ʻಮುಂದೇನಾಗಬೇಕಂತಿದ್ದೀರಿ?ʼ- ಈ ಪ್ರಶ್ನೆಯನ್ನು ನಾವೆಲ್ಲಾ ಬಹಳಷ್ಟು ಬಾರಿ ಕೇಳಿದ್ದೇವೆ, ಕೇಳಿಸಿಕೊಂಡಿದ್ದೇವೆ. ಆದರೆ ಮುಂದೊಂದು ದಿನ- ಅಂದರೆ ವಯಸ್ಸಾಗಿ ತಲೆ ಹಣ್ಣಾಗಿ, ಧ್ವನಿ ನಡುಗುವ ಹೊತ್ತಿಗೆ ʻಹಿಂದೇನು ಮಾಡಬೇಕೆಂದಿದ್ದಿರಿ?ʼ ಎನ್ನುವ ಪ್ರಶ್ನೆ ಬಂದರೆ…!
ಅಮೆಜಾನ್.ಕಾಮ್ ಸಂಸ್ಥೆಯ ಸಿಇಒ ಜೆಫ್ ಬೆಜೋಸ್ ಅವರಲ್ಲಿ ಈ ಪ್ರಶ್ನೆಗೆ ಉತ್ತರ ಇದೆಯಂತೆ. ʻನಿಮಗೆ ೮೦ ವರ್ಷವಾದಾಗ ಹಳೆಯ ಬದುಕಿನ ಬಗ್ಗೆ ಹಳಹಳಿಕೆ ಇದ್ದರೆ- ಏನೇನು ಮಾಡಿದ್ದೀರಿ ಎಂಬ ವಿಷಯಕ್ಕಲ್ಲ. ಬದಲಿಗೆ, ಏನು ಮಾಡದೆ ಬಿಟ್ಟುಬಿಟ್ಟಿರಿ ಎಂಬ ವಿಷಯಕ್ಕೆ. ಮಾಡಿದ, ಮಾಡಿ ಸೋತಂಥ ವಿಷಯಗಳ ಬಗ್ಗೆ ನಿಮಗೆ ಅಪರೂಪಕ್ಕೆ ಬೇಸರವಿರಬಹುದು, ಆದರೆ ಮಾಡದೆ ಉಳಿಸಿದ ವಿಷಯಗಳೇ ಕಾಡುವುದು ಹೆಚ್ಚುʼ ಎಂಬುದು ಅವರ ಅಂಬೋಣ. ೫೪ ವರ್ಷದ ಈ ಉದ್ಯಮಿ, ಸದ್ಯಕ್ಕೆ ೧೩೦.೫ ಬಿಲಿಯನ್ ಡಾಲರ್‌ಗಳ ಒಡೆಯ.
ʻನಾನು ಹೇಳುತ್ತಿರುವುದು ಕೇವಲ ವೃತ್ತಿ, ಉದ್ಯಮದ ವಿಷಯದಲ್ಲಿ ಮಾತ್ರವಲ್ಲ. ಆ ವ್ಯಕ್ತಿಯನ್ನು ಕಂಡರೆ ನನಗಿಷ್ಟವಿತ್ತು. ಆದರೆ ನಾನದನ್ನು ಅವರಿಗೆ ಹೇಳಲೇ ಇಲ್ಲ ಎನಿಸುತ್ತದೆ. ಮಾತ್ರವಲ್ಲ, ೫೦ ವರ್ಷಗಳ ನಂತರವೂ ನಿಮ್ಮನ್ನು ಕಾಡುವ ಪ್ರಶ್ನೆಯೆಂದರೆ, ನಾನೇಕೆ ಆಗ ಆ ವಿಷಯದ ಹಿಂದೆ ಬೀಳಲಿಲ್ಲ ಎಂಬುದು. ಇಂಥ ವಿಷಯಗಳು ನಮ್ಮನ್ನು ಕಾಡತೊಡಗಿದರೆ ನಾವು ಸಂತೋಷವಾಗಿರುವುದು ಕಷ್ಟʼ ಎನ್ನುತ್ತಾರೆ ಈ ಯಶಸ್ವೀ ಉದ್ಯಮಿ. ಮಾಡಲೇಬೇಕು ಎನ್ನುವಂಥ ಕನಸೊಂದನ್ನು ಹಿಂದೊಮ್ಮೆ ಕಂಡಿದ್ದ ಈತ, ಆ ಕನಸಿನ ಹಿಂದೆ ಹೋಗಿಯೇ ಇಂದು ಉದ್ಯಮದಲ್ಲಿ ಉತ್ತುಂಗದಲ್ಲಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಅವರಿಗಿದ್ದ ಒಳ್ಳೆಯ ಬ್ಯಾಂಕಿಂಗ್ ಉದ್ಯೋಗವನ್ನು ಬಿಟ್ಟು ಅಮೆಜಾನ್.