಿತ್ರರು ಬೇಕು. ಕಲಿಯಲು, ನಲಿಯಲು ಸಾಹಚರ್ಯ ಇಲ್ಲದಿದ್ದರೆ ಬದುಕೇ ಬೋರು ಎನಿಸುತ್ತದೆ. ಹಾಗಾಗಿ ನಿಮ್ಮ ಮನಸಿಗೊಪ್ಪುವ ಗೆಳೆಯರನ್ನು ಮಾಡಿಕೊಳ್ಳಿ. ಸಾಮಾನ್ಯವಾಗಿ ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿದವರು ಸ್ನೇಹಿತರಾಗುವುದು ಹೆಚ್ಚು. ಹಾಗಾಗಿ ನಿಮ್ಮ ಆಸಕ್ತಿಯ ವಲಯದಲ್ಲೇ ಮಿತ್ರರನ್ನು ಹುಡುಕಿಕೊಳ್ಳಿ.

Exit mobile version