“ಮಗು ಅಳ್ತಾ ಇದೆ, ಗ್ರೈಪ್ ವಾಟರ್ ಕೊಡಿ” ಇಂಥದ್ದೊಂದು ಟಿವಿ ಜಾಹಿರಾತು ೮೦- ೯೦ರ ದಶಕದಲ್ಲಿ ಟಿವಿ ಮುಂದೆ ಕೂತ ಎಲ್ಲರೂ ನೋಡಿಯೇ ಇರುತ್ತೀರಿ! ಯಾಕೆಂದರೆ ಮಗುವಿನ ಅಳು ಎಂಬುದು ಎಲ್ಲರ ಪಾಲಿಗೊಂದು ಬಿಡಿಸಲಾಗದ ಕಗ್ಗಂಟು. ಹೊಸ ಅಮ್ಮ ಅಪ್ಪಂದಿರಿಗೆ ಮಗುವನ್ನು ಸಂಭಾಳಿಸುವುದೇ ದೊಡ್ಡ ಜಾಲೆಂಜು.
ಈಗಷ್ಟೇ ಚಂದಕ್ಕೆ ನಗುನಗುತ್ತಾ ಇದ್ದ ಮಗು ಜೋರಾಗಿ ಅಳಲು ಶುರು ಮಾಡಿದರೆ, ಹೆತ್ತವರಿಗೆ ಸಂಕಟ. ಮಗು ಯಾಕೆ ಅಳುತ್ತಿದೆ ಎಂದು ಕಂಡು ಹಿಡಿಯುವುದೇ ಹೆತ್ತವರಿಗೊಂದು ಸಂಶೋಧನೆಯ ಹಾಗೆ. ಮಗುವಿನ ಬೇಕು ಬೇಡಗಳನ್ನು ಅರಿತುಕೊಳ್ಳುವುದು, ಮಗುವಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದೇ ಹೆತ್ತವರಿಗೆ ಇಷ್ಟರವರೆಗೆ ಕಾಣದಿದ್ದ ಹೊಸ ಜಗತ್ತಿಗೆ ಕಾಲಿಟ್ಟ ಅನುಭವ. ಬಾಯಿ ಬಿಟ್ಟು ಹೇಳಲಾಗದ ಕೇವಲ ಮುಖದ ಅಳು ನಗು ಭಾವನೆಗಳಿಂದಷ್ಟೆ ವ್ಯಕ್ತಪಡಿಸುವ ಮಗುವಿನ ಮನಸ್ಸನ್ನು ಅರಿತುಕೊಂಡು ಮಗುವನ್ನು ಬೆಳೆಸುವುದು ಹೆತ್ತವರ ಪಾಲಿಗೊಂದು ದೊಡ್ಡ ಜವಾಬ್ದಾರಿ. ಈ ಹಾದಿಯಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಮಗು ಅಳಲು ಶುರು ಮಾಡಿತೆಂದರೆ ಯಾಕೆ ಅಳುತ್ತಿದೆ ಎಂದು ಕಂಡುಹಿಡಿಯುವುದೂ ಸವಾಲಿನ ಕೆಲಸವಾಗುತ್ತದೆ. ಹೇಗೆ ಸಮಾಧಾನಪಡಿಸುವುದು ಎನ್ನುವುದೂ ಕೂಡ ಮಿಲಿಯನ್ ಡಾಲರ್ ಪ್ರಶ್ನೆ. ಅವರವರ ಮಕ್ಕಳಿಗೆ ಏನು ಸರಿಹೊಂದುತ್ತದೆ ಎಂದು ಆಯಾ ಹೆತ್ತವರಷ್ಟೆ ʻಟ್ರಯಲ್ ಅಂಡ್ ಎರರ್ ಮೆಥಡ್ʼ ಮೂಲಕ ಕಂಡು ಹುಡುಕಿಕೊಳ್ಳಬೇಕಷ್ಟೆ. ಒಂದಿಷ್ಟು ಹೆತ್ತವರ, ಅನುಭವಿಗಳ ಕಿವಿಮಾತುಗಳನ್ನೂ ಕೂಡಾ.