ಕಾಮ್ ಎಂಬ ಪುಟ್ಟ ವೆಬ್‌ಸೈಟ್ ಆರಂಭಿಸಿ, ಇಂಟರ್‌ನೆಟ್ ಮೂಲಕ ಪುಸ್ತಕ ಮಾರಾಟ ಆರಂಭಿಸಿದಾಗ ಬಹಳಷ್ಟು ಮಂದಿಗೆ ಇವರ ನಿರ್ಧಾರ ಮೂರ್ಖತನದ್ದು ಎನಿಸಿತ್ತು. ಆದರೆ ಇದರಲ್ಲಿ ಯಶಸ್ಸಿದೆ ಎಂಬ ದೃಢ ನಂಬಿಕೆಯಿಂದ ಜೆಫ್ ತೊಡಗಿಸಿಕೊಂಡಿದ್ದರು. ʻಉದ್ಯೋಗ ಬಿಟ್ಟು ಉದ್ಯಮ ಆರಂಭಿಸಬೇಕೆಂಬ ನನ್ನ ಕನಸಿನ ಬಗ್ಗೆ ನನ್ನ ಬಾಸ್ ಬಳಿ ಹೇಳಿಕೊಂಡಿದ್ದೆ. ನನ್ನನ್ನು ದೊಡ್ಡದೊಂದು ವಾಕ್‌ಗೆ ಕರೆದೊಯ್ದ ಅವರು, ನನ್ನ ಮಾತನ್ನಷ್ಟೂ ಕೇಳಿಸಿಕೊಂಡಿದ್ದರು. ʻನಿನ್ನ ಯೋಜನೆ ಅದ್ಭುತವಾಗಿದೆ. ಆದರೆ ನಿನ್ನಂಥವರಿಗಲ್ಲದೆ, ಕೆಲಸವಿಲ್ಲದೆ ಕುಳಿತವರಿಗೆ ಈ ಯೋಜನೆ ಮತ್ತೂ ಅದ್ಭುತವಾಗಿದೆʼ ಎಂದು ಹೇಳಿದ್ದರು. ಹಾಗಾಗಿ ಅಮೆಜಾನ್ ಆರಂಭಿಸುವ ಯೋಜನೆಯ ಬಗ್ಗೆ ದೀರ್ಘಕಾಲ ಪುನರಾವಲೋಕನ ಮಾಡಿದ್ದೆʼ ಎಂದು ಜೆಫ್ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.
ಈ ನಿರ್ಧಾರ ಸರಿಯೇ, ಸೋತರೇನು ಮಾಡುವುದು ಎಂಬ ಭೀತಿ ತಮ್ಮನ್ನು ಕಾಡಿರಲಿಲ್ಲ. ಬದಲಿಗೆ, ಈ ಪ್ರಯತ್ನ ಮಾಡದೇ ಉಳಿದರೆ ಅದೇ ಹಳಹಳಿಕೆಯಾಗಿ ಕಾಡಬಹುದಿತ್ತು. ಹಾಗಾಗಿ ತಮ್ಮ ನಿರ್ಧಾರದ ಬಗ್ಗೆ ಹೆಮ್ಮೆಯಿದೆ ಎಂದು ಜೆಫ್ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ತಮ್ಮನ್ನು ಜೀವನದುದ್ದಕ್ಕೂ ಬೆಂಬಲಿಸುತ್ತಾ, ಪ್ರೀತಿಸುತ್ತಾ ಬಂದವರಿಂದಾಗಿ ಇವೆಲ್ಲಾ ಸಾಧ್ಯವಾಯಿತು ಎಂಬುದು ಅವರ ಮನದ ಮಾತು.