ಅದಕ್ಕಾಗಿಯೇ ಜಪಾನ್‌ನಲ್ಲಿ ವಿಜ್ಞಾನಿಗಳು ಮಗುವಿನ ಅಳುವಿಗೆ ಅತ್ಯಂತ ಪರಿಣಾಮಕಾರಿ ಪರಿಹಾರ ಯಾವುದೆಂಬುದನ್ನು ಕಂಡುಹಿಡಿಯುವುದರ ಬೆನ್ನು ಬಿದ್ದಿದ್ದರು. ಇದೀಗ ಫಲಿತಾಂಶ ಹೊರಹಾಕಿದ್ದು, ಅವರ ಪ್ರಕಾರ ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ ಉಪಾಯವೆಂದರೆ ಮಗುವನ್ನು ಐದು ನಿಮಿಷಗಳ ಕಾಲ ಹೊರಗೆ ಕರೆದುಕೊಂಡು ಹೋಗುವುದು!
ಜಪಾನಿನ ಜಿಕೆನ್ ಸೆಂಟರ್ ಫಾರ್ ಬ್ರೈನ್ ಸೈನ್ಸ್ ಸಂಸ್ಥೆ ಇದೀಗ ಮಗುವಿನ ಅಳು ನಿಲ್ಲಿಸುವ ಪರಿಹಾರೋಪಾಯಗಳಲ್ಲಿ ಹೊರಗಡೆ ಮಗುವನ್ನು ಸುತ್ತಾಡಿಸುವುದಷ್ಟೇ ಪರಮ ಸೂಕ್ತ ಉಪಾಯ ಎಂದು ತಿಳಿಸಿದೆ. ಬೇರೆ ತಂತ್ರಗಳಿಗಿಂತ ಹೆಚ್ಚು ಬೇಗ ಹಾಗೂ ಸುಲಭವಾಗಿ ಮಗು ಈ ಕ್ರಮದಲ್ಲಿ ಅಳು ನಿಲ್ಲಿಸಿ ಶಾಂತವಾಗುತ್ತದೆ ಎಂದಿದೆ.
ಎಳೇ ಕಂದಮ್ಮಗಳ ಅಳುವನ್ನು ಅತ್ಯಂತ ಸುಲಭೋಪಾಯವೆಂದರೆ ಇದೇ ಐದು ನಿಮಿಷಗಳ ಕಾಲ ಮಗುವನ್ನು ಎತ್ತಿಕೊಂಡು ನಡೆಯಲು ಶುರುಮಾಡಬೇಕು. ಆ ನಡಿಗೆಯಲ್ಲಿ ಎಲ್ಲೂ ನಿಲ್ಲಬಾರದು, ಮುಂದೆ ಹೋಗುತ್ತಲೇ ಇರಬೇಕು, ಒಂದೇ ಹದವಾದ ನಡಿಗೆ ಇರಬೇಕು, ಇದ್ದಕ್ಕಿದ್ದಂತೆ ನಿಲ್ಲುವುದು, ವೇಗ ಬದಲಾಯಿಸುವುದು, ಹಿಂತಿರುಗಿ ನೋಡುವುದು ಇತ್ಯಾದಿ ಮಾಡಬಾರದು. ಮಗುವಿನ ತಲೆಗೆ ಕೈಯ ಆಧಾರ ಕೊಟ್ಟು ಹೀಗೆ ನಡೆಯಬೇಕು ಎಂದಿದ್ದಾರೆ ಈ ವಿಜ್ಞಾನಿಗಳ ತಂಡ.
ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!
ಇದಲ್ಲದೆ, ಮಗುವನ್ನು ಕೈಯಲ್ಲಿ ಹಿಡಿದು ನಿದ್ದೆ ಮಾಡಿಸುವ ಸಂದರ್ಭ, ಮಗು ಕೈಯಲ್ಲಿ ನಿದ್ದೆಗೆ ಜಾರಿದ ತಕ್ಷಣ ಮಗುವನ್ನು ಮಲಗಿಸುವುದರಿಂದ ಮಗು ಬೇಗನೆ ಎಚ್ಚೆತ್ತುಕೊಂಡು ಅಳಲು ಶುರುಮಾಡುತ್ತದೆ. ಅದಕ್ಕಾಗಿ, ಮಗು ನಿದ್ದೆಗೆ ಜಾರಿದ ಮೇಲೆ ಐದು ನಿಮಿಷಗಳ ಕಾಲ ಹೆಚ್ಚು ಹೊತ್ತು ಕೈಯಲ್ಲಿ ಹಿಡಿದಿದ್ದು, ಆಮೇಲೆ ಮಂಚದ ಮೇಲೋ, ತೊಟ್ಟಿಲಲ್ಲೋ ಮಲಗಿಸುವುದರಿಂದ ಮಗು ಬೇಗನೆ ನಿದ್ದೆಯಿಂದ ಎಚ್ಚೆತ್ತುಕೊಳ್ಳುವುದನ್ನು ತಡೆಯಬಹುದು ಎಂದು ಹೇಳಿದೆ.
ಈ ಅಧ್ಯಯನದಲ್ಲಿ ತಂಡ, ಸುಮಾರು ೨೧ ಹಸುಳೆಗಳ ಮೇಲೆ ನಾಲ್ಕು ಮಾದರಿಯ ಪ್ರಯೋಗಗಳನ್ನು ಮಾಡುವ ಮುಖಾಂತರ ಕಂಡುಕೊಂಡಿದೆ. ಮಕ್ಕಳು ಅತ್ತಾಗ ಬಗೆಬಗೆಯ ತಂತ್ರಗಳನ್ನು ಪ್ರಯೋಗಿಸಿ ನೋಡಿದ್ದು, ಅದರಲ್ಲಿ ಈ ತಂತ್ರಕ್ಕೆ ಮಕ್ಕಳು ಸುಲಭದಲ್ಲಿ ಹಾಗೂ ಬೇಗನೆ ಒಗ್ಗಿಕೊಂಡಿವೆ. ಈ ಎಲ್ಲಾ ಪ್ರಯೋಗಗಳ ಸಂದರ್ಭವೂ ಈ ಪುಟಾಣಿಗಳ ನಡತೆ, ಪ್ರತಿಕ್ರಿಯೆಗಳನ್ನೂ ಗಮನಿಸಿದ್ದು, ಹೃದಯ ಬಡಿತವನ್ನೂ ಇಸಿಜಿ ಮಾನಿಟರ್ ಮೂಲಕ ಗಮನಿಸಿದೆ. ಅಳುವ ಮಗುವನ್ನು ಸಮಾಧಾನ ಪಡಿಸಲು ಮಗುವನ್ನು ಎತ್ತಿಕೊಂಡು ನಡೆಯಲು ಆರಂಭಿಸಿದ ಸಂದರ್ಭ ಅಲ್ಲಲ್ಲಿ ನಿಂತಾಗ, ತಿರುಗಿದಾಗ ಹಾಗೂ ನಡಿಗೆಯ ವೇಗ ಏರಿಳಿತವಾದಾಗ ಮಗುವಿನ ಹೃದಯ ಬಡಿತ ಹೆಚ್ಚಾಗಿದೆ. ಹಾಗಾಗಿ ಒಂದೇ ವೇಗದಲ್ಲಿ ಐದು ನಿಮಿಷ ನಡೆದರೆ ಮಗು ಸಮಾಧಾನಗೊಳ್ಳುವ ಸಾಧ್ಯತೆಗಳು ಬೇರೆ ಸಂದರ್ಭಗಳಿಂದ ಹೆಚ್ಚು ಎಂದಿದೆ. ಜೊತೆಗೆ, ಮಗುವಿನ ಪ್ರತಿಯೊಂದು ಪ್ರತಿಕ್ರಿಯೆಯೂ ಅಮ್ಮನ ನಡೆಗೆ ಸಂಬಂಧಿಸಿದಂತೆ ಇರುತ್ತಿತ್ತು ಎಂದೂ ಈ ತಂಡ ಹೇಳಿದೆ.
ಇದನ್ನೂ ಓದಿ | Kids food | ಮಕ್ಕಳೂಟವೆಂದರೆ ಮಕ್ಕಳಾಟವಲ್ಲ, ಅದಕ್ಕೇ ಹೀಗೆ ಮಾಡಿ