ಇದನ್ನೂ ಓದಿ | ಕ್ಯಾನ್ಸರ್ ನಂತರದ ಬದುಕು | ಆಹಾರ ಹೇಗಿರಬೇಕು? ಛವಿ ಹೇಳ್ತಾರೆ ಕೇಳಿ
ʻ೧೯೯೪ರ ಮಾತಿದು. ವಾಲ್‌ಸ್ಟ್ರೀಟ್‌ನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಈ ವ್ಯಕ್ತಿಯನ್ನು ಮೆಕೆನ್‌ಜೀ ಮದುವೆಯಾಗಿದ್ದಳು. ಆದರೆ ನಮ್ಮ ವಿವಾಹವಾದ ಒಂದು ವರ್ಷಕ್ಕೆ, ಇರುವ ಕೆಲಸ ಬಿಟ್ಟು ಇಂಟರ್‌ನೆಟ್‌ನಲ್ಲಿ ಪುಸ್ತಕದಂಗಡಿ ಆರಂಭಿಸುವುದಾಗಿ ಆಕೆಯಲ್ಲಿ ಹೇಳಿದ್ದೆ. ಆಗ ಆಕೆ ಕೇಳಿದ್ದ ಮೊದಲ ಪ್ರಶ್ನೆ- ʻಇಂಟರ್‌ನೆಟ್ ಎಂದರೇನು?ʼ ಈ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೆ ಈ ಬಗ್ಗೆ ಮಾಹಿತಿ ಇಲ್ಲದಿರುವಾಗಲೂ ಆಕೆ ನನಗೆ ಹೇಳಿದ್ದು, ʻಗ್ರೇಟ್! ಮಾಡೋಣ!ʼ ಉದ್ದಿಮೆ ಆರಂಭಿಸುವ ನನ್ನ ಕನಸು ಆಕೆಗೆ ತಿಳಿದಿತ್ತುʼ ಎಂದು ಜೆಫ್ ತಮ್ಮ ಮಡದಿಯ ಬಗ್ಗೆ ವಿವರಿಸಿದ್ದಾರೆ. ತನ್ನ ಹೆತ್ತವರು ಮತ್ತು ತನ್ನಜ್ಜ-ಅಜ್ಜಿ ಬದುಕಿನಲ್ಲಿ ತಮಗೆ ಸದಾ ಸ್ಫೂರ್ತಿಯಾಗಿದ್ದವರು ಎಂಬುದು ಅವರ ಕೃತಜ್ಞತೆಯ ಮಾತು.
ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ೧೯೬೪ರಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ತಮ್ಮ ತಾಯಿ ಗರ್ಭಿಣಿಯಾಗಿದ್ದರು. ಆಗ ಅದೆಲ್ಲಾ ಅಲ್ಲಿ ಒಪ್ಪಿತ ಅಲ್ಲದ್ದರಿಂದ ಆಕೆಯನ್ನು ಶಾಲೆಯಿಂದ ಹೊರಹಾಕಲು ಯತ್ನಿಸಲಾಗಿತ್ತು. ಆದರೆ ಆಕೆಯ ತಂದೆ-ತಾಯಿ ಬೆಂಬಲಕ್ಕಿದ್ದರು. ಹಾಗಾಗಿ ಎಂಥಾ ಪರಿಸ್ಥಿತಿಯಲ್ಲೂ ಜೊತೆ ಬಿಡದಂಥ ಕುಟುಂಬ ತಮ್ಮ ಪಾಲಿಗೆ ದೊರೆಯಿತು. ಎಂಥಾ ಅಪಾಯ, ಸವಾಲನ್ನೂ ಎದುರಿಸುವ ಧೈರ್ಯ ಇದರಿಂದ ಒದಗುತ್ತದೆ ಎಂಬುದು ಜೆಫ್ ಅವರ ಅನುಭವದ ಮಾತು.
ಇದನ್ನೂ ಓದಿ | ವೈರಲ್ ಆದ ಹರ್ಷ ಗೋಯೆಂಕಾ ಪ್ರಶ್ನೋತ್ತರ: ಯಾವ ಶಿಕ್ಷಣ ನಿಮಗೆ ಶಾಲೆಯಲ್ಲಿ ಸಿಗಬೇಕಿತ್ತು